ಹೊಟೇಲ್​ ಮಾದರಿಯಲ್ಲಿ ವರ್ಗಾವಣೆ, ನೇಮಕಾತಿಗೆ ದರ ಫಿಕ್ಸ್ ಮಾಡಿದ ಕರ್ನಾಟಕ ಬಿಜೆಪಿ ಸರ್ಕಾರ: ಸಿದ್ದರಾಮಯ್ಯ

|

Updated on: Mar 13, 2023 | 10:35 PM

ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶ ನಡೆಯಿತು. ಇಲ್ಲಿ ಭಾಷಣ ಮಾಡಿದ ಸಿದ್ದರಾಮಯ್ಯ ಅವರು ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ವಾಗ್ದಾಳಿ ನಡೆಸಿದರು. ಹೋಟೆಲ್ ರಿತಿಯಲ್ಲಿ ವರ್ಗಾವಣೆ, ನೇಮಕಾತಿಗೆ ದರ ನಿಗದಿ ಮಾಡಿ ವಿಧಾನಸೌಧದ ಕಚೇರಿ ಮುಂದೆ ಬೋರ್ಡ್ ಹಾಕಿದ್ದಾರೆ ಎಂದರು.

ಹೊಟೇಲ್​ ಮಾದರಿಯಲ್ಲಿ ವರ್ಗಾವಣೆ, ನೇಮಕಾತಿಗೆ ದರ ಫಿಕ್ಸ್ ಮಾಡಿದ ಕರ್ನಾಟಕ ಬಿಜೆಪಿ ಸರ್ಕಾರ: ಸಿದ್ದರಾಮಯ್ಯ
ಸಿದ್ದರಾಮಯ್ಯ ಮತ್ತು ಬಸವರಾಜ ಬೊಮ್ಮಾಯಿ
Follow us on

ಹಾವೇರಿ: ನಾನು ಕಳೆದ 40 ವರ್ಷಗಳಿಂದ ರಾಜ್ಯ ರಾಜಕೀಯದಲ್ಲಿ ಇದ್ದೇನೆ. ಆದರೆ ಇಂತಹ ಭ್ರಷ್ಟ ಸರ್ಕಾರವನ್ನು ನಾನು ಯಾವತ್ತೂ ನೋಡಿರಲಿಲ್ಲ. ಯಾವ ಕಚೇರಿಗೆ ಹೋದರೂ ಲಂಚ ಕೇಳುತ್ತಾರೆ. ಇವರು ಒಂದೊಂದು ಅಧಿಕಾರಿಗಳ ವರ್ಗಾವಣೆ ಹಾಗೂ ನೇಮಕಾತಿಗೆ ಹೋಟೆಲ್ ರಿತಿಯಲ್ಲಿ ದರ ಫಿಕ್ಸ್ ಮಾಡಿ ವಿಧಾನಸೌಧದ ಕಚೇರಿ ಮುಂದೆ ಬೋರ್ಡ್ ಹಾಕಿದ್ದಾರೆ ಎಂದು ಹೇಳುವ ಮೂಲಕ ರಾಜ್ಯ ಬಿಜೆಪಿ ಸರ್ಕಾರದ (Karnataka BJP Govt) ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ವಾಗ್ದಾಳಿ ನಡೆಸಿದರು. ಜಿಲ್ಲೆಯ ರಾಣೆಬೆನ್ನೂರಿನಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಅಧಿಕಾರದಲ್ಲಿದ್ದಾಗ ಐದು ವರ್ಷದಲ್ಲಿ 15 ಲಕ್ಷ ಮನೆ ಕಟ್ಟಿಸಿ ಕೊಟ್ಟಿದ್ದೇನೆ. ಬಿಜೆಪಿ ಅಧಿಕಾರದಲ್ಲಿ ಒಂದೇ ಒಂದು ಮನೆಯನ್ನು ಕೊಡಲಿಲ್ಲ. ಇವರ ಮನೆಹಾಳಾಗ, ಇವರು ಅಧಿಕಾರದಲ್ಲಿ ಇರಬೇಕಾ ಎಂದು ಪ್ರಶ್ನಿಸಿದರು.

ಇವರೆಲ್ಲಾ 40% ಕಮಿಷನ್ ಗೀರಾಕಿಗಳು ಅಲ್ವಾ ಅದಕ್ಕೆ ಇವರಿಗೆ ಮೋದಿ ಬೇಕು. ಹಾಗಾಗಿ ರಾಜ್ಯಕ್ಕೆ ಕರೆತರುತ್ತಿದ್ದಾರೆ. ನಿನ್ನೆ (ಮಾರ್ಚ್ 12) ಮೋದಿ ಉದ್ಘಾಟನೆ ಮಾಡಿದ ಬೆಂಗಳೂರು ಮೈಸೂರು ರಸ್ತೆ ಮಂಜೂರು ಮಾಡಿಸಿದ್ದು ನಮ್ಮ ಕಾಲದಲ್ಲಿ. ಹೀಗೆ ಅನೇಕ ಕಾರ್ಯಕ್ರಮಗಳನ್ನು ನಾವು ಮಾಡಿದನ್ನು ಅವರು ಉದ್ಘಾಟನೆ ಮಾಡಿ ಪ್ರಚಾರ ಪಡೆಯುತ್ತಿದ್ದಾರೆ ಎಂದು ಟೀಕಿಸಿದರು.

ಮೇ ಮೊದಲ ವಾರದಲ್ಲಿ ವಿಧಾನಸಭೆಗೆ ಚುನಾವಣೆ

ಮೇ ಮೊದಲ ವಾರದಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಬಹುದು. ರಾಜ್ಯದ ಹಿತದೃಷ್ಟಿಯಿಂದ ಕಾಂಗ್ರೆಸ್ ಪಕ್ಷಕ್ಕೆ ನಿಮ್ಮ ಮತವನ್ನು ನೀಡಿ ಎಂದು ಸಿದ್ದರಾಮಯ್ಯ ಮನವಿ ಮಾಡಿದರು. ಕಾನೂನು ಸುವ್ಯವಸ್ಥೆ, ಉತ್ತಮ ಆಡಳಿತದ ಬಗ್ಗೆಯೂ ಜನರು ಯೋಚನೆ ಮಾಡುತ್ತಾರೆ. ನಿಮ್ಮೆಲ್ಲರ ಆಶಿರ್ವಾದದಿಂದ 2013 ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದೆ. 2018 ರ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಕ್ಕಿರಲಿಲ್ಲ. ಅತಿಹೆಚ್ಚು ಸ್ಥಾನಗಳಿಸಿದ ಬಿಜೆಪಿಯಿಂದ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆದರು. ಆದರೆ ಬಹುಮತ ಸಾಬೀತು ಮಾಡಲು ಆಗಲಿಲ್ಲ ಎಂದರು.

ಇದನ್ನೂ ಓದಿ: ರಾಹುಲ್ ಗಾಂಧಿ ಬೈದಿದ್ದು ಬಿಜೆಪಿಯವರನ್ನು, ದೇಶದ ಮಾನ ಹೇಗೆ ಹೋಗುತ್ತದೆ: ಸಿದ್ದರಾಮಯ್ಯ ಪ್ರಶ್ನೆ

ಕೊಮುವಾದಿ ಸರ್ಕಾರವನ್ನು ಯಾವುದೇ ಕಾರಣಕ್ಕೂ ಅಧಿಕಾರಕೊಡಬಾರದು ಎಂದು ಜೆಡಿಎಸ್ ಜೊತೆ ಸರ್ಕಾರ ರಚಿಸಿದೆವು, ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದೆವು. ಆದರೆ ಅವರು ವಿಧಾನಸೌಧದಲ್ಲಿ ಆಡಳಿತ ಮಾಡುವ ಬದಲು ತಾಜ್ ಹೋಟೆಲ್​ನಿಂದ ಆಡಳಿತ ಮಾಡಿದ್ದರು. ಕುಮಾರಸ್ವಾಮಿ ವಿಧಾನಸೌಧದಿಂದ ಆಡಳಿತ ಮಾಡಿದ್ದಿದ್ದರೆ ಐದು ವರ್ಷ ಮುಖ್ಯಮಂತ್ರಿಯಾಗಿ ಇರುತ್ತಿದ್ದರು. ಇವರು ವೈಯಕ್ತಿಕವಾಗಿ ಅಧಿಕಾರವನ್ನು ಅನುಭವಿಸಲು ಹೊಟೆಲ್​ನಲ್ಲೇ ಕೂತರು. ಇವರ ದುರಾಡಳಿತವನ್ನು ಬೇಸತ್ತು ಶಾಸಕರು ಬಿಜೆಪಿಗೆ ಹೋದರು. ಅವರಲ್ಲಿ ನಿಮ್ಮ ರಾಣೇಬೆನ್ನೂರಿನಿಂದ ಪಕ್ಷೇತರವಾಗಿ ಆಯ್ಕೆ ಆಗಿದ್ದ ಶಂಕರ ಕೂಡ ಹೋದರು. ಅವರನ್ನು ಸಮ್ಮಿಶ್ರ ಸರ್ಕಾರದಲ್ಲಿ ಅರಣ್ಯ ಸಚಿವರನ್ನಾಗಿ ಮಾಡಿದ್ದೆವು. ಆದರೆ ಅವರು ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿ ಸೆರಿಕೊಂಡರು ಎಂದು ಸಿದ್ದರಾಮಯ್ಯ ಹೇಳಿದರು.

ಕಮಿಷನ್ ಆರೋಪದ ಬಗ್ಗೆ ಕ್ರಮ ಕೈಗೊಳ್ಳದ ಮೋದಿ

ರಾಜ್ಯ ಬಿಜೆಪಿ ಸರ್ಕಾರದ 40% ಕಮಿಷನ್ ಬಗ್ಗೆ ಮೊದಲ ಬಾರಿಗೆ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಪ್ರಧಾನಮಂತ್ರಿಗೆ ಪತ್ರ ಬರೆಯುತ್ತಾರೆ. ಕರ್ನಾಟಕದಲ್ಲಿರುವ ನಿಮ್ಮ ಸರ್ಕಾರ 40% ಕಮಿಷನ್ ಕೇಳುತ್ತಿದ್ದಾರೆ. ನಮ್ಮ ಕೈಯಿಂದ ಕೊಡಲು ಆಗಲ್ಲ, ಗುಣಮಟ್ಟದ ಕೆಲಸ ಮಾಡಲೂ ಆಗಲ್ಲ ಎಂದು ಆರೋಪಿಸಿ ಬಸವರಾಜ ಬೋಮ್ಮಾಯಿ ಸರ್ಕಾರದ ವಿರುದ್ಧ ಪತ್ರ ಬರೆದಿದ್ದರು. ಆದರೆ ಒಂದೂವರೆ ವರ್ಷದಿಂದ ಮೋದಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಇಷ್ಟೆಲ್ಲಾ ಇದ್ದರೂ ಭಂಡತನದಿಂದ ಬೋಮ್ಮಾಯಿಯವರು ದಾಖಲಾತಿ ಕೊಡಿ ಅಂತಾರೆ. ಈಶ್ವರಪ್ಪ ಅವರು ಸಂತೋಷ ಪಾಟೀಲ್ ಎಂಬ ಬಿಜೆಪಿ ಕಾರ್ಯಕರ್ತನಿಗೆ 40% ಕಮಿಷನ್ ಕೇಳಿದ್ದರು. ಇವರ ಕಮೀಷನ್ ಕಾಟಕ್ಕೆ ಬೇಸತ್ತು ಸಂತೋಷ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಅಂದು ನಾವೇಲ್ಲರೂ ವಿಧಾನಸೌಧದಲ್ಲಿ ಪ್ರತಿಭಟನೆ ಮಾಡಿದ್ದೆವು. ನಮ್ಮ ಪ್ರತಿಭಟನೆಯಿಂದ ಈಶ್ವರಪ್ಪ ರಾಜೀನಾಮೆ ನೀಡಿದರು.ಈಶ್ವರಪ್ಪ ತಪ್ಪು ಮಾಡಿದಕ್ಕೆ ಅಂದು ರಾಜೀನಾಮೆ ನೀಡಿದರು, ಸುಮ್ಮನೆ ರಾಜೀನಾಮೆ ಕೊಡುತ್ತಾರಾ ಎಂದು ಪ್ರಶ್ನಿಸಿದರು.

ಬಿಎಸ್ ಯಡಿಯೂರಪ್ಪ ಆಪ್ತ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನ ಮಗ ಪ್ರಶಾಂತ್ ಎಂಬ ಅಧಿಕಾರಿ ತಂದೆಯ ಪರವಾಗಿ ಲಂಚ ಪಡೆಯುವಾಗ ಲೋಕಾಯುಕ್ತರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ. ರೆಡ್ ಹ್ಯಾಂಡ್ ಆಗಿ ಸಿಕ್ಕಿದ್ದು ಕಾಗದ ಪತ್ರ ದಾಖಲಾತಿಕ್ಕಿಂತ ಸ್ಟ್ರಾಂಗ್. ಇದಕ್ಕಿಂತ ದಾಖಲೆ ಬೇಕಾ ಮಿಸ್ಟರ್ ಬೋಮ್ಮಾಯಿ? ಭಂಡತನದಿಂದ ಬೋಮ್ಮಾಯಿ ರಾಜೀನಾಮೆ ಕೊಡದೆ ಅಧಿಕಾರ ಮಾಡುತ್ತಿದ್ದಾರೆ. ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿದವನನನ್ನು ರಕ್ಷಿಸಿದ ನೀವೂ ಒಂದು ಕ್ಷಣ ಕೂಡ ಅಧಿಕಾರಕದಲ್ಲಿ ಮುಂದುವರೆಯಬಾರದಿತ್ತು ಎಂದು ವಾಗ್ದಾಳಿ ನಡೆಸಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:32 pm, Mon, 13 March 23