MVA Crisis: ಮಹಾರಾಷ್ಟ್ರ ಸರ್ಕಾರ ಪತನ ಸನ್ನಿಹಿತ, ಏಕನಾಥ ಶಿಂಧೆ ಬಣಕ್ಕೆ ಶಿವಸೇನೆಯ 42 ಶಾಸಕರ ಬೆಂಬಲ
ಶಿವಸೇನೆಯ ಮತ್ತಷ್ಟು ಶಾಸಕರು ಗುವಾಹತಿ ತಲುಪಿದ್ದು, ಏಕನಾಥ ಶಿಂಧೆ ಪಾಳಯ ಸೇರಿದ್ದಾರೆ.
ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಮೈತ್ರಿಯ ಮಹಾ ವಿಕಾಸ್ ಅಘಾಡಿ (Maha Vikas Aghadi – MVA) ಸರ್ಕಾರದ ಪತನ ಬಹುತೇಕ ಸನ್ನಿಹಿತವಾಗಿದೆ. ಶಿವಸೇನೆಯ 42 ಶಾಸಕರು ಏಕನಾಥ ಶಿಂಧೆ (Eknath Shinde) ನೇತೃತ್ವದ ಬಂಡುಕೋರರ ಬಣಕ್ಕೆ ನಿಷ್ಠೆ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿ ಉದ್ದವ್ ಠಾಕ್ರೆ (CM Uddhav Thackeray) ಬೆಂಬಲಕ್ಕೆ ನಿಂತ ಶಾಸಕರ ಸಂಖ್ಯೆ ಕೇವಲ 13ಕ್ಕೆ ಇಳಿದಿದೆ. ಶಿವಸೇನೆಯ ಮತ್ತಷ್ಟು ಶಾಸಕರು ಗುವಾಹತಿ ತಲುಪಿದ್ದು, ಏಕನಾಥ ಶಿಂಧೆ ಪಾಳಯ ಸೇರಿದ್ದಾರೆ.
ಉದ್ಧವ್ ಠಾಕ್ರೆ ಅವರು ತಮಗೆ ನಿಷ್ಠರಾಗಿರುವ ಶಾಸಕರ ಸಭೆ ಕರೆದಿದ್ದು, ಬಂಡಾಯ ಶಾಸಕರನ್ನು ಪಕ್ಷದಿಂದ ಉಚ್ಚಾಟಿಸುವ ಸಾಧ್ಯತೆಯಿದೆ. ಏಕನಾಥ ಶಿಂಧೆ ಬಣದಲ್ಲಿರುವ ಶಾಸಕರ ಸಂಖ್ಯೆ ಪಕ್ಷದ ಒಟ್ಟು ಶಾಸಕರ ಮೂರನೇ ಎರಡರಷ್ಟು ಇರುವುದು ದೃಢಪಟ್ಟರೆ ಪಕ್ಷಾಂತರ ನಿಷೇಧ ಕಾಯಿದೆಯಡಿ ಶಾಸಕರನ್ನು ಅನರ್ಹಗೊಳಿಸಲು ಸಾಧ್ಯವಾಗುವುದಿಲ್ಲ. ಅವರು ತಮ್ಮದೇ ನಿಜವಾದ ಶಿವಸೇನೆ ಎಂದು ಪ್ರತಿಪಾದಿಸಬಹುದು. ತಮ್ಮ ಬಣವನ್ನೇ ಅಧಿಕೃತ ಶಿವಸೇನಾ ಪಕ್ಷ ಎಂದು ಮಾನ್ಯತೆ ನೀಡುವಂತೆ ಸ್ಪೀಕರ್ ಮತ್ತು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಬಹುದು. ಶಿವಸೇನಾ ಪಕ್ಷದ ಚುನಾವಣಾ ಚಿಹ್ನೆಯನ್ನೂ ಕೇಳಬಹುದು.
ಸದ್ಯದ ಪರಿಸ್ಥಿತಿಯಲ್ಲಿ ಏಕನಾಥ ಶಿಂಧೆ ಬಣಕ್ಕೇ ಶಿವಸೇನೆಯ ಚಿಹ್ನೆ ಸಿಗುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತಿದೆ. ಶಿವಸೇನೆಯ 55 ಶಾಸಕರ ಪೈಕಿ 42 ಮಂದಿ ಪ್ರಸ್ತುತ ಏಕನಾಥ ಶಿಂಧೆ ಬಣದಲ್ಲಿದ್ದಾರೆ. ಅಂಕಿಸಂಖ್ಯೆಗಳ ಲೆಕ್ಕಾಚಾರದಲ್ಲಿ ಏಕನಾಥ ಶಿಂಧೆ ಬಣದ ಕೈ ಮೇಲಾಗಿದೆ. ಮಹಾರಾಷ್ಟ್ರದ ವಿಧಾನಸಭೆಯ 106 ಬಿಜೆಪಿ ಶಾಸಕರ ಜೊತೆಗೆ ಏಕನಾಥ ಶಿಂಧೆ ಬಣದ 42 ಮಂದಿ ಬೆಂಬಲ ಸೇರಿದರೇ 148ಕ್ಕೆ ಸಂಖ್ಯಾಬಲ ಹೆಚ್ಚಾಗುತ್ತದೆ. ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಸರ್ಕಾರ ರಚಿಸಲು 145 ಸದಸ್ಯ ಬಲ ಸಾಕು. ಹೀಗಾಗಿ ಶಿವಸೇನೆಯ ಬಂಡಾಯದ ಲಾಭ ಪಡೆದುಕೊಂಡ ಬಿಜೆಪಿ ಸರ್ಕಾರ ರಚಿಸುವ ಸಾಧ್ಯತೆ ಕಂಡು ಬರುತ್ತಿದೆ.
ಮಹಾರಾಷ್ಟ್ರದ ವಿಧಾನಸಭೆಯ ಓರ್ವ ಶಾಸಕರು ಮೃತಪಟ್ಟಿದ್ದಾರೆ. ಎನ್ಸಿಪಿಯ ಅನಿಲ್ ದೇಶಮುಖ್ ಮತ್ತು ನವಾಬ್ ಮಲ್ಲಿಕ್ ಜೈಲುಪಾಲಾಗಿದ್ದಾರೆ. ಹೀಗಾಗಿ ವಿಶ್ವಾಸಮತ ಯಾಚನೆ ವೇಳೆ ಮತಚಲಾಯಿಸಲು ಇವರಿಬ್ಬರಿಗೂ ಅವಕಾಶ ಸಿಗುವುದಿಲ್ಲ. ಈ ಹಿಂದೆ ರಾಜ್ಯಸಭಾ ಚುನಾವಣೆ, ವಿಧಾನಪರಿಷತ್ ಚುನಾವಣೆ ವೇಳೆಯೂ ಇಬ್ಬರಿಗೆ ಮತ ಚಲಾಯಿಸಲು ಕೋರ್ಟ್ ಅವಕಾಶ ಕೊಟ್ಟಿರಲಿಲ್ಲ. ಹೀಗಾಗಿ ವಿಧಾನಪರಿಷತ್ ವಿಶ್ವಾಸಮತ ಯಾಚನೆ ವೇಳೆ ಒಟ್ಟು ಮೂರು ಶಾಸಕರ ಮತಗಳು ಪರಿಗಣನೆಗೆ ಬರುವುದಿಲ್ಲ. ಹೀಗಾಗಿ ಮಹಾರಾಷ್ಟ್ರದ ವಿಧಾನ ಸಭೆಯ ಒಟ್ಟು ಸಂಖ್ಯಾಬಲ 288ರಿಂದ 285ಕ್ಕೆ ಕುಸಿಯಲಿದೆ.
ಇದಕ್ಕೆ ಅನುಗುಣವಾಗಿ ಸರ್ಕಾರ ರಚಿಸಲು ಬೇಕಿರುವ ಸಂಖ್ಯೆ 143. ಸದ್ಯ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ ಹಾಗೂ ಎನ್ಡಿಎ ಮೈತ್ರಿಕೂಟ 113 ಸಂಖ್ಯಾಬಲ ಹೊಂದಿದೆ. ಇದೀಗ ಏಕನಾಥ ಶಿಂಧೆ ಬಣದಲ್ಲಿ ಪಕ್ಷೇತರ ಶಾಸಕರು ಸೇರಿದಂತೆ 48 ಶಾಸಕರು ಗುರುತಿಸಿಕೊಂಡಿದ್ದಾರೆ. ಇದರಿಂದಾಗಿ ಎನ್ಡಿಎ ಮತ್ತು ಏಕನಾಥ ಶಿಂಧೆ ಬಣದ ಶಾಸಕರ ಸಂಖ್ಯೆ 161ಕ್ಕೆ ಹೆಚ್ಚಾಗಿದೆ. ಇದೇ ಹೊತ್ತಿಗೆ ಆಡಳಿತಾರೂಢ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಸಂಖ್ಯಾಬಲವು 124ಕ್ಕೆ ಕುಸಿತ ಕಂಡಿದೆ. ವಿಧಾನಸಭೆಯಲ್ಲಿ ಸಿಎಂ ಉದ್ಧವ್ ಠಾಕ್ರೆ ಬಹುಮತ ಕಳೆದುಕೊಳ್ಳುವ ಸಾಧ್ಯತೆ ನಿಚ್ಚಳ ಎನಿಸಿದೆ.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:26 pm, Thu, 23 June 22