ಪ್ರಮೋದ್ ಮುತಾಲಿಕ್ ಸ್ಪರ್ಧೆಯಿಂದ ಹಿಂದೂ ಪರ ರಾಜಕೀಯ ಪಕ್ಷಕ್ಕೆ ಹಿನ್ನಡೆ: ಸುನಿಲ್ ಕುಮಾರ್

| Updated By: Rakesh Nayak Manchi

Updated on: Feb 05, 2023 | 3:58 PM

ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಕಾರ್ಕಾಳ ಕ್ಷೇತ್ರದಿಂದಲೇ ಕಣಕ್ಕಿಳಿಯುವುದಾಗಿ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ನಿನ್ನೆ ಮಾಧ್ಯಮ ಪ್ರಕಟಣೆ ಹೊರಡಿಸಿದ್ದ ಸುನಿಲ್ ಕುಮಾರ್ ಇಂದು ಮತ್ತದೇ ವಿಚಾರವಾಗಿ ಮಾತನಾಡಿ, ರಾಜಕೀಯ ಹಿನ್ನಡೆಯ ಭೀತಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರಮೋದ್ ಮುತಾಲಿಕ್ ಸ್ಪರ್ಧೆಯಿಂದ ಹಿಂದೂ ಪರ ರಾಜಕೀಯ ಪಕ್ಷಕ್ಕೆ ಹಿನ್ನಡೆ: ಸುನಿಲ್ ಕುಮಾರ್
ಸುನಿಲ್ ಕುಮಾರ್ ಮತ್ತು ಪ್ರಮೋದ್ ಮುತಾಲಿಕ್
Follow us on

ಕೊಪ್ಪಳ: ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod Muthalik) ಅವರು ಕಾರ್ಕಳದಿಂದ ಸ್ಪರ್ಧಿಸುತ್ತಿರುವುದು ಹಿಂದೂ ಪರ ರಾಜಕೀಯ ಪಕ್ಷಕ್ಕೆ ಹಿನ್ನೆಡೆಯಾಗಲಿದೆ. ಇದನ್ನು ಅವರು ತಿಳಿದುಕೊಳ್ಳಬೇಕು ಎಂದು ಸಚಿವ ಸುನಿಲ್ ಕುಮಾರ್ (Sunil Kumar) ಹೇಳಿಕೊಂಡಿದ್ದಾರೆ. ಜಿಲ್ಲೆಯ ಗಂಗಾವತಿಯ ಶ್ರೀರಾಮನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ಸರಕಾರ ಬಂದ ನಂತರ ಕೇವಲ ಒಬ್ಬ ಹಿಂದೂ ಕಾರ್ಯಕರ್ತನ ಹತ್ಯೆಯಾಗಿದೆ. ಸಿದ್ದರಾಮಯ್ಯ (Siddaramiah) ಸರಕಾರದ ಅವಧಿಯಲ್ಲಿ ಒಟ್ಟು 18 ಹಿಂದು ಕಾರ್ಯಕರ್ತರ ಹತ್ಯೆಯಾಗಿತ್ತು. ಬಿಜೆಪಿ ಸರಕಾರ ಬಂದ ನಂತರ ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದಿದೆ. ಹಿಜಾಬ್ ಕುರಿತು ಕಾಯ್ದೆ ರೂಪಿಸಿದೆ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರ ಬೇಕಾದರೂ ಸ್ಪರ್ಧಿಸಬಹುದು. ಹೀಗಾಗಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಎಲ್ಲಿ ಬೇಕಾದರೂ ಸ್ಪರ್ದಿಸಲಿ. ಬಿಜೆಪಿಗೆ ರಾಜ್ಯದ 224 ಕ್ಷೇತ್ರ ಇದೆ. ಚುನಾವಣೆಯ ಹತ್ತಿರ ಬರಲಿ ಎಲ್ಲವೂ ಗೊತ್ತಾಗಲಿದೆ ಎಂದು ಸುನಿಲ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: ಕಾರ್ಕಳದಲ್ಲಿ ಹಿಂದುತ್ವಕ್ಕೆ ಯಾವುದೇ ರೀತಿಯಿಂದಲೂ ಧಕ್ಕೆಯಾಗಿಲ್ಲ: ಮುತಾಲಿಕ್​ಗೆ ಟಕ್ಕರ್ ಕೊಟ್ಟ ಸುನಿಲ್ ಕುಮಾರ್

ಇನ್ನು, ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ಅವರು ರಾಜ್ಯಕ್ಕೆ ಪದೇ ಪದೇ ಆಗಮಿಸುತ್ತಿದ್ದಾರೆ. ಈ ಬಗ್ಗೆ ವಿಪಕ್ಷಗಳು ವ್ಯಂಗ್ಯವಾಡುವುದರ ಜೊತೆಗೆ ಟೀಕಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಸಚಿವರು, ರಾಜ್ಯಕ್ಕೆ ಮುಂದಿನ ದಿನಗಳಲ್ಲಿ ಚುನಾವಣೆಗೂ ಮುನ್ನ ಮೋದಿ 10 ಬಾರಿ ಬರುತ್ತಾರೆ. ಅದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದರು. ಮೋದಿ ನಮ್ಮ ಪರಮೋಚ್ಛ ನಾಯಕರು. ನಾವು ಚುನಾವಣೆ ಗೆಲ್ಲಲೇಬೇಕು. ಸಿದ್ದರಾಮಯ್ಯ ಮೊದಲು ಕ್ಷೇತ್ರ ಯಾವುದು ಎಂದು ಖಚಿತ ಪಡಿಸಿಕೊಳ್ಳಲಿ. ಆಮೇಲೆ ನಮ್ಮ ಪಕ್ಷದ ಬಗ್ಗೆ ಮಾತನಾಡಲಿ ಎಂದು ತಿರುಗೇಟು ನೀಡಿದರು.

ಪ್ರಮೋದ್ ಮುತಾಲಿಕ್ ಸೋಲಿನ ಬಗ್ಗೆ ಮಾತನಾಡಿದ್ದ ಸುನಿಲ್ ಕುಮಾರ್

ಕಾರ್ಕಳದಿಂದ ಪಕ್ಷೇತರವಾಗಿ ಪ್ರಮೋದ್ ಮುತಾಲಿಕ್ ಸ್ಪರ್ಧಿಸುತ್ತಿರುವ ಬಗ್ಗೆ ನಿನ್ನೆ (ಫೆ.4) ಮಾಧ್ಯಮ ಪ್ರಕಟಣೆ ಹೊರಡಿಸಿದ್ದ ಸುನಿಲ್ ಕುಮಾರ್, ಈ ಹಿಂದೆ ಅನಂತಕುಮಾರ್ ಮತ್ತು ಪ್ರಹ್ಲಾದ್ ಜೋಶಿ ವಿರುದ್ಧವೂ ಪ್ರಮೋದ್ ಮುತಾಲಿಕ್ ಅವರು ಸ್ಪರ್ಧಿಸಿದ್ದರು. ಚುನಾವಣೆಯ ಫಲಿತಾಂಶ ಏನಾಯ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಅವರ ಮುಂದಿನ ಆಯ್ಕೆ ಯಾವುದೋ ಗೊತ್ತಿಲ್ಲ. ಈಗ ಕಾರ್ಕಳ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಮುತಾಲಿಕ್ ಹಿಂದುತ್ವದ ಹೆಸರಿನಲ್ಲಿ ಏಕೆ ಚುನಾವಣೆ ಬಯಸುತ್ತಿದ್ದಾರೆ ಎಂದು ಬಿಡಿಸಿ ಹೇಳುವ ಅಗತ್ಯವಿಲ್ಲ. ಆದರೆ ಕಾರ್ಕಳದಲ್ಲಿ ಹಿಂದುತ್ವಕ್ಕೆ ಯಾವುದೇ ರೀತಿಯಿಂದಲೂ ಧಕ್ಕೆಯಾಗಿಲ್ಲ. ಪ್ರಮೋದ್ ಮುತಾಲಿಕ್ ಅವರು ಆರ್​ಎಸ್​ಎಸ್​​ ಹಾಗೂ ವಿಶ್ವ ಹಿಂದೂ ಪರಿಷತ್ ಬಿಟ್ಟು ಯಾಕೆ ಹೊರಬಂದರು ಎಂಬುದಕ್ಕೆ ಉತ್ತರಿಸಲಿ ಎಂದಿದ್ದರು.

ಇದಕ್ಕೂ ಮುನ್ನ ಕಾರ್ಕಳದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಡಿ ಎಂದು ಮುತಾಲಿಕ್ ಒತ್ತಾಯಿಸಿದ ಬಗ್ಗೆ ವಿಜಯಪುರದಲ್ಲಿ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಮ್ಮದು ರಾಷ್ಟ್ರೀಯ ಪಕ್ಷ. ಹೀಗಾಗಿ 224 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಹಾಕುತ್ತೇವೆ. ಉಡುಪಿ ಜಿಲ್ಲೆಯ ಕಾರ್ಕಳ ಕ್ಷೇತ್ರದಲ್ಲಿ ಸುನಿಲ್ ಕುಮಾರ್ ಬಾರಿ ಗೆದ್ದು ಸಚಿವರಾಗಿದ್ದಾರೆ. ಅದು ಅವರದ್ದೇ ಕ್ಷೇತ್ರ ಎಂದು ಹೇಳುವ ಮೂಲಕ ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸುನಿಲ್ ಕುಮಾರ್ ಕಾರ್ಕಾಳ ಕ್ಷೇತ್ರದಿಂದಲೇ ಕಣಕ್ಕಿಳಿಯುವ ಸುಳಿವು ನೀಡಿದ್ದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:56 pm, Sun, 5 February 23