ಮುಂಬೈ: ಮಹಾರಾಷ್ಟ್ರದಲ್ಲಿ (Maharashtra) ಎಂವಿಎ ಸರ್ಕಾರ ಎದುರಿಸುತ್ತಿರುವ ರಾಜಕೀಯ ಬಿಕ್ಕಟ್ಟಿನ ನಡುವೆಯೇ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackeray) ನೇತೃತ್ವದ ಶಿವಸೇನಾ ಬಣವು(Shiv Sena) ಏಕನಾಥ್ ಶಿಂಧೆ (Eknath Shinde) ಸೇರಿದಂತೆ 12 ಬಂಡಾಯ ಶಾಸಕರ ಸದಸ್ಯತ್ವವನ್ನು ರದ್ದುಗೊಳಿಸುವಂತೆ ರಾಜ್ಯ ವಿಧಾನಸಭೆಯ ಉಪ ಸ್ಪೀಕರ್‌ಗೆ ಮನವಿ ಸಲ್ಲಿಸಿದೆ. ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗದೇ ಇರುವ ಶಾಸಕರ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಠಾಕ್ರೆ ಬಣ ಮನವಿ ಮಾಡಿದ್ದು, ಇನ್ನೂ ನಾಲ್ಕು ಬಂಡಾಯ ಶಾಸಕರನ್ನು ಶಿವಸೇನಾ ಅನರ್ಹಗೊಳಿಸಬಹುದು ಎಂದು ಮೂಲಗಳು ತಿಳಿಸಿವೆ. ಬುಧವಾರ ನಡೆದ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗುವಂತೆ ಶಿವಸೇನಾದ ಮುಖ್ಯ ಸಚೇತಕ ಸುನೀಲ್ ಪ್ರಭು ಅವರು ಪಕ್ಷದ ಶಾಸಕರಿಗೆ ಪತ್ರ ಬರೆದಿದ್ದರು. ಏತನ್ಮಧ್ಯೆ, ಗುವಾಹಟಿಯಲ್ಲಿ ಬೀಡುಬಿಟ್ಟಿರುವ ಶಿವಸೇನಾದ ಬಂಡಾಯ ಶಾಸಕರು ಗುರುವಾರ ಮಹಾರಾಷ್ಟ್ರ ವಿಧಾನಸಭೆಯ ಉಪ ಸ್ಪೀಕರ್ ನರಹರಿ ಜಿರ್ವಾಲ್ ಅವರಿಗೆ ಪತ್ರವೊಂದನ್ನು ಕಳುಹಿಸಿದ್ದು, ಏಕನಾಥ್ ಶಿಂಧೆ ಅವರು ಶಾಸಕಾಂಗದಲ್ಲಿ ತಮ್ಮ ಗುಂಪಿನ ನಾಯಕರಾಗಿ ಉಳಿಯಲಿದ್ದಾರೆ ಎಂದು ತಿಳಿಸಿದ್ದಾರೆ. ಸುನೀಲ್ ಪ್ರಭು ಬದಲಿಗೆ ಶಿವಸೇನಾ ಶಾಸಕ ಭರತ್ ಗೊಗವಾಲೆ ಅವರನ್ನು ಶಾಸಕಾಂಗ ಪಕ್ಷದ ಮುಖ್ಯ ಸಚೇತಕರನ್ನಾಗಿ ನೇಮಿಸಲಾಗಿದೆ ಎಂದು ಅದು ತಿಳಿಸಿದೆ. ಎನ್ಐ ಸುದ್ದಿಸಂಸ್ಥೆ ಪ್ರಕಾರ ಶಿಂಧೆ ಅವರಿಗೆ ಈಗ ಒಟ್ಟು 44 ಶಾಸಕರ ಬೆಂಬಲವಿದ್ದು, ಇದರಲ್ಲಿ 37 ಶಿವಸೇನಾ ಮತ್ತು 7 ಪಕ್ಷೇತರ ಶಾಸಕರು ಇದ್ದಾರೆ.
ಸಾರ್ವಜನಿಕರ ಹಣದ ದುರುಪಯೋಗ ಇದು: ಮಹಾರಾಷ್ಟ್ರ ರಾಜ್ಯಪಾಲರಿಗೆ ಬಿಜೆಪಿ ಸಚಿವರ ಪತ್ರ
ರಾಜ್ಯ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಪ್ರವೀಣ್ ದಾರೆಕರ್ ಅವರು ರಾಜ್ಯಪಾಲ ಬಿ.ಎಸ್.ಕೊಶ್ಯರಿ ಅವರಿಗೆ ಪತ್ರ ಬರೆದಿದ್ದು ಎಂವಿಎ ಸರ್ಕಾರವು ಕಳೆದ ಕೆಲವು ದಿನಗಳಿಂದ (ಶಿಂಧೆ ಅವರ ದಂಗೆಯನ್ನು ಪ್ರಾರಂಭಿಸಿದಾಗಿನಿಂದ) ನಿಧಿಗಳ ಹಂಚಿಕೆ ಮತ್ತು ವರ್ಗಾವಣೆಗಾಗಿ ತೆಗೆದುಕೊಂಡ ನಿರ್ಧಾರಗಳನ್ನು ತಡೆಹಿಡಿಯಲು ವಿನಂತಿಸಿದ್ದಾರೆ. ಸದ್ಯದ ಪರಿಸ್ಥಿತಿ ಮತ್ತು ಅಸ್ಥಿರತೆಯಲ್ಲಿ ಇದು ಸರಿಯಲ್ಲ. ಇದು ಸಾರ್ವಜನಿಕ ಹಣದ ದುರುಪಯೋಗ ಎಂದು ಅವರು ಹೇಳಿದ್ದಾರೆ.
ಎನ್‌ಸಿಪಿ, ಕಾಂಗ್ರೆಸ್ ಮತ್ತು ಶಿವಸೇನಾದ ಎಲ್ಲಾ ನಾಯಕರು ಸಂಪರ್ಕದಲ್ಲಿದ್ದಾರೆ: ರಾವತ್
‘ಸಿಎಂ ಉದ್ಧವ್ ಠಾಕ್ರೆ ಮತ್ತು ಶರದ್ ಪವಾರ್ ನಿರಂತರ ಸಂಪರ್ಕದಲ್ಲಿದ್ದಾರೆ. ಎನ್‌ಸಿಪಿ, ಕಾಂಗ್ರೆಸ್ ಮತ್ತು ಶಿವಸೇನೆಯ ಎಲ್ಲಾ ನಾಯಕರು ಪರಸ್ಪರ ಸಂಪರ್ಕದಲ್ಲಿದ್ದಾರೆ ಎಂದು ಶಿವಸೇನಾ ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.
ನಾವು ಅವರಿಗೆ ಅವಕಾಶ ನೀಡಿದ್ದೇವೆ: ಸಂಜಯ್ ರಾವತ್
ಶಿವಸೇನಾ ಸಂಸದ ರಾವುತ್ – ಏಕನಾಥ್ ಶಿಂಧೆ ಬಣದ ವಿರುದ್ಧ ತಮ್ಮ ಪಕ್ಷದ ಹೋರಾಟವನ್ನು ಮುನ್ನಡೆಸುತ್ತಿದ್ದಾರೆ. ತಮ್ಮ ಪಕ್ಷ ವಿಶ್ವಾಸ ಮತ ಗೆಲ್ಲುವ ವಿಶ್ವಾಸವಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು. “ನಾವು ಸದನದಲ್ಲಿ ವಿಶ್ವಾಸ ಮತ ಗೆಲ್ಲುತ್ತೇವನೆ, ನಾವು ಬಿಟ್ಟುಕೊಡುವುದಿಲ್ಲ. ಅವರು (ಬಂಡಾಯ ಶಾಸಕರು) ತುಂಬಾ ತಪ್ಪು ಹೆಜ್ಜೆ ಇಟ್ಟಿದ್ದಾರೆ. ನಾವು ಅವರಿಗೆ ಮುಂಬೈಗೆ ಮರಳಲು ಅವಕಾಶ ನೀಡಿದ್ದೇವೆ. ಈಗ ನಾವು ಅವರಿಗೆ ಸವಾಲು ಹಾಕುತ್ತೇವೆ” ಎಂದು ಅವರು ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
Published On - 1:37 pm, Fri, 24 June 22