ಬ್ಯೂಟಿ ಮರ್ಡರ್: ಮಹಿಳೆಯ ಕಾಲು ಬಿಟ್ಟು ದೇಹವೆಲ್ಲ ಸುಟ್ಟಿತ್ತು, ಪೊಲೀಸರ ಸಮಯಪ್ರಜ್ಞೆಯಿಂದ ಗುರುತು ಪತ್ತೆ, ಜೊತೆಗೆ ಒಂದೇ ಗಂಟೆಯಲ್ಲಿ ಆರೋಪಿ ಅಂದರ್!
Kolar: ಮಂಗಳವಾರ ಬೆಳಿಗ್ಗೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನಾಯಕರಹಳ್ಳಿ ಬಳಿಯ ನಿರ್ಜನ ಪ್ರದೇಶದಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮಹಿಳೆಯೊಬ್ಬಳ ಶವ ಪತ್ತೆಯಾಗಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಕೋಲಾರ ಪೊಲೀಸರು ಪರಿಶೀಲನೆ ನಡೆಸಿದಾಗ ಶವದ ಗುರುತು ಪತ್ತೆಯಾಗಿಲ್ಲ. ಆದರೆ ಮುಂದೇನಾಯ್ತು?
ಅದೊಂದು ನಿರ್ಜನ ಅರಣ್ಯ ಪ್ರದೇಶದಲ್ಲಿ ಮಹಿಳೆಯೊಬ್ಬಳ ಅರೆಬೆಂದ ಸ್ಥಿತಿಯಲ್ಲಿ ಶವವೊಂದು ಪತ್ತೆಯಾಗಿತ್ತು. ಮಹಿಳೆಯ ಕಾಲು ಬಿಟ್ಟರೆ ಆಕೆಯ ಇಡೀ ದೇಹ ಸುಟ್ಟು ಕರಕಲಾಗಿತ್ತು. ಆದರೂ ಪೊಲೀಸರ ಸಮಯಪ್ರಜ್ಞೆ ಹಾಗೂ ಮಿಂಚಿನ ಕಾರ್ಯಾಚರಣೆಯಿಂದ ಮಹಿಳೆಯ ಗುರುತು ಪತ್ತೆಯ ಜೊತೆಗೆ ಕೇವಲ ಒಂದೇ ಗಂಟೆಯಲ್ಲಿ ಆರೋಪಿಗಳು ಅಂದರ್ (Arrest) ಆಗಿದ್ದಾರೆ (Murder). ನಿರ್ಜನ ಪ್ರದೇಶದಲ್ಲಿ ಸುಟ್ಟು ಕರಕಲಾಗಿರುವ ಶವ, ಶವವನ್ನು ಪರಿಶೀಲನೆ ನಡೆಸುತ್ತಿರುವ ಕೋಲಾರ ಎಸ್ಪಿ ನಾರಾಯಣ್ ಹಾಗೂ ಸಿಬ್ಬಂದಿ, ಮತ್ತೊಂದೆಡೆ ಆತಂಕದಲ್ಲಿ ವೀಕ್ಷಣೆ ಮಾಡುತ್ತಿರುವ ಜನರು, ಇದೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರ (Kolar) ತಾಲ್ಲೂಕು ನಾಯಕರಹಳ್ಳಿ ಬಳಿ ಅರಣ್ಯ ಪ್ರದೇಶದಲ್ಲಿ.
ಹೌದು ಮಂಗಳವಾರ ಬೆಳಿಗ್ಗೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನಾಯಕರಹಳ್ಳಿ ಬಳಿಯ ನಿರ್ಜನ ಪ್ರದೇಶದಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮಹಿಳೆಯೊಬ್ಬಳ ಶವ ಪತ್ತೆಯಾಗಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದಾಗ ಶವದ ಗುರುತು ಪತ್ತೆಯಾಗಿಲ್ಲ. ಈ ವೇಳೆ ಎಸ್ಪಿ ನಾರಾಯಣ್ ಮಹಿಳೆಯೊಬ್ಬಳ ಶವ ಸುಟ್ಟುಹಾಕಿರುವ ಕುರಿತು ಮಾಹಿತಿ ಬಂದ ಕೂಡಲೇ ಶ್ರೀನಿವಾಸಪುರ ಪೊಲೀಸ್ ಠಾಣೆಗೆಲ್ಲಿ ಮಹಿಳೆಯೊಬ್ಬಳ ನಾಪತ್ತೆ ಪ್ರಕರಣ ದಾಖಲಾಗಿರುವ ಕುರಿತು ಮಾಹಿತಿ ವಿಚಾರಣೆ ಮಾಡುತ್ತಾರೆ.
ಈ ವೇಳೆ ಶ್ರೀನಿವಾಸಪುರದಲ್ಲಿ ನಾಪತ್ತೆಯಾಗಿದ್ದ ಮಹಿಳೆಯೇ ಇಲ್ಲಿ ಕೊಲೆಯಾಗಿರುವ ಅನುಮಾನ ದಟ್ಟವಾದ ಹಿನ್ನೆಲೆ ಮೊಬೈಲ್ ಹಾಗೂ ಶವದ ಗುರುತು ಪತ್ತೆ ಮಾಡಲಾಗಿ ಶ್ರೀನಿವಾಸಪುರದಲ್ಲಿ ಕಾಣೆಯಾಗಿದ್ದ ಮಹಿಳೆಯೇ ಇಲ್ಲಿ ಕೊಲೆಯಾಗಿರುವುದು ಖಚಿತವಾಗುತ್ತದೆ. ಕೂಡಲೇ ಮಾಹಿತಿ ಪಡೆದ ಪೊಲೀಸರು ತಕ್ಷಣ ಕೊಲೆಯಾಗಿದ್ದ ಮಹಿಳೆಯ ಸಂಬಂಧಿಕರನ್ನು ವಿಚಾರಣೆ ನಡೆಸಿದಾಗ ಕೊಲೆಯಾದ ಮಹಿಳೆ ಶೋಭಾ ಅನ್ನೋದು ತಿಳಿದು ಬಂದಿತ್ತು. ನಂತರ ಆಕೆಯ ಮೊಬೈಲ್ ಟವರ್ ಲೊಕೇಶನ್ ಹಾಗೂ ಆಕೆ ನಿನ್ನೆ ಯಾರೊಂದಿಗೆ ಇದ್ದಳು ಅನ್ನೋದನ್ನು ವಿಚಾರಣೆ ನಡೆಸಿದಾಗ ಆಕೆಯ ಸ್ನೇಹಿತ ರಮೇಶ್ ಅನ್ನೋದು ತಿಳಿದ ತಕ್ಷಣ ಪೊಲೀಸರು ರಮೇಶ್ನನ್ನು ಬಂಧಿಸಿ ವಿಚಾರಣೆ ಮಾಡಿದಾಗ ಇಡೀ ಪ್ರಕರಣ ಕೇವಲ ಒಂದೇ ಗಂಟೆಯಲ್ಲಿ ಬಯಲಾಗಿದೆ.
ಇನ್ನು ಕೊಲೆಯಾದ ಮಹಿಳೆ, ಸುಮಾರು 37 ವರ್ಷದ ಶೋಭಾ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಲಕ್ಷ್ಮೀ ಪ್ರಿಯಾ ಹರ್ಬಲ್ ಬ್ಯೂಟಿ ಪಾರ್ಲರ್‌ನ ನಡೆಸುತ್ತಿದ್ದಳು. ಈಕೆಯ ಮೊದಲ ಪತಿ ಮೃತಪಟ್ಟಿದ್ದು, ಈಗ ಎರಡನೇ ಪತಿ ವೆಂಕಟರಾಮ್ ಎಂಬುವರ ಜೊತೆಗೆ ಶ್ರೀನಿವಾಸಪುರದಲ್ಲಿ ವಾಸ ಮಾಡುತ್ತಿದ್ದಳು. ತನ್ನಿಬ್ಬರು ಮಕ್ಕಳನ್ನು ಓದಿಸುತ್ತಾ, ತಾನು ಬ್ಯೂಟಿ ಪಾರ್ಲರ್ ( Beauty Parlour), ರೈತ ಸಂಘಟನೆ, ಮಹಿಳಾ ಸಂಘಟನೆ ಎಂದೆಲ್ಲಾ ಓಡಾಡುತ್ತಾ, ತನ್ನ ಸ್ನೇಹಿತ ರಮೇಶ್ ಎಂಬಾತನ ಜೊತೆಗೆ ಹಣದ ವ್ಯವಹಾರ ಹಾಗೂ ಕೃಷಿ ಮಾಡಿಸುತ್ತಿದ್ದಳು ಅನ್ನೋದು ಗೊತ್ತಾಗುತ್ತದೆ.
ಸದ್ಯ ರಮೇಶ್ ಈಕೆಯ ಗಂಡ ವೆಂಕಟರಾಂ ಸ್ನೇಹಿತರು. ಇವರಿಬ್ಬರ ಜೊತೆಗೆ ಅಕ್ರಮ ಸಂಬಂಧ ಹಾಗೂ ಹಣದ ವ್ಯವಹಾರವಿದ್ದು ಈ ವಿಚಾರದಲ್ಲಿ ಇಬ್ಬರ ನಡುವೆ ಉಂಟಾಗಿದ್ದ ವಿರಸದಿಂದಲೇ ಕೊಲೆ ಮಾಡಲಾಗಿದೆ ಅನ್ನೋದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಎರಡು ದಿನದ ಹಿಂದೆ ಅಂದರೆ ಭಾನುವಾರ ರಮೇಶ್ ಜೊತೆಗೆ ಸಂಬಂಧಿಕರೊಬ್ಬರ ಮದುವೆಗೂ ಹೋಗಿ ಬಂದಿದ್ದ ಶೋಭಾ, ನಿನ್ನೆ ಇಡೀ ದಿನ ಪತ್ತೆಯಾಗಿರಲಿಲ್ಲ.
ಈ ಸಂಬಂಧ ಶೋಭಾ ಎರಡನೇ ಪತಿ ವೆಂಕಟರಾಮ್ ಹಾಗೂ ಆಕೆಯ ಪುತ್ರ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ಸಹ ನೀಡಿದ್ದರು. ದೂರು ನೀಡಿದ್ದ ಪ್ರಕರಣ ದಾಖಲಾಗಿದ್ದ ಕೆಲವೇ ಹೊತ್ತಿನಲ್ಲಿ ಮಹಿಳೆ ಬರ್ಬರವಾಗಿ ಕೊಲೆಯಾಗಿರುವುದು ತಿಳಿದು ಬಂದಿದೆ.
ಸದ್ಯ ಕೊಲೆ ಮಾಡಿದ ಆರೋಪಿ ರಮೇಶ್ ಸಿಕ್ಕಿದ್ದು ಈ ಕೊಲೆಗೆ ನಿಖರ ಕಾರಣ ಏನು ಕೇವಲ ಹಣದ ವ್ಯವಹಾರ ಮಾತ್ರವಿತ್ತಾ? ಕೊಲೆಗೆ ಯಾರೆಲ್ಲಾ ಸಹಕಾರ ನೀಡಿದ್ದರು? ಅನ್ನೋದು ಪೊಲೀಸರ ವಿಚಾರಣೆಯಿಂದ ತಿಳಿಯಬೇಕಿದೆ. ಸದ್ಯ ಕೊಲೆಯಾದ ಮಹಿಳೆ ಶೋಭಾ ಸಂಬಂಧಿಕರು ಕೊಲೆ ಮಾಡಿರುವವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಒಟ್ಟಾರೆ ತಾನು ಒಬ್ಬಂಟಿಯಾಗಿದ್ದುಕೊಂಡು ತನ್ನ ಕಾಲ ಮೇಲೆ ತಾನು ನಿಂತು ದುಡಿದು ಬದುಕುತ್ತಿದ್ದವಳು ಇಂದು ಬರ್ಬರವಾಗಿ ಹತ್ಯೆಯಾಗಿದ್ದಾಳೆ. ಸದ್ಯ ಇದು ಶ್ರೀನಿವಾಸಪುರ ಜನರನ್ನು ಬೆಚ್ಚಿಬೀಳಿಸಿದೆ. ಬ್ಯೂಟಿ ಪಾರ್ಲರ್ ಇಟ್ಟುಕೊಂಡು ಸುಂದರ ಜೀವನ ನಡೆಸಬೇಕು ಎಂದುಕೊಂಡಿದ್ದಾಕೆ ಹೀಗೆ ಗುರುತೇ ಸಿಗದ ಹಾಗೆ ಕೊಲೆಯಾಗಿದ್ದೇಕೆ ಅನ್ನೋದು ಪೊಲೀಸರ ತನಿಖೆಯಿಂದಷ್ಟೇ ತಿಳಿಯಬೇಕಿದೆ.
ವರದಿ: ರಾಜೇಂದ್ರಸಿಂಹ, ಟಿವಿ9, ಕೋಲಾರ
Published On - 12:10 pm, Wed, 8 March 23