Shantaveri Gopala Gowda: ಅಪ್ರತಿಮ ಸಮಾಜವಾದಿ ಚಿಂತಕ, ಆದರ್ಶ ರಾಜಕಾರಣಿ ಶಾಂತವೇರಿ ಗೋಪಾಲ ಗೌಡರ ಜನ್ಮಶತಮಾನೋತ್ಸವ
ಗೋಪಾಲ ಗೌಡರಿಗೆ ಅಂತ ಇದ್ದದ್ದು ಊರಿನಲ್ಲಿ ಒಂದು ಹುಲ್ಲಿನ ಮನೆ. ಉಳಿದಂತೆ ಎಲ್ಲೂ ಆಸ್ತಿ ಮಾಡಿಕೊಂಡವರಲ್ಲ. ಹಣ- ಐಷಾರಾಮಿ ಬದುಕು ಇದ್ಯಾವುದೂ ಇರಲಿಲ್ಲ. ಆದರ್ಶ, ಪ್ರಾಮಾಣಿಕತೆ, ಸಾರ್ವಜನಿಕ ಬದುಕಿನ ಜವಾಬ್ದಾರಿಗಳು ಇವೆಲ್ಲ ಹೀಗಿರಬೇಕು ಎಂದು ಒಬ್ಬ ವ್ಯಕ್ತಿಯನ್ನು ತೋರಿಸಿ ಹೇಳಬಹುದಾದರೆ ಅದು ಶಾಂತವೇರಿ ಗೋಪಾಲ ಗೌಡರಲ್ಲದೇ ಇನ್ಯಾರನ್ನು ಎಂಬ ಪ್ರಶ್ನೆಯನ್ನು ಈಗಲೂ ಅವರು ಹಾಗೇ ಉಳಿಸಿದ್ದಾರೆ.
ಸಮಾಜವಾದ ಹಾಗೂ ಶಾಂತವೇರಿ ಗೋಪಾಲ ಗೌಡ (Shantaveri Gopala Gowda) – ಈ ಎರಡನ್ನೂ ಪ್ರತ್ಯೇಕವಾಗಿ ನೋಡುವುದಕ್ಕೆ ಸಾಧ್ಯವೇ ಇಲ್ಲ. ಕರ್ನಾಟಕ (Karnataka) ರಾಜ್ಯ ಕಂಡ ಮೇರು ವ್ಯಕ್ತಿತ್ವದ ಸಮಾಜವಾದಿ ಚಿಂತಕ- ಮೌಲ್ಯಯುತ ರಾಜಕಾರಣಿ ಗೋಪಾಲ ಗೌಡರು. ಶಿವಮೊಗ್ಗ (Shivamogga) ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆರಗದವರಾದ ಶಾಂತವೇರಿ ಗೋಪಾಲಗೌಡರು ಜನಿಸಿದ್ದು ರೈತಾಪಿ ಕುಟುಂಬದಲ್ಲಿ, 14-3-1923ರಲ್ಲಿ. ಅವರ ತಂದೆ ಕೊಲ್ಲೂರಯ್ಯ, ತಾಯಿ ಶೇಷಮ್ಮನವರು. ಈ ದಂಪತಿಗೆ ಮೂವರು ಮಕ್ಕಳು. ಅದರಲ್ಲಿ ಕೊನೆಯವರು ಗೋಪಾಲ ಗೌಡರು. ಅಣ್ಣ ಧರ್ಮಯ್ಯ ಹಾಗೂ ಅಕ್ಕ ಸಿದ್ದಮ್ಮನವರು. ಗೋಪಾಲ ಗೌಡರು ಭೌತಿಕವಾಗಿ ನಮ್ಮೊಂದಿಗೆ ಇರುತ್ತಿದ್ದರೆ ಇಂದಿಗೆ (14-3-2023) ನೂರು ವರ್ಷ ಪೂರ್ತಿ ಆಗಿರುತ್ತಿತ್ತು. ಆದರೆ ಅವರ ಬದುಕೇ ನಮ್ಮೆದುರಿನ ಆದರ್ಶವಾಗಿ, ಅನುಕರಣೀಯವಾಗಿ ಉಳಿದಿದೆ. ಇನ್ನು ಗೋಪಾಲ ಗೌಡರ ಪತ್ನಿ ಸೋನಕ್ಕ ಅವರು ಇತ್ತೀಚೆಗೆ ತೀರಿಕೊಂಡರು.
ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಗೋಪಾಲಗೌಡರು ತಾವು ಸ್ವತಃ ಸಚಿವರು ಸಹ ಆಗಲಿಲ್ಲ. ಆದರೆ ಅವರ ಅನುಯಾಯಿಗಳು, ಅವರಿಂದ ಪ್ರೇರಿತರಾದವರು ಕೈ ಬೆರಳು ಮಡಚಿ ಹೇಳುವಷ್ಟು ಮಂದಿ ಈ ರಾಜ್ಯದ ಮುಖ್ಯಮಂತ್ರಿಗಳಾದರು. ಡಿ.ದೇವರಾಜ ಅರಸು, ಜೆ.ಎಚ್.ಪಟೇಲ್. ಎಸ್.ಬಂಗಾರಪ್ಪ, ಎಸ್ಸೆಂ ಕೃಷ್ಣ ಹಾಗೂ ಸಿದ್ದರಾಮಯ್ಯ ಇವರೆಲ್ಲರೂ ಗೋಪಾಲಗೌಡರ ಪ್ರಭಾವಕ್ಕೆ ಒಳಗಾದವರೇ.
ಶಾಂತವೇರಿ ಗೋಪಾಲ ಗೌಡರ ಹೆಸರಿನಲ್ಲಿ ಇವತ್ತಿಗೆ ಬಡಾವಣೆಗಳಿವೆ, ಆಸ್ಪತ್ರೆಗಳಿವೆ, ರಸ್ತೆಗಳಿವೆ. ಇವೆಲ್ಲಕ್ಕೂ ಹೆಚ್ಚಾಗಿ, ಯಾರಿಂದಲೂ ಮುಟ್ಟಲು ಸಾಧ್ಯವಿಲ್ಲವೇನೋ ಎಂಬಷ್ಟು ಎತ್ತರದ ಆದರ್ಶಗಳಿವೆ. ಆದರೆ ಗೋಪಾಲ ಗೌಡರ ಬದುಕಲ್ಲಿ ಹಣ, ಆಸ್ತಿ- ಪಾಸ್ತಿಯ ಶ್ರೀಮಂತಿಕೆ ಎಂದಿಗೂ ಇರಲಿಲ್ಲ. ನಲವತ್ತೊಂಬತ್ತು ವರ್ಷ ಮಾತ್ರ ಜೀವಿಸಿದ್ದ ಅವರು, ಶತಶತಮಾನಗಳಿಗೂ ಉಳಿದಿರುವಂಥ ಮೌಲ್ಯಯುತ ರಾಜಕಾರಣದ ಹೆಜ್ಜೆಗುರುತುಗಳನ್ನು ಉಳಿಸಿದ್ದಾರೆ.
ಗೋಪಾಲ ಗೌಡರನ್ನು ಆದರ್ಶವಾಗಿ ನೋಡಿದಂಥವರು, ಅನುಸರಿಸಿದಂಥವರು ರಾಜಕಾರಣದಲ್ಲಿ ಮಾತ್ರವಲ್ಲ, ಸಾಹಿತ್ಯ ಕ್ಷೇತ್ರದಲ್ಲೂ ಇದ್ದರು. ಅದರಲ್ಲಿ ಪ್ರಮುಖವಾಗಿ ಕಂಡುಬರುವವರು ಗೋಪಾಲಕೃಷ್ಣ ಅಡಿಗ, ಪಿ. ಲಂಕೇಶ ಹಾಗೂ ಯು.ಆರ್. ಅನಂತಮೂರ್ತಿ. ಅದರಲ್ಲೂ ಅನಂತಮೂರ್ತಿ ಅವರು ಗೋಪಾಲಗೌಡರ ಬಗ್ಗೆ ‘ಅವಸ್ಥೆ’ ಎಂಬ ಹೆಸರಲ್ಲಿ ಕಾದಂಬರಿಯನ್ನೇ ಬರೆದಿದ್ದು, ಅದು ಸಿನಿಮಾ ಕೂಡ ಆಗಿದೆ.
ಇದನ್ನೂ ಓದಿ: ಶಾಂತವೇರಿ ಗೋಪಾಲಗೌಡರ ಹೆಸರಿನಲ್ಲಿ ಶ್ರೇಷ್ಠ ಕೃಷಿಕ, ಶ್ರೇಷ್ಠ ಶಾಸಕ ಎಂಬ ಎರಡು ಪ್ರಶಸ್ತಿ ಘೋಷಿಸಿದ ಸಿಎಂ ಬೊಮ್ಮಾಯಿ
ರಾಮಮನೋಹರ ಲೋಹಿಯಾ ಅವರಿಂದ ಪ್ರಭಾವಿತರಾಗಿದ್ದ ಗೋಪಾಲ ಗೌಡರು ಅಂದಿನ ದಿನಮಾನಕ್ಕೆ ‘ಫೈರ್ ಬ್ರ್ಯಾಂಡ್’ ರಾಜಕಾರಣಿ ಎನಿಸಿಕೊಂಡಿದ್ದವರು. ಅವರು ಪಾಲಿಸಿದ ಆದರ್ಶ ಇಂದಿಗೆ ಕಥೆಗಳಾಗಿ, ಇದು ಬದುಕುವ ರೀತಿ ಎಂದು ಹೇಳುವುದಕ್ಕೆ ನಿದರ್ಶನವಾಗಿ ನಮ್ಮೆದುರು ಇದೆ. 1952 (ಪ್ರಥಮ ವಿಧಾನಸಭಾ ಚುನಾವಣೆ), 1962 (ಎರಡನೇ ವಿಧಾನಸಭಾ ಚುನಾವಣೆ), ಮತ್ತು 1967ನೇ ಇಸವಿಯಲ್ಲಿ (ನಾಲ್ಕನೇ ವಿಧಾನಸಭಾ ಚುನಾವಣೆ) ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾಗಿದ್ದ ಗೋಪಾಲ ಗೌಡರು ತಮ್ಮ ಬದುಕಿನುದ್ದಕ್ಕೂ ಬಡವರ ಪರವಾಗಿ ದುಡಿದರು. ಮಲೆನಾಡಿನ ಭಾಗದಲ್ಲಿ ಭೂಮಿ ಇಲ್ಲದ ರೈತರಿಗೆ ಭೂಮಿ ಕೊಡಿಸುವುದಕ್ಕೆ ಅವರು ಮಾಡಿದ ಹೋರಾಟ ಮರೆಯಲು ಸಾಧ್ಯವಿಲ್ಲ.
ದೇಶ ಸ್ವತಂತ್ರಗೊಂಡ ಹೊಸತರಲ್ಲಿ ಎಲ್ಲರಲ್ಲೂ ಕಂಡು ಬರುತ್ತಿದ್ದ ರಾಷ್ಟ್ರ ನಿರ್ಮಾಣದ ಬಗ್ಗೆ ಇದ್ದ ಕನಸುಗಳು, ಜತೆಗೆ ಸ್ವತಃ ಬಡತನದ ಹಿನ್ನೆಲೆಯ ಗೋಪಾಲ ಗೌಡರಲ್ಲಿ ಸಮಾಜವಾದದ ಚಿಂತನೆಗಳು ಗಟ್ಟಿಯಾಗುವಂತೆ ಆಯಿತು. ಇಡೀ ದೇಶದಲ್ಲಿ ಸ್ವಾತಂತ್ರ್ಯ ಚಳವಳಿಯ ಪ್ರಭಾವಳಿ ಹಾಗೇ ಉಳಿದಿತ್ತು. ಇದರೊಂದಿಗೆ ಲೋಹಿಯಾ ಚಿಂತನೆ, ಸಾಹಿತ್ಯದ ಓದು ಗೋಪಾಲ ಗೌಡರು ಆದರ್ಶವಾಗಿ ಬದುಕುವುದಕ್ಕೆ ಪ್ರೇರಣೆಯಾದವು.
ಆದರೆ, ಗೋಪಾಲ ಗೌಡರ ಶಿಷ್ಯರು, ಅನುಯಾಯಿಗಳಿಗೇ ಅಧಿಕಾರ, ಜಾತಿ ರಾಜಕಾರಣದ ಮಿತಿಯನ್ನು ದಾಟಲು ಆಗಲಿಲ್ಲ. “ಏನೇ ಮಾಡುವುದಕ್ಕೂ ಅಧಿಕಾರ ಇರಬೇಕು” ಎಂಬ ಅನುಕೂಲಸಿಂಧು- ಅವಕಾಶವಾದಿ ರಾಜಕಾರಣದ ಜತೆಗೆ ಹೊಂದಾಣಿಕೆ ಮಾಡಿಕೊಂಡರು. ಇದು ಅನಿವಾರ್ಯ ಎಂದು ಸಾರ್ವಜನಿಕ ವೇದಿಕೆಗಳಲ್ಲಿ ಹೇಳಿ, ದಕ್ಕಿಸಿಕೊಳ್ಳುವ ಮಟ್ಟಿಗೆ ಸನ್ನಿವೇಶ ತಂದರು.
ಅಂದ ಹಾಗೆ ಗೋಪಾಲ ಗೌಡರ ಬದುಕು, ಆದರ್ಶ, ಮೌಲ್ಯಯುತ ರಾಜಕಾರಣದ ಬಗ್ಗೆ ಲಕ್ಷಾಂತರ ಪುಟಗಳಲ್ಲಿ ದಾಖಲಾಗಿವೆ. ಅಧಿಕಾರ ಸಿಗುವ ಅವಕಾಶವನ್ನೂ ನಿರಾಕರಿಸಿ, ಜನರೊಂದಿಗೆ, ಜನರ ಮಧ್ಯೆ ಇದ್ದುದರಿಂದಲೇ ಅವರು ಆ ಎತ್ತರಕ್ಕೆ ಬೆಳೆದರು, ಸಾವಿರಾರು ಮಂದಿಯ ಬೆಳವಣಿಗೆಗೆ ಕಾರಣರಾದರು. ಹೀಗೆ ಒಬ್ಬ ವ್ಯಕ್ತಿಯ ಬಗ್ಗೆ, ಅದರಲ್ಲೂ ರಾಜಕಾರಣದಲ್ಲಿ ಇರುವವರ ಬಗ್ಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಬರವಣಿಗೆಯಲ್ಲಿ ದಾಖಲಿಸುವಂಥದ್ದು ಏನೆಲ್ಲ ಇರಬಹುದು ಎಂಬುದನ್ನು ಆಲೋಚಿಸಿದರೆ ಸಾಕು.
ಗೋಪಾಲ ಗೌಡರಿಗೆ ಅಂತ ಇದ್ದದ್ದು ಊರಿನಲ್ಲಿ ಒಂದು ಹುಲ್ಲಿನ ಮನೆ. ಉಳಿದಂತೆ ಎಲ್ಲೂ ಆಸ್ತಿ ಮಾಡಿಕೊಂಡವರಲ್ಲ. ಹಣ- ಐಷಾರಾಮಿ ಬದುಕು ಇದ್ಯಾವುದೂ ಇರಲಿಲ್ಲ. ಆದರ್ಶ, ಪ್ರಾಮಾಣಿಕತೆ, ಸಾರ್ವಜನಿಕ ಬದುಕಿನ ಜವಾಬ್ದಾರಿಗಳು ಇವೆಲ್ಲ ಹೀಗಿರಬೇಕು ಎಂದು ಒಬ್ಬ ವ್ಯಕ್ತಿಯನ್ನು ತೋರಿಸಿ ಹೇಳಬಹುದಾದರೆ ಅದು ಶಾಂತವೇರಿ ಗೋಪಾಲ ಗೌಡರಲ್ಲದೇ ಇನ್ಯಾರನ್ನು ಎಂಬ ಪ್ರಶ್ನೆಯನ್ನು ಈಗಲೂ ಅವರು ಹಾಗೇ ಉಳಿಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ