BJP JDS Alliance: ಬಿಜೆಪಿ ಜೆಡಿಎಸ್ ಮೈತ್ರಿ ಅಂತಿಮ; ಮಾತುಕತೆಯ ನಂತರ ಹೆಚ್ಡಿಕೆ ಹೇಳಿದ್ದಿಷ್ಟು
BJP JDS Alliance in Karnataka; ಬಿಜೆಪಿ, ಜೆಡಿಎಸ್ ಮೈತ್ರಿ ಸಂಬಂಧ ಅಂತಿಮ ಮಾತುಕತೆ ವೇಳೆ ಹೆಚ್ಡಿ ಕುಮಾರಸ್ವಾಮಿ 6 ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದಾರೆ. 6 ಕ್ಷೇತ್ರಗಳಲ್ಲಿ ಪಕ್ಷಗಳ ಬಲಾಬಲ, ಮತ ವಿವರ ಕಲೆ ಹಾಕಿ, ಬಿಜೆಪಿಗಿಂತ ಹೆಚ್ಚು ಮತಗಳು ಇರುವ ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ನವದೆಹಲಿ, ಸೆಪ್ಟೆಂಬರ್ 22: ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕದಲ್ಲಿ ಮೈತ್ರಿ ಮಾಡಿಕೊಳ್ಳುವ ವಿಚಾರವಾಗಿ ಜೆಡಿಎಸ್ (JDS) ನಾಯಕ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಧ್ಯೆ ಮಾತುಕತೆ ನಡೆಯಿತು. ದೆಹಲಿಯ ಕೃಷ್ಣ ಮೆನನ್ ಮಾರ್ಗ್ನಲ್ಲಿರುವ ಅಮಿತ್ ಶಾ (Amit Shah) ನಿವಾಸದಲ್ಲಿ ಮಾತುಕತೆ ನಡೆದಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸಹ ಉಪಸ್ಥಿತರಿದ್ದರು. ಇಷ್ಟೇ ಅಲ್ಲದೆ, ಗೋವಾ ಸಿಎಂ ಪ್ರಮೋದ್ ಸಾವಂತ್, ಕುಪೇಂದ್ರ ರೆಡ್ಡಿ, ನಿಖಿಲ್ ಕುಮಾರಸ್ವಾಮಿ ಸಹ ಹಾಜರಿದ್ದರು. ಮಾತುಕತೆಯ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಹೆಚ್ಡಿ ಕುಮಾರಸ್ವಾಮಿ, ಮೈತ್ರಿ ವಿಚಾರವಾಗಿ ಅಧಿಕೃತವಾಗಿ ಕೆಲವು ವಿಚಾರಗಳನ್ನು ಚರ್ಚೆ ನಡೆಸಿದ್ದೇವೆ ಎಂದು ಹೇಳಿದರು.
ಗೊಂದಲವಿಲ್ಲದೆ ಮೈತ್ರಿ; ಕುಮಾರಸ್ವಾಮಿ
ಮೈತ್ರಿ ಬಗ್ಗೆ ಎಲ್ಲಾ ರೀತಿಯಲ್ಲೂ ಸುಗಮವಾಗಿ ಚರ್ಚೆ ನಡೆಯುತ್ತಿದೆ. ಎಷ್ಟು ಸೀಟ್ ನಮಗೆ ಕೊಡುತ್ತಾರೆಂಬುದು ಮುಖ್ಯವಲ್ಲ. ರಾಜ್ಯದ 28 ಕ್ಷೇತ್ರಗಳಲ್ಲೂ ಬಿಜೆಪಿ, ಜೆಡಿಎಸ್ ಪಕ್ಷಗಳು ಗೆಲ್ಲುವುದೇ ನಮ್ಮ ಗುರಿ. ಬಿಜೆಪಿ, ಜೆಡಿಎಸ್ ಮೈತ್ರಿ ವಿಚಾರದಲ್ಲಿ ಯಾವುದೇ ಸಮಸ್ಯೆ ಇಲ್ಲ. ಮುಂದೆ ಯಾವುದೇ ರೀತಿಯಲ್ಲೂ ಗೊಂದಲ ಇಲ್ಲದೆ ಮೈತ್ರಿಯಾಗಲಿದೆ ಎಂದು ಅವರು ಹೇಳಿದರು.
ಮೈತ್ರಿ ವಿಚಾರವಷ್ಟೇ ಅಲ್ಲದೆ ಕರ್ನಾಟಕಕ್ಕೆ ಸಂಬಂಧಿಸಿದ ಇತರ ಅನೇಕ ವಿಚಾರಗಳ ಬಗ್ಗೆಯೂ ಚರ್ಚೆ ನಡೆಸಿದ್ದೇವೆ. ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಗೃಹ ಸಚಿವ ಅಮಿತ್ ಶಾ ಜತೆ ಚರ್ಚಿಸಿದ್ದೇವೆ. ಕಾವೇರಿ ವಿಚಾರದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯ ತೋರಿದೆ. ರಾಜ್ಯದ ರೈತರಿಗೆ ಮಾರಕವಾಗುವ ರೀತಿ ಸರ್ಕಾರದ ನಡವಳಿಕೆ ಇದೆ. ನಿವೃತ್ತ ನ್ಯಾಯಮೂರ್ತಿಗಳ ಜೊತೆ ಸಭೆ ಮಾಡುವ ಕನಿಷ್ಠ ತಿಳವಳಿಕೆ ಇಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಅಮಿತ್ ಶಾ ನಿವಾಸದಲ್ಲಿ ಕುಮಾರಸ್ವಾಮಿ
#WATCH | Former Karnataka CM and JDS leader HD Kumaraswamy meets Union Home Minister Amit Shah in Delhi. JDS to formally join the National Democratic Alliance (NDA).
BJP President JP Nadda and Goa CM Pramod Sawant are also present during the meeting. pic.twitter.com/7SpdnoWFSJ
— ANI (@ANI) September 22, 2023
ವಿಜಯದಶಮಿ ಬಳಿಕ ಸೀಟು ಹಂಚಿಕೆ
ಸೀಟು ಹಂಚಿಕೆ ಬಗ್ಗೆ ವಿಜಯದಶಮಿ ಬಳಿಕ ಚರ್ಚೆ ನಡೆಸಲಾಗುವುದು. ಸೀಟು ಹಂಚಿಕೆ ಮುಂಚೆ ರಾಜ್ಯ ಬಿಜೆಪಿ ನಾಯಕರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಜೆಡಿಎಸ್ ತಿಳಿಸಿದೆ.
ಜೆಪಿ ನಡ್ಡಾ ಹರ್ಷ
ಎನ್ಡಿಎ ಮೈತ್ರಿಕೂಟಕ್ಕೆ ಜೆಡಿಎಸ್ ಸೇರ್ಪಡೆಯಾಗಿರುವುದಕ್ಕೆ ಜೆಪಿ ನಡ್ಡಾ ಹರ್ಷ ವ್ಯಕ್ತಪಡಿಸಿದ್ದಾರೆ. ಜೆಡಿಎಸ್ ಸೇರ್ಪಡೆಯಿಂದ ಎನ್ಡಿಎ ಮತ್ತಷ್ಟು ಸುಭದ್ರವಾಗಿದೆ. ಪ್ರಧಾನಿ ಮೋದಿ ದೃಷ್ಟಿಕೋನ ಕೂಡ ಬಲಗೊಳ್ಳಲು ಸಹಕಾರಿ ಎಂದು ನಡ್ಡಾ ಹೇಳಿದ್ದಾರೆ.
ಎನ್ಡಿಎ ಮೈತ್ರಿಕೂಟಕ್ಕೆ ಜೆಡಿಎಸ್ಗೆ ಸ್ವಾಗತ ಎಂದ ಪ್ರಮೋದ್ ಸಾವಂತ್
ಎನ್ಡಿಎ ಒಕ್ಕೂಟಕ್ಕೆ ಜೆಡಿಎಸ್ ಸೇರ್ಡಡೆಯಾಗಿದ್ದಕ್ಕೆ ಸ್ವಾಗತಿಸುತ್ತೇನೆ ಎಂದು ದೆಹಲಿಯಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದರು. ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ನನ್ನ ಒಳ್ಳೆಯ ಸ್ನೇಹಿತರು. ಲೋಕಸಭೆಯ ಚುನಾವಣೆಯಲ್ಲಿ ಕರ್ನಾಟಕದಲ್ಲಿ 25ಕ್ಕೂ ಹೆಚ್ಚು ಸೀಟ್ ಬಿಜೆಪಿ ಸಿಗಲಿದೆ ಎಂದು ಅವರು ಹೇಳಿದರು.
ಆರು ಸ್ಥಾನಗಳಿಗೆ ಜೆಡಿಎಸ್ ಬೇಡಿಕೆ; ಇಲ್ಲಿದೆ ಬಲಾಬಲ
ಬಿಜೆಪಿ, ಜೆಡಿಎಸ್ ಮೈತ್ರಿ ಸಂಬಂಧ ಅಂತಿಮ ಮಾತುಕತೆ ವೇಳೆ ಹೆಚ್ಡಿ ಕುಮಾರಸ್ವಾಮಿ 6 ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದಾರೆ. 6 ಕ್ಷೇತ್ರಗಳಲ್ಲಿ ಪಕ್ಷಗಳ ಬಲಾಬಲ, ಮತ ವಿವರ ಕಲೆ ಹಾಕಿ, ಬಿಜೆಪಿಗಿಂತ ಹೆಚ್ಚು ಮತಗಳು ಇರುವ ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದ್ದಾರೆ. ಅವುಗಳೆಂದರೆ ತುಮಕೂರು, ಹಾಸನ, ಮಂಡ್ಯ, ಕೋಲಾರ ಕ್ಷೇತ್ರಗಳಾಗಿವೆ. ವಿಧಾನಸಭಾ ಚುನಾವಣೆಯ ಮತ ಗಳಿಕೆಯ ಪಟ್ಟಿ ಹಿಡಿದುಕೊಂಡೇ ಕುಮಾರಸ್ವಾಮಿ ಅವರು ಗೃಹ ಸಚಿವ ಅಮಿತ್ ಶಾ ಅವರ ಬಳಿ ಮಾತುಕತೆ ನಡೆಸಿದ್ದಾರೆ.
ಇದನ್ನೂ ಓದಿ: ಕಾವೇರಿ ವಿಚಾರದಲ್ಲಿ ನಾನು ಯಾವುದೇ ಸಲಹೆ ಕೊಡಲ್ಲ: ಹೆಚ್ಡಿ ದೇವೇಗೌಡ
ಆರು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಗಳ ಮತ ಗಳಿಕೆ ವಿವರ ಇಲ್ಲಿದೆ;
ತುಮಕೂರು
ಬಿಜೆಪಿ – 4.13 ಲಕ್ಷ ಮತಗಳು ಜೆಡಿಎಸ್ – 4.69 ಲಕ್ಷ ಮತಗಳು ಕಾಂಗ್ರೆಸ್ – 4.35 ಲಕ್ಷ ಮತಗಳು
ಮಂಡ್ಯ
ಕಾಂಗ್ರೆಸ್ – 6.72 ಲಕ್ಷ ಮತಗಳು ಬಿಜೆಪಿ – 1.81 ಲಕ್ಷ ಮತಗಳು ಜೆಡಿಎಸ್ – 5.69 ಲಕ್ಷ ಮತಗಳು
ಹಾಸನ
ಜೆಡಿಎಸ್ – 5.34 ಲಕ್ಷ ಕಾಂಗ್ರೆಸ್ – 4.76 ಲಕ್ಷ ಬಿಜೆಪಿ – 2.99 ಲಕ್ಷ
ಕೋಲಾರ
ಕಾಂಗ್ರೆಸ್ – 5.80 ಲಕ್ಷ ಬಿಜೆಪಿ – 1.94 ಲಕ್ಷ ಜೆಡಿಎಸ್ – 4.71 ಲಕ್ಷ
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ
ಕಾಂಗ್ರೆಸ್ – 8.12 ಲಕ್ಷ ಮತಗಳು ಬಿಜೆಪಿ – 6.09ಲಕ್ಷ ಜೆಡಿಎಸ್ – 3.62 ಲಕ್ಷ
ಚಿಕ್ಕಬಳ್ಳಾಪುರ
ಕಾಂಗ್ರೆಸ್ – 6.10 ಲಕ್ಷ ಬಿಜೆಪಿ – 5.40 ಲಕ್ಷ ಜೆಡಿಎಸ್ – 2.35 ಲಕ್ಷ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:32 pm, Fri, 22 September 23