ವಿಜಯ ಸಂಕಲ್ಪ ಅಭಿಯಾನದ ಮೂಲಕ 38 ಸಾವಿರಕ್ಕೂ ಹೆಚ್ಚು ಬೂತ್ ಸಂಪರ್ಕ: ಸಚಿವ ಅಶ್ವತ್ಥ ನಾರಾಯಣ

| Updated By: Rakesh Nayak Manchi

Updated on: Feb 04, 2023 | 10:26 PM

ಅಭಿಯಾನದಲ್ಲಿ 38,272 ಬೂತ್​ಗಳ ವ್ಯಾಪ್ತಿಯಲ್ಲಿ 21.01 ಲಕ್ಷ ಮನೆಗಳ ಸಂಪರ್ಕಿಸಲಾಗಿದೆ. 12.37 ಲಕ್ಷ ಮನೆಗಳು ಮತ್ತು 4.55 ಲಕ್ಷ ವಾಹನಗಳ ಮೇಲೆ ಬಿಜೆಪಿ ಸ್ಟಿಕ್ಕರ್ ಗಳನ್ನು ಅಂಟಿಸಲಾಗಿದೆ ಎಂದು ಸಚಿವ ಡಾ. ಅಶ್ವತ್ಥ ನಾರಾಯಣ ಹೇಳಿದರು.

ವಿಜಯ ಸಂಕಲ್ಪ ಅಭಿಯಾನದ ಮೂಲಕ 38 ಸಾವಿರಕ್ಕೂ ಹೆಚ್ಚು ಬೂತ್ ಸಂಪರ್ಕ: ಸಚಿವ ಅಶ್ವತ್ಥ ನಾರಾಯಣ
ಡಾ.ಸಿ.ಎನ್.ಅಶ್ವತ್ಥ ನಾರಾಯಣ (ಎಡ ಚಿತ್ರ)
Follow us on

ಬೆಂಗಳೂರು: ವಿಜಯ ಸಂಕಲ್ಪ ಅಭಿಯಾನದಲ್ಲಿ 38 ಸಾವಿರಕ್ಕೂ ಹೆಚ್ಚು ಬೂತ್ ಸಂಪರ್ಕ ಮಾಡಲಾಗಿದೆ ಎಂದು ವಿಜಯ ಸಂಕಲ್ಪ ಅಭಿಯಾನದ (BJP Vijay Sankalp Abhiyan) ಸಂಚಾಲಕರೂ ಆಗಿರುವ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ (Dr.C.N Ashwath Narayan) ಹೇಳಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು (ಫೆಬ್ರವರಿ 4) ನಡೆದ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ವಿವರ ನೀಡಿದ ಅವರು, ಅಭಿಯಾನದಲ್ಲಿ 38,272 ಬೂತ್​ಗಳ ವ್ಯಾಪ್ತಿಯಲ್ಲಿ 21.01 ಲಕ್ಷ ಮನೆಗಳ ಸಂಪರ್ಕಿಸಲಾಗಿದೆ. 12.37 ಲಕ್ಷ ಮನೆಗಳು ಮತ್ತು 4.55 ಲಕ್ಷ ವಾಹನಗಳ ಮೇಲೆ ಬಿಜೆಪಿ ಸ್ಟಿಕ್ಕರ್​​ಗಳನ್ನು ಅಂಟಿಸಲಾಗಿದೆ. 1.88 ಲಕ್ಷಕ್ಕೂ ಹೆಚ್ಚು ಗೋಡೆ ಬರಹಗಳನ್ನು ಬರೆಯಲಾಗಿದೆ . 14,500 ಡಿಜಿಟಲ್ ಪೇಟಿಂಗ್​ಗಳನ್ನು ಮೂಡಿಸಲಾಗಿದೆ ಎಂದರು.

ಜನವರಿ 29ರಂದು ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮ ರಾಜ್ಯದ 31,264 ಬೂತ್​ಗಳಲ್ಲಿ ಏರ್ಪಡಿಸಲಾಗಿತ್ತು. ಇದನ್ನು ಅಂದು ಒಟ್ಟು 4 ಲಕ್ಷ ಜನ ವೀಕ್ಷಿಸಿದ್ದಾರೆ. ಭದ್ರಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶಿವಮೊಗ್ಗ ಜಿಲ್ಲೆಯ ಪಕ್ಷದ ಪದಾಧಿಕಾರಿಗಳು ವಿಶೇಷ ಗಮನ ಹರಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯಗಳ ಜನರನ್ನು ಹೆಚ್ಚಿನ ಪ್ರಮಾಣದಲ್ಲಿ ಪಕ್ಷದ ಸದಸ್ಯರಾಗಿ ಮಾಡಿಕೊಳ್ಳಲು ಗಮನ ಹರಿಸಲಾಗಿದೆ ಎಂದರು.

ಇದನ್ನೂ ಓದಿ: 4 ಭಾಗಗಳಿಂದ ಯಾತ್ರೆ, 200 ರೋಡ್ ಶೋ, 224 ಕ್ಷೇತ್ರಗಳಿಗೂ ಉಸ್ತುವಾರಿ ನೇಮಕ: ಬಿಜೆಪಿ ಎಲೆಕ್ಷನ್ ರೂಟ್ ಮ್ಯಾಪ್ ಸಿದ್ಧ

ಎರಡು ತಿಂಗಳ ಚುನಾವಣಾ ಕಾರ್ಯ ಯೋಜನೆ ಬಗ್ಗೆ ಚರ್ಚೆ

ಬಿಜೆಪಿ ಕಾರ್ಯಕಾರಿಣಿ ಸಭೆ ಬಳಿಕ ಮಾತನಾಡಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ಎರಡು ತಿಂಗಳ ಚುನಾವಣಾ ಕಾರ್ಯ ಯೋಜನೆ ಬಗ್ಗೆ ಚರ್ಚೆ ನಡೆದಿದೆ. ಚುನಾವಣೆ ಗೆಲ್ಲುವ ರೂಟ್‌ಮ್ಯಾಪ್ ಹಾಗೂ ಸಿದ್ಧತೆ ಬಗ್ಗೆ ಚರ್ಚೆಯಾಗಿದೆ. ಫೆಬ್ರವರಿ 20ರ ಬಳಿಕ ನಾವು 4 ತಂಡಗಳಾಗಿ ರಥಯಾತ್ರೆ ತೆರಳುತ್ತೇವೆ. ತಂಡದಲ್ಲಿ ಯಾಱರು ಇರುತ್ತಾರೆ ಅಂತಾ ಬಳಿಕ ತೀರ್ಮಾನಿಸುತ್ತೇವೆ ಎಂದರು.

ಬಿಜೆಪಿಯ ಸಂಪರ್ಕದಲ್ಲಿ ಕಾಂಗ್ರೆಸ್, ಜೆಡಿಎಸ್​ ನಾಯಕರು

ಕಾಂಗ್ರೆಸ್, ಜೆಡಿಎಸ್​ನ ಅನೇಕರು ನಮ್ಮ ಪಕ್ಷದ ಅಧ್ಯಕ್ಷರು ಸೇರಿದಂತೆ ಬಿಜೆಪಿಯ ಹಲವರೊಂದಿಗೆ ಸಂಪರ್ಕದಲ್ಲಿ ಇದ್ದಾರೆ. ಮುಂದಿನ ದಿನಗಳಲ್ಲಿ ಹಲವು ಪ್ರಭಾವಿಗಳು ವಿಪಕ್ಷಗಳಿಂದ ಬರುತ್ತಾರೆ ಎಂದು ಮಹೇಶ್ ಹೇಳಿದ್ದಾರೆ, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೂ ಉಸ್ತುವಾರಿ ನೇಮಕವಾಗಿದೆ. ರಾಜ್ಯಕ್ಕೆ ಪ್ರಧಾನಿ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಭೇಟಿ ಹೆಚ್ಚಾಗಲಿದೆ. ಅದಕ್ಕೆ ತಕ್ಕ ಹಾಗೇ ಸಮಾವೇಶ, ರೋಡ್​ಶೋ ಆಯೋಜಿಸುತ್ತೇವೆ ಎಂದರು.

ರಾಜಕೀಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:25 pm, Sat, 4 February 23