ಮುಂಬೈ: ಬಿಜೆಪಿಗೆ ಪರ್ಯಾಯ ಕಟ್ಟುವ ಪ್ರಯತ್ನಗಳನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಚುರುಕುಗೊಳಿಸಿವೆ. ಮಹಾರಾಷ್ಟ್ರದ ಎನ್ಸಿಪಿ ನಾಯಕ ಶರದ್ ಪವಾರ್ ಅವರನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಬುಧವಾರ ಭೇಟಿಯಾಗಿ ಚರ್ಚೆ ನಡೆಸಿದರು. ಬಿಜೆಪಿಯನ್ನು ವಿರೋಧಿಸುವ ಪಕ್ಷಗಳು ಒಂದೇ ವೇದಿಕೆಗೆ ಬರಬೇಕು. ಒಂದೇ ಮನಃಸ್ಥಿತಿಯ ಪಕ್ಷಗಳು ಒಗ್ಗೂಡಿ ಬಿಜೆಪಿ ವಿರುದ್ಧ ಗಟ್ಟಿಯಾದ ಪರ್ಯಾಯ ರಚಿಸಬೇಕಿದೆ ಎಂದು ಮುಂಬೈನಲ್ಲಿ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದರು.
ಮುಂದಿನ ದಿನಗಳಲ್ಲಿ ಸಂಯುಕ್ತ ಪ್ರಗತಿಶೀಲ ಮೈತ್ರಿಕೂಟ (United Progressive Alliance – UP) ಎನ್ನುವುದು ಇರುವುದಿಲ್ಲ. ಯುಪಿಎ ಎನ್ನುವುದು ಇತಿಹಾಸವಾಗಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದರು. ಬಿಜೆಪಿ ವಿರುದ್ಧ ಹೋರಾಟ ನಡೆಸಲು ಪರ್ಯಾಯ ವ್ಯವಸ್ಥೆ ಬೇಕು. ಹೋರಾಟ ಮಾಡದ ಪಕ್ಷಕ್ಕೆ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
‘ಯುಪಿಎ ಎಂದರೇನು? ಯುಪಿಎ ಎಲ್ಲಿದೆ?’ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಜೊತೆಗಿರುವ ಪಕ್ಷಗಳನ್ನು ಗಮನದಲ್ಲಿರಿಸಿಕೊಂಡು ಹೊಸ ರಾಜಕೀಯ ದಾಳ ಉರುಳಿಸಿದರು. ಇನ್ನು ಎರಡು ವರ್ಷಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆ ಹೊತ್ತಿಗೆ ದೇಶದಲ್ಲಿ ಹೊಸ ರಾಜಕೀಯ ಸಮೀಕರಣ ನಡೆಸುವ ಇಚ್ಛೆಯನ್ನೂ ಈ ಮೂಲಕ ಹೊರಹಾಕಿದರು.
ಮಹಾರಾಷ್ಟ್ರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವಲ್ಲಿ ಯಶಸ್ವಿಯಾದ ಶರದ್ ಪವಾರ್ ಪ್ರಸ್ತುತ ರಾಷ್ಟ್ರ ರಾಜಕಾರಣದಲ್ಲಿ ತೃತೀಯ ರಂಗ ರೂಪಿಸಲು ಶ್ರಮಿಸುತ್ತಿದ್ದಾರೆ. ಮಮತಾ ಭೇಟಿಯ ಬಗ್ಗೆ ಪ್ರತಿಕ್ರಿಯಿಸುವಾಗ, ‘2024ರ ಚುನಾವಣೆಯ ಹಾದಿ’ (ಟೆಂಪ್ಲೇಟ್ ಫಾರ್ 2024) ಎಂದು ಹೇಳಿದರು.
ಮಮತಾರನ್ನು ಭೇಟಿಯಾದ ನಂತರ ಫೋಟೊಗಳನ್ನು ಟ್ವೀಟ್ ಮಾಡಿದ ಶರದ್ ಪವಾರ್, ‘ನನ್ನ ಮುಂಬೈ ನಿವಾಸದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದೆ. ನಮ್ಮ ಮೈತ್ರಿಯನ್ನು ಬಲಪಡಿಸಿಕೊಳ್ಳಬೇಕು. ಜನರ ಹಿತದೃಷ್ಟಿಯಿಂದ ದೇಶದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಉಳಿಸಿಕೊಳ್ಳಲು ಬದ್ಧತೆ ಪ್ರದರ್ಶಿಸಬೇಕು’ ಎಂಬ ಬಗ್ಗೆ ಇಬ್ಬರಲ್ಲೂ ಸಹಮತವಿತ್ತು ಎಂದು ಪವಾರ್ ಟ್ವೀಟ್ನಲ್ಲಿ ಹೇಳಿದ್ದಾರೆ.
ನಿನ್ನೆಯಷ್ಟೇ (ನ.30) ಮಮತಾ ಬ್ಯಾನರ್ಜಿ ಶಿವಸೇನೆಯ ನಾಯಕರಾದ ಆದಿತ್ಯ ಠಾಕ್ರೆ ಮತ್ತು ಸಂಜಯ್ ರಾವತ್ ಅವರನ್ನು ಭೇಟಿಯಾಗಿದ್ದರು. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗುವ ಉದ್ದೇಶ ಮಮತಾ ಅವರಿಗೆ ಇತ್ತಾದರೂ ಸಾಧ್ಯವಾಗಲಿಲ್ಲ. ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ಉದ್ಧವ್ ಸದ್ಯಕ್ಕೆ ವೈದ್ಯರ ಸಲಹೆ ಮೇರೆಗೆ ಪ್ರತ್ಯೇಕ ವಾಸದಲ್ಲಿದ್ದಾರೆ.
Pleased to meet Hon’ble CM of West Bengal Smt @MamataOfficial at my Mumbai residence. We Discussed various issues. We agreed upon the need to strengthen the collective efforts and commitment towards safeguarding democratic values and ensuring the betterment of our people. pic.twitter.com/ryrVH2hD6N
— Sharad Pawar (@PawarSpeaks) December 1, 2021
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಸ್ಪರ್ಧಿಸುತ್ತದೆ ಎಂದಾದರೆ ನಾವ್ಯಾಕೆ ಗೋವಾದಲ್ಲಿ ಸ್ಪರ್ಧಿಸಬಾರದು?-ಮಮತಾ ಬ್ಯಾನರ್ಜಿ
ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿ ಮಾಡಿದ ಮಮತಾ ಬ್ಯಾನರ್ಜಿ; ಬಿಎಸ್‌ಎಫ್ ಅಧಿಕಾರ ವ್ಯಾಪ್ತಿ ವಿಸ್ತರಣೆ ಹಿಂಪಡೆಯಲು ಒತ್ತಾಯ