ನವದೆಹಲಿ, ಮಾರ್ಚ್ 7: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ (Lok Sabha Elections 2024) 400ರ ಗುರಿಯತ್ತ ಬಾಣ ಬಿಟ್ಟಿರುವ ಬಿಜೆಪಿ (BJP), ಈಗಾಗಲೇ 195 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಬುಧವಾರ ಸಂಜೆಯಿಂದ ತಡರಾತ್ರಿವರೆಗೂ ಎರಡನೇ ಪಟ್ಟಿಗೆ ಸುದೀರ್ಘ ಮೀಟಿಂಗ್ ನಡೆಸಿದೆ. ಇದೇ ಮೀಟಿಂಗ್‌ನಲ್ಲಿ ಕರ್ನಾಟಕದ (Karnataka Candidates) 28 ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಹೆಸರು ಫೈನಲ್ ಮಾಡೋ ಕುರಿತು ಚರ್ಚೆ ಆಗಿದೆ.
ಈ ಬಾರಿ ಲೋಕಸಭೆ ಚುನಾವಣೆಯಲ್ಲಿ 400ಕ್ಕೂ ಅಧಿಕ ಸೀಟ್ ಗುರಿಹೊಂದಿರುವ ಬಿಜೆಪಿ, ಅದನ್ನ ಸಾಧಿಸಲು ಸದ್ಯ ದಕ್ಷಿಣ ರಾಜ್ಯಗಳ ಮೇಲೆ ಕಣ್ಣಿಟ್ಟಿದೆ. ಅದ್ರಲ್ಲೂ ಕರ್ನಾಟಕದಲ್ಲಿ 25 ಬಿಜೆಪಿ ಸಂಸದರಿದ್ದು ಅದನ್ನ ಹಾಗೇ ಉಳಿಸಿಕೊಳ್ಳೋಕೆ, ಅಥವಾ ಅದಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲು ಬಿಜೆಪಿ ಪ್ಲ್ಯಾನ್ ರೂಪಿಸಿದೆ. ಹೀಗಾಗಿ, ರಾಜ್ಯದ ಪ್ರಮುಖ ನಾಯಕರನ್ನ ದೆಹಲಿಗೆ ಕರೆಸಿಕೊಂಡು ಬುಧವಾರ ಮ್ಯಾರಾಥಾನ್ ಸಭೆ ನಡೆಸಿದೆ. ಸಭೆಯಲ್ಲಿ ರಾಜ್ಯ ನಾಯಕರಾದ ಯಡಿಯೂರಪ್ಪ, ಬಿ.ಎಲ್ ಸಂತೋಷ್, ಬಿ.ವೈ ವಿಜಯೇಂದ್ರ, ಆರ್.ಅಶೋಕ್, ಬಸವರಾಜ್ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಸೇರಿ ಅನೇಕ ನಾಯಕರು ಭಾಗಿಯಾಗಿದ್ದಾರೆ.
ದೆಹಲಿಯಲ್ಲಿ ನಡೆದ ಸಭೆಯಲ್ಲಿ ಕೆಲ ಕ್ಷೇತ್ರಗಳ ಅಭ್ಯರ್ಥಿಗಳನ್ನ ಬದಲಾಯಿಸುವ ಬಗ್ಗೆ ಚರ್ಚೆ ನಡೆದಿದೆ. ಈ ಮೊದಲು 11 ಕ್ಷೇತ್ರದಲ್ಲಿ ಬದಲಾವಣೆ ಮಾಡ್ತಾರೆ ಎನ್ನಲಾಗಿತ್ತು. ಆದರೆ, 5 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನ ಬದಲಿಸುವ ಬಗ್ಗೆ ನಿನ್ನೆ ಚರ್ಚೆ ನಡೆದಿದೆ. ಬೀದರ್ ಸಂಸದ ಭಗವಂತ ಖೂಬಾ, ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್, ವಿಜಯಪುರ ಸಂಸದ ರಮೇಶ್ ಜಿಗಜಿಣಗಿ, ಬೆಳಗಾವಿ ಸಂಸದೆ ಮಂಗಳಾ ಅಂಗಡಿ, ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿವಿಎಸ್ಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ ಎನ್ನಲಾಗಿದೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ಬಗ್ಗೆ ಗೊಂದಲ ಮುಂದುವರಿದಿದ್ದು, ಸಭೆಯಲ್ಲಿ ಡಾ.ಮಂಜುನಾಥ್ ಮತ್ತು ಸಿ.ಪಿ.ಯೋಗೇಶ್ವರ್ ಹೆಸರು ಪ್ರಸ್ತಾಪವಾಗಿದೆ. ಅಲ್ದೆ ಜೆಡಿಎಸ್ ಜೊತೆ ಮೈತ್ರಿಯಾಗಿರೋದ್ರಿಂದ ಜೆಡಿಎಸ್ ನಾಯಕರ ಅಭಿಪ್ರಾಯ ಪಡೆದು ನಿರ್ಧರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಭೆಯಲ್ಲಿ ಕೆಲ ಲೋಕಸಭಾ ಕ್ಷೇತ್ರಗಳ ವಿಚಾರವಾಗಿ ಇನ್ನೂ ಗೊಂದಲ ಬಗೆ ಹರಿದಿಲ್ಲ. ಅದಕ್ಕೆ ಕಾರಣ ಟಿಕೆಟ್ಗಾಗಿ ನಡೀತಿರೋ ಫೈಟ್. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಜೆ.ಸಿ.ಮಾಧುಸ್ವಾಮಿ, ವಿ.ಸೋಮಣ್ಣ, ಚಿದಾನಂದ್ ಮಧ್ಯೆ ಫೈಟ್ ಇದೆ. ಇನ್ನು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಡಿ.ವಿ.ಸದಾನಂದಗೌಡ, ಮುನಿರಾಜುಗೌಡ, ಸಪ್ತಗಿರಿ ಗೌಡ ನಡುವೆ ಫೈಟ್ ಏರ್ಪಟ್ಟಿದೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕೆ.ಸುಧಾಕರ್, ಅಲೋಕ್ ನಡುವೆ ಫೈಟ್ ನಡೀತಿದೆ. ಹಾಗೇನೆ ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ರಾಜಾ ಅಮರೇಶ್ ನಾಯಕ್, ಬಿ.ವಿ.ನಾಯಕ್ ನಡುವೆ ಟಿಕೆಟ್ಗಾಗಿ ಪೈಪೋಟಿ ಏಪಟ್ಟಿದೆ.
ಎಲ್ಲಾ ಆ್ಯಂಗಲ್ನಲ್ಲೂ ಟಿಕೆಟ್ ಹಂಚಿಕೆ ಕುರಿತು ಚರ್ಚೆ ನಡೆದಿದ್ದು, ಅದ್ರಲ್ಲಿ ಇಬ್ಬರು ಮಾಜಿ ಸಿಎಂಗಳಿಗೆ ಟಿಕೆಟ್ ನೀಡುವ ಕುರಿತು ಸಹ ಪ್ರಸ್ತಾಪವಾಗಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಜಗದೀಶ್ ಶೆಟ್ಟರ್ ಹೆಸರು ಪ್ರಸ್ತಾಪವಾಗಿದ್ದರೆ, ಹಾವೇರಿ ಲೋಕಸಭಾ ಕ್ಷೇತ್ರದಿಂದ ಬಸವರಾಜ ಬೊಮ್ಮಾಯಿ ಹೆಸರು ಪ್ರಸ್ತಾಪವಾಗಿದೆ ಎಂಬ ಮಾಹಿತಿ ಸಿಕ್ಕಿದೆ.
ಇದಲ್ಲದೇ, ಕೆಲ ಹಾಲಿ ಸಂಸದರಿಗೆ ಟಿಕೆಟ್ ನೀಡಲು ಪಕ್ಷದಲ್ಲೇ ವಿರೋಧವಿದೆ. ಕ್ಷೇತ್ರಗಳಲ್ಲಿ ಸ್ಥಳೀಯ ಶಾಸಕರು, ಕಾರ್ಯಕರ್ತರು ಟಿಕೆಟ್ ನೀಡೋದಕ್ಕೆ ವಿರೋಧ ವ್ಯಕ್ತಪಡಿಸ್ತಿದ್ದಾರೆ. ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ, ಬಾಗಲಕೋಟೆ ಸಂಸದ ಪಿ.ಸಿ ಗದ್ದಿಗೌಡರ್, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ಕೊಪ್ಪಳ ಸಂಸದ ಕರಡಿ ಸಂಗಣ್ಣ, ದಾವಣಗೆರೆ ಸಂಸದ ಜಿ.ಎಂ ಸಿದ್ದೇಶ್ವರ್, ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿಗೂ ಸ್ಥಳೀಯರ ವಿರೋಧವಿದೆ. ಇಲ್ಲಿ ಏನು ಮಾಡಬೇಕು ಅನ್ನೋ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಲೋಕಸಭೆ ಚುನಾವಣೆ: ಬಿಜೆಪಿ ಎರಡನೇ ಪಟ್ಟಿಯಲ್ಲಿ ಕರ್ನಾಟಕದ ಯಾರಿಗೆಲ್ಲ ಟಿಕೆಟ್? ಸಂಭಾವ್ಯ ಅಭ್ಯರ್ಥಿಗಳ ವಿವರ ಇಲ್ಲಿದೆ
ಈ ಮಧ್ಯೆ ಬಿಜೆಪಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರೋದ್ರಿಂದ ಹಾಸನ, ಕೋಲಾರ ದಳ ಪಡೆಯ ಪಾಲಾಗೋ ಸಾಧ್ಯತೆ ಇದೆ. ಮಂಡ್ಯ ಕ್ಷೇತ್ರಕ್ಕಾಗಿ ಜೆಡಿಎಸ್ ಪಟ್ಟು ಹಿಡಿದಿದೆ. ಆದ್ರೆ ಮಂಡ್ಯದಲ್ಲಿ ಸಕ್ರಿಯರಾಗಿರುವ ಸಂಸದೆ ಸುಮಲತಾ, ಬಿಜೆಪಿ ಟಿಕೆಟ್ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಹೈಕಮಾಂಡ್ ನಾಯಕರ ಜೊತೆ ಬುಧವಾರ ರಾಜ್ಯನಾಯಕರು ಸಭೆ ನಡೆಸಿದ್ದಾರೆ. ಶುಕ್ರವಾರ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಸೋ ಸಾಧ್ಯತೆ ಇದೆ. ಅಂದು ಎಲ್ಲವೂ ಅಂತಿಮಗೊಳ್ಳುವ ನಿರೀಕ್ಷೆ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ