ಚಿಕ್ಕೋಡಿ ಸೆ.30: ಮುಸ್ಲಿಂರನ್ನು (Muslim) ನಂಬಿ ನಾನು ರಾಜಕಾರಣ ಮಾಡುತ್ತಿಲ್ಲ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ (Congress) ಸರ್ಕಾರ ಪತನವಾಗುತ್ತೆ ಎಂಬ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಹೇಳಿಕೆಗೆ, ಅಥಣಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ (Laxman Savadi) ತಿರುಗೇಟು ನೀಡಿದ್ದಾರೆ. ಅಥಣಿಯಲ್ಲಿ ಟಿವಿ9 ಡಿಜಿಟಲ್ ಜೊತೆ ಮಾತನಾಡಿದ ಅವರು ಜೆ.ಹೆಚ್.ಪಟೇಲ್‌ರು ಮುಖ್ಯಮಂತ್ರಿಯಾಗಿದ್ದಾಗ, ವಿಪಕ್ಷದವರು ಸರ್ಕಾರ ಬೀಳುತ್ತೆ ಅಂತಾ ಟೀಕೆ ಮಾಡುತ್ತಿದ್ದರು. ಇದಕ್ಕೆ ಜೆ.ಹೆಚ್.ಪಟೇಲ್ ಅವರು ಪ್ರತಿಕ್ರಿಯಿಸಿ ಹೋರಿ ಹೋಗುತ್ತಿರುತ್ತದೆ, “ನಾಯಿ ಹಿಂದೆ ಬೆನ್ನು ಹತ್ತಿರುತ್ತದೆ. ಹೋರಿ ಯಾವಾಗ ಬೀಳುತ್ತೆ, ಆಗ ಅದನ್ನ ತಿನ್ನಬೇಕು ಅಂತ ನಾಯಿ ಕಾಯುತ್ತಿರುತ್ತದೆ. ಆದರೆ ಹೋರಿ ಮಾತ್ರ ಹೋಗುತ್ತಿರುತ್ತೆ ಎಂದು ಬಹಳ ಮಾರ್ಮಿಕವಾಗಿ ಹೇಳಿದ್ದರು”. ಇದನ್ನು ಜೆ.ಹೆಚ್. ಪಟೇಲ್‌ರು ಹೇಳಿದ್ದು ನಾನಲ್ಲ. ಈಗಲೂ ಹಾಗೇಯೇ ಆಗುತ್ತಿದೆ ಅಂತ ನನಗೆ ಅರ್ಥ ಆಗುತ್ತಿದೆ ಎಂದು ಹೇಳುವ ಮೂಲಕ ಸವದಿ ಪರೋಕ್ಷವಾಗಿ ಹೆಚ್ಡಿ ಕುಮಾರಸ್ವಾಮಿಯವರನ್ನು ನಾಯಿಗೆ ಹೋಲಿಸಿದ್ದಾರೆ.
ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಹೋರಿ ಯಾರು? ನಾಯಿ ಯಾರು? ಎಂಬ ಟಿವಿ9 ಪ್ರಶ್ನೆಗೆ ಉತ್ತರಿಸಿದ ಅವರು ಅದು ನನಗೆ ಗೊತ್ತಿಲ್ಲ, ಯಾರು ಏನು ಅಂತಾ ಅದನ್ನ ನಾನು ಹೇಳೋಕೆ ಹೋಗಲ್ಲ. ಜೆ.ಹೆಚ್.ಪಟೇಲ್‌ರು ಅಧಿವೇಶನದಲ್ಲಿ ಈ ಮಾತನ್ನು ಹೇಳಿದ್ದರು ಎಂದು ಹೇಳುವ ಮೂಲಕ ಲಕ್ಷ್ಮಣ ಸವದಿ ಜಾರಿಕೊಂಡರು.
ಮುಂದುವರೆದು ಕುಮಾರಣ್ಣಂಗೆ ಏನು ಹೇಳಬೇಕೆಂದರೂ ನನಗೂ ಒಂಥರ ಮುಜುಗರ. ಯಾರೂ ಕುಮಾರಣ್ಣನ ಇಳಿಸಿದರೂ, ಅವರ ಮನೆಯಲ್ಲಿ ಕುಳಿತು ಚರ್ಚೆ ಮಾಡುತ್ತಾರೆಂದರೇ ಏನಿದರ ಅರ್ಥ ? ರಾಜಕಾರಣದಲ್ಲಿ ಸ್ವಾಭಿಮಾನ ಅನ್ನೋದು ಮನುಷ್ಯನಿಗೆ ಬೇಕಲ್ಲ. ಯಾರು ಸರ್ಕಾರ ಕಿತ್ತು ಹಾಕಿದರು ಅವರ ಪಕ್ಕದಲ್ಲೇ ಕುಳಿತು ಇಂತಹ ಹೇಳಿಕೆ ನೀಡುವುದು ಎಷ್ಟರ ಮಟ್ಟಿಗೆ ಸರಿ? ಕುಮಾರಣ್ಣ ರಾಜಕೀಯ ಜಾಣತನದಲ್ಲಿ ಸೂರ್ಯ ಹೇಗೆ ಬರುತ್ತಾನೆ ಹಾಗೇ ಕೊಡೆ ಹಿಡಿಯಲಿಕ್ಕೆ ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದರು.
ಎರಡು ಬಾರಿ ಸಿಎಂ ಆಗಿ ಅವರು ತಮ್ಮ ರಾಜಕೀಯದಲ್ಲಿ ಉನ್ನತ ಮಟ್ಟಿಗೆ ಹೋಗಿ ಬಂದಿದ್ದಾರೆ. ಅದಕ್ಕೆ ದೈವಬಲ, ಅವರ ತಂದೆಯ ಆಶೀರ್ವಾದ, ಅವರ ಪರಿಶ್ರಮ ಇರಬಹುದು. ಎರಡು ಬಾರಿ ಸಿಎಂ ಆದ ಮೇಲೂ ಅವರಿಗೆ ಸ್ವಾಭಿಮಾನ ಇರಬೇಕಿತ್ತು. ಯಾರು ಇವರನ್ನು ಉಳಿಸಬೇಕು ಅಂತಿದ್ದರೂ ಅವರ ಬಗ್ಗೆ ಟೀಕೆ, ಯಾರೂ ಇವರನ್ನು ಇಳಿಸಿದರೂ ಅವರ ಜೊತೆ ದೋಸ್ತಿ. ಬಿಜೆಪಿ ಜೊತೆ ಜೆಡಿಎಸ್ ಹೊಂದಾಣಿಕೆ ರಾಜಕಾರಣ ರಾಜ್ಯದ ಜನ ಒಪ್ಪಲ್ಲ. ಬಿಎಸ್ ಯಡಿಯೂರಪ್ಪನವರು ಜೈಲಿಗೆ ಹೋಗಲು ಕುಮಾರಸ್ವಾಮಿಯವರೇ ಕಾರಣ. ಅದೇ ಯಡಿಯೂರಪ್ಪ ಇಂದು ಕುಮಾರಣ್ಣರನನ್ನು ತಬ್ಬಿಕೊಂಡು ಪಕ್ಕಕ್ಕಿಟ್ಟುಕೊಂಡಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ಇದನ್ನೂ ಓದಿ: ಅನುಭವಿ ರಾಜಕಾರಣಿಯಾಗಿರುವ ಕುಮಾರಸ್ವಾಮಿ ಗಾಳಿಯಲ್ಲಿ ಗುಂಡು ಹಾರಿಸುವುದನ್ನು ನಿಲ್ಲಿಸಲಿ: ಪ್ರಿಯಾಂಕ್ ಖರ್ಗೆ, ಸಚಿವ
ಅಧಿಕಾರಕ್ಕಾಗಿ ಸ್ವಾಭಿಮಾನ ಮರೆಯುವಂತಹ ರಾಜಕಾರಣ ರಾಜ್ಯದಲ್ಲಿ ನಡೀತಿದೆ. ರಾಜಕಾರಣದಲ್ಲಿ ಅಧಿಕಾರ ಶಾಶ್ವತ ಅಲ್ಲ, ಸ್ವಾಭಿಮಾನ ಅನ್ನುವಂತದ್ದು ಬೇಕಾಗುತ್ತೆ. ಜೀವನದಲ್ಲಿ ಅಧಿಕಾರ ಬರುತ್ತೆ ಹೋಗುತ್ತೆ ಸ್ವಾಭಿಮಾನ ಬಹಳ ಮುಖ್ಯ. ಸ್ವಾಭಿಮಾನ ಬಿಟ್ಟು ರಾಜಕಾರಣ ಮಾಡುತ್ತಿದ್ದಾರೆ. ತತ್ವ ಸಿದ್ಧಾಂತ ಬದಿಗೊತ್ತಿ ಅಧಿಕಾರದ ಲಾಲಸೆಗೆ ಇದನ್ನು ಮಾಡುತ್ತಿರುವುದನ್ನು ನೋಡುತ್ತಿದ್ದೇವೆ ಎಂದು ಸ್ವಾಭಿಮಾನದ ಪಾಠ ಮಾಡಿದರು.
ನಮ್ಮ ಸರ್ಕಾರ ಸುಭದ್ರವಾಗಿದೆ, ಪಕ್ಷ ಬಿಟ್ಟು ಯಾರೂ ಹೋಗುವವರಿಲ್ಲ. ರಾಜ್ಯದ ಜನರಿಗೆ ನಾವು ನೀಡಿದ್ದ 5 ಗ್ಯಾರಂಟಿ ಭರವಸೆ ಈಡೇರಿಸಿದ್ದೇವೆ. ಜನ ಒಳ್ಳೆಯ ಆಡಳಿತ ಬಯಸುತ್ತಿದ್ದಾರೆ, ಅದನ್ನು ನಾವು ಕೊಡುತ್ತಿದ್ದೇವೆ. ಜೆಡಿಎಸ್ ಪಕ್ಷವೇ ಇವತ್ತು ಕುದುರೆ ವ್ಯಾಪಾರ ಆಗಿಬಿಟ್ಟಿದೆ. ಸರ್ಕಾರ ಬೀಳಿಸಲು ಮೈತ್ರಿ ಮಾಡಿಕೊಂಡಿದ್ದಾರಾ ಎಂಬ ಅನುಮಾನವಿದೆ. ಚುನಾವಣೆ ಹೊತ್ತಲ್ಲಿ ಐಟಿ, ಇಡಿ ಛೂ ಬಿಡುತ್ತಾರೆ ಅಂತ ಅರ್ಥ ಆಯ್ತು. ಆಪರೇಷನ್ ಕಮಲಕ್ಕೆ ಸಿದ್ಧರಾಗುತ್ತಿದ್ದಾರೆ ಅಂತ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಬಹುಶಃ ಜೆಡಿಎಸ್ನವರು ಹೆದರಿ ಅಲ್ಲೇ ಹೋಗಿರಬಹುದು ಅನಿಸುತ್ತೆ. 130 ಸ್ಥಾನವುಳ್ಳ ಸರ್ಕಾರ ಪತನಗೊಳಿಸ್ತಾರೆ ಅಂದರೇ ಅದೇ ಮಾರ್ಗ ಅಲ್ವಾ? ಭಾರತೀಯ ಜನತಾ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳಲು ಕಾರಣ ಏನು? ಬಿಜೆಪಿಗೆ ಜಾತ್ಯತೀತ ತತ್ವದ ಅರಿವಿದ್ಯಾ? ಸಂವಿಧಾನ ಬಗ್ಗೆ ಗೌರವ ಇದ್ಯಾ? ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ಮಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:05 pm, Sat, 30 September 23