ಬೆಂಗಳೂರು, ಸೆ.22: ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ (BJP JDS Alliance) ಮಾಡಿಕೊಳ್ಳುವ ನಿರ್ಧಾರ ಮಾಡಿದ್ದು, ಎನ್‌ಡಿಎ (NDA) ಕುಟುಂಬಕ್ಕೆ ಜೆಡಿಎಸ್ಗೆ ಹೃತ್ಪೂರ್ವಕ ಸ್ವಾಗತ ಎಂದು ಕೇಂದ್ರ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ. ಹಾಗಾದರೆ, ರಾಜ್ಯದ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ನಾಯಕರು ಏನಂದ್ರು? ಇಲ್ಲಿದೆ ಮಾಹಿತಿ.
ಜೆಡಿಎಸ್ ಪಕ್ಷ ಎನ್‌ಡಿಎ ಒಕ್ಕೂಟ ಸೇರ್ಪಡೆಯಾಗಿದ್ದು ಸ್ವಾಗತಾರ್ಹ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಮಾಧ್ಯಮ ಪ್ರಕಟಣೆ ಹೊರಡಿಸಿದ ಅವರು, ಮೈತ್ರಿಯಿಂದ ರಾಜ್ಯದಲ್ಲಿ ಗರಿಷ್ಠ ಸ್ಥಾನಗಳಲ್ಲಿ ಗೆಲ್ಲಬಹುದು. ಮೋದಿ ಮತ್ತೊಮ್ಮೆ ಪ್ರಧಾನಿ ಆಗುವುದು ನಿಶ್ಚಿತ ಎಂಬುದರ ಸಂಕೇತವಿದು ಎಂದರು.
ಮಾಧ್ಯಮ ಪ್ರಕಟಣೆ ಹೊರಡಿಸಿದ ಬಿಜೆಪಿ ಶಾಸಕ ಆರ್. ಅಶೋಕ, ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ಮುಂದಾಳತ್ವ ಹಾಗೂ ಅಭಿವೃದ್ಧಿ ಆಧಾರಿತ ರಾಜಕಾರಣ ಒಪ್ಪಿ ಎನ್ ಡಿಎ ಮೈತ್ರಿಕೂಟದ ಭಾಗವಾಗಲಿರುವ ಜೆಡಿಎಸ್ ಪಕ್ಷಕ್ಕೆ ಹೃದಯಪೂರ್ವಕ ಸ್ವಾಗತ ಹಾಗೂ ಅಭಿನಂದನೆಗಳು. ಇದರಿಂದ ಎನ್‌ಡಿಎ ಮೈತ್ರಿಕೂಟದ ಶಕ್ತಿ ಇನ್ನಷ್ಟು ಹೆಚ್ಚಾಗಿದೆ. ಪ್ರಧಾನಿಯವರ ನವ ಭಾರತದ ಕನಸು ಸಾಕಾರವಾಗಲು ಶಕ್ತಿ ತುಂಬಲಿದೆ ಎಂದರು.
ಇದನ್ನೂ ಓದಿ: BJP JDS Alliance: ಬಿಜೆಪಿ ಜೆಡಿಎಸ್ ಮೈತ್ರಿ ಅಂತಿಮ; ಮಾತುಕತೆಯ ನಂತರ ಹೆಚ್ಡಿಕೆ ಹೇಳಿದ್ದಿಷ್ಟು
ಬೆಂಗಳೂರಿನಲ್ಲಿ ಮಾತನಾಡಿದ ಶಾಸಕ ಡಾ. ಸಿ. ಎನ್. ಅಶ್ವಥ್ ನಾರಾಯಣ್, ಎನ್‌ಡಿಎ ಒಕ್ಕೂಟಕ್ಕೆ ಜೆಡಿಎಸ್ ಕೈ ಜೋಡಿಸಿರುವುದು ಸಂತೋಷದ ವಿಷಯ. ಹೃದಯ ಪೂರ್ವಕವಾಗಿ ಜೆಡಿಎಸ್ ಪಕ್ಷವನ್ನು ಸ್ವಾಗತ ಮಾಡುತ್ತೇವೆ. ರಾಜ್ಯದಲ್ಲಿ ಬಿಜೆಪಿಗೂ ದೊಡ್ಡ ಶಕ್ತಿ ಬಂತು ಎಂದರು.
28ಕ್ಕೆ 28 ಲೋಕಸಭಾ ಕ್ಷೇತ್ರ ಗೆಲ್ಲುವ ಸಂಪೂರ್ಣ ವಿಶ್ವಾಸ ಇದೆ. ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಆಗಲು ಜೆಡಿಎಸ್ ಬೆಂಬಲ ಕೊಟ್ಟಿದೆ. ವಿರೋಧ ಇದ್ದೇ ಇರುತ್ತದೆ, ಕ್ಷೇತ್ರದಲ್ಲಿ ಸಣ್ಣಪುಟ್ಟ ವ್ಯತ್ಯಾಸ ಗಳು ಇದ್ದೇ ಇರುತ್ತವೆ. ಆದರೆ ಒಂದು ಕುಟುಂಬಕ್ಕೆ ಸೇರಿದಾಗ ಎರಡು ಪಕ್ಷಕ್ಕೂ ಬಲವನ್ನು ಹೆಚ್ಚಿಸಿದೆ ಎಂದರು.
ಏನೇ ವ್ಯತ್ಯಾಸ ಇದ್ದರೂ ಅದನ್ನೆಲ್ಲಾ ಮರೆತು ಒಗ್ಗಟ್ಟಾಗುತ್ತೇವೆ. ಹೋರಾಟದ ಜೊತೆಗೆ ಎಲ್ಲದರಲ್ಲೂ ಕುಮಾರಸ್ವಾಮಿ ಜೊತೆ ಒಂದಾಗಿ ಪ್ರತಿಪಕ್ಷವಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೇವೆ. ಇದುವರೆಗೂ ನಮ್ಮ ಜೊತೆ ಜೆಡಿಎಸ್ ಅಧಿಕೃತವಾಗಿ ಕೈ ಜೋಡಿಸಿರಲಿಲ್ಲ. ಈಗ ಜೆಡಿಎಸ್ ನಮ್ಮ ಜೊತೆ ಇದೆ. ಕ್ಷೇತ್ರಗಳ ಮಟ್ಟದಲ್ಲಿ ಸಣ್ಣ ಪುಟ್ಟ ವೈಮನಸ್ಸು ಇರುತ್ತವೆ. ವರಿಷ್ಠರು ನಿರ್ಧಾರ ತೆಗೆದುಕೊಂಡಾಗ ಎಲ್ಲರೂ ಗೌರವಿಸಬೇಕು ಎಂದರು.
ಮಾಜಿ ಶಾಸಕ ಸಂಜಯ್ ಪಾಟೀಲ್ ಮಾತನಾಡಿ, ನರೇಂದ್ರ ಮೋದಿ ಕೆಲಸ ಮೆಚ್ಚಿ ಜೊತೆ ಕೈಜೋಡಿಸಲು ಮುಂದಾಗಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ನಮ್ಮ ಒಕ್ಕೂಟ ಬೆಂಬಲಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಶಕ್ತಿ ಇಲ್ಲ. ಆದರೆ ಹಳೆ ಮೈಸೂರು ಭಾಗದಲ್ಲಿ ಒಂದಾಗಿರುವುದು ಅನುಕೂಲ ಆಗಲಿದೆ ಎಂದರು.
ಮೈತ್ರಿಯಿಂದ ಜೆಡಿಎಸ್ಗೂ ಅನುಕೂಲವಿಲ್ಲ, ಬಿಜೆಪಿಗೂ ಅನುಕೂಲವಿಲ್ಲ ಎಂದು ವಿಧಾನಸೌಧದಲ್ಲಿ ಪರಿಷತ್ನ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಹೇಳಿದ್ದಾರೆ. ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಪ್ರಧಾನಮಂತ್ರಿಯಾಗಿದ್ದವರು. ಕೋಮುವಾದಿ ಪಕ್ಷ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದು ದುರಂತ. ಸ್ವಾರ್ಥಕ್ಕಾಗಿ ಮೈತ್ರಿ ಮಾಡಿಕೊಂಡಿದ್ದಾರೆ, ಏನೂ ಬದಲಾವಣೆ ಆಗುವುದಿಲ್ಲ. ಬಿಜೆಪಿ, ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗಲಿದೆ ಅಷ್ಟೇ ಎಂದರು.
ಇದನ್ನೂ ಓದಿ: ಎನ್‌ಡಿಎ ಕುಟುಂಬಕ್ಕೆ ಜೆಡಿಎಸ್ಗೆ ಹೃತ್ಪೂರ್ವಕ ಸ್ವಾಗತ ಎಂದ ಅಮಿತ್ ಶಾ, ಜೆಪಿ ನಡ್ಡಾ
ಇಷ್ಟು ವರ್ಷ ಜೆಡಿಎಸ್ನವರು ಮಾಡಿದ ರಾಜಕೀಯ ಸೇವೆ ನಶಿಸಿಹೋಗುತ್ತದೆ. ಯಾವುದೂ ಶಾಶ್ವತವಲ್ಲ, ಯಡಿಯೂರಪ್ಪ ಕಾಲದಲ್ಲಿ ಆದ ಮೈತ್ರಿ ಏನಾಯ್ತು? ಬಿಜೆಪಿಯವರಿಗೆ ವಿರೋಧ ಪಕ್ಷದ ನಾಯಕರನ್ನೇ ಆಯ್ಕೆ ಮಾಡಲು ಆಗಿಲ್ಲ. ಮೋದಿ, ಬಿಜೆಪಿ ವರಿಷ್ಠರು ರಾಜ್ಯ ಬಿಜೆಪಿ ನಾಯಕರಿಗೆ ಮರ್ಯಾದೆ ಕೊಡುತ್ತಿಲ್ಲ. ಇದಕ್ಕೆ ಏನು ಹೇಳುವುದು ಎಂದು ಪ್ರಶ್ನಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ, ಜನತಾದಳ, ಬಿಜೆಪಿ ಮೈತ್ರಿ ಕಾಂಗ್ರೆಸ್ಗೆ ಯಾವುದೇ ತೊಂದರೆ ಆಗುವಿಲ್ಲ. 20ಕ್ಕೂ ಹೆಚ್ಚು ಸೀಟ್ ಗೆಲ್ಲುವ ವಿಶ್ವಾಸ ಇದೆ, ವಿಧಾನಸಭೆಯಂತೆ ಲೋಕಸಭೆಯಲ್ಲೂ ಗೆಲ್ಲಲಿದ್ದೇವೆ. ನಮ್ಮ ಜೊತೆಯೂ ಈ ಹಿಂದೆ ದಳದವರು ಮೈತ್ರಿ ಮಾಡಿಕೊಂಡಿದ್ದರು. ಆಗ ಜೆಡಿಎಸ್ ಜೊತೆಗಿನ ಮೈತ್ರಿಯನ್ನ ನಮ್ಮವರು ಒಪ್ಪಿಕೊಂಡಿಲ್ಲ. ಅದರಿಂದ ಕಾಂಗ್ರೆಸ್ಗೆ ಏನೂ ನಷ್ಟ ಆಗಲ್ಲ ಎಂದರು.
ಜನತಾ ಪರಿವಾರ ಹುಟ್ಟಿದ ನಂತರ ಯಾವತ್ತೂ ಇಂತ ತೀರ್ಮಾನ ತೆಗೆದುಕೊಂಡಿರಲಿಲ್ಲ. ಈಗ ಬಿಜೆಪಿ ಜೊತೆ ಹೋಗಿದೆ ಅಂದ್ರೆ ಅದರಲ್ಲೇ ಅರ್ಥ ಆಗುತ್ತದೆ. ಅವರಿಗೆ ಇವರ ಅವಶ್ಯಕತೆ ಇತ್ತು, ಇವರಿಗೆ ಅವರ ಅವಶ್ಯಕತೆ ಇತ್ತು. ಜೆಡಿಎಸ್ ಜಾತ್ಯತೀತ ಎಂಬುದನ್ನು ತೆಗೆದುಹಾಕಲಿ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಎನ್‌ಡಿಎ ಒಕ್ಕೂಟಕ್ಕೆ ಜೆಡಿಎಸ್ ಸೇರಿಕೊಳ್ಳುತ್ತಿರುವುದು ಮೋದಿಗೆ ಮತ್ತಷ್ಟು ಬಲ ತುಂಬಲಿದೆ ಎಂದು ಬೆಂಗಳೂರಿನಲ್ಲಿ ಮಾಜಿ ಶಾಸಕ ಪಿ. ರಾಜೀವ್ ಹೇಳಿದ್ದಾರೆ. ಈ ಮೈತ್ರಿಯೊಂದಿಗೆ ಜತೆ ನಾವು ಎಲ್ಲಾ 28 ಕ್ಷೇತ್ರಗಳನ್ನೂ ಗೆಲ್ಲುತ್ತೇವೆ. ಕರ್ನಾಟಕದ ಮುಂದಿನ ರಾಜಕೀಯಕ್ಕೆ ಇದು ಹೊಸ ನಾಂದಿ ಹಾಕಲಿದೆ. ಎನ್‌ಡಿಎ ಮೈತ್ರಿ ಕೂಟಕ್ಕೆ ಹೊಸ ಆತ್ಮವಿಶ್ವಾಸ ಬಂದಿದೆ. ಎಲ್ಲರೂ ಒಗ್ಗೂಡಿ ಚುನಾವಣೆ ಎದುರಿಸಿ ದೇಶದ ಹಿತ ಕಾಪಾಡುತ್ತೇವೆ ಎಂದರು.
ವಿಧಾನಪರಿಷತ್ ಬಿಜೆಪಿ ಸದಸ್ಯ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಹೈಕಮಾಂಡ್ ತೀರ್ಮಾನವೇ ನಮ್ಮ ತೀರ್ಮಾನ. ದೇವೇಗೌಡರು ಹಾಗೂ ಕುಮಾರಸ್ವಾಮಿ ಬೆಂಬಲ ನೀಡಿದ್ದಾರೆ. ನಮಗೆ ರಾಜಕೀಯಕ್ಕಿಂತ ದೇಶ ಮುಖ್ಯ. ಮೋದಿ ಜೊತೆ ಕೈ ಜೋಡಿಸುವುದಾಗಿ ಅವರು ಮುಂದೆ ಬಂದಿದ್ದಾರೆ. ದೇಶ ನಮಗೆ ಮುಖ್ಯವೇ ಹೊರತು, ಬೇರೇನು ಅಲ್ಲ ಎಂದರು.
ಜೆಡಿಎಸ್ ಜೊತೆಗೆ ಮೈತ್ರಿ ಅವಶ್ಯಕತೆ ಇತ್ತು ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ ಹೇಳಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಉತ್ತಮ ಫಲಿತಾಂಶ ಸಿಕ್ಕಿಲ್ಲ. ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಕ್ಷೇತ್ರ ಗೆಲ್ಲಬೇಕಾಗಿದೆ, ಹೀಗಾಗಿ ನಮ್ಮ ರಾಷ್ಟ್ರೀಯ ಅಧ್ಯಕ್ಷರು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ