Janardhana Reddy: ಕಾಂಗ್ರೆಸ್​ಗೆ ಜನಾರ್ದನ ರೆಡ್ಡಿ ಟಕ್ಕರ್; ಪ್ರಣಾಳಿಕೆಯಲ್ಲಿ ಪ್ರತಿ ಕುಟುಂಬಕ್ಕೆ 2,500 ರೂ. ನೆರವು ಘೋಷಣೆ

|

Updated on: Mar 08, 2023 | 6:30 PM

ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಕ ಜನಾರ್ದನ ರೆಡ್ಡಿ ಕೊಪ್ಪಳದ ಕನಕಗಿರಿಯಲ್ಲಿ ಬುಧವಾರ ವಿಧಾನಸಭಾ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿ, ಕಾಂಗ್ರೆಸ್​​ನ ಗೃಹಲಕ್ಷ್ಮೀ ಘೋಷಣೆಗೆ ಟಕ್ಕರ್ ನೀಡಿದ್ದಾರೆ.

Janardhana Reddy: ಕಾಂಗ್ರೆಸ್​ಗೆ ಜನಾರ್ದನ ರೆಡ್ಡಿ ಟಕ್ಕರ್; ಪ್ರಣಾಳಿಕೆಯಲ್ಲಿ ಪ್ರತಿ ಕುಟುಂಬಕ್ಕೆ 2,500 ರೂ. ನೆರವು ಘೋಷಣೆ
ಜನಾರ್ದನ ರೆಡ್ಡಿ
Follow us on

ಕೊಪ್ಪಳ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (KRPP) ಸ್ಥಾಪಕ ಜನಾರ್ದನ ರೆಡ್ಡಿ (Janardhana Reddy) ಕೊಪ್ಪಳದ ಕನಕಗಿರಿಯಲ್ಲಿ ಬುಧವಾರ ವಿಧಾನಸಭಾ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿ, ಕಾಂಗ್ರೆಸ್​​ನ (Congress) ಗೃಹಲಕ್ಷ್ಮೀ ಘೋಷಣೆಗೆ ಟಕ್ಕರ್ ನೀಡಿದ್ದಾರೆ. ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ 2,500 ರೂ. ಆರ್ಥಿಕ ನೆರವು ನೀಡುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ. ‘ಚೆನ್ನಮ್ಮ ಅಭಯಹಸ್ತ’ ಎಂಬ ಹೆಸರಿನಲ್ಲಿ ಪ್ರಣಾಳಿಕೆ ಪ್ರಕಟಿಸಲಾಗಿದೆ. ಸ್ತ್ರೀ ಶಕ್ತಿ ಗುಂಪಿಗೆ ಬಡ್ಡಿ ರಹಿತ 10 ಲಕ್ಷ ರೂ. ಸಾಲ ನಿಡಲಾಗುವುದು ಎಂದೂ ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಮಹಿಳೆಯರಿಗೆ ಉಚಿತ ಪ್ರಯಾಣ, ಆಶಾ,ಅಂಗನವಾಡಿ ಕಾರ್ಯಕರ್ತೆಯರಿಗೆ ಒಂದು ಸಾವಿರ ವೇತನ ಹೆಚ್ಚಳ ಸೇರಿದಂತೆ ಅನೇಕ ಭರವಸೆಗಳನ್ನು ನೀಡಲಾಗಿದೆ.

‘ನಾನು ಜಾತಿ ನಂಬಿಕೊಂಡು ಬೆಳೆದಿಲ್ಲ, ಜನರನ್ನು ನಂಬಿ ಬೆಳೆದಿದ್ದೇನೆ. ಬೆಂಗಳೂರಿನ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದ್ದರೂ ಶಾಸಕನಾಗುತ್ತಿದ್ದೆ. ಕನಕಗಿರಿ ಕ್ಷೇತ್ರದ ಅಭ್ಯರ್ಥಿ ಘೋಷಣೆ ಮಾಡಬೇಡಿ ಎಂದಿದ್ದರು. ಆದರೆ ನಾನು ಕಾಯುವ ಜಾಯಮಾನದವನಲ್ಲ. ಇಲ್ಲಿ ಸೇರಿದ ಜನ ನೋಡಿದ್ರೆ ಅವರು (ಪರೋಕ್ಷವಾಗಿ ಶ್ರೀರಾಮುಲು ಉದ್ದೇಶಿಸಿ) 40 ಮಾತ್ರೆ ತೆಗೆದುಕೊಳ್ಳುತ್ತಾರೆ. ಈ ಹಿಂದೆ 20 ಮಾತ್ರೆ ತೆಗೆದುಕೊಳ್ಳುತ್ತಿದ್ದವರು ಈಗ 40 ಮಾತ್ರೆ ತೆಗೆದುಕೊಳ್ಳಲಿದ್ದಾರೆ’ ಎಂದು ರೆಡ್ಡಿ ವ್ಯಂಗ್ಯವಾಡಿದ್ದಾರೆ.

ಬಿಎಸ್​ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡಿದ್ದು ನಾನೇ ಅಂತ ಆ ಜನ ಹೇಳುತ್ತಾರೆ. ಒಬ್ಬ ಮನುಷ್ಯನನ್ನು ತುಳಿಯಬೇಕು ಅಂದರೆ ಅದು ಯಾರಿಂದಲೂ ಆಗದು. ಅವೆಲ್ಲ ಭಗವಂತನ ಕೈಯಲ್ಲಿರುವುದು. ಕಲಬುರಗಿ ವಿಮಾನ ನಿಲ್ದಾಣ ನಿರ್ಮಾಣ ಮಾಡಿಸಿದ್ದು ನಾನು. ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ ನಿರ್ಮಿಸುವ ಕನಸಿತ್ತು, ಆದರೆ ಅದು ಅರ್ಧಕ್ಕೆ ನಿಂತಿದೆ. ನಾವು ಅಧಿಕಾರಕ್ಕೆ ಬಂದರೆ ಅದನ್ನು ಇನ್ನೊಂದು ವರ್ಷದಲ್ಲಿ ಪೂರ್ಣಗೊಳಿಸುತ್ತೇವೆ ಎಂದು ಜನಾರ್ದನ ರೆಡ್ಡಿ ಹೇಳಿದರು.

‘ಹುಲಿ ಯಾವತ್ತೂ ಸಣ್ಣಪುಟ್ಟ ಬೇಟೆಯಾಡಲ್ಲ’

ಹುಲಿ ಯಾವತ್ತೂ ಸಣ್ಣಪುಟ್ಟ ಬೇಟೆಯಾಡುವುದಿಲ್ಲ. ಅದು ಕಾದು ನೋಡಿ ದೊಡ್ಡ ಜಿಂಕೆಯನ್ನೇ ಬೇಟೆಯಾಡುತ್ತದೆ. ಬೋನಿ​ನಲ್ಲಿದ್ದರೂ, ಜೈಲಿನಲ್ಲಿದ್ದರೂ ಹುಲಿ ಹುಲಿಯೇ ಎಂದು ಅವರು ಹೇಳಿದ್ದಾರೆ. ಕೆಲವು ಹುಚ್ಚು ರಾಜಕಾರಣಿಗಳು 12 ವರ್ಷದಿಂದ ರೆಡ್ಡಿ ಮನೆಯಲ್ಲಿದ್ದಾನೆ, ರೆಡ್ಡಿ ರಾಜಕಾರಣ ಮುಗಿದಿದೆ ಅಂತ ಹೇಳಿಕೊಂಡಿದ್ದರು. ಇಂದಿನಿಂದ ನಾನು ಬೇಟೆ ಆರಂಭಿಸಿದ್ದೇನೆ. ಜಿಂಕೆಗಳು ಇನ್ನು ಮುಂದೆ ಮನೆ ಸೇರಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: B Sriramulu: ಗಣಿಧಣಿ ಜನಾರ್ದನ ರೆಡ್ಡಿ ಕೈಜಾರಿದ ಮೀನು ಯಾರು? ಲೇಟೆಸ್ಟ್​ ಆಗಿ ರೆಡ್ಡಿ ಹೇಳಿದ ಆ ಮೀನಿನ ಕತೆಯೇನು?

ಕನಕಗಿರಿ ಅಭ್ಯರ್ಥಿ ಘೋಷಣೆ

ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕನಕಗಿರಿ ಅಭ್ಯರ್ಥಿಯಾಗಿ ಡಾ. ಚಾರುಲ್ ವೆಂಕಟರಮಣ ಅವರ ಹೆಸರನ್ನು ರೆಡ್ಡಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಚುನಾವಣೆ ಸಿದ್ಧತೆಯನ್ನು ಮತ್ತಷ್ಟು ಚುರುಕುಗೊಳಿಸಿರುವ ಬಗ್ಗೆ ಅವರು ಸಂದೇಶ ರವಾನಿಸಿದ್ದಾರೆ.

ಬಿಜೆಪಿಯಲ್ಲಿ ರಾಜಕೀಯವಾಗಿ ಮುಂದುವರಿಯುವ ಅವಕಾಶ ಕಠಿಣವೆಂಬುದನ್ನರಿತಿದ್ದ ರೆಡ್ಡಿ ಇತ್ತೀಚೆಗೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಮಾಡಿದ್ದರು. ಆ ಮೂಲಕ ಮಿತ್ರ ಶ್ರೀರಾಮುಲು ಹಾಗೂ ತಮ್ಮ ಹಿಂದಿನ ರಾಜಕೀಯ ಪಕ್ಷ ಬಿಜೆಪಿ ವಿರುದ್ಧವೇ ತೊಡೆತಟ್ಟಿದ್ದಾರೆ. ಇದೀಗ ಚುನಾವಣಾ ಸಿದ್ಧತೆ ಚುರುಕುಗೊಳಿಸಿರುವ ಅವರು, ಪ್ರಚಾರ ಅಭಿಯಾನವನ್ನು ತೀವ್ರಗೊಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ