ಬೆಂಗಳೂರು: ಕರ್ನಾಟಕ ಕಾಂಗ್ರೆಸ್ನಲ್ಲಿ (Karnataka Congress) ಮೂಲ ಮತ್ತು ವಲಸಿಗರ ಸಂಘರ್ಷದ ವಿಚಾರ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಹಿರಿಯ ನಾಯಕ ಕೆ.ಎಚ್.ಮುನಿಯಪ್ಪ ವಿರುದ್ಧ ಸಿದ್ದರಾಮಯ್ಯ (Siddaramaiah) ಬಣ ತೊಡೆ ತಟ್ಟಿರುವ ಹಿನ್ನೆಲೆಯಲ್ಲಿ ಮುನಿಯಪ್ಪ ಪರ ಮೂಲ ಕಾಂಗ್ರೆಸ್ಸಿಗರು ಒಂದಾಗಿದ್ದು, ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಜೂನ್ 4ರಂದು ಸಿದ್ದರಾಮಯ್ಯ ಭೇಟಿಯಾಗಿದ್ದ ರಮೇಶ್ ಕುಮಾರ್ ನೇತೃತ್ವದ ಕೋಲಾರ ಶಾಸಕರ ನಿಯೋಗವು ಸಿದ್ದರಾಮಯ್ಯ ಅವರಿಗೆ ಕೋಲಾರದಿಂದಲೇ ಸ್ಪರ್ಧಿಸುವಂತೆ ಆಹ್ವಾನ ನೀಡಿತ್ತು. ನಿನ್ನೆ ತಡರಾತ್ರಿ ಕೆ.ಎಚ್.ಮುನಿಯಪ್ಪ ನಿವಾಸದಲ್ಲಿ ಡಿ.ಕೆ.ಶಿವಕುಮಾರ್ (DK Shivakumar) ನೇತೃತ್ವದಲ್ಲಿ ಸಭೆ ಸೇರಿದ್ದರು. ಸಭೆಯಲ್ಲಿ ಬಿ.ಕೆ.ಹರಿಪ್ರಸಾದ್, ಎಚ್.ಕೆ.ಪಾಟೀಲ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ದೂರವಾಣಿ ಮೂಲಕ ಮಲ್ಲಿಕಾರ್ಜುನ ಖರ್ಗೆ , ವೀರಪ್ಪ ಮೊಯ್ಲಿ ಹಾಗೂ ಡಾ ಜಿ.ಪರಮೇಶ್ವರ ಸಹ ಮಾತುಕತೆ ನಡೆಸಿದರು.
ಕೋಲಾರದಲ್ಲಿ ಯಾವುದೇ ಕಾರಣಕ್ಕೂ ಮುನಿಯಪ್ಪ ಅವರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಮುನಿಯಪ್ಪ ನಮ್ಮ ನಾಯಕರು. ಬಲಿಷ್ಠ ದಲಿತ ಸಮಯದಾಯ ಅವರ ಜೊತೆ ಇದೆ. ಈ ಹಿಂದೆ ದಕ್ಷಿಣ ಭಾರತದಲ್ಲಿ ಘಟಾನುಘಟಿಗಳು ಸೋತಾಗಲು ಮುನಿಯಪ್ಪ ಕಾಂಗ್ರೆಸ್ ಪಕ್ಷದ ಘನತೆ ಉಳಿಸಿದ್ದರು. ಈಗಾಗಲೇ ದಲಿತ ಎಡಗೈ ಸಮುದಾಯವು ಕಾಂಗ್ರೆಸ್ನಿಂದ ದೂರ ಸರಿಯುತ್ತಿರುವಾಗ ಮುನಿಯಪ್ಪ ಅವರನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂಬ ಅಭಿಪ್ರಾಯವು ಸಭೆಯಲ್ಲಿ ವ್ಯಕ್ತವಾಯಿತು.
ಈ ಬಗ್ಗೆ ಹೈಕಮಾಂಡ್ ಜೊತೆ ಮಾತುಕತೆ ನಡೆಸಲು ಹಿಂಜರಿಯುವುದಿಲ್ಲ ಎಂದು ಈ ನಾಯಕರು ಹೇಳಿದರು. ಹೈಕಮಾಂಡ್ ಸೂಚನೆ ಮೇರೆಗೆ ನಾನು ಮುನಿಯಪ್ಪ ನಿವಾಸಕ್ಕೆ ಬಂದಿದ್ದೇನೆ ಎಂದ ಡಿ.ಕೆ.ಶಿವಕುಮಾರ್ ಮುನಿಯಪ್ಪ ಅವರ ಗೌರವ ರಕ್ಷಣೆ ಮಾಡುವ ಭರವಸೆ ಕೊಟ್ಟರು.
ಸಿದ್ದರಾಮೋತ್ಸವಕ್ಕೂ ಮೂಲ ಕಾಂಗ್ರೆಸಿಗರ ಆಕ್ಷೇಪ
ಕರ್ನಾಟಕ ಕಾಂಗ್ರೆಸ್ನಲ್ಲೀಗ ‘ಸಿದ್ದರಾಮಯ್ಯ 75’ VS ‘ಸ್ವಾತಂತ್ರ್ಯ 75’ ವಿವಾದ ಗರಿಗೆದರಿದೆ. ಸಿದ್ದರಾಮೋತ್ಸವಕ್ಕೆ ಕಾಂಗ್ರೆಸ್ನ ಆಂತರಿಕ ವಲಯದಲ್ಲಿಯೇ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಸಿದ್ದರಾಮಯ್ಯ 75ನೇ ಹುಟ್ಟುಹಬ್ಬ ಆಚರಣೆಗೆ ಹಿರಿಯ ನಾಯಕರಾದ ಶ್ಯಾಮನೂರು ಶಿವಶಂಕರಪ್ಪ, ಆರ್.ವಿ.ದೇಶಪಾಂಡೆ ಸೇರಿದಂತೆ ಹಲವು ಪ್ರಮುಖ ನಾಯಕರು ಬೆಂಬಲ ಸೂಚಿಸಿದ್ದಾರೆ.
ಮೈಸೂರು-ಬೆಂಗಳೂರು ಬದಲು ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಹಮ್ಮಿಕೊಂಡಿರುವುದರ ಹಿಂದೆ ರಾಜಕೀಯ ಲೆಕ್ಕಾಚಾರ ಇರಬಹುದು ಎಂದು ವಿಶ್ಲೇಷಿಸಲಾಗಿದೆ. ದಾವಣಗೆರೆಯಲ್ಲಿ ಬೃಹತ್ ಸಮಾವೇಶ ನಡೆಸಿದ್ರೆ ರಾಜ್ಯಕ್ಕೆ ದೊಡ್ಡ ರಾಜಕೀಯ ಸಂದೇಶ ರವಾನೆಯಾಗುತ್ತದೆ. ಆ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಭಾಗಿಯಾದರೆ ಸಿದ್ದರಾಮಯ್ಯ ಸಿಎಂ ಅಭ್ಯರ್ಥಿಯೆಂದು ಪರೋಕ್ಷವಾಗಿ ಸಾರಿ ಹೇಳಿದಂತೆ ಆಗುತ್ತದೆ ಎಂದು ವಿಶ್ಲೇಷಿಸಲಾಗಿದೆ.
ಇದೇ ಕಾರಣಕ್ಕೆ ಸಿದ್ದರಾಮೋತ್ಸವಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ಕುರಿತು ಬಹಿರಂಗವಾಗಿ ಎಲ್ಲಿಯೂ ಅವರು ಮಾತನಾಡುತ್ತಿಲ್ಲ. ಮೂಲ ಕಾಂಗ್ರೆಸ್ನ ಹಲವು ಹಿರಿಯ ನಾಯಕರು ಡಿ.ಕೆ.ಶಿವಕುಮಾರ್ ಅವರಿಗೆ ಸಾಥ್ ನೀಡಿದ್ದಾರೆ. ನಿನ್ನೆ ತಡರಾತ್ರಿ ಕೋಲಾರದ ನಾಯಕ ಕೆ.ಎಚ್.ಮುನಿಯಪ್ಪ ನಿವಾಸದಲ್ಲಿ ನಡೆದ ಸಭೆಯಲ್ಲಿ ಸಿದ್ದರಾಮೋತ್ಸವದ ಬಗ್ಗೆಯೂ ಚರ್ಚೆ ನಡೆಯಿತು ಎಂದು ಮೂಲಗಳು ಹೇಳಿವೆ.
ಈ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸುವಂತೆ ಕಾಂಗ್ರೆಸ್ ಹೈಕಮಾಂಡ್ಗೆ ಕಾಂಗ್ರೆಸ್ನ ಹಿರಿಯ ನಾಯಕರೇ ಒತ್ತಾಯ ಮಾಡುವ ಸಾಧ್ಯತೆಯಿದೆ. ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಹಿರಿಯ ನಾಯಕರ ನಿಯೋಗ ಹೈಕಮಾಂಡ್ ಭೇಟಿಗೆ ತೆರಳುವ ಸಾಧ್ಯತೆಯೂ ಇದೆ. ಈ ನಿಯೋಗದಲ್ಲಿ ಡಾ ಜಿ.ಪರಮೇಶ್ವರ, ಡಿ.ಕೆ.ಶಿವಕುಮಾರ್, ವೀರಪ್ಪ ಮೋಯ್ಲಿ, ಬಿ.ಕೆ.ಹರಿಪ್ರಸಾದ್, ಎಚ್.ಕೆ.ಪಾಟೀಲ್ ಸೇರಿದಂತೆ ಹಲವು ಹಿರಿಯರು ಭಾಗಿಯಾಗುವ ಸಾಧ್ಯತೆಯಿದೆ.
ಸಿದ್ದರಾಮೋತ್ಸವ ಕಾರ್ಯಕ್ರಮದಿಂದ ಕಾಂಗ್ರೆಸ್ ನಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ. ಅಗಸ್ಟ್ 2ರಿಂದ 15ರವರೆಗೆ ‘ಸ್ವಾತಂತ್ರ್ಯ 75’ ಕಾರ್ಯಕ್ರಮ ಹಮ್ಮಿಕೊಳ್ಳಲು ಹೈಕಮಾಂಡ್ ಸೂಚನೆ ನೀಡಿದೆ. ಆದರೆ ಸಿದ್ದರಾಮಯ್ಯ ಅಗಸ್ಟ್ 3ರಂದು ಕಾರ್ಯಕ್ರಮ ಮಾಡುತ್ತಿದ್ದಾರೆ. ಹಾಗಾದರೆ ಕಾಂಗ್ರೆಸ್ ಕಾರ್ಯಕರ್ತರು ಅಗಸ್ಟ್ 2ರಂದು ‘ಸ್ವಾತಂತ್ರ್ಯ 75’ ಆಚರಣೆ ಮಾಡಬೇಕೋ ಅಥವಾ ‘ಸಿದ್ದರಾಮಯ್ಯ 75’ ಆಚರಿಸಬೇಕೋ ಎಂದು ಹಲವರು ಪ್ರಶ್ನೆ ಕೇಳುತ್ತಿದ್ದಾರೆ.
‘ಸಿದ್ದರಾಮಯ್ಯ 75’ ಕಾರ್ಯಕ್ರಮದ ಸಮಿತಿಯಲ್ಲಿ ಕಾಂಗ್ರೆಸ್ ನಾಯಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸ್ನೇಹಿತ ಅಭಿಮಾನಿ ಬಳಗ ಇಲ್ಲ. ಇದೇ ನಾಯಕರು ಹೈಕಮಾಂಡ್ ನೀಡಿರುವ ಸ್ವಾತಂತ್ರ್ಯ 75 ಕಾರ್ಯಕ್ರಮ ಬಿಟ್ಟು ಸಿದ್ದರಾಮಯ್ಯ ಹುಟ್ಟುಹಬ್ಬ ಆಚರಿಸುತ್ತಿದ್ದರೆ ತಪ್ಪು ಸಂದೇಶ ರವಾನೆಯಾದಂತೆ ಆಗುತ್ತದೆ ಎಂಬ ವಾದ ಕೇಳಿಬರುತ್ತಿದೆ.
‘ಸ್ವಾತಂತ್ರ್ಯ 75’ರ ಕಾರ್ಯಕ್ರಮ ದೊಡ್ಡದೋ ಅಥವಾ ‘ಸಿದ್ದರಾಮಯ್ಯ 75’ ಕಾರ್ಯಕ್ರಮ ದೊಡ್ಡದೋ ಎಂದು ಮೂಲ ಕಾಂಗ್ರಸ್ಸಿಗರು ಪ್ರಶ್ನಿಸುತ್ತಿದ್ದಾರೆ. ಸಿದ್ದರಾಮೋತ್ಸವ ಆಚರಣೆಯಿಂದ ಕಾಂಗ್ರೆಸ್ ಕಾರ್ಯಕರ್ತರಲ್ಲೂ ಗೊಂದಲ ಸೃಷ್ಟಿಯಾಗಿದೆ. ಪರಿಸ್ಥಿತಿ ಹೀಗಿರುವಾಗ ರಾಹುಲ್ ಗಾಂಧಿ ಸಹ ಸಿದ್ದರಾಮಯ್ಯ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಬರುವುದು ಸರಿ ಅಲ್ಲ ಎಂದು ಮೂಲ ಕಾಂಗ್ರೆಸ್ಸಿಗರು ವಾದಿಸುತ್ತಿದ್ದಾರೆ.
ಹೈಕಮಾಂಡ್ ಅಂಗಳಕ್ಕೆ ಚೆಂಡು
ಸಭೆಯಲ್ಲಿದ್ದಾಗಲೇ ದೂರವಾಣಿ ಮೂಲಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಪರಮೇಶ್ವರ ಸೇರಿದಂತೆ ಇತರ ನಾಯಕರನ್ನು ಡಿ.ಕೆ.ಶಿವಕುಮಾರ್ ಸಂಪರ್ಕಿಸಿದರು. ಸಿದ್ದರಾಮಯ್ಯ ಹುಟ್ಟುಹಬ್ಬದ ಆಚರಣೆಗೆ ಯಾರ ವಿರೋಧವೂ ಇಲ್ಲ. ಆದರೆ ಎಐಸಿಸಿಯಿಂದಲೇ ‘ಸ್ವಾತಂತ್ರ್ಯ 75’ ಕಾರ್ಯಕ್ರಮ ನೀಡಿರುವಾಗ ಆ ಕಾರ್ಯಕ್ರಮಕ್ಕೆ ಮಹತ್ವ ನೀಡುವುದು ಬೇಡವೇ? ನಮ್ಮ ನಾಯಕರೇ ಸಿದ್ದರಾಮೋತ್ಸವ ಸಮಿತಿಯಲ್ಲಿ ಪದಾಧಿಕಾರಿಗಳಾಗಿದ್ದಾರೆ. ಸಿದ್ದರಾಮೋತ್ಸವದ ಬಗ್ಗೆ ಮಾರ್ಗದರ್ಶನ ನೀಡಿ ಎಂದು ಡಿ.ಕೆ.ಶಿವಕುಮಾರ್ ಹೈಕಮಾಂಡ್ ಅಂಗಳಕ್ಕೆ ಚೆಂಡೆಸೆದರು. ಈ ಕುರಿತು ಹಿರಿಯ ನಾಯಕರೊಂದಿಗೆ ಒಮ್ಮೆ ಚರ್ಚಿಸಿದ ನಂತರ ಸಂಪರ್ಕಿಸುವುದಾಗಿ ಸುರ್ಜೇವಾಲ ಹಾಗೂ ವೇಣುಗೋಪಾಲ್ ಪ್ರತಿಕ್ರಿಯಿಸಿದರು.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ‘ಸ್ವಾತಂತ್ರ್ಯ @75′ ಕಾರ್ಯಕ್ರಮದ ಕುರಿತು ಚರ್ಚಿಸಲು ಇಂದು (ಜುಲೈ 7) ವಿಶೇಷ ಸಭೆ ನಡೆಯಿತು. ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರ. ಅಗಸ್ಟ್ 2ರಿಂದ 15 ರವರೆಗೆ ಕಾರ್ಯಕ್ರಮ ನಡೆಯಲಿದೆ. ಬೆಂಗಳೂರು ಮಹಾನಗರ ಸೇರಿದಂತೆ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಕಾರ್ಯಕ್ರಮ ನಡೆಯಲಿದೆ.
ವಿಶ್ಲೇಷಣೆ: ಪ್ರಮೋದ್ ಶಾಸ್ತ್ರಿ