Congress Karnataka Bandh: ಮಾ.9ರಂದು ಕಾಂಗ್ರೆಸ್ ಕರೆ ಕೊಟ್ಟಿದ್ದ ಕರ್ನಾಟಕ ಬಂದ್​ ರದ್ದು

ಕರ್ನಾಟಕ ಪ್ರದೇಶ್ ಕಾಂಗ್ರೆಸ್( ಕೆಪಿಸಿಸಿ) ಮಾರ್ಚ್ 9 ರಂದು ಕರೆ ಕೊಟ್ಟಿದ್ದ ಕರ್ನಾಟಕ ಬಂದ್ ರದ್ದು ಮಾಡಿದೆ. ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಚರ್ಚಿಸಿ ಈ ತೀರ್ಮಾನ ತೆಗೆದುಕೊಂಡಿದೆ.

Congress Karnataka Bandh: ಮಾ.9ರಂದು ಕಾಂಗ್ರೆಸ್ ಕರೆ ಕೊಟ್ಟಿದ್ದ ಕರ್ನಾಟಕ ಬಂದ್​ ರದ್ದು
Follow us
ರಮೇಶ್ ಬಿ. ಜವಳಗೇರಾ
|

Updated on:Mar 08, 2023 | 12:48 PM

ಬೆಂಗಳೂರು: ಬಿಜೆಪಿ ಶಾಸಕ ಮಾಡಾಳು ವಿರುಪಾಕ್ಷಪ್ಪ ಪುತ್ರ ಲೋಕಾಯುಕ್ತ ಬಲೆಗೆ ಸಿಲುಕಿದ ಬೆನ್ನಲ್ಲೇ ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ ಕಾಂಗ್ರೆಸ್(Congress),​ ಮಾರ್ಚ್ 9 ರಂದು ಕರೆ ಕೊಟ್ಟಿದ್ದ ಕರ್ನಾಟಕ ಬಂದ್​(Karnataka Bandh) ರದ್ದಾಗಿದೆ. ಸಾರ್ವಜನಿಕರಿಗೆ ತೊಂದರೆ ತಪ್ಪಿಸುವ ದೃಷ್ಟಿಯಿಂದ (ಮಾ.9) ಬೆಳಗ್ಗೆ 9 ರಿಂದ 11 ಗಂಟೆಯ ವರೆಗೆ ಸಾಂಕೇತಿಕ ಬಂದ್‌ ಮಾಡಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಘೋಷಣೆ ಮಾಡಿದ್ದರು. ಆದ್ರೆ, ಇದೀಗ ಕಾಂಗ್ರೆಸ್​ ಬಂದ್​ ರದ್ದುಗೊಳಿಸಿದೆ. ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿದ್ದು, ರಾಜ್ಯ ಬಂದ್​  ಹಿಂಪಡೆದುಕೊಳ್ಳಲು ತೀರ್ಮಾನಿಸಿದ್ದಾರೆ.

ಇದನ್ನೂ ಓದಿ: Karnataka Bandh: ಲೋಕಾಯುಕ್ತ ಬಲೆಗೆ ಮಾಡಾಳ್ ಪುತ್ರ..; ‘ಕೈ’ಗೆ ಸಿಕ್ತು ಅಸ್ತ್ರ: ರಾಜ್ಯಾದ್ಯಂತ 2 ಗಂಟೆ ಬಂದ್​ಗೆ ಕರೆ ನೀಡಿದ ಕಾಂಗ್ರೆಸ್

ಡಿಕೆಶಿವಕುಮಾರ್, ಸಿದ್ದರಾಮಯ್ಯ ಹಾಗೂ ಬಿಕೆ ಹರಿಪ್ರಸಾದ್ ಸೇರಿದಂತೆ ಇನ್ನಿತರ ನಾಯಕರು ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿದ್ದು, ಪಿಯುಸಿ ಪರೀಕ್ಷೆ ಇರುವುದರಿಂದ ಬಂದ್ ವಾಪಸ್ ಪಡೆದುಕೊಂಡಿದೆ. ಮಾಡಾಳ್ ವಿರೂಪಾಕ್ಷಪ್ಪ ಲೋಕಾಯುಕ್ತ ಪ್ರಕರಣವನ್ನು ಭಾರೀ ಅಸ್ತ್ರವಾಗಿ ಬಳಸಿಕೊಳ್ಳಲು ಕಾಂಗ್ರೆಸ್​, ಮಾರ್ಚ್ 9ರಂದು ರಾಜ್ಯಾದ್ಯಂತ 2 ಗಂಟೆ ಬಂದ್​ಗೆ ಕರ್ನಾಟಕ ಕಾಂಗ್ರೆಸ್​ ಕರೆ ಕೊಟ್ಟಿತ್ತು. ಬೆಳಗ್ಗೆ 9ರಿಂದ ಬೆಳಗ್ಗೆ 11 ಗಂಟೆಯವರೆಗೆ ರಾಜ್ಯಾದ್ಯಂತ 2 ಗಂಟೆ ಕಾಲ ಅಂಗಡಿ ಮುಂಗಟ್ಟು ಮುಚ್ಚಿ ಬಂದ್​ಗೆ ಸಹಕರಿಸಲು ಡಿಕೆ ಶಿವಕುಮಾರ್ ಮನವಿ ಮಾಡಿಕೊಂಡಿದ್ದರು.

ಕಾಂಗ್ಸೆಸ್‌ ಬಂದ್‌ಗೆ ಜೆಡಿಎಸ್‌ ವಿರೋಧ

ಕಾಂಗ್ರೆಸ್‌ ಬಂದ್​ಗೆ ವಿರೋಧಗಳು ವ್ಯಕ್ತವಾಗಿದ್ದವು. ತಮ್ಮ ಬೇಳೆ ಬೇಯಿಸಿಕೊಳ್ಳಲು ಸಾರ್ವಜನಿಕರಿಗೆ ಯಾಕೆ ತೊಂದರೆ ಕೊಡತ್ತೀರಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಗಳು ವ್ಯಕ್ತವಾಗಿದ್ದವು. ಇನ್ನು ಮಾರ್ಚ್ 09ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಇರುವುದರಿಂದ ವಿದ್ಯಾರ್ಥಿಗಳು ತೊಂದರೆಯಾಗಿಲಿದೆ ಎನ್ನುವ ಮಾತುಗಳು ಕೇಳಿಬಂದಿದ್ದವು.

ಕೈ ಬಂದ್​ಗೆ ಬಿಜೆಪಿ ಲೇವಡಿ

ಇನ್ನು ವಿರೋಧ ಪಕ್ಷದ ಕರ್ನಾಟಕ ಬಂದ್​ಗೆ ಆಡಳಿತರೂಢ ಬಿಜೆಪಿ ನಾಯಕರು ಲೇವಡಿ ಮಾಡಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಸಂಪೂರ್ಣ ಬಂದ್​ ಆಗುತ್ತಿದೆ. ಇವರ ಕೈ ಸಂಪೂರ್ಣ ಬ್ರಷ್ಟಾಚಾರದಿಂದ ಕೂಡಿದೆ. ಜನ ಇವರ ಆಟ ನೋಡಿದ್ದಾರೆ. ಯಾರೂ ಸತ್ಯ ಹರಿಶ್ಚಂದ್ರ ಅನ್ನೋದು ಜನರಿಗೆ ಗೊತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದರು.

ಜನ ಈ ಬಂದ್ ಕರೆಗೆ ಬೆಂಬಲ ನೀಡುವುದಿಲ್ಲ. ಆಪಾದನೆ ಮಾಡುವವರು ಮೊದಲು ಶುದ್ಧಹಸ್ತರಿರಬೇಕು. ಆವಾಗ ಅದಕ್ಕೆ ಬೆಲೆ ಬರುತ್ತದೆ. ಕಾಂಗ್ರೆಸ್​ನವರು ದಿಂಬು, ಹಾಸಿಗೆ, ಬಿಸ್ಕೇಟ್ ಮತ್ತು ಕಾಫಿಯಲ್ಲೂ ಭ್ರಷ್ಟಾಚಾರ ಬಿಟ್ಟಿಲ್ಲ, ಕಾಂಗ್ರೆಸ್ ಎಲ್ಲದರಲ್ಲೂ ಭ್ರಷ್ಟಾಚಾರ ಮಾಡಿದೆ. ಮಾಜಿ ಸಚಿವ ಎಂ.ಬಿ.ಪಾಟೀಲ್, ಮಾಜಿ ಸಚಿವ ಕೆ ಜೆ ಜಾರ್ಜ್, ಕಾಂಗ್ರೆಸ್ ಮುಖಂಡ ಡಾ.ಎಚ್‌.ಸಿ.ಮಹದೇವಪ್ಪಗೆ ಕೇಳಬೇಕು ವಿಪಕ್ಷ ನಾಯಕ ಸಿದ್ಧರಾಮಯ್ಯ ಎಷ್ಟೆಲ್ಲ ಟಾರ್ಗೇಟ್ ಕೊಟ್ಟಿದ್ದರು ಎಂದು. ಭ್ರಷ್ಟಾಚಾರದ ಕೂಪದಲ್ಲಿ ಇರುವವರು ಆಪಾದನೆ ಮಾಡಿದರೆ ನಡೆಯಲ್ಲ. ದೇಶದಲ್ಲಿ ಕಾಂಗ್ರೆಸ್ ಸಂಪೂರ್ಣ ಬಂದ್ ಆಗುತ್ತಿದೆ ಹೀಗಾಗಿ ರಾಜ್ಯ ಬಂದ್ ಮಾಡುವುದರಲ್ಲಿ ಅರ್ಥವಿಲ್ಲ. ಕಾಂಗ್ರೆಸ್ ಮಾಡಿದ ಕರ್ಮಕಾಂಡ ಒಂದಾ ಎರಡಾ ? ಬಂದ್ ಮೂಲಕ ತಮ್ಮ ರಾಜಕೀಯ ಭವಿಷ್ಯ ಬರೆದುಕೊಳ್ಳಬಹುದು ಅನ್ನೋದು ಮೂರ್ಖತನ. ಚುನಾವಣಾ ಅಖಾಡವಿದೆ ಜನರು ತೀರ್ಮಾನ ಮಾಡುತ್ತಾರೆ ಎಂದು ಕಾಂಗ್ರೆಸ್​ ವಿರುದ್ಧ ಕಿಡಿಕಾರಿದ್ದರು.

Published On - 12:17 pm, Wed, 8 March 23