Siddaramaiah: ಭ್ರಷ್ಟಾಚಾರದ ಹಣ ಬಳಸಿ ಮಹಾರಾಷ್ಟ್ರದಲ್ಲಿ ಆಪರೇಷನ್ ಕಮಲ: ಸಿದ್ದರಾಮಯ್ಯ ಟೀಕೆ
ಕರ್ನಾಟಕದ ಬಿಜೆಪಿಯ ಚಾಳಿ ಇಡೀ ದೇಶಕ್ಕೆ ಹಬ್ಬಿದೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಮೈಸೂರು: ಭ್ರಷ್ಟಾಚಾರದಿಂದ ಗಳಿಸಿರುವ ಹಣ ಬಳಸಿಕೊಂಡು ಬಿಜೆಪಿ (BJP) ಪಕ್ಷವು ವಿವಿಧ ರಾಜ್ಯಗಳಲ್ಲಿ ಆಪರೇಷನ್ ಕಮಲ ನಡೆಸಲು ಮುಂದಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗುವ ಬೆಳವಣಿಗೆ. ಕರ್ನಾಟಕದ ಬಿಜೆಪಿಯ ಚಾಳಿ ಇಡೀ ದೇಶಕ್ಕೆ ಹಬ್ಬಿದೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಕ್ಷಾಂತರ ಕಾಯ್ದೆಗೆ ಸೂಕ್ತ ರೀತಿಯಲ್ಲಿ ತಿದ್ದುಪಡಿ ಮಾಡುವ ಮೂಲಕ ಈ ಪರಿಪಾಠಗಳಿಗೆ ಕಡಿವಾಣ ಹಾಕಬೇಕು ಎಂದು ಸಲಹೆ ಮಾಡಿದರು.
ಒಂದು ಪಕ್ಷದಿಂದ ಗೆದ್ದವರು ಮತ್ತೊಂದು ಪಕ್ಷಕ್ಕೆ ಪಕ್ಷಾಂತರ ಮಾಡದಂತೆ ತಡೆಯಬೇಕು. ಒಂದು ವೇಳೆ ಪಕ್ಷಾಂತರ ಮಾಡಿದರೆ ಅಂಥವರು 10 ವರ್ಷ ಚುನಾವಣೆಗೆ ನಿಲ್ಲದಂತೆ ಮಾಡಬೇಕು. ಪ್ರಜಾಪ್ರಭುತ್ವದ ಉಳಿವಿಗೆ ಇಂಥ ನಿಯಮಗಳ ಅವಶ್ಯಕತೆ ಇದೆ. ಆಪರೇಷನ್ ಕಮಲ ಹುಟ್ಟು ಹಾಕಿದ್ದೇ ಬಿಜೆಪಿಯವರು. 2008ರಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಮೊದಲ ಬಾರಿಗೆ ಆಪರೇಷನ್ ಕಮಲ ಮಾಡಿದರು. ಬಹುಮತ ಸಿಗದ ರಾಜ್ಯಗಳಲ್ಲಿ ಶಾಸಕರನ್ನು ಖರೀದಿಸಿ ಸರ್ಕಾರ ರಚಿಸಲು ಅವರು ಮುಂದಾಗಿದ್ದಾರೆ ಎಂದು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಡಬಲ್ ಎಂಜಿನ್ ಸರ್ಕಾರ ಏನು ಮಾಡಿದೆ?
ಪ್ರಧಾನಿ ನರೇಂದ್ರ ಮೋದಿ ರಾಜ್ಯ ಭೇಟಿ ಕುರಿತು ಪ್ರಸ್ತಾಪಿಸಿದ ಅವರು, ಡಬಲ್ ಎಂಜಿನ್ ಸರ್ಕಾರದ ಹೇಳಿಕೆ ಪ್ರಸ್ತಾಪಿಸಿ ತಿರುಗೇಟು ಕೊಟ್ಟರು. ಡಬಲ್ ಎಂಜಿನ್ ಸರ್ಕಾರವು ಜನರಿಗಾಗಿ ಏನು ಮಾಡಿದೆ? ಅದು ಮಾಡಿರುವ ಅಭಿವೃದ್ಧಿ ಕಾರ್ಯಗಳ ಪಟ್ಟಿ ಕೊಡಿ. ಪ್ರಧಾನಿ ನರೇಂದ್ರ ಮೋದಿ ಸುಮ್ಮನೆ ಸುಳ್ಳು ಹೇಳಿ ಹೋಗಿದ್ದಾರೆ ಎಂದು ಟೀಕಿಸಿದರು.
ಮೋದಿ ಏನೂ ಮಾಡುವುದಿಲ್ಲ ಎಂದು ರಾಜ್ಯ ನಾಯಕರಿಗೂ ಗೊತ್ತು. ಅದಕ್ಕೆ ಅವರು ಯಾವುದೇ ಮನವಿ ನೀಡಿಲ್ಲ. ಮೋದಿ ಕಾರ್ಯಕ್ರಮಕ್ಕೆ ₹ 25 ಕೋಟಿಗಿಂತ ಹೆಚ್ಚು ಖರ್ಚು ಮಾಡಲಾಗಿದೆ. ಮೋದಿ ಬಂದಿದ್ದಕ್ಕೆ ರಸ್ತೆಗಳು ಅಭಿವೃದ್ಧಿ ಕಂಡಿವೆ. ಜನರಿಗೆ ಮೋದಿ ಭೇಟಿಯಿಂದ ಆಗಿರುವ ಲಾಭ ಅಷ್ಟೇ ಎಂದು ಹೇಳಿದರು.
ಜಿ.ಟಿ.ದೇವೇಗೌಡ ಕುರಿತು ಪ್ರಶ್ನೆ ಕೇಳಿದ್ದಕ್ಕೆ ಸಿದ್ದರಾಮಯ್ಯ ಸಿಟ್ಟಾದರು. ಬೇರೆ ಪಕ್ಷದ ಶಾಸಕನ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ನನ್ನನ್ನು ಏಕೆ ಕೇಳುತ್ತೀರಿ? ಅವರು ಮೈಸೂರಿನಲ್ಲೇ ಇದ್ದಾರೆ. ಅವರನ್ನೇ ಕೇಳಿ ಎಂದು ಪ್ರತಿಕ್ರಿಯಿಸಿದರು.
ಮಹಾರಾಷ್ಟ್ರದಲ್ಲಿ ಆಪರೇಷನ್ ಕಮಲ ಇಲ್ಲ: ಮುರುಗೇಶ್ ನಿರಾಣಿ
ಮಹಾರಾಷ್ಟ್ರ ರಾಜ್ಯ ರಾಜಕೀಯದಲ್ಲಿ ಕಂಡುಬಂದಿರುವ ಬಿಕ್ಕಟ್ಟಿಗೆ ಆಪರೇಷನ್ ಕಮಲ ಕಾರಣ ಅಲ್ಲ. ಕಾಂಗ್ರೆಸ್ನವರ ಜೊತೆ ಹೊಂದಾಣಿಕೆ ಆಗದ ಕಾರಣ ಬೇಸತ್ತು ಶಿವಸೇನೆ, ಹಾಗೂ ಎನ್ಸಿಪಿ ಶಾಸಕರು ಹೊರಗೆ ಬಂದಿದ್ದಾರೆ. ಸ್ಟೇರಿಂಗ್, ಬ್ರೇಕ್, ಎಕ್ಸಲೇಟರ್ ಬೇರೆಯವರ ಬಳಿ ಇರುವುದರಿಂದ ತೀವ್ರ ಅಪಘಾತ ಹೆಚ್ಚಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅಸಮಾಧಾನಿತರು ಬಿಜೆಪಿಗೆ ಬೆಂಬಲಿಸುವ ಸಾಧ್ಯತೆ ಇದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಬರುವ ನಿರೀಕ್ಷೆ ಇದೆ ಎಂದರು.
ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾಣೆಯಿಲ್ಲ. ಬೊಮ್ಮಾಯಿ ಅವರು ಒಳ್ಳೇ ಸರ್ಕಾರ ಒಳ್ಳೇ ಆಡಳಿತ ಕೊಡುತಿದ್ದಾರೆ. ಪಂಚಮಸಾಲಿ 2ಎ ಮೀಸಲಾತಿ ವಿಚಾರದ ಬಗ್ಗೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅಧ್ಯಯನ ಮಾಡುತ್ತಿದ್ದಾರೆ. ಇನ್ನೆರೆಡು ತಿಂಗಳಲ್ಲಿ ವರದ ತಯಾರಾಗಬಹುದು. ಆಗ ಸೂಕ್ತ ನಿರ್ಧಾರಕ್ಕೆ ಬರತ್ತೇವೆ ಎಂದು ಹೇಳಿದರು.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ