ಮತ್ತೆ ಮುನ್ನಲೆಗೆ ಬಂದ ಲಿಂಗಾಯತ ಸ್ವತಂತ್ರ ಧರ್ಮ: ಕಾರ್ಯಕಾರಿಣಿ ಸಭೆಯಲ್ಲಿ ನಾಲ್ಕು ನಿರ್ಣಯ
ಲಿಂಗಾಯತ ಧರ್ಮದ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಸರ್ಕಾರ ಮರು ಉತ್ತರ ನೀಡಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿ ಡಾ.ಶಿವಾನಂದ ಜಾಮದಾರ ಆಗ್ರಹಿಸಿದ್ದಾರೆ.

ಬೆಳಗಾವಿ: ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿತ್ತು. ಇದೀಗ ವರದಿ ಬಗ್ಗೆ ಕೇಂದ್ರ ಸರ್ಕಾರವೂ ಉತ್ತರ ನೀಡಿದೆ. ಈಗ ಅದಕ್ಕೆ ಕರ್ನಾಟಕ ಸರ್ಕಾರ ಮರು ಉತ್ತರ ಕೊಡಬೇಕಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿ ಡಾ.ಶಿವಾನಂದ ಜಾಮದಾರ (dr. sivananda jamadar) ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಲಿಂಗಾಯತ ಧರ್ಮ ವಿಚಾರದಲ್ಲಿ ಏನೆಲ್ಲ ನಡೆದಿದೆ ಗೊತ್ತು. ಹೆಚ್.ಡಿ ಕುಮಾರಸ್ವಾಮಿ ಲಿಂಗಾಯತ ಧರ್ಮದ ಫೈಲ್ ಮುಟ್ಟಲ್ಲ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದರು ಎಂದು ಕಿಡಿಕಾರಿದ್ದಾರೆ.
ಬಿಎಸ್ ಯಡಿಯೂರಪ್ಪ ಸಹ ಲಿಂಗಾಯತ ವಿರೋಧಿಗಳಂತೆ ನಡೆದುಕೊಂಡರು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಏನೆಲ್ಲ ಮಾಡಿದ್ರು ಅಂತಾ ಗೊತ್ತಿದೆ. ಲಿಂಗಾಯತ ಧರ್ಮದ ವಿಚಾರವಾಗಿ ಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ, ತೆಲಂಗಾಣದಲ್ಲಿ ಹಲವು ಹೋರಾಟಗಳು ನಡೆದಿವೆ ಎಂದರು.
ಇದನ್ನೂ ಓದಿ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಬಗ್ಗೆ ಸ್ಪಷ್ಟನೆ ಕೊಟ್ಟ ಕುಮಾರಸ್ವಾಮಿ
ಲಿಂಗಾಯತ ಧರ್ಮದ ವಿಚಾರವಾಗಿ ಕರ್ನಾಟಕ ಸರ್ಕಾರ ಉತ್ತರಿಸಬೇಕು. ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಸರ್ಕಾರ ಮರು ಉತ್ತರ ನೀಡಬೇಕು. ನ್ಯಾ.ನಾಗಮೋಹನ್ ದಾಸ್ ಸಮಿತಿ ರಚಿಸಿದ್ದು ಸರ್ಕಾರ ಅಲ್ಲ. ಅಲ್ಪಸಂಖ್ಯಾತ ಆಯೋಗದಿಂದ ಸಮಿತಿ ರಚನೆ ಆಗಿದೆ ಎಂದು ಹೇಳಿದರು.
ಕಾರ್ಯಕಾರಿಣಿ ಸಭೆಯಲ್ಲಿ ನಾಲ್ಕು ನಿರ್ಣಯ
ನಿನ್ನೆ ಜಾಗತಿಕ ಲಿಂಗಾಯತ ಮಹಾಸಭಾ ಪ್ರಥಮ ಅಧಿವೇಶನದ ಕಾರ್ಯಕಾರಿಣಿ ಸಭೆ ನಡೆಸಿದ್ದು, ನಾಲ್ಕು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಭಾರತ ಸರ್ಕಾರ ಜನಗಣತಿ ಸಂಬಂಧ ಕೆಲ ನಮೂನೆ ಬಿಡುಗಡೆ ಮಾಡಿದೆ. ಜನಗಣತಿಯ ಕೌಟುಂಬಿಕ ನಮೂನೆಯಲ್ಲಿ ಪ್ರತಿಯೊಂದು ಕುಟುಂಬದ ಧಾರ್ಮಿಕ ವಿಷಯ ಇರುತ್ತೆ. ಅದರಲ್ಲಿ ಮೊದಲು ಏಳನೇ ಕೆಟಗರಿ ‘ಇತರೆ’ ಅಂತಾ ಇತ್ತು. ನಿಮ್ಮ ಧರ್ಮ ಯಾವುದು ಅಂದ್ರೆ 7ನೇ ಕೆಟಗರಿ ‘ಇತರೆ’ ಆಯ್ಕೆ ಮಾಡಿ ಧರ್ಮ ಬರೆಯಬಹುದಿತ್ತು.
ಮೊದಲು ‘ಇತರೆ’ ಕಾಲಂನಲ್ಲಿ ಲಿಂಗಾಯತ ಅಂತಾ ಬರೆಯಲಾಗಿತ್ತು. ಈಗ ಕೌಟುಂಬಿಕ ನಮೂನೆಯಲ್ಲಿ ‘ಇತರೆ’ ಕಾಲಂ ಹೊಡೆದು ಹಾಕಿದ್ದಾರೆ. ಭಾರತ ಸರ್ಕಾರದ ಕ್ರಮವನ್ನು ನಾವು ಖಂಡಿಸುತ್ತೇವೆ. ಶೀಘ್ರ ಉಚ್ಚನ್ಯಾಯಾಲಯದಲ್ಲಿ ರಿಟ್ ಪೆಟಿಷನ್ ಹಾಕುತ್ತೇವೆ. ಭಾರತದ ಸಂವಿಧಾನದ 25ನೇ ಪರಿಚ್ಛೇದದ ಉಲ್ಲಂಘನೆ ಆಗಿದೆ. ರಾಜ್ಯ ಸರ್ಕಾರ ಈಗ ನೀಡುತ್ತಿರುವ ವೀರಶೈವ ಲಿಂಗಾಯತ ಎಂಬ ಜಾತಿ ಪ್ರಮಾಣ ಪತ್ರ ಸಿಂಧುತ್ವ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದೇವೆ. ಸಾರ್ವಜನಿಕ ಹಿತಾಸಕ್ತಿಗೆ ಮೀಸಲಾಗಿರುವ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆಯುತ್ತಿದೆ. ಇದರಲ್ಲಿ ನಮಗೆ ನೂರಕ್ಕೆ ನೂರರಷ್ಟು ಜಯ ಸಿಗುವ ವಿಶ್ವಾಸ ಇದೆ ಎಂದರು.
ಇದನ್ನೂ ಓದಿ: ಲೋಕಸಭೆ ಚುನಾವಣೆವರೆಗೆ ಗುದ್ದಾಡಿ ಗ್ಯಾರಂಟಿ ಯೋಜನೆಗಳನ್ನು ಕೊಡುತ್ತಾರೆ: ರಮೇಶ್ ಜಾರಕಿಹೊಳಿ
ಲಿಂಗಾಯತ ಧರ್ಮ ಮಾನ್ಯತೆ ಬಗ್ಗೆ ರಾಜ್ಯಮಟ್ಟದಲ್ಲಿ ನಾಲ್ಕು ವರ್ಷಗಳಿಂದ ನಡೆಯುತ್ತಿದೆ. ಲಿಂಗಾಯತ ಧರ್ಮ ಮಾನ್ಯತೆ ಬಗ್ಗೆ ಸಂಬಂಧಿಸಿದ ಪತ್ರ ವ್ಯವಹಾರ ನೆನೆಗುದಿಗೆ ಬಿದ್ದಿದೆ. ಅದನ್ನ ಶೀಘ್ರಗೊಳಿಸಲು ಸೂಕ್ತ ಕಾಲದಲ್ಲಿ ಲಿಂಗಾಯತ ಸಂಘಟನೆಗಳ ಜೊತೆಗೂಡಿ ಸರ್ಕಾರಕ್ಕೆ ಮನವಿ ಮಾಡಿದರು.
ಪಂಚಪೀಠಗಳ ಪಂಚಾಚಾರ್ಯರು ಕರೆದ ಸಭೆಗೆ ವಿರಕ್ತ ಮಠಾಧೀಶರು ತೆರಳದಂತೆ ಆಗ್ರಹ
ಜೂನ್ 15ರಂದು ಹುಬ್ಬಳ್ಳಿ ಮೂರುಸಾವಿರ ಮಠದಲ್ಲಿ ಪಂಚಪೀಠಗಳ ಪಂಚಾಚಾರ್ಯರು ಕರೆದ ಸಭೆಗೆ ವಿರಕ್ತ ಮಠಾಧೀಶರು ತೆರಳದಂತೆ ಡಾ.ಶಿವಾನಂದ ಜಾಮದಾರ ಆಗ್ರಹಿಸಿದರು. ಪಂಚಾಚಾರ್ಯರು ಹಿಂದೂ ಧರ್ಮದ ಭಾಗ ಎಂದು ಸ್ವತಂತ್ರ ಧರ್ಮ ಹೋರಾಟ ವಿರೋಧಿಸಿದರು. ಬೇಡ ಜಂಗಮರಿಗೆ ಎಸ್‌ಸಿ ಮೀಸಲಾತಿಗಾಗಿ 2002ರಲ್ಲಿ ಪ್ರಧಾನಿ ಆಗಿದ್ದ ದಿ.ಅಟಲ್ ಬಿಹಾರಿ ವಾಜಪೇಯಿರಿಗೆ ಪತ್ರ ಬರೆದಿದ್ದರು.
ಐದು ಪೀಠಗಳ ಪಂಚಾಚಾರ್ಯರು ಸಹಿ ಮಾಡಿ ಪತ್ರ ನೀಡಿದ್ದರು ಅದರ ಪ್ರತಿ ಇದೆ. ಈಗ ಬೇಡ ಜಂಗಮ ಹೋರಾಟ ಕೈ ಬಿಟ್ಟು ಒಬಿಸಿ ಹೋರಾಟ ಅಂತಿದ್ದಾರೆ. ಎಲ್ಲಾ ಲಿಂಗಾಯತ ಪಂಗಡಗಳಿಗೂ ಒಬಿಸಿ ಮೀಸಲಾತಿ ಹೋರಾಟಕ್ಕೆ ಈಗ ಚಾಲನೆ ನೀಡಿದ್ದಾರೆ ಎಂದರು.
ಒಬಿಸಿ ಹೋರಾಟಕ್ಕೂ ಸ್ವತಂತ್ರ ಧರ್ಮ ಹೋರಾಟಕ್ಕೂ ಯಾವುದೇ ವೈರುದ್ಧ ಇಲ್ಲ
ಲಿಂಗಾಯತ ಸಮುದಾಯದಲ್ಲಿ ವಿರಕ್ತ ಮತ್ತು ವೀರಶೈವ ಎಂದು ಎರಡು ಮಠಗಳಿವೆ. ವಿರಕ್ತ ಮಠಗಳು ಬಸವ ತತ್ವ ಪರಿಪಾಲಿಸುವವರು. ವೀರಶೈವ ಮಠಗಳು ಪಂಚಾಚಾರ್ಯರು, ಹಿಂದೂ ಧರ್ಮ ಪರಿಪಾಲಿಸುವರು. ಅವರ ಮಠಾಧೀಶರ ಕರೆಯಲ್ಲಿ ಆದ್ರೆ ವಿರಕ್ತ ಮಠಗಳ ಮಠಾಧೀಶರ ಕರೆದಿದ್ದಾರೆ. ಅವರು ನಮಗೆ ಫೋನ್ ಮಾಡಿ ಕೇಳುತ್ತಿದ್ದು, ವಿರಕ್ತ ಮಠಗಳ ಮಠಾಧೀಶರು ಗೊಂದಲದಲ್ಲಿ ಇದ್ದಾರೆ.
ಮಠಾಧೀಶರು ಜಾತಿ ಅಭಿಮಾನದಿಂದ ಅಲ್ಲಿ ಹೋದ್ರೆ ಇಲ್ಲಿ ಕಷ್ಟವಾಗುತ್ತೆ. ಇಲ್ಲಿ ಇದ್ರೆ ಅಲ್ಲಿ ಕಷ್ಟ ಆಗುತ್ತೆ ಎಂಬ ದ್ವಂದ್ವದಲ್ಲಿ ವಿರಕ್ತ ಮಠಗಳು ಇವೆ. ಒಬಿಸಿ ಹೋರಾಟಕ್ಕೂ ಸ್ವತಂತ್ರ ಧರ್ಮ ಹೋರಾಟಕ್ಕೂ ಯಾವುದೇ ವೈರುದ್ಧ ಇಲ್ಲ. ಎಲ್ಲಾ ಲಿಂಗಾಯತ ಹೋರಾಟ ಮಾಡುವ ಪಂಚಾಚಾರ್ಯರು ಇವತ್ತು ಜಿಗಿದು ಇಲ್ಲೇಕೆ ಬಂದಿದ್ದಾರೆ? ಇಲ್ಲಿಯವರೆಗೆ ಅವರು ಏನ್ ಮಾಡುತ್ತಿದ್ದರು. ಅವರಿಗೆ ವಿರುದ್ಧವಾದ ವಿರಕ್ತ ಮಠಗಳನ್ನು ಈಗ ಏಕೆ ಕರೆಸಿದ್ದಾರೆ ಎಂದು ಪ್ರಶ್ನಿಸಿದರು.
ನಾವು ಒಬಿಸಿ ಹೋರಾಟಕ್ಕೆ ವಿರೋಧ ಮಾಡಲ್ಲ
ಬಸವಣ್ಣನವರನ್ನು ಇವತ್ತಿಗೂ ಅವರು ಒಪ್ಪಿಕೊಂಡಿಲ್ಲ, ಒಪ್ಪಿಕೊಂಡ ಬಗ್ಗೆ ಸಾರ್ವಜನಿಕವಾಗಿ ಹೇಳಲಿ ಖುಷಿ ಪಡುತ್ತೇವೆ. ಈಗ ವಿರಕ್ತ ಮಠಗಳನ್ನು ಕರೆಯುವ ಉದ್ದೇಶ ಏನು? ಪಂಚಾಚಾರ್ಯರ ಜೊತೆ ಕೈ ಜೋಡಿಸುವ ವಿರಕ್ತಮಠಗಳ ಮಠಾಧೀಶರು ಲಿಂಗಾಯತರ ವಿರೋಧ ಕಟ್ಟಿಕೊಳ್ಳಬೇಕಾಗುತ್ತೆ.
ನಾವು ಒಬಿಸಿ ಹೋರಾಟಕ್ಕೆ ವಿರೋಧ ಮಾಡಲ್ಲ. ದಾರಿ ತಪ್ಪಿಸಲು ಈ ರೀತಿ ಮಾಡುತ್ತಿದ್ದಾರೆ. ಅವರಿಗೆ ಸಹಾಯ ಮಾಡುವ ಪಕ್ಷ ಈಗ ಅಧಿಕಾರದಲ್ಲಿ ಇಲ್ಲ. ರಾಜ್ಯ ಬಿಟ್ಟು ಕೇಂದ್ರಕ್ಕೆ ಹೊರಟಿದ್ದಾರೆ. ಓಬಿಸಿ ಬೇಡಿಕೆ ಪರವಾಗಿದ್ದೇವೆ, ಪಂಚಾಚಾರ್ಯರು ಬಂದು ದಾರಿ ತಪ್ಪಿಸೋದಕ್ಕೆ ವಿರೋಧ ಇದೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




