AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BMS Trust: ಬಿಎಂಎಸ್​ ಟ್ರಸ್ಟ್ ಅಕ್ರಮದ ಬಗ್ಗೆ ಉನ್ನತ ಮಟ್ಟದ ತನಿಖೆ, ಸಚಿವ ಅಶ್ವತ್ಥ ನಾರಾಯಣ ರಾಜೀನಾಮೆಗೆ ಎಚ್​ಡಿ ಕುಮಾರಸ್ವಾಮಿ ಆಗ್ರಹ

ಬಿಎಂಎಸ್ ಟ್ರಸ್ಟ್​ನ ಮೂಲ ಡೀಡ್ ಉಲ್ಲೇಖಿಸಿ ಆಡಳಿತಾರೂಢ ಬಿಜೆಪಿ ಸರ್ಕಾರ ಹಾಗೂ ಸಚಿವ ಅಶ್ವತ್ಥ ನಾರಾಯಣಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.

BMS Trust: ಬಿಎಂಎಸ್​ ಟ್ರಸ್ಟ್ ಅಕ್ರಮದ ಬಗ್ಗೆ ಉನ್ನತ ಮಟ್ಟದ ತನಿಖೆ, ಸಚಿವ ಅಶ್ವತ್ಥ ನಾರಾಯಣ ರಾಜೀನಾಮೆಗೆ ಎಚ್​ಡಿ ಕುಮಾರಸ್ವಾಮಿ ಆಗ್ರಹ
ಹೆಚ್ ಡಿ ಕುಮಾರಸ್ವಾಮಿ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Sep 23, 2022 | 11:07 AM

Share

ಬೆಂಗಳೂರು: ವಿಧಾನಸಭೆಯಲ್ಲಿ ಸಚಿವ ಅಶ್ವತ್ಥ ನಾರಾಯಣ ಹಾಗೂ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ (Ashwath Narayan) ನಡುವೆ ಕಾವೇರಿದ ವಾಗ್ವಾದ, ಏಕವಚನದ ಬೈದಾಟಕ್ಕೆ ಕಾರಣವಾಗಿದ್ದ ಬಿಎಂಎಸ್​ ಟ್ರಸ್ಟ್​ ವಿವಾದ ಸದ್ಯಕ್ಕೆ ತಣ್ಣಗಾಗುವಂತೆ ಕಾಣಿಸುತ್ತಿಲ್ಲ. ವಿವಾದದ ಬಗ್ಗೆ ಶುಕ್ರವಾರ (ಸೆ 23) ಸರಣಿ ಟ್ವೀಟ್ ಮಾಡಿರುವ ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ, ಬಿಎಂಎಸ್ ಟ್ರಸ್ಟ್​ನ ಮೂಲ ಡೀಡ್ ಉಲ್ಲೇಖಿಸಿ ಆಡಳಿತಾರೂಢ ಬಿಜೆಪಿ ಸರ್ಕಾರ ಹಾಗೂ ಸಚಿವ ಅಶ್ವತ್ಥ ನಾರಾಯಣಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.

ಬಿಎಂಎಸ್ ಟ್ರಸ್ಟ್​ನಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ಟ್ರಸ್ಟ್‌ ಮತ್ತು ಆ ಟ್ರಸ್ಟ್‌ನ ಎಲ್ಲ ಸ್ವತ್ತುಗಳನ್ನು ರಾಜ್ಯ ಸರಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು. ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ತಕ್ಷಣ ರಾಜೀನಾಮೆ ಕೊಡಬೇಕು ಎಂದು ಎಚ್​ಡಿಕೆ ಆಗ್ರಹಿಸಿದ್ದಾರೆ.

ವಿಧಾನಸಭೆಯಲ್ಲೇ ಎಲ್ಲವನ್ನೂ ದಾಖಲೆ ಸಮೇತ ಇಟ್ಟಿದ್ದೇನೆ. ಆ ದಾಖಲೆಗಳೇ ಎಲ್ಲವನ್ನೂ ಮಾತನಾಡುತ್ತಿವೆ. ಇನ್ನು ನನ್ನ ಹೊಡೆದ ಗುಂಡು ಎಲ್ಲಿ ವಿಫಲವಾಗಿದೆ? ಅದನ್ನು ವಿಫಲಗೊಳಿಸುವ ಇನ್ನೊಂದು ಹುನ್ನಾರ, ಷಡ್ಯಂತ್ರ ಈಗ ನಡೆದಿದೆ ಅಷ್ಟೇ. ಸರ್ಕಾರವು ಕಾನೂನು ರೀತಿ ಕ್ರಮ ವಹಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಹೇಳುತ್ತಾರೆ. ಕಾನೂನುರೀತ್ಯ ಕ್ರಮ ಎಂದರೆ, ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಸ್ವತ್ತನ್ನು ಸದ್ದಿಲ್ಲದೆ ಖಾಸಗಿ ರಿಯಲ್ ಎಸ್ಟೇಟ್ ಪಟ್ಟಭದ್ರರಿಗೆ ಧಾರೆ ಎರೆದುಕೊಡುವುದಾ ಸಚಿವರೇ ಎಂದು ಕೇಳಿದ್ದಾರೆ.

‘ಸದನದಲ್ಲಿ ನಾನಿಟ್ಟ ಪ್ರತಿ ದಾಖಲೆ ಅಕ್ರಮಕ್ಕೆ ಕನ್ನಡಿ. ನಿಮ್ಮ ಕಣ್ಣಿಗೆ ಈ ಅಕ್ರಮವೆಲ್ಲಾ ಸಕ್ರಮವಾಗಿದ್ದರೆ ಇದಕ್ಕಿಂತ ದುರಂತ ಇನ್ನೊಂದಿಲ್ಲ. ಎಲ್ಲಾ ದಾಖಲೆಗಳನ್ನು ಮತ್ತೊಮ್ಮೆ ನೋಡಿ. ಅಷ್ಟೂ ಆಸ್ತಿಯನ್ನು ಲಪಟಾಯಿಸಲು ಟ್ರಸ್ಟ್​ನಲ್ಲಿ ನಡೆದ ಷಡ್ಯಂತ್ರಕ್ಕೆ ಸಚಿವರಾಗಿ ನೀವು ಹೇಗೆಲ್ಲಾ ಸಹಕಾರ ನೀಡಿದ್ದೀರಿ ಎನ್ನುವುದು ಈಗ ಜಗಜ್ಜಾಹೀರಾಗಿದೆ. ಉನ್ನತ ಶಿಕ್ಷಣ ಸಚಿವರೇ, 1957ರಲ್ಲಿ ರಚನೆಗೊಂಡು ನೋಂದಣಿಯಾದ BMS ಟ್ರಸ್ಟಿನ ಮೂಲ ಡೀಡ್ ಒಮ್ಮೆ ಓದಿ. ದಾನಿ ಟ್ರಸ್ಟಿ, ಆಜೀವ ಟ್ರಸ್ಟಿ ನೇಮಕದ ಬಗ್ಗೆ ಇರುವ ಷರತ್ತುಗಳನ್ನೂ ತಿಳಿಯಿರಿ. ಆದರೆ, ನೀವು ಜನರಿಗೆ & ಸರಕಾರಕ್ಕೆ ಸೇರಿದ ಇಡೀ ಟ್ರಸ್ಟಿನ ಆಸ್ತಿ ಹೊಡೆಯಲು ನಿಂತವರ ಪರ ನಾಚಿಕೆ ಇಲ್ಲದೆ ವಕಾಲತ್ತು ವಹಿಸುತ್ತಿದ್ದೀರಿ’ ಎಂದು ಎಚ್​ಡಿಕೆ ಬೇಸರ ವ್ಯಕ್ತಪಡಿಸಿದ್ದಾರೆ.

‘ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟ್‌ ಬ್ಲಾಕಿಂಗ್‌, ಪೇಮೆಂಟ್‌ ಸೀಟ್​ಗಳನ್ನು 50:50 ರಂತೆ ಟ್ರಸ್ಟಿಗಳಿಬ್ಬರು ಹಂಚಿಕೊಂಡಿದ್ದು ನಿಮ್ಮ ಗಮನಕ್ಕೆ ಬರಲಿಲ್ಲವೇ? ಕಾಮೆಡ್-ಕೆ ಆಕ್ಷೇಪಣಾ ಪತ್ರ, ಸರ್ಕಾರದ ಇಬ್ಬರು ಅಧಿಕಾರಿಗಳು ಟ್ರಸ್ಟಿನ ಅಕ್ರಮಗಳ ಬಗ್ಗೆ ಬರೆದ ಪತ್ರಗಳನ್ನು ನೀವು ಓದಲಿಲ್ಲವೇ ಸಚಿವರೇ? ಓದಲಿಲ್ಲ ಎಂದರೆ, ಅದಕ್ಕೆ ಕಾರಣವೇನು? ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಎಂದರೆ ಸರಕಾರಿ ಸ್ವತ್ತುಗಳನ್ನು ಭೂರಕ್ಕಸರ ಬಾಯಿಗೆ ಹಾಕುವುದಾ? ಮುಜರಾಯಿ ಇಲಾಖೆಯ ಶ್ರೀ ದೊಡ್ಡ ಬಸವಣ್ಣ, ಕಾರಂಜಿ ಶ್ರೀ ಆಂಜನೇಯ ಸ್ವಾಮಿ ದೇಗುಲಗಳಿಗೆ ಸೇರಿದ ಕೋಟ್ಯಂತರ ರೂ. ಬೆಲೆಯ ಆಸ್ತಿಯನ್ನು ನುಂಗಲು ಹೊರಟ ನುಂಗಣ್ಣರಿಗೆ ದಾರಿ ಸಲೀಸು ಮಾಡಿಕೊಡುವುದಾ? ಇದ್ಯಾವ ಶಿಕ್ಷಣ ನೀತಿ? ಇದ್ಯಾವ ಧರ್ಮನೀತಿ’ ಎಂದು ಎಚ್​.ಡಿ.ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ನಮ್ಮ ಅವಧಿಯಲ್ಲಿ ಶೈಕ್ಷಣಿಕ ಸುಧಾರಣೆಗಾಗಿ ಬಹಳ ಕ್ರಮ ಕೈಗೊಂಡಿದ್ದೇವೆ ಎನ್ನುತ್ತೀರಿ. ಸುಧಾರಣೆ ಎಂದರೆ, ಸಾರ್ವಜನಿಕ ಟ್ರಸ್ಟುಗಳನ್ನು ಹೀಗೆ ನುಂಗಿ ನೀರು ಕುಡಿಯಲು ಒಳಗೊಳಗೇ ಸಹಕಾರ ನೀಡುವುದಾ? ಪ್ರಧಾನಿ ಮೋದಿ ಅವರು ಹೇಳಿಕೊಟ್ಟ ವಿಶ್ವಗುರು ಪರಿಕಲ್ಪನೆ ಇದೇನಾ? ಶೈಕ್ಷಣಿಕೋದ್ಧಾರ ಮಾಡುವುದು ಎಂದರೆ ಹೀಗೆನಾ? 2018ರಲ್ಲಿ ನನ್ನ ನೇತೃತ್ವದ ಸರಕಾರವು ದಾನಿ ಟ್ರಸ್ಟಿ, ಅಜೀವ ಟ್ರಸ್ಟಿ ನೇಮಕದ ಬಗ್ಗೆ BMS ಟ್ರಸ್ಟಿನಲ್ಲಿ ಕೈಗೊಂಡಿದ್ದ ತಿದ್ದುಪಡಿಗಳು ಅಕ್ರಮ ಎಂದು ಸಾರಿ, ಆ ತಿದ್ದುಪಡಿಗಳನ್ನು ಸಾರಾಸಗಟಾಗಿ ತಿರಸ್ಕರಿತ್ತು. ನನ್ನ ಸರಕಾರ ಹೋದ ಮೇಲೆ ಬಂದ ಬಿಜೆಪಿ ಸರ್ಕಾರವು ಈ ಅಕ್ರಮ ತಿದ್ದುಪಡಿಗಳನ್ನು ಶರವೇಗದಲ್ಲಿ ಪುರಸ್ಕರಿಸಿದ್ದು ಹೇಗೆ ಎಂದು ಕೇಳಿದ್ದಾರೆ.

ಟ್ರಸ್ಟಿನಲ್ಲಿ ಸರಕಾರದ ಟ್ರಸ್ಟಿಗೇ ಕೊಕ್ ಕೊಟ್ಟು, ಈ ಟ್ರಸ್ಟಿನಲ್ಲಾಗುತ್ತಿದ್ದ ಗೋಲ್ʼಮಾಲ್ ಬಗ್ಗೆ ಸರಕಾರಿ ಟ್ರಸ್ಟಿಯಾಗಿದ್ದ ಐಎಎಸ್ ಅಧಿಕಾರಿ ಡಾ.ಮಂಜುಳಾ ಮತ್ತು ಇನ್ನೊರ್ವ ಐಎಎಸ್ ಅಧಿಕಾರಿ ಮದನ್ ಗೋಪಾಲ್ ಅವರು ಬರೆದ ಪತ್ರಗಳನ್ನು ಕಸದಬುಟ್ಟಿಗೆ ಹಾಕಿದ್ದು ಏಕೆ? ಇದರ ಹಿಂದಿನ ಹುನ್ನಾರ ಏನು ಉನ್ನತ ಶಿಕ್ಷಣ ಸಚಿವರೇ? ಟ್ರಸ್ಟಿನಲ್ಲಿ ಕೈಗೊಂಡ ಅಕ್ರಮ ತಿದ್ದುಪಡಿಗಳನ್ನು ಸಕ್ರಮಗೊಳಿಸಲು ತಾವು ತೋರಿದ ಆತುರ, ಕಾಳಜಿ ಎಂಥದ್ದು ಎಂಬುದು ನನಗೆ ಗೊತ್ತು. ಅವುಗಳ ಅನುಮೋದನೆಗಾಗಿ ತಾವೇ ಬರೆದ ಟಿಪ್ಪಣಿಯ ಒಕ್ಕಣೆಯನ್ನು ಒಮ್ಮೆ ಓದಿಕೊಳ್ಳಿ ಅಶ್ವತ್ಥನಾರಾಯಣ ಅವರೇ. ಉನ್ನತ ಶಿಕ್ಷಣ ಸಚಿವರಾದ ನಿಮ್ಮ ಉನ್ನತ ಮಟ್ಟ ಎಷ್ಟು ಕೆಳಮಟ್ಟದಲ್ಲಿದೆ ಎಂಬುದು ಅರ್ಥವಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

ಸಿಎಂ ಬೊಮ್ಮಾಯಿ-ಅಶ್ವತ್ಥ ನಾರಾಯಣ ಚರ್ಚೆ

ಎಚ್​.ಡಿ.ಕುಮಾರಸ್ವಾಮಿ ಮಾಡಿರುವ ಅರೋಪಗಳ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಅಶ್ವತ್ಥ ನಾರಾಯಣ ರೇಸ್​ಕೋರ್ಸ್ ರಸ್ತೆಯಲ್ಲಿರುವ ಮುಖ್ಯಮಂತ್ರಿ ನಿವಾಸದಲ್ಲಿ ಭೇಟಿಯಾಗಿ ಚರ್ಚಿಸಿದರು. ಕುಮಾರಸ್ವಾಮಿ ಆರೋಪಗಳ ಬಗ್ಗೆ ಮುಖ್ಯಮಂತ್ರಿ ಇಂದು ಸದನದಲ್ಲಿ ಉತ್ತರಿಸಬೇಕಿದೆ. ಹೀಗಾಗಿ ಮುಖ್ಯಮಂತ್ರಿಯನ್ನು ಭೇಟಿಯಾಗಿ ಅಶ್ವತ್ಥ ನಾರಾಯಣ ವಿವರ ನೀಡಿದರು.

Published On - 11:07 am, Fri, 23 September 22