AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲಾರದಲ್ಲಿ ಸಿದ್ದರಾಮಯ್ಯ ಗೆದ್ದರೆ ಅವರು ಹೇಳಿದಂತೆ ಕೇಳುತ್ತೇನೆ; ಕೆಎಸ್​​ ಈಶ್ವರಪ್ಪ

ಸಿದ್ದರಾಮಯ್ಯರನ್ನು ಸೋಲಿಸಲು ಬಿಜೆಪಿ ಬೇಡ, ಕಾಂಗ್ರೆಸ್ಸಿಗರೇ ಸಾಕು. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್​​ಗೆ ಜನ ಉತ್ತರ ಕೊಡುವ ಕಾಲ ಬಂದಿದೆ ಎಂದು ಈಶ್ವರಪ್ಪ ಹೇಳಿದ್ದಾರೆ.

Ganapathi Sharma
|

Updated on:Mar 01, 2023 | 5:49 PM

Share

ಚಾಮರಾಜನಗರ: ಕೋಲಾರದಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ (Siddaramaiah) ಗೆದ್ದರೆ ಅವರು ಹೇಳಿದಂತೆ ಕೇಳುತ್ತೇನೆ ಎಂದು ಬಿಜೆಪಿ ನಾಯಕ ಕೆಎಸ್​​ ಈಶ್ವರಪ್ಪ (KS Eshwarappa) ಹೇಳಿದ್ದಾರೆ. ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಬಿಜೆಪಿ ವಿಜಯಸಂಕಲ್ಪ ಯಾತ್ರೆಯಲ್ಲಿ ಭಾಗವಹಸಿ ಮಾತನಾಡಿದ ಅವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಒಮ್ಮೆ ಕೋಲಾರದಿಂದ ಸ್ಪರ್ಧಿಸುತ್ತೇನೆ ಎನ್ನುತ್ತಾರೆ. ಮತ್ತೊಮ್ಮೆ ಬಾದಾಮಿ ಕ್ಷೇತ್ರದಿಂದ ಕಣಕ್ಕಿಳಿಯುತ್ತೇನೆ ಎನ್ನುತ್ತಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಅವರಿಗೆ ಏನು ರೋಗ? ಕೋಲಾರ ಕ್ಷೇತ್ರದ ದಲಿತರು ಸಿದ್ದರಾಮಯ್ಯರನ್ನು ಸೋಲಿಸಲು ಕಾಯುತ್ತಿದ್ದಾರೆ. ಸಿದ್ದರಾಮಯ್ಯ ಕಪಾಳಕ್ಕೆ ಹೊಡೆದು ಸೋಲಿಸಲು ಕಾಯುತ್ತಿದ್ದಾರೆ. ಜಿ ಪರಮೇಶ್ವರ್, ಮುನಿಯಪ್ಪ ಅವರನ್ನು ಸೋಲಿಸಿದ್ದನ್ನು ದಲಿತರು ಮರೆತಿಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ.

ಸಿದ್ದರಾಮಯ್ಯರನ್ನು ಸೋಲಿಸಲು ಬಿಜೆಪಿ ಬೇಡ, ಕಾಂಗ್ರೆಸ್ಸಿಗರೇ ಸಾಕು. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್​​ಗೆ ಜನ ಉತ್ತರ ಕೊಡುವ ಕಾಲ ಬಂದಿದೆ ಎಂದು ಈಶ್ವರಪ್ಪ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಿದ್ದರಾಮಯ್ಯ ನರಹಂತಕ ಎಂದು ಕರೆದಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಈಶ್ವರಪ್ಪ, ಪಾಕಿಸ್ತಾನದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮಾಡಿದಕ್ಕೆ ಈ ರೀತಿ ಕರೆಯುತ್ತಾರೆ. 300 ಜನರನ್ನು ಸೆದೆ ಬಡಿದವರು ಮೋದಿ. ಅವರು ದೇಶ ದ್ರೋಹಿಗಳಿಗೆ ಉತ್ತರ ಕೊಡುವ ಸಾಮರ್ಥ್ಯ ಹೊಂದಿದ್ದಾರೆ. ಈಗ ಪಾಕಿಸ್ತಾನದ ಪರಿಸ್ಥಿತಿ ಏನಾಗಿದೆ? ಸಿದ್ದರಾಮಯ್ಯ ಹಾಗೂ ಡಿಕೆಶಿಗೆ ಜನ ಉತ್ತರ ಕೊಡುವ ಕಾಲ ಬಂದಿದೆ ಎಂದು ಅವರು ಟೀಕಾ ಪ್ರಹಾರ ನಡೆಸಿದ್ದಾರೆ.

ಇದನ್ನೂ ಓದಿ: Vijaya Sankalp Yatra: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ; ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ನಡ್ಡಾ ಹೇಳಿಕೆ

ಡಿಕೆ ಶಿವಕುಮಾರ್ ತಿಹಾರ್ ಜೈಲಿಗೆ ಏಕೆ ಹೋಗಿದ್ದರು? ಅವರೇನು ವಂದೇ ಮಾತರಂ ಘೋಷಣೆ ಕೂಗಿ ಜೈಲಿಗೆ ಹೋಗಿದ್ದರಾ ಅಥವಾ ಸ್ವಾತಂತ್ರ್ಯ ಹೋರಾಟ ಮಾಡಿ ಹೋಗಿದ್ದರಾ? ಕೋಟಿ ಕೋಟಿ ಅಕ್ರಮ ಹಣ ಇಟ್ಟಿದ್ದಕ್ಕೆ ಜೈಲುಪಾಲಾಗಿದ್ದರು. ಅಂಥ ಡಿಕೆಶಿ ಬಿಜೆಪಿಯನ್ನು ಭ್ರಷ್ಟಾಚಾರದ ಪಕ್ಷ ಎನ್ನುತ್ತಾರೆ ಎಂದು ಈಶ್ವರಪ್ಪ ಕಿಡಿಕಾರಿದರು.

ಅರ್ಕಾವತಿ ರೀಡೂ ಬಗ್ಗೆ ಪ್ರಸ್ತಾಪ ಮಾಡಿದ ಅವರು, ಹಗರಣದಲ್ಲಿ 8 ಸಾವಿರ ಕೋಟಿ ಲೂಟಿ ಮಾಡಿದ್ದಾರೆ. ಇಂಥವರು ಬಿಜೆಪಿ ಬಗ್ಗೆ ಭಾಷಣ ಮಾಡುತ್ತಾರೆ. ಹೌದು, ನಾವು ಹಿಂದೂ ಪರ ಇದರಲ್ಲಿ ಅನುಮಾನ ಇಲ್ಲ. ಕಾಶಿಯಲ್ಲಿ ವಿಶ್ವನಾಥನ ಮಂದಿರ, ಮಥುರಾದಲ್ಲಿ ಕೃಷ್ಣನ ಮಂದಿರ ನಿರ್ಮಿಸಿಯೇ ಸಿದ್ಧ. ನೂರು ಸಿದ್ದರಾಮಯ್ಯನವರು ಬಂದರೂ ಅದನ್ನು ನಿಲ್ಲಿಸಲು ಸಾಧ್ಯವಿಲ್ಲ. ನೀವು ಮಸೀದಿ ಕಟ್ಟುತ್ತೇವೆ ಮತ ಕೊಡಿ ಎಂದು ಹೇಳಿ, ನೋಡೋಣ ಎಷ್ಟು ಜನ ನಿಮಗೆ ಮತ ಹಾಕುತ್ತಾರೆ ಎಂಬುದಾಗಿ ಎಂದು ಕಾಂಗ್ರೆಸ್ ನಾಯಕರಿಗೆ ಈಶ್ವರಪ್ಪ ಸವಾಲೆಸೆದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:42 pm, Wed, 1 March 23