ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ಜುಲೈ 25ರಂದು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವುದು ಬಹುತೇಕ ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಹಲವು ಮಠಾಧೀಶರು ಸಿಎಂ ಯಡಿಯೂರಪ್ಪನವರ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಕೆಲವು ದಿನಗಳಿಂದ ವಿವಿಧ ಸಮುದಾಯಗಳ ಮಠಾಧೀಶರು ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರೆಯಬೇಕೆಂದು ಬಹಿರಂಗವಾಗಿ ಹೇಳಿಕೆಗಳನ್ನು ನೀಡುವ ಮೂಲಕ ಬಿಜೆಪಿ ಹೈಕಮಾಂಡ್ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿದ್ದಾರೆ. ಅದರ ಬೆನ್ನಲ್ಲೇ ವಲಸಿಗ ಸಚಿವರಿಂದಲೂ ಈಗ ಬಿಜೆಪಿ ಹೈಕಮಾಂಡ್ ಮೇಲೆ ಒತ್ತಡ ಹೆಚ್ಚಾಗಿದೆ.
ಕರ್ನಾಟಕದ ನಾಯಕತ್ವ ಬದಲಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಬಿ.ಎಸ್. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಲೇಬೇಕೆಂದು ಒಂದು ಬಣದವರು ಹಠ ತೊಟ್ಟಿದ್ದರು. ಆದರೆ, ಯಡಿಯೂರಪ್ಪ ಮಾತ್ರ ನಾನು ಸಿಎಂ ಸ್ಥಾನದಿಂದ ಕೆಳಗಿಳಿಯುವ ಮಾತೇ ಇಲ್ಲ ಎಂದು ಹೇಳುತ್ತಲೇ ಬಂದಿದ್ದರು. ಆದರೆ, ಕೆಲವು ದಿನಗಳ ಹಿಂದೆ ತಮ್ಮ ಬಣದವರೊಂದಿಗೆ ದೆಹಲಿಗೆ ತೆರಳಿ ಪ್ರಧಾನಿ ಮೋದಿ, ಅಮಿತ್ ಶಾ ಮುಂತಾದ ನಾಯಕರನ್ನು ಭೇಟಿಯಾಗಿ ಬಂದಿದ್ದ ಸಿಎಂ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸುಳಿವು ನೀಡಿದ್ದಾರೆ. ಜುಲೈ 25ರಂದು ಹೈಕಮಾಂಡ್ನಿಂದ ಬರುವ ಸಂದೇಶಕ್ಕಾಗಿ ಕಾಯುತ್ತಿದ್ದೇನೆ ಎನ್ನುವ ಮೂಲಕ ಸಿಎಂ ಪಟ್ಟದಿಂದ ಕೆಳಗಿಳಿಯುವ ಸೂಚನೆ ನೀಡಿದ್ದಾರೆ.
ಯಡಿಯೂರಪ್ಪನವರ ಮಾತನ್ನು ನಂಬಿ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿ, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷವನ್ನು ತೊರೆದು ಬಂದಿರುವ ವಲಸಿಗ ಸಚಿವರನ್ನು ಮುಂದಿಟ್ಟುಕೊಂಡು ಸಿಎಂ ಯಡಿಯೂರಪ್ಪ ಹೈಕಮಾಂಡ್ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಒಂದುವೇಳೆ ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ, ಬೇರೆಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರೆ ವಲಸಿಗ ಸಚಿವರು ರಾಜೀನಾಮೆ ನೀಡುವ ಸಾಧ್ಯತೆಯೂ ಇದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಬಗ್ಗೆ ಪ್ರತ್ಯೇಕ ಪತ್ರಗಳೊಂದಿಗೆ ಸಿಎಂ ಯಡಿಯೂರಪ್ಪನವರ ಜೊತೆ ವಲಸಿಗ ಸಚಿವರು ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಆ ಪತ್ರಗಳಲ್ಲಿ ಏನಿದೆ? ಎಂಬುದು ಸದ್ಯದ ಕುತೂಹಲವಾಗಿದೆ. ರಾಜೀನಾಮೆ ಪತ್ರ ಹಿಡಿದು ಸಿಎಂ ಯಡಿಯೂರಪ್ಪನವರನ್ನು ವಲಸಿಗ ಸಚಿವರು ಭೇಟಿಯಾಗಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ವಲಸಿಗ ಸಚಿವರಾದ ಬಿ.ಸಿ. ಪಾಟೀಲ್, ಡಾ.ಕೆ. ಸುಧಾಕರ್, ಎಸ್.ಟಿ. ಸೋಮಶೇಖರ್, ಗೋಪಾಲಯ್ಯ, ಭೈರತಿ ಬಸವರಾಜ್, ಶಿವರಾಮ್ ಹೆಬ್ಬಾರ್ ಇಂದು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಪ್ರತ್ಯೇಕವಾಗಿ ಭೇಟಿಯಾಗಿದ್ದಾರೆ.
ತಮ್ಮನ್ನು ಬಿಜೆಪಿ ಪಕ್ಷಕ್ಕೆ ಕರೆಸಿಕೊಂಡು, ಚುನಾವಣೆಯಲ್ಲಿ ಟಿಕೆಟ್ ನೀಡಿ, ಸ್ವಪಕ್ಷೀಯರ ವಿರೋಧಧ ನಡುವೆಯೂ ಸಚಿವ ಸ್ಥಾನ ನೀಡಿರುವ ಬಿ.ಎಸ್. ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ವಲಸಿಗ ಸಚಿವರ ಸ್ಥಿತಿ ಅತಂತ್ರವಾಗುವ ಆತಂಕ ಅವರನ್ನು ಕಾಡುತ್ತಿದೆ ಎನ್ನಲಾಗಿದೆ. ಆರೂ ಸಚಿವರು ಏಕಮಾದರಿಯ ಪತ್ರ ಹಿಡಿದು ಸಿಎಂ ಭೇಟಿ ಮಾಡಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ. ಆದರೆ, ಆ ಪತ್ರದಲ್ಲಿ ಏನಿದೆ ಎಂಬ ಬಗ್ಗೆ ಇನ್ನೂ ಖಚಿತ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ವಲಸಿಗ ಸಚಿವರ ನಡೆ ಕುತೂಹಲ ಮೂಡಿಸಿದೆ.
ಇಂದು ಸಚಿವ ಸಂಪುಟ ಸಭೆ ಮುಗಿದ ಬೆನ್ನಲ್ಲೇ ಸಿಎಂ ಕಚೇರಿಗೆ ದೌಡಾಯಿಸಿದ ಸಚಿವರು ಸಿಎಂ ಜೊತೆ ಚರ್ಚೆ ನಡೆಸಿದ್ದಾರೆ. ಮೊದಲು ಹತ್ತು ನಿಮಿಷ ಭೈರತಿ ಬಸವರಾಜ್ ಕೊಠಡಿಯಲ್ಲಿ ಚರ್ಚೆ ನಡೆಸಿದ ವಲಸಿಗರು ನಂತರ ಸಿಎಂ ಚೇಂಬರ್ ಗೆ ಒಟ್ಟಾಗಿ ಪತ್ರ ಹಿಡಿದು ತೆರಳಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ವಲಸಿಗ ಸಚಿವರು ಸಿಎಂ ಯಡಿಯೂರಪ್ಪನವರನ್ನು ಭೇಟಿಯಾದ ಬೆನ್ನಲ್ಲೇ ಸಚಿವ ಸುಧಾಕರ್ ಜತೆ ಅಶೋಕ್ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ. ಸಿಎಂ ಕೊಠಡಿಯಲ್ಲೇ ಪ್ರತ್ಯೇಕವಾಗಿ ಸುಧಾಕರ್ ಜತೆ ಚರ್ಚೆ ನಡೆಸಿದ್ದಾರೆ. ಮತ್ತೊಂದು ಕಡೆ ವಲಸಿಗರ ಜತೆ ಸಿಎಂ ಬಿಎಸ್ವೈ ಚರ್ಚೆ ನಡೆಸಿದ್ದಾರೆ. ಬಸವರಾಜ ಬೊಮ್ಮಾಯಿ ಅವರನ್ನು ಎದುರು ಕೂರಿಸಿಕೊಂಡು ಚರ್ಚೆ ನಡೆಸಲಾಗಿದೆ.
Published On - 6:17 pm, Thu, 22 July 21