ಶಿವಮೊಗ್ಗ, ಅಕ್ಟೋಬರ್ 21: ಬಿಜೆಪಿ ನಾಯಕರು ಅಧಿಕಾರ ಕಳೆದುಕೊಂಡು ಹತಾಶೆ ಅನುಭವಿಸುತ್ತಿದ್ದಾರೆ. ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯಿಂದ ಆಮಿಷವೊಡ್ಡಲಾಗುತ್ತಿದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ (Ayanur Manjunath) ಆರೋಪಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಕುಟುಂಬದ ವ್ಯಕ್ತಿಯೊಬ್ಬರು ಹಾಗೂ ಹಾಲಿ ಬಿಜೆಪಿ (BJP) ಶಾಸಕ ಆಪರೇಷನ್ಗೆ ಮುಂದಾಗಿದ್ದಾರೆ. ಶಾಸಕರಿಗೆ ತಲಾ 50 ಕೋಟಿ ರೂಪಾಯಿ ಆಮಿಷವೊಡ್ಡಲಾಗುತ್ತಿದೆ ಎಂದು ದೂರಿದ್ದಾರೆ.
ಸರ್ಕಾರ ಬೀಳಿಸುವ ಅಮೃತ ವಾಕ್ಯವನ್ನು ಕೆಎಸ್ ಈಶ್ವರಪ್ಪ ಉದರಿಸಿದ್ದಾರೆ. ನಿರ್ಲಜ್ಜೆಯಿಂದ ಈಶ್ವರಪ್ಪ ಅಂಥ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಸರ್ಕಾರ ಬೀಳಿಸುವ ಸಾಮರ್ಥ್ಯ ಈಶ್ವರಪ್ಪಗೆ ಇಲ್ಲ. ಈಶ್ವರಪ್ಪ ಪ್ರಭಾವ ಎಲ್ಲೂ ಇಲ್ಲ. ಅವರಿಗೆ ಪುರಸಭೆ ಸದಸ್ಯನ ಗೆಲ್ಲಿಸುವ ಸಾಮರ್ಥ್ಯ ಕೂಡ ಇಲ್ಲ. ಅವರೊಬ್ಬ ಅಪ್ರಬುದ್ಧ ರಾಜಕಾರಣಿ. ಬಿಜೆಪಿಗೆ ನಷ್ಟವಾಗಿರುವುದರಿಂದ ಈಶ್ವರಪ್ಪ ಅವರನ್ನು ಹೊರಗೆ ಇಟ್ಟಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಈಶ್ವರಪ್ಪಗೆ ಇಲ್ಲ. ಬಿಜೆಪಿ ನಾಯಕರಿಗೆ ಈಶ್ವರಪ್ಪ ಅವರ ಭ್ರಷ್ಟಾಚಾರ ಬಗ್ಗೆ ಅರಿವು ಇದೆ. ಈಶ್ವರಪ್ಪ ಅವರಿಗೆ ಮಾತನಾಡುವ ಬಾಯಿ ಚಪಲ ಎಂದು ಅಯನೂರು ಮಂಜುನಾಥ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತುಂಗಾ ನಾಲೆ ವಿರುದ್ಧ ಈಶ್ವರಪ್ಪ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿ, ಹೋರಾಟ ಆರಂಭಿಸಿದ್ದ ಅವರು ನಂತರ ಕೈಬಿಟ್ಟರು ಎಂದರು.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಬೆಂಬಲಿಸಲು ಚಿನ್ನಸ್ವಾಮಿಗೆ ಹೋಯ್ತೇ ಸಂಪುಟ ಪಟಲಾಂ: ಕಾಂಗ್ರೆಸ್ ವಿರುದ್ಧ ಹೆಚ್ಡಿ ಕುಮಾರಸ್ವಾಮಿ ವಾಗ್ದಾಳಿ
ಯಾವ ಗುತ್ತಿಗೆದಾರ ಬಂದು ನಿಮ್ಮನ್ನು ಭೇಟಿ ಆಗಿದ್ದು? ಈಶ್ವರಪ್ಪ ಅವರು ಅದನ್ನು ಮೊದಲು ಹೇಳಲಿ. ಈಶ್ವರಪ್ಪ ಅವರು ಸಚಿವ ಆಗಿ ದುಡ್ಡು ದೋಚಿದ್ದು ಬಿಟ್ಟರೆ ಬೇರೆ ಏನೂ ಮಾಡಿಲ್ಲ. ಈಶ್ವರಪ್ಪ ಅವರದ್ದು ಹರಕು ಬಾಯಿ. ಅವರ ಮಾತು ಯಾವುದನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಈಶ್ವರಪ್ಪ ಅವರಿಗೆ ಯಾವುದೇ ನೈತಿಕತೆ ಇಲ್ಲ. ಅವರು ನಿರಂತರ ವಾಗಿ ಬಿಎಸ್ ವೈ ವಿರುದ್ಧ ಪಿತೂರಿ ಮಾಡಿದ್ದಾರೆ. ಸದನದಲ್ಲಿ ಪದ ಬಳಕೆ ಕುರಿತು ಈಶ್ವರಪ್ಪ ಅವರಿಗೆ ಕನಿಷ್ಠ ಜ್ಞಾನ ಇಲ್ಲ. ಗಲಭೆ ಪ್ರಚೋದನೆ ಹೇಳಿಕೆ ನೀಡುವುದು ಬಿಟ್ಟರೆ ಅವರ ಸಾಧನೆ ನಗರದಲ್ಲಿ ಶೂನ್ಯ. ಏಕವಚನದಲ್ಲಿ ಮಾತನಾಡಲು ನನಗೂ ಬರುತ್ತದೆ. ಈಶ್ವರಪ್ಪ ಯಾವುದೇ ಪುಸ್ತಕ ಓದಿಲ್ಲ. ನಾಲಗಿಯನ್ನು ಬಿಗಿಯಾಗಿ ಇಟ್ಟಿಕೊಳ್ಳಿ. ನಿಮ್ಮನ್ನು ಜಿಲ್ಲೆಯಿಂದಲೇ ಗಡಿಪಾರು ಮಾಡಿದ್ದೇವೆ. ನಾನು ದಾಖಲೆ ಸಮೇತ ಈಶ್ವರಪ್ಪ ವಿರುದ್ಧ ಮುಂದೆ ಬರುತ್ತೇನೆ. ನಾಲಿಗೆ ಮತ್ತು ಮೆದುಳಿಗೆ ಈಶ್ವರಪ್ಪ ಚಿಕಿತ್ಸೆ ಪಡೆಯಬೇಕು. ಈ ಹಿಂದೆ ಅವರು ನಿರ್ವಹಿಸಿದ ಎಲ್ಲ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆಯನೂರು ಕಿಡಿಕಾರಿದರು.
ರಾಜಕೀಯಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ