ಸೂಪರ್ ಸೀಡ್ ಪತ್ರ: ಬೆಳಗಾವಿ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಗದ್ದಲ, ಅಖಾಡಕ್ಕಿಳಿದ ಸತೀಶ್ ಜಾರಕಿಹೊಳಿ
ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆ ಇಂದು ನಡೆದಿದೆ. ಆದರೆ, ಸರ್ಕಾರಕ್ಕೆ ತಿರುಚಿದ ವರದಿ ಕಳುಹಿಸಿದ ಪಾಲಿಕೆ ಆಯುಕ್ತ, ಕಂದಾಯ ಉಪ ಆಯುಕ್ತೆ ಮತ್ತು ಪರಿಷತ್ ಕಾರ್ಯದರ್ಶಿ ವಿರುದ್ಧ ಆಡಳಿತ ರೂಢ ಬಿಜೆಪಿ ಸದಸ್ಯರು ಮುಗಿಬಿದ್ದಿದ್ದು, ಅತ್ತ ಬಿಜೆಪಿ ಮೇಯರ್ ವಿರುದ್ಧ ವಿಪಕ್ಷ ಕಾಂಗ್ರೆಸ್ ಸದಸ್ಯರು ಮುಗಿಬಿದ್ದಿದ್ದಾರೆ.
ಬೆಳಗಾವಿ, ಅ.21: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ (Belagavi City Corporation) ಸರ್ಕಾರದ ಸೂಪರ್ ಸೀಡ್ ಸಂಚಲನ ಸೃಷ್ಟಿಸಿದೆ. ಈ ಬಗ್ಗೆ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ನಡುವೆ ಗದ್ದಲವೇ ಸೃಷ್ಟಿಯಾಗಿದೆ. ಇತ್ತ, ಸರ್ಕಾರಕ್ಕೆ ತಿರುಚಿದ ವರದಿ ಕಳುಹಿಸಿದ ಪಾಲಿಕೆ ಆಯುಕ್ತ, ಕಂದಾಯ ಉಪ ಆಯುಕ್ತೆ ಮತ್ತು ಪರಿಷತ್ ಕಾರ್ಯದರ್ಶಿ ವಿರುದ್ಧ ಆಡಳಿತ ರೂಢ ಬಿಜೆಪಿ ಸದಸ್ಯರು ಮುಗಿಬಿದ್ದರೆ, ಅತ್ತ, ಬಿಜೆಪಿ ಮೇಯರ್ ವಿರುದ್ಧ ವಿಪಕ್ಷ ಕಾಂಗ್ರೆಸ್ ಸದಸ್ಯರು ಮುಗಿಬಿದ್ದಿದ್ದಾರೆ.
ಕಳೆದ ಸಾಮಾನ್ಯ ಸಭೆಯಲ್ಲಿ ಆಸ್ತಿ ಕರ ಹೆಚ್ಚಳ ಮಾಡಿ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಆದರೆ ಪಾಲಿಕೆ ಆಯುಕ್ತರು ಆಸ್ತಿ ಕರ 2023/24 ನೇ ಸಾಲಿಗೆ ಹೆಚ್ಚಳ ಮಾಡಲಾಗಿದೆ ಅಂತ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಮಹಾನಗರ ಪಾಲಿಕೆಗೆ ಸೂಪರ್ ಸೀಡ್ ತೂಗುಗತ್ತಿ: ಪಾಲಿಕೆ ವಿಸರ್ಜನೆಗೆ ನಡೆದಿದೆಯಾ ಹುನ್ನಾರ?
ಇದೇ ಕಾರಣಕ್ಕೆ ಆಡಳಿತರೂಢ ಬಿಜೆಪಿ ಸದಸ್ಯರು ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ವಿರುದ್ಧ ಸಾಮಾನ್ಯ ಸಭೆಯಲ್ಲಿ ಮುಗಿಬಿದ್ದರು. ಅತ್ತ ವರದಿ ಸಲ್ಲಿಕೆಯಲ್ಲಿ ತಮ್ಮದೂ ಪಾಲಿದೆ ಎಂದು ಆರೋಪಿಸಿ ಬಿಜೆಪಿ ಮೇಯರ್ ಶೋಭಾ ಸೋಮನಾಚೆ ವಿರುದ್ಧ ವಿಪಕ್ಷ ಕಾಂಗ್ರೆಸ್ ಸದಸ್ಯರು ಮುಗಿಬಿದ್ದರು.
ಸರ್ಕಾರಕ್ಕೆ ತಿರುಚಿದ ವರದಿ ಕಳುಹಿಸಿದ ಪಾಲಿಕೆ ಆಯುಕ್ತ, ಕಂದಾಯ ಉಪ ಆಯುಕ್ತೆ ರೇಷ್ಮಾ ತಾಳಿಕೋಟ ಮತ್ತು ಪರಿಷತ್ ಕಾರ್ಯದರ್ಶಿ ವಿರುದ್ಧ ಇಲಾಖೆ ತನಿಖೆಗೆ ಶಾಸಕ ಅಭಯ ಪಾಟೀಲ್ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಪಟ್ಟು ಹಿಡಿದಿದ್ದಾರೆ.
ಅಖಾಡಕ್ಕೆ ಇಳಿದ ಸತೀಶ್ ಜಾರಕಿಹೊಳಿ
ಪಾಲಿಕೆ ಅಧಿಕಾರಿಗಳ ಬೆನ್ನಿಗೆ ನಿಲ್ಲಲು ಹಾಗೂ ಆಡಳಿತ ರೂಢ ಬಿಜೆಪಿಗೆ ಬಿಸಿ ಮುಟ್ಟಿಸಲು ಸಚಿವ ಸತೀಶ್ ಜಾರಕಿಹೊಳಿ ಅಖಾಡಕ್ಕೆ ಇಳಿದ್ದಿದ್ದಾರೆ. ವಿಪಕ್ಷ ಸದಸ್ಯರ ಜೊತೆಗೆ ಮೇಯರ್, ಬಿಜೆಪಿ ಪಾಲಿಕೆ ಸದಸ್ಯರು ಆಗಮಿಸುವ ಮುನ್ನವೇ ಎಂಟ್ರಿಕೊಟ್ಟ ಸತೀಶ್, ಪಾಲಿಕೆ ಅಧಿಕಾರಿಗಳು ಮತ್ತು ಕಾಂಗ್ರೆಸ್ ಶಾಸಕ, ಸದಸ್ಯರ ಜೊತೆಗೆ ಸಮಾಲೋಚನೆ ನಡೆಸಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ