ಕಲಬುರಗಿ: ಗುತ್ತಿಗೆದಾರ ಆತ್ಮಹತ್ಯೆಯಾಗಿ 12 ದಿನ ಕಳೆದರೂ ಬಂಧನವಾಗದ ಆರೋಪಿಗಳು!
ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆಗೆ ಶರಣಾಗಿ ಸೋಮವಾರಕ್ಕೆ ಹನ್ನೆರಡು ದಿನ ಕಳೆದಿದೆ. ಆದರೆ ಇಲ್ಲಿಯವರೆಗೆ ಒಬ್ಬನೇ ಒಬ್ಬ ಆರೋಪಿಯ ಬಂಧನವಾಗಿಲ್ಲ. ಇದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲಿಗರಿಗೆ ಸರ್ಕಾರವೇ ರಕ್ಷಣೆ ಕೊಡುತ್ತಿದೆ ಎಂದು ಪ್ರತಿಪಕ್ಷ ಬಿಜೆಪಿ ವಾಗ್ದಾಳಿ ನಡೆಸಿದೆ.
ಕಲಬುರಗಿ, ಜನವರಿ 7: ಬೀದರ್ನ ಯುವ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲೂ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ್ ಹಾಗೂ ಗ್ಯಾಂಗ್ ಕಿರುಕುಳದಿಂದಲೇ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸಚಿನ್ ಡೆತ್ ನೋಟ್ ಬರೆದಿಟ್ಟಿದ್ದು, ದೊಡ್ಡ ಮಟ್ಟದ ಸಂಚಲನಕ್ಕೆ ಕಾರಣವಾಗಿತ್ತು. ಇದೇ ವಿಷಯ ರಾಜ್ಯ ಸರ್ಕಾರ ಹಾಗೂ ಖುದ್ದು ಸಚಿವ ಪ್ರಿಯಾಂಕ್ ಖರ್ಗೆಗೂ ಸಂಕಷ್ಟ ತಂದಿಟ್ಟಿತ್ತು. ಆದರೆ, ಘಟನೆ ನಡೆದು 12 ದಿನ ಕಳೆದರೂ ಆರೋಪಿಗಳ ಬಂಧನವಾಗಿಲ್ಲ. ಈ ಬಗ್ಗೆ ಪ್ರತಿಕ್ಷ ಬಿಜೆಪಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
ಆರೋಪಿಗಳನ್ನು ಬಂಧಿಸದ ವಿಚಾರ ಈಗ ತೀವ್ರ ಚರ್ಚೆಗೆ ಗ್ರಾಸವಾಗುತ್ತಿರುವುದಲ್ಲದೆ, ಆಕ್ರೋಶಕ್ಕೂ ಕಾರಣವಾಗುತ್ತಿದೆ. ರಾಜ್ಯ ಸರ್ಕಾರವೇ ಆರೋಪಿಗಳಿಗೆ ರಕ್ಷಣೆ ನೀಡುತ್ತಿದೆ ಎಂದು ಬಿಜೆಪಿ ಆರೋಪಿಸುತ್ತಿದೆ. ಸಚಿವರು ಈ ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ ಎನ್ನುತ್ತಿದ್ದಾರೆ. ಆದರೆ, ಈವರೆಗೂ ಆರೋಪಿಗಳನ್ನು ಯಾಕೆ ಬಂಧಿಸಿಲ್ಲ ಎಂದು ಬಿಜೆಪಿ ಶಾಸಕ ಬಸವರಾಜ ಮತ್ತಿಮೂಡ್ ಪ್ರಶ್ನಿಸಿದ್ದಾರೆ.
ಪ್ರಿಯಾಂಕ್ ಖರ್ಗೆಯಿಂದ ಹೋರಾಟ ಹತ್ತಿಕ್ಕುವ ಕೆಲಸ, ಬೆದರಿಕೆ: ಬಿಜೆಪಿ
ಆರೋಪಿಗಳನ್ನು ಬಂಧಿಸಬೇಕು ಮತ್ತು ಸಚಿವರು ರಾಜಿನಾಮೆ ನೀಡಬೇಕು ಎಂದು ಬಿಜೆಪಿ ನಾಯಕರು ಹೋರಾಟಕ್ಕೆ ಮುಂದಾದರೆ ಅವರನ್ನೇ ಹೆದರಿಸುವ ಕೆಲಸ ಆಗುತ್ತಿದೆ ಎಂದು ಕೇಸರಿ ಪಡೆ ಕೆಂಡ ಕಾರಿದೆ. ‘ನಾನು ಕರೆ ಕೊಟ್ಟರೆ ಬಿಜೆಪಿಯವರು ಮನೆ ಬಿಟ್ಟು ಆಚೆ ಬರುವುದಿಲ್ಲ’ ಎಂಬ ಪ್ರಿಯಾಂಕ್ ಹೇಳಿಕೆಯನ್ನೇ ಅಸ್ತ್ರ ಮಾಡಿಕೊಂಡ ಬಿಜೆಪಿ ನಾಯಕರು ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಾವು ಸಚಿನ್ ಕಟುಂಬಕ್ಕೆ ನ್ಯಾಯ ಕೊಡಿಸಲು ಹೋರಾಟ ಮಾಡುತ್ತಿದ್ದರೆ, ನಮ್ಮನ್ನೇ ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಸಾಂವಿಧಾನಿಕ ಹುದ್ದೆಯಲ್ಲಿರುವ ಸಚಿವರು ಹೋರಾಟಗಾರನ್ನೇ ಹೆದರಿಸುವಕೆಲಸ ಮಾಡುತ್ತಿದ್ದಾರೆ. ಅಂತಹ ಗೊಡ್ಡು ಹೆದರಿಕೆಗಳಿಗೆಲ್ಲ ಹೆದರುವುದಿಲ್ಲ. ಪ್ರಿಯಾಂಕ್ ಖರ್ಗೆ ರಾಜಿನಾಮೆ ನೀಡುವ ವರೆಗೂ ನಾವು ಹೋರಾಟ ನಿಲ್ಲಿಸುವುದಿಲ್ಲ ಎಂದು ಬಿಜೆಪಿ ಶಾಸಕ ಅವಿನಾಶ್ ಜಾಧವ್ ಹೇಳಿದ್ದಾರೆ.
ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡುವ ನಿರೀಕ್ಷೆ ನಮಗಿಲ್ಲ, ಹೋರಾಟ ಮುಂದುವರೆಸುತ್ತೇವೆ; ಪ್ರಲ್ಹಾದ್ ಜೋಶಿ
ಒಟ್ಟಿನಲ್ಲಿ ಒಂದು ಹಂತದ ಹೋರಾಟ ಮುಗಿಸಿರುವ ಬಿಜೆಪಿ, ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವ ಶಪಥ ಮಾಡಿದೆ. ಕಾಂಗ್ರೆಸ್ – ಬಿಜೆಪಿ ಗುದ್ದಾಟದಲ್ಲಿ ಸಚಿನ್ ಕುಟುಂಬಕ್ಕೆ ನಿಜಕ್ಕೂ ನ್ಯಾಯ ಸಿಗುತ್ತದೆಯೇ ಕಾದು ನೋಡಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ