N Mahesh: ಬಿಎಸ್ಪಿಯಿಂದ ಉಚ್ಛಾಟಿತರಾಗಿದ್ದ ಕೊಳ್ಳೇಗಾಲದ ಶಾಸಕ ಎನ್. ಮಹೇಶ್ ನಾಳೆ ಬಿಜೆಪಿಗೆ ಸೇರ್ಪಡೆ
Kollegal MLA: ಕೊಳ್ಳೇಗಾಲ ಕ್ಷೇತ್ರದಲ್ಲಿ ಬಿಎಸ್ಪಿಯಿಂದ ಗೆದ್ದಿದ್ದ ಎನ್. ಮಹೇಶ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು. ಅವರು ನಾಳೆ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.
ಬೆಂಗಳೂರು: ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್. ಮಹೇಶ್ ನಾಳೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಕೊಳ್ಳೇಗಾಲ ಕ್ಷೇತ್ರದಲ್ಲಿ ಬಿಎಸ್ಪಿಯಿಂದ ಗೆದ್ದಿದ್ದ ಎನ್. ಮಹೇಶ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು. ಅವರು ನಾಳೆ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.
ಕೆಲವು ದಿನಗಳ ಹಿಂದೆಯೇ ತಾವು ಬಿಜೆಪಿಗೆ ಸೇರುತ್ತಿರುವುದಾಗಿ ಘೋಷಿಸಿದ್ದ ಎನ್. ಮಹೇಶ್ ನಾನು ಬಿಜೆಪಿ ನಾಯಕರಿಗೆ ಯಾವುದೇ ಷರತ್ತುಗಳನ್ನೂ ವಿಧಿಸುವುದಿಲ್ಲ ಎಂದಿದ್ದರು. ಈ ಹಿನ್ನೆಲೆಯಲ್ಲಿ ಗುಂಡ್ಲುಪೇಟೆಯಲ್ಲಿ ನಡೆದ ಬಿಜೆಪಿ ಸಮಾವೇಶದ ಬಳಿಕ ಎನ್. ಮಹೇಶ್ ಮತ್ತು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮಾತುಕತೆ ನಡೆಸಿದ ನಂತರ ಎನ್. ಮಹೇಶ್ ಬಿಜೆಪಿ ಸೇರುವುದಾಗಿ ಘೋಷಿಸಿದ್ದರು.
2018ರ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಬಿಎಸ್ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎನ್. ಮಹೇಶ್ ಗೆಲುವು ಸಾಧಿಸಿದ್ದರು. ಆ ಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ಬಿಎಸ್ಪಿ ಮೈತ್ರಿ ಮಾಡಿಕೊಂಡಿತ್ತು. ಇದೇ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ಬಿಎಸ್ಪಿಯಿಂದ ಎನ್. ಮಹೇಶ್ ಶಾಸಕರಾಗಿ ಆಯ್ಕೆಯಾಗುವ ಮೂಲಕ ಹೊಸ ದಾಖಲೆ ಬರೆದಿದ್ದರು.
ಅದಾದ ಬಳಿಕ ಚುನಾವಣೆಯಲ್ಲಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ ಬಹುಮತ ಸಾಬೀತುಪಡಿಸಲು ವಿಫಲವಾಗಿದ್ದರಿಂದ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಯಾಗಿ ಹೆಚ್ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಆ ಸರ್ಕಾರದಲ್ಲಿ ಎನ್. ಮಹೇಶ್ ಅವರಿಗೂ ಸಚಿವ ಸ್ಥಾನ ನೀಡಲಾಗಿತ್ತು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದ ಎನ್. ಮಹೇಶ್ 2018ರ ಅಕ್ಟೋಬರ್ನಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ವೇಳೆ ಆಪರೇಷನ್ ಕಮಲಕ್ಕೆ ಒಳಗಾಗಿ 17 ಶಾಸಕರು ರಾಜೀನಾಮೆ ನೀಡಿದ್ದರಿಂದ ಮೈತ್ರಿ ಸರ್ಕಾರ ಪತನವಾಯಿತು. ಈ ವೇಳೆ ಸದನದಲ್ಲಿ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಬೇಕೆಂದು ಬಿಎಸ್ಪಿ ನಾಯಕರು ಎನ್. ಮಹೇಶ್ಗೆ ಸೂಚನೆ ನೀಡಿದ್ದರೂ ಅವರು ತಟಸ್ಥರಾಗಿ ಉಳಿದಿದ್ದರಿಂದ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು. ಇದೀಗ ಎನ್. ಮಹೇಶ್ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ.
ಇದನ್ನೂ ಓದಿ: Karnataka cabinet ದೇವರು, ಗೋಮಾತೆ ಮತ್ತು ರೈತರ ಹೆಸರಲ್ಲಿ ನೂತನ ಸಚಿವರ ಪ್ರಮಾಣ ವಚನ
(Karnataka Politics Kollegal BSP MLA N Mahesh to Join BJP on Thursday in Bengaluru)
Published On - 9:20 pm, Wed, 4 August 21