ಕರ್ನಾಟಕ ಸರ್ಕಾರವು ಡೀಸೆಲ್​ ಬೆಲೆ 19 ರೂ ಕಡಿತಗೊಳಿಸಿದ ನಂತರ ವಿರೋಧ ಪಕ್ಷದ ಬಗ್ಗೆ ವ್ಯಂಗ್ಯವಾಡಿದ ಬಿಜೆಪಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 04, 2021 | 10:17 PM

ಡೀಸೆಲ್ ಬೆಲೆ ಕಡಿತಗೊಳಿಸುವ ರಾಜ್ಯ ಸರ್ಕಾರಗಳ ಈ ನಿರ್ಧಾರವು ಸರಕು ಸಾಗಣೆ ಉದ್ಯಮಕ್ಕೆ ಹೊಸ ಚೈತನ್ಯ ನೀಡಿದೆ

ಕರ್ನಾಟಕ ಸರ್ಕಾರವು ಡೀಸೆಲ್​ ಬೆಲೆ 19 ರೂ ಕಡಿತಗೊಳಿಸಿದ ನಂತರ ವಿರೋಧ ಪಕ್ಷದ ಬಗ್ಗೆ ವ್ಯಂಗ್ಯವಾಡಿದ ಬಿಜೆಪಿ
ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ದೇಶದ ಜನರಿಗೆ ದೀಪಾವಳಿ ಕೊಡುಗೆಯಾಗಿ ಬಿಜೆಪಿ ಆಡಳಿತದ 10 ದೇಶಗಳು ಇಂಧನ ಬೆಲೆಯನ್ನು ಗಮನಾರ್ಹ ಪ್ರಮಾಣದಲ್ಲಿ ಕಡಿಮೆ ಮಾಡಿವೆ. ಇಂಧನ ಬೆಲೆ ಕಡಿತದ ನಿರ್ಧಾರವವನ್ನು ಮೊದಲು ಘೋಷಿಸಿದ್ದರು ಕರ್ನಾಟಕ. ಡೀಸೆಲ್ ಬೆಲೆ ಕಡಿತಗೊಳಿಸುವ ರಾಜ್ಯ ಸರ್ಕಾರಗಳ ಈ ನಿರ್ಧಾರವು ಸರಕು ಸಾಗಣೆ ಉದ್ಯಮಕ್ಕೆ ಹೊಸ ಚೈತನ್ಯ ನೀಡಿದೆ. ಕರ್ನಾಟಕದಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್​ಗೆ ₹ 19 ಕಡಿಮೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ರಾಜ್ಯ ಸರ್ಕಾರವು ಡೀಸೆಲ್ ಬೆಲೆಯನ್ನು ₹ 7ರಷ್ಟು ಕಡಿಮೆ ಮಾಡಿದೆ. ಕೇಂದ್ರ ಸರ್ಕಾರವು ₹ 10ರಷ್ಟು ಕಡಿಮೆ ಮಾಡಿದೆ. ಇದರಿಂದ ಒಟ್ಟು ಬೆಲೆ ಕಡಿತದ ಪ್ರಮಾಣ ₹ 19.47 ಆಗಿದೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ. ಕರ್ನಾಟಕದಲ್ಲಿ ಪೆಟ್ರೋಲ್ ದರವು ₹ 13.30 ಕಡಿಮೆಯಾಗಿದೆ. ರಾಜ್ಯ ಸರ್ಕಾರವು ₹ 7 ಮತ್ತು ಕೇಂದ್ರ ಸರ್ಕಾರವು ₹ 5 ಕಡಿತ ಮಾಡಿದೆ. ಇದರೊಟ್ಟಿಗೆ ಮಾರಾಟ ತೆರಿಗೆಯಲ್ಲಿಯೂ ವಿನಾಯ್ತಿ ಸಿಕ್ಕಿದೆ. ಕರ್ನಾಟಕದಲ್ಲಿ ಇಂದು ಪ್ರತಿ ಲೀಟರ್ ಡೀಸೆಲ್ ₹ 85.03, ಪೆಟ್ರೋಲ್ ₹ 100.63ಕ್ಕೆ ಮಾರಾಟವಾಗುತ್ತಿದೆ.

‘ವಿರೋಧ ಪಕ್ಷಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಬಗ್ಗೆ ಉಪದೇಶಗಳನ್ನು ಕೊಡುತ್ತಿವೆ. ನಿನ್ನೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ರದ್ದುಪಡಿಸಿತು. ಪ್ರಧಾನಿ ನಿರ್ಧಾರದ ಬೆನ್ನಿಗೇ ಎನ್​ಡಿಎ ಆಡಳಿತವಿರುವ ರಾಜ್ಯ ಸರ್ಕಾರಗಳು ಮೌಲ್ಯವರ್ಧಿತ ತೆರಿಗೆ ಕಡಿತಗೊಳಿಸಿದವು. ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳು ಇನ್ನೂ ಈ ಬಗ್ಗೆ ಯಾವುದೇ ನಿರ್ಧಾರ ಪ್ರಕಟಿಸಿಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಟ್ವೀಟ್ ಮಾಡಿದ್ದಾರೆ.

ಕರ್ನಾಟಕದಲ್ಲಿ ವಾಣಿಜ್ಯ ತೆರಿಗೆಯು ಪೆಟ್ರೋಲ್​ ಮೇಲೆ ಶೇ 35ರಿಂದ ಶೇ 25.9ಕ್ಕೆ, ಡೀಸೆಲ್ ಮೇಲೆ ಶೇ 24ರಿಂದ ಶೇ 14.34ಕ್ಕೆ ಇಳಿಕೆಯಾಗಿದೆ. ಕರ್ನಾಟಕ ಸರ್ಕಾರದ ನಿರ್ಧಾರ ಪ್ರಕಟವಾದ ನಂತರ ಕಾಂಗ್ರೆಸ್ ಆಡಳಿತದ ರಾಜ್ಯಗಳನ್ನು ಟೀಕಿಸಿರುವ ಬಿಜೆಪಿ, ಪ್ರತಿಪಕ್ಷಗಳು ಕೊಟ್ಟ ಮಾಡು ಉಳಿಸಿಕೊಂಡಿಲ್ಲ ಎಂದು ವ್ಯಂಗ್ಯವಾಡಿವೆ. ಪ್ರತಿವರ್ಷ ದೀಪಾವಳಿ ವೇಳೆಯಲ್ಲಿ ಗ್ರಾಹಕ ವಸ್ತುಗಳ ಖರೀದಿ ಹೆಚ್ಚಾಗುವುದು ವಾಡಿಕೆ. ಈ ಹೊತ್ತಿನಲ್ಲಿಯೇ ಕೇಂದ್ರ ಸರ್ಕಾರ ತೈಲೋತ್ಪನ್ನಗಳ ಬೆಲೆ ಕಡಿತಗೊಳಿಸುವ ಮಹತ್ವದ ನಿರ್ಧಾರ ಪ್ರಕಟಿಸಿದೆ. ಇದರಿಂದ ಕೇಂದ್ರ ಸರ್ಕಾರಕ್ಕೆ ಸುಮಾರು 600 ಶತಕೋಟಿ ರೂಪಾಯಿ ತೆರಿಗೆ ನಷ್ಟವಾಗಬಹುದು ಎಂದು ರಾಯಿಟರ್ಸ್​ ಸುದ್ದಿಸಂಸ್ಥೆ ವರದಿ ಮಾಡಿದೆ.

ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಗ್ರಾಹಕರು ಖರ್ಚು ಮಾಡುತ್ತಿರುವ ಪ್ರಮಾಣ ಹೆಚ್ಚಾಗುತ್ತಿದೆ. ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾದ ಹಿನ್ನೆಲೆಯಲ್ಲಿ ಪ್ರವಾಸ ಮತ್ತು ವ್ಯಾಪಾರ ವಹಿವಾಟಿನ ಮೇಲಿನ ನಿರ್ಬಂಧ ಸಡಿಲಿಸಲಾಗಿದೆ. ಆದರೆ ಇಂಧನದ ದರ ಹೆಚ್ಚಾಗಿದ್ದ ಕಾರಣ ರೈತರಿಂದ ಕಾರ್ಪೊರೇಟ್ ಸಂಸ್ಥೆಯವರೆಗೆ ಎಲ್ಲ ವರ್ಗಗಳ ಆದಾಯ ಕಡಿಮೆಯಾಗಿತ್ತು. ಇದೀಗ ಇಂಧನ ದರ ಕಡಿತವಾಗಿರುವುದರಿಂದ ಮುಂದಿನ ದಿನಗಳಲ್ಲಿ ರೈತರು ಮತ್ತು ಉತ್ಪಾದನಾ ವಲಯದಲ್ಲಿ ತೊಡಗಿಸಿಕೊಂಡಿರುವವರ ಆದಾಯ ಪ್ರಮಾಣ ಹೆಚ್ಚಾಗುವ ನಿರೀಕ್ಷೆಯಿದೆ.