ಬೆಂಗಳೂರು: ರಾಜ್ಯದಲ್ಲಿ ಪೇ ಸಿಎಂ ಅಭಿಯಾನ ಆರಂಭವಾದ ನಂತರ ರಾಜಕೀಯದಲ್ಲಿ ಪರಸ್ಪರ ಕೆಸರೆರೆಚಾಟ ಆರಂಭಗೊಂಡಿದೆ. ಅಷ್ಟೇ ಅಲ್ಲದೆ ಸದನದ ಹೊರಗೂ ಪೇಸಿಎಂ ಪೋಸ್ಟರ್ ಕಿಡಿ ಹೊತ್ತಿಸಲು ಕಾಂಗ್ರೆಸ್ ನಿರ್ಧರಿಸಿದೆ. ಈ ನಡುವೆ ಭಾರತ್ ಜೋಡೋ ಯಾತ್ರೆ (Bharat Jodo Yatra) ಸಭೆ ನಡೆಸುವ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ (Randeep Singh Surjewala) ಮತ್ತು ಎಐಸಿಸಿ ಜನರಲ್ ಸೆಕ್ರೆಟರಿ ಕೆ.ಸಿ.ವೇಣುಗೋಪಾಲ್ (K.C.Venugopal) ಅವರು ರಾಜ್ಯಕ್ಕೆ ಆಗಮಿಸಲಿದ್ದಾರೆ. ಯಾತ್ರೆಯ ಬಗೆಗಿನ ಚರ್ಚೆಯ ನಂತರ ಸದ್ಯ ರಾಜ್ಯದಲ್ಲಿ ಆರಂಭವಾಗಿರುವ ಪೇ ಸಿಎಂ ಅಭಿಯಾನದ ಬಗ್ಗೆಯೂ ಉಭಯ ನಾಯಕರೊಂದಿಗೆ ಚರ್ಚಿಸಲು ರಾಜ್ಯ ಕೈ ನಾಯಕರು ನಿರ್ಧರಿಸಿದ್ದಾರೆ. ಈ ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಂಡು ಕೆ.ಆರ್. ಸರ್ಕಲ್, ಬಿಬಿಎಂಪಿ ಸುತ್ತಮುತ್ತ ಪೇ ಸಿಎಂ (PayCM) ಪೋಸ್ಟರ್ ಅಂಟಿಸುವ ಸಾಧ್ಯತೆ ಇದೆ.
ಸದ್ಯ ಕೈ ಕಾರ್ಯಕರ್ತರು ಪೇ ಸಿಎಂ ಪೋಸ್ಟರನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸುತ್ತಿದ್ದು, ಇವರನ್ನು ಬಂಧಿಸುವ ಕೆಲಸವನ್ನು ಪೊಲೀಸರು ನಡೆಸುತ್ತಿದ್ದಾರೆ. ಪೇಸಿಎಂ ಪೋಸ್ಟರ್ ವಿರುದ್ದ ಸರ್ಕಾರದ ಈ ನಡೆ ಖಂಡಿಸಿ ಕಾಂಗ್ರೆಸ್ ನಾಯಕರು, ಶಾಸಕರು ಪ್ರತಿಭಟನೆ ನಡೆಸಲು ಮುಂದಾಗಿದ್ದು, ಸದನದ ಹೊರಗೆ ಪೇಸಿಎಂ ಪೋಸ್ಟರ್ ಕಿಡಿ ಹೊತ್ತಿಸಲು ಕಾಂಗ್ರೆಸ್ ನಿರ್ಧಾರ ಮಾಡಿದೆ. ಅದರಂತೆ ಇಂದೂ ಪೇಸಿಎಂ ಪೋಸ್ಟರ್ ಬಗ್ಗೆ ಚರ್ಚೆ, ಪರ-ವಿರೋಧಗಳು ಜೋರಾಗಿಯೇ ನಡೆಯಲಿದೆ.
ಬೆಳಗ್ಗೆ 9 ಗಂಟೆಗೆ ಭಾರತ್ ಜೋಡೋ ಯಾತ್ರೆ ಸಂಬಂಧ ಖಾಸಗಿ ಹೊಟೇಲ್ನಲ್ಲಿ ಸಭೆ ಸುರ್ಜೇವಾಲ ಹಾಗೂ ವೇಣುಗೋಪಾಲ್ ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಪೇಸಿಎಂ ಪೋಸ್ಟರ್ ವಿಚಾರವೂ ಪ್ರಸ್ತಾಪವಾಗಲಿದೆ. ಈ ಬಗ್ಗೆ ಚರ್ಚೆ ನಡೆಸಿ ತಾವೇ ಸ್ವತಃ ಪೇ ಸಿಎಂ ಪೋಸ್ಟರ್ ಅಂಟಿಸಲು ಕೈ ನಾಯಕರು ಸಜ್ಜಾಗುತ್ತಿದ್ದಾರೆ. ಆದರೆ ಯಾವ ಸ್ಥಳದಲ್ಲಿ ಮತ್ತು ಯಾವಾಗ ಅಂಟಿಸಲಾಗುತ್ತದೆ ಎಂಬ ವಿಚಾರವನ್ನು ಗೌಪ್ಯವಾಗಿ ಇಟ್ಟಿದ್ದು, ಸಭೆ ಬಳಿಕ ದಿಢೀರನೆ ತೆರಳಿ ಪೇಸಿಎಂ ಪೋಸ್ಟರ್ ಅಂಟಿಸುವ ಸಾಧ್ಯತೆ ಇದೆ.
ಸಭೆ ಬಳಿಕ ಕೆ.ಆರ್ ಸರ್ಕಲ್, ಬಿಬಿಎಂಪಿ ಸುತ್ತಮುತ್ತ ಪೇಸಿಎಂ ಪೋಸ್ಟರ್ ಅಂಟಿಸುವ ಸಾಧ್ಯತೆ ಇದೆ. ಈ ಬಗ್ಗೆ ನಾಯಕರು ಎಲ್ಲೂ ಗುಟ್ಟು ಬಿಟ್ಟುಕೊಡದೆ ಗೌಪ್ಯತೆ ಕಾಪಾಡಿಕೊಂಡಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ಪೇಸಿಎಂ ಪೋಸ್ಟರ್ ಅಂಟಿಸಲು ಸುರ್ಜೆವಾಲಾ, ವೇಣುಗೋಪಾಲ್ ಕೂಡ ಕೈ ಜೋಡಿಸಲಿದ್ದಾರೆ. ಸ್ವತಃ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಕೂಡ ಪೋಸ್ಟರ್ ಅಂಟಿಸಿ ಪ್ರತಿಭಟನೆ ನಡೆಸುವ ಸಾಧ್ಯತೆಯೂ ಇದೆ. ಈಗಾಗಲೇ ಸರ್ಕಾರಿ ಕಟ್ಟಡದ ಮೇಲೇ ಪೋಸ್ಟರ್ ಅಂಟಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಔತಣಕೂಟ ಏರ್ಪಡಿಸಿದ ಸಿದ್ದರಾಮಯ್ಯ
ವಿಪಕ್ಷ ನಾಯಕರ ಸಿದ್ದರಾಮಯ್ಯ ಅವರು ಔತಣಕೂಟ ಏರ್ಪಡಿಸಿದ್ದಾರೆ. ಬೆಂಗಳೂರಿನ ಕೊಡವ ಸಮಾಜದ ಹಾಲ್ನಲ್ಲಿ ಶಾಸಕರು, ಎಂಎಲ್ಸಿ, ಕಾಂಗ್ರೆಸ್ ಕಾರ್ಯಕರ್ತರಿಗೆ ಔತಣಕೂಟ ಏರ್ಪಡಿಸಲಾಗಿದೆ.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:06 am, Fri, 23 September 22