AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖೊಟ್ಟಿ ಗ್ಯಾರಂಟಿ ಸರಕಾರದ ಲೂಟಿಯ ಸಾಕ್ಷಿಗುಡ್ಡೆ ಗುತ್ತಿಗೆದಾರರ ಬಿಲ್​ ಬಾಕಿ: ಸಿದ್ದರಾಮಯ್ಯಗೆ ಕುಮಾರಸ್ವಾಮಿ ತಿರುಗೇಟು

ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡುವುದಲ್ಲ. ದಾಖಲೆ ಸಹಿತ ಆರೋಪ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ಮಾಡಿದ್ದರು. ಇದಕ್ಕೆ, ಹೆಚ್​ಡಿ ಕುಮಾರಸ್ವಾಮಿ ಟ್ವೀಟ್​ ಮೂಲಕ ಗುತ್ತಿಗೆದಾರರ ಬಿಲ್​ ಬಾಕಿ ವಿಚಾರವನ್ನು ಮುಂದಿಟ್ಟುಕೊಂಡು ತಿರುಗೇಟು ನೀಡಿದ್ದಾರೆ.

ಖೊಟ್ಟಿ ಗ್ಯಾರಂಟಿ ಸರಕಾರದ ಲೂಟಿಯ ಸಾಕ್ಷಿಗುಡ್ಡೆ ಗುತ್ತಿಗೆದಾರರ ಬಿಲ್​ ಬಾಕಿ: ಸಿದ್ದರಾಮಯ್ಯಗೆ ಕುಮಾರಸ್ವಾಮಿ ತಿರುಗೇಟು
ಹೆಚ್​ಡಿ ಕುಮಾರಸ್ವಾಮಿ
ವಿವೇಕ ಬಿರಾದಾರ
|

Updated on: Jan 07, 2025 | 1:25 PM

Share

ಬೆಂಗಳೂರು, ಜನವರಿ 07: ಶೇ. 60 ರಷ್ಟು ಕಮಿಷನ್​ ನಡೆಯುತ್ತಿದೆ ಎನ್ನುವುದು ಗಾಳಿಯಲ್ಲಿ ಗುಂಡು ಹಾರಿಸಿದಂತಿದೆ. ದಾಖಲೆ ಸಹಿತ ಆರೋಪ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ತಿರುಗೇಟಿಗೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಉತ್ತರ ನೀಡಿದ್ದಾರೆ. ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ಗುತ್ತಿಗೆದಾರರ ಬಿಲ್ ಬಾಕಿ ಮೊತ್ತ ​ಸುದ್ದಿಯನ್ನು ಟ್ವೀಟ್​ ಮಾಡಿರುವ ಅವರು, “ದಾಖಲೆ ಕೊಡಿ.. ದಾಖಲೆ ಕೊಡಿ ಎನ್ನುತ್ತಿದ್ದೀರಿ.. ಇಲ್ನೋಡಿ ಸಿದ್ದರಾಮಯ್ಯನವರೇ.. ನಿಮ್ಮ ಖೊಟ್ಟಿ ಗ್ಯಾರಂಟಿ ಸರಕಾರದ ಲೂಟಿ ಸಾಕ್ಷಿಗುಡ್ಡೆ. ಪತ್ರಿಕೆಯವರೇ ನಿಮ್ಮ ಸಾಕ್ಷಿಗುಡ್ಡೆಯ ಸಾಕ್ಷಾತ್ಕಾರ ಮಾಡಿಸಿದ್ದಾರೆ” ಎಂದು ವಾಗ್ದಾಳಿ ಮಾಡಿದ್ದಾರೆ.

“ನಿಮ್ಮ ಸರಕಾರ ಗುತ್ತಿಗೆದಾರರನ್ನು ಎಷ್ಟು ನಿರ್ಲಜ್ಜವಾಗಿ ಸುಲಿಗೆ ಮಾಡುತ್ತಿದೆ ಎನ್ನುವುದಕ್ಕೆ ಈ ಸಾಕ್ಷಿಗುಡ್ಡೆ ಸಾಕ್ಷ್ಯ ಸಾಲದೇ ಮುಖ್ಯಮಂತ್ರಿಗಳೇ? ಚೆಂಬು ಹಾಕಿ ಹಂಡೆ ಹೊಡೆದರು ಎನ್ನುವಂತೆ ಗ್ಯಾರಂಟಿ ಹೆಸರಿನಲ್ಲಿ ಬಿಡಿಗಾಸು ಕೊಟ್ಟು ಕೋಟಿ ಕೋಟಿ ಲೂಟಿ ಮಾಡುತ್ತಿದ್ದೀರಿ” ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಸರ್ಕಾರ ದಿವಾಳಿಯಾಗುವತ್ತ ಹೆಜ್ಜೆ ಇಡುತ್ತಿದೆ: ಆರ್ ಅಶೋಕ್ ಗಂಭೀರ ಆರೋಪ

“ಗುತ್ತಿಗೆದಾರರ 32,000 ಕೋಟಿಯಷ್ಟು ಬಿಲ್ ಬಾಕಿ ಬಿದ್ದಿದೆ. ಈ ಬಾಕಿ ಮೇಲೆ ನಿಮ್ಮ ಪರ್ಸಂಟೇಜ್ ಕರಿನೆರಳು ಕೂಡ ಬಿದ್ದಿದೆ! ಸಾಲಸೋಲ ಮಾಡಿ ಕಾಮಗಾರಿ ಮಾಡಿರುವ ಗುತ್ತಿಗೆದಾರರು ದಯಾಮರಣಕ್ಕೆ ಅರ್ಜಿ ಬರೆಯುತ್ತಿದ್ದಾರೆ” ಎಂದು ವಾಗ್ದಾಳಿ ಮಾಡಿದರು.

ಟ್ವಿಟರ್​ ಪೋಸ್ಟ್​

ಗುತ್ತಿಗೆದಾರರ ಬಿಲ್ ಬಾಕಿ ಪಟ್ಟಿ ನೋಡಿ

  • ಜಲ ಸಂಪನ್ಮೂಲ: ₹14,600 ಕೋಟಿ
  • ಲೋಕೋಪಯೋಗಿ: ₹10,000 ಕೋಟಿ
  • ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್: ₹3,100 ಕೋಟಿ
  • ಸಣ್ಣ ನೀರಾವರಿ: ₹2,800 ಕೋಟಿ
  • ಇತರೆ ಇಲಾಖೆ: ₹1,500 ಕೋಟಿ
  • ಒಟ್ಟು: ₹32,000 ಕೋಟಿ!!

“ಭಂಡತನ ಏಕೆ? ಆಗಿರುವ ತಪ್ಪು ಸರಿಪಡಿಸಿಕೊಳ್ಳಿ. ವಿನಾಕಾರಣ ಸಮರ್ಥನೆ ಲಾಯಕ್ಕಲ್ಲ. ಗುತ್ತಿಗೆದಾರರ ಬದುಕು ಉಳಿಸಿ ರಾಜ್ಯದ ಅಭಿವೃದ್ಧಿ ಕಡೆಗೆ ಗಮನ ಹರಿಸಿ. ಇದ್ದಿದ್ದನ್ನು ಇದ್ದಹಾಗೆ ಹೇಳಿದ್ದೇನೆ. ನೀವೂ, ನಿಮ್ಮ ಸಂಪುಟ ನನ್ನ ಮೇಲೆ ವಾಗ್ಯುದ್ಧಕ್ಕಿಳಿದರೆ ಉಪಯೋಗವೇನು? ಗುತ್ತಿಗೆದಾರರ ಬಾಕಿ ಪಾವತಿಗಿಂತ ನನ್ನನ್ನು ಟಾರ್ಗೆಟ್ ಮಾಡುವುದು ಮುಖ್ಯವಲ್ಲ” ಎಂದು ಟ್ವೀಟ್​ ಮೂಲಕ ಪ್ರತ್ಯುತ್ತರ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ