Devendra Fadnavis ವಾಪಸ್ ಬಂದೇ ಬರುವೆ ಎಂದಿದ್ದ ಫಡ್ನವಿಸ್, ಏಕನಾಥ್ ಶಿಂಧೆಯನ್ನು ಮಹಾ ಸಿಎಂ ಮಾಡಿದ್ದೇಕೆ?

| Updated By: ರಶ್ಮಿ ಕಲ್ಲಕಟ್ಟ

Updated on: Jun 30, 2022 | 6:39 PM

ಬಿಜೆಪಿ ಅಧಿಕಾರಕ್ಕೆ ಬಂದು ಮುಂದೊಂದು ದಿನ ಶಿಂಧೆ ಕೈ ಕೊಟ್ಟರೆ ಆಗ ಬಿಜೆಪಿಗೆ ಮುಖಭಂಗ. ಈ ಹಿಂದೆ ಅಜಿತ್ ಪವಾರ್ ಜೊತೆ ಕೈ ಜೋಡಿಸಿ ಬೆಳಿಗ್ಗೆ ಪದಗ್ರಹಣ ಮಾಡಿ ಸಂಜೆ ಪದ ತ್ಯಾಗ ಮಾಡಬೇಕಾಗಿ ಬಂದಿತ್ತು. ಹಾಗಾಗಿ ಶಿಂಧೆಗೆ ಸ್ಥಾನ ನೀಡುವುದು ಸೇಫ್.

Devendra Fadnavis ವಾಪಸ್ ಬಂದೇ ಬರುವೆ ಎಂದಿದ್ದ ಫಡ್ನವಿಸ್, ಏಕನಾಥ್ ಶಿಂಧೆಯನ್ನು ಮಹಾ ಸಿಎಂ ಮಾಡಿದ್ದೇಕೆ?
ದೇವೆೇಂದ್ರ ಫಡ್ನವಿಸ್
Follow us on

‘ಅಲೆಗಳು ಹಿಂದೆ ಸರಿದವೆಂದು ಕಡಲ ತೀರದಲ್ಲಿ ಮನೆ ಮಾಡಲು ಹೋಗಬೇಡಿ, ನಾನು ಕಡಲು, ವಾಪಸ್ ಬಂದೇ ಬರುವೆ’- 2019ರಲ್ಲಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ ದೇವೇಂದ್ರ ಫಡ್ನವಿಸ್ (Devendra Fadnavis)
ಹೇಳಿದ ಮಾತುಗಳಿವು. ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು(Maharashtra Political Crisis) ಉಂಟಾಗಿ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ (Uddhav Thackeray) ಬುಧವಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಕೆಳಗಿಳಿದಾಗ ಮುಂದಿನ ಮುಖ್ಯಮಂತ್ರಿ ಬಿಜೆಪಿ ನಾಯಕ ದೇವೇಂದ್ರ ಫಢ್ನವಿಸ್ ಎಂದೇ ಬಿಂಬಿಸಲಾಗಿತ್ತು. 2014 ಮತ್ತು 2019ರಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದವರು ಫಡ್ನವಿಸ್. 2019ರಲ್ಲಿ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿದ್ದು ಕೇವಲ 80 ಗಂಟೆ ಕಾಲ. ಶಿವಸೇನಾ-ಎನ್​​ಸಿಪಿ-ಕಾಂಗ್ರೆಸ್ ಮೈತ್ರಿಯು ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿದ್ದರು. ಜೂನ್ 29 ರಾತ್ರಿ ಅಂದರೆ ನಿನ್ನೆ ಉದ್ಧವ್ ಠಾಕ್ರೆ ಸಿಎಂ ಸ್ಥಾನದಿಂದ ಕೆಳಗಿಳಿದಾಗ ಇದು ಜನರ ಗೆಲುವು ಎಂದು ಬಿಜೆಪಿ ಸಂಭ್ರಮಿಸಿತ್ತು. ದೇವೇಂದ್ರ ಫಡ್ನವಿಸ್ ಮುಂದಿನ ಮುಖ್ಯಮಂತ್ರಿ, ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದ ಪತನಕ್ಕೆ ಕಾರಣವಾದ ಬಂಡಾಯ ಶಾಸಕ ಏಕನಾಥ್ ಶಿಂಧೆ ಉಪಮುಖ್ಯಮಂತ್ರಿಯಾಗಲಿದ್ದಾರೆ ಎಂದೇ ಹೇಳಲಾಗಿತ್ತು. ಗುರುವಾರ ಶಿಂಧೆ ಮತ್ತು ಫಡ್ನವಿಸ್ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರನ್ನು ಭೇಟಿ ಮಾಡಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವ ಹಕ್ಕು ಮಂಡಿಸಿದ್ದರು. ರಾಜ್ಯಪಾಲರ ಭೇಟಿ ನಂತರ ಶಿಂಧೆ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಫಡ್ನವಿಸ್, ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಏಕನಾಥ್ ಶಿಂಧೆ ಎಂದು ಘೋಷಿಸಿದರು. ಅದರ ಜತೆಗೇ ತಾನು ಸರ್ಕಾರದ ಭಾಗವಾಗಿರುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲಿಯವರೆಗೆ ಫಡ್ನವಿಸ್  ಸಿಎಂ ಆಗುತ್ತಾರೆ ಎಂಬ ಲೆಕ್ಕಾಚಾರವನ್ನು ಉಲ್ಟಾ ಪಲ್ಟಾ ಮಾಡಿ ಶಿಂಧೆಗೆ ಮಹಾ ಸಿಎಂ ಸ್ಥಾನ ನೀಡಿ,  ಮುಖ್ಯಮಂತ್ರಿಯಾಗಿ ಅನುಭವವಿದ್ದ ದೇವೇಂದ್ರ ಫಡ್ನವಿಸ್ ಹಿಂದೆ ಸರಿದಿದ್ದೇಕೆ?


ಕಾರಣಗಳನ್ನು ಪಟ್ಟಿ ಮಾಡುವುದಾದರೆ…

  1. ತಾಂತ್ರಿಕವಾಗಿ ಏಕನಾಥ್ ಶಿಂಧೆ ಶಿವಸೇನಾದ ಮುಖ್ಯಮಂತ್ರಿ. ಅವರು ಈಗ ವಿಪ್ ಕೊಟ್ಟರೆ ಎಲ್ಲ ಶಿವಸೇನಾ ಮಂತ್ರಿಗಳು ಮತಹಾಕಲೇಬೇಕು. ಉದ್ಧವ್ ಠಾಕ್ರೆ ಅವರಿಗೆ ಬೆಂಬಲ ನೀಡಿರುವ ಸಚಿವರಿಗೆ ಮತ ಹಾಕದೆ ಬೇರೆ ದಾರಿಯಿಲ್ಲ.
  2. ಫಡ್ನವಿಸ್ ಮರಾಠಿ ಹಿಂದೂ ಬ್ರಾಹ್ಮಣ. ಮಹಾರಾಷ್ಟ್ರದಲ್ಲಿನ ರಾಜಕೀಯ ಕೂಡ ಕರ್ನಾಟಕದಂತೆ. ಅಲ್ಲಿ ಮರಾಠಾ ನಾಯಕನನ್ನು ಮುಖ್ಯಮಂತ್ರಿ ಮಾಡಿಲ್ಲ ಎಂದು ಬಿಜೆಪಿಯನ್ನು ಶಿಕ್ಷಿಸಿದೆ ಎಂಬ ನಂಬಿಕೆ ಇತ್ತು.
  3. ಬಿಜೆಪಿ ಅಧಿಕಾರಕ್ಕೆ ಬಂದು ಮುಂದೊಂದು ದಿನ ಶಿಂಧೆ ಕೈ ಕೊಟ್ಟರೆ ಆಗ ಬಿಜೆಪಿಗೆ ಮುಖಭಂಗ. ಈ ಹಿಂದೆ ಅಜಿತ್ ಪವಾರ್ ಜೊತೆ ಕೈ ಜೋಡಿಸಿ ಬೆಳಿಗ್ಗೆ ಪದಗ್ರಹಣ ಮಾಡಿ ಸಂಜೆ ಪದ ತ್ಯಾಗ ಮಾಡಬೇಕಾಗಿ ಬಂದಿತ್ತು. ಹಾಗಾಗಿ ಶಿಂಧೆಗೆ ಸ್ಥಾನ ನೀಡುವುದು ಸೇಫ್.
  4.  ಶಿಂಧೆ ಮೂಲಕ ಶರದ್ ಪವಾರ್ ಮತ್ತು ಉದ್ಧವ್ ಠಾಕ್ರೆ ಅವರ ಪ್ರಭಾವ ಕಡಿಮೆ ಮಾಡುವ ತಂತ್ರ
  5.  ಮುಂದಿನ ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಮರಾಠಾ ಮತ ಪಡೆಯುವ ತಂತ್ರವಿದು.
  6. 51ರ ಹರೆಯದ ಫಡ್ನವಿಸ್ ಅವರಿಗೆ ಎಂವಿಎ ಸರ್ಕಾರದ ಪತನವು ಕೇವಲ ಒಂದು ರಾಜಕೀಯ ವಿಷಯ ಮಾತ್ರ ಅಲ್ಲ ಅದಕ್ಕಿಂತ ಮುಖ್ಯವಾಗಿ ಶಿವಸೇನಾ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (NCP) ಜೊತೆಗೆ ಸೇಡು ತೀರಿಸಲು ಸಿಕ್ಕಿದ ಅವಕಾಶವಾಗಿದೆ. ಫಡ್ನವಿಸ್ ಅವರ ನಿಕಟವರ್ತಿಗಳ ಪ್ರಕಾರ, ಅವರು ಯಾವಾಗಲೂ ಸಂಘಟನೆ ಮತ್ತು ಆಡಳಿತಕ್ಕೆ ಸಂಬಂಧಿಸಿದಂತೆ ಉತ್ತಮ ಇಮೇಜ್ ಹೊಂದಿದ್ದರು. ಅದಕ್ಕಿರುವ ನಿದರ್ಶನವೆಂದರೆ ಪೌರತ್ವ (ತಿದ್ದುಪಡಿ) ಕಾಯಿದೆಯನ್ನು ಬೆಂಬಲಿಸಲು 2019 ರಲ್ಲಿ ತಾರ್ಡಿಯೊದಲ್ಲಿ ನಡೆದ ದೊಡ್ಡ ರ್ಯಾಲಿಯಲ್ಲಿ ಅವರು ಮಾಡಿದ ಭಾಷಣ, ತುಂಬಾ ಮೃದುವಾಗಿ ಮಾತನಾಡುವ ಫಡ್ನವಿಸ್ ತ್ವರಿತ ರೀತಿಯಲ್ಲಿ ಕಾರ್ಯಗಳನ್ನು ಆಯೋಜಿಸುತ್ತಾರೆ. 2020ರಲ್ಲಿ ಮಹಾರಾಷ್ಟ್ರದಲ್ಲಿ ಪ್ರವಾಹ ಬಂದಾಗ ಅವರು ಕೈಗೊಂಡ ಪರಿಹಾರ ಕಾರ್ಯಗಳು ಶ್ಲಾಘನೀಯ.
  7. 2021 ರಲ್ಲಿ ಪಂಢರಪುರ ಉಪಚುನಾವಣೆಯಲ್ಲಿ ಎಂದೂ ಗೆಲ್ಲದ ಸ್ಥಾನವನ್ನು ಬಿಜೆಪಿ ಗೆದ್ದಿದ್ದು ಫಡ್ನವಿಸ್ ಚತುರತೆಯಿಂದ. ವಿಪಕ್ಷದಲ್ಲಿದ್ದಾಗ ಆಢಳಿತಾರೂಢ ಸರ್ಕಾರ ಯಾವಾಗ ಬೀಳುತ್ತದೆ ಎಂಬುದನ್ನು ಕಾಯುವುದು ಮಾತ್ರವಲ್ಲದೆ, ಬಿದ್ದಾಗ ಅಲ್ಲಿ ಹೇಗೆ ಮುಂದಿನ ಕಾರ್ಯಗಳನ್ನು ನಿರ್ವಹಿಸಬೇಕೆಂಬುದರ ಬಗ್ಗೆ ಪಕ್ಕಾ ಪ್ಲಾನಿಂಗ್ ಮಾಡಿದವರು ಫಡ್ನವಿಸ್.
  8. ಅವರ ನಿಖರವಾದ ಲೆಕ್ಕಾಚಾರಗಳೇ ಬಿಜೆಪಿಯು ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ಹೆಚ್ಚುವರಿ ಸ್ಥಾನಗಳನ್ನು ಗೆಲ್ಲಲು ಕಾರಣವಾಯಿತು. ಎಂವಿಎ ಮೈತ್ರಿಯ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿ ಬಿಜೆಪಿ ಹೆಚ್ಚು ಸೀಟುಗಳನ್ನು ಗೆಲ್ಲುವುದಕ್ಕಾಗಿ ಫಡ್ನವಿಸ್ ಹೂಡಿದ ತಂತ್ರ ಎಂವಿಎಯನ್ನು ದುರ್ಬಲವಾಗಿಸಿತ್ತು.
  9. ಫಡ್ನವಿಸ್, ಕೇಂದ್ರ ಸಚಿವ ನಾರಾಯಣ ರಾಣೆ, ಹಿರಿಯ ರಾಜ್ಯ ಬಿಜೆಪಿ ನಾಯಕ ಗಿರೀಶ್ ಮಹಾಜನ್ ಶಿವಸೇನಾದ ಒಳಜಗಳದ ಮೇಲೆ ಕಣ್ಣಿಟ್ಟಿದ್ದರು. ಏಕನಾಥ್ ಶಿಂಧೆ ಅವರು ಶಿವಸೇನಾ ಜತೆ ಮುನಿಸುಕೊಂಡಿದ್ದಾರೆ ಎಂಬ ಸುದ್ದಿ ಸಿಕ್ಕಾಗಲೇ ಫಡ್ನವಿಸ್,ಸಹಾನುಭೂತಿ ಜತೆ ಖಾಸಗಿ ಜೆಟ್​​ನ್ನೂ ತಯಾರಾಗಿಟ್ಟಿದ್ದರು.
  10. ಫಡ್ನವಿಸ್ ಅತ್ಯಂತ ಯಶಸ್ವಿ ವಿರೋಧ ಪಕ್ಷದ ನಾಯಕರಾಗಿ ಹೊರಹೊಮ್ಮಿದವರು. ಅವರು ನಿರಂತರವಾಗಿ ಪ್ರವಾಸಗಳು, ಕಾರ್ಯಕ್ರಮಗಳನ್ನು ಮಾಡುತ್ತ ಎಂವಿಎ ಸರ್ಕಾರವನ್ನು ಟೀಕಿಸುತ್ತಲೇ ಬಂದಿದ್ದರು. ಎಂವಿಎಯ ಮೂರು ಪಕ್ಷಗಳ ನಡುವಿನ ಬಿರುಕುಗಳನ್ನು ನಿರಂತರವಾಗಿ ಬಹಿರಂಗಪಡಿಸಲು ಪ್ರಯತ್ನಿಸುತ್ತಿದ್ದರು. ಇದು ಎಂವಿಎ ಸರ್ಕಾರವನ್ನು ಹಂತ ಹಂತವಾಗಿ  ಒಡೆಯುವ ಅಸ್ತ್ರವಾಗಿತ್ತು.