ಮಂಡ್ಯ: ಈ ಜಿಲ್ಲೆ ಬದಲಾವಣೆಯಾದರೆ ರಾಜ್ಯದಲ್ಲಿ ಬದಲಾವಣೆ ಆಗುತ್ತದೆ. ಮಂಡ್ಯದಲ್ಲಿ ಕನಿಷ್ಠ 5-6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಿಸಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ಮನವಿ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ (Prajadhwani Yatra In Mandya) ಭಾಷಣ ಮಾಡಿದ ಅವರು, ಪೂರ್ವ ದಿಕ್ಕಿನಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ, ನಾವು ಅಧಿಕಾರಕ್ಕೆ ಬರುವುದು ಕೂಡ ಅಷ್ಟೇ ಸತ್ಯ. ಅದಕ್ಕೆ ನೀವೂ ಕೂಡ ನಮ್ಮ ಜೊತೆಗಿರಬೇಕು ಎಂದರು.
ನಾವು ಕುಮಾರಸ್ವಾಮಿಗೆ (H.D.Kumaraswamy) ಅಧಿಕಾರ ಕೊಟ್ಟಿದ್ದೆವು. ಬಳಿಕ ಸರ್ಕಾರ ಪತನವಾಯ್ತು. ನಾನು ಉರುಳಿಸಿದೆ ಎಂದು ಆರೋಪಿಸುತ್ತಾರೆ. ಆಯ್ತಪ್ಪ ನಮ್ಮ ಶಾಸಕರು ಹೋದರು, ನಿಮ್ಮ ಶಾಸಕರು ಯಾಕೆ ಹೋದರು? ಆ ಪುಣ್ಯಾತ್ಮ ಶಾಸಕರನ್ನು ನೋಡಿಕೊಳ್ಳದಿದ್ದಕ್ಕೆ ಸರ್ಕಾರ ಪತನ ಆಯ್ತು. ತಾಜ್ವೆಸ್ಟೆಂಡ್ ಹೋಟೆಲ್ನಲ್ಲಿ ಕುಳಿತು ಅಧಿಕಾರ ನಡೆಸಿದರೆ ಆಗುತ್ತಾ? ಕೊಟ್ಟ ಕುದರೆಯನ್ನು ಏರದ ವೀರನೂ ಅಲ್ಲ ಧೀರನೂ ಅಲ್ಲ. ಇವರಿಗೆ ಅಧಿಕಾರಕ್ಕೆ ಕೊಟ್ರೆ ಆಗುತ್ತಾ? ಈಗ ಕುಮಾರಸ್ವಾಮಿ 123 ಸ್ಥಾನ ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ. ಜೆಡಿಎಸ್ 20ರಿಂದ 22 ಸ್ಥಾನ ಗೆದ್ದರೆ ಅದೇ ಜಾಸ್ತಿ ಎಂದು ಟಾಂಗ್ ನೀಡಿದರು.
ನಾವೂ ಇದ್ದಾಗನೇ ಜೆಡಿಎಸ್ 59 ಸ್ಥಾನ ಗೆದ್ದಿತ್ತು. ಈಗ 20 ರಿಂದ 22 ಗೆದ್ದರೆ ಅದೇ ಜಾಸ್ತಿ. ಹೀಗಾಗಿ ಅವರಿಗೆ ಅಧಿಕಾರ ಕೊಡುತ್ತೀರಾ? ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿದರು. ಅಲ್ಲದೆ, ಅತ್ತ ಬಿಜೆಪಿ ಕೋಮುವಾದಿ ಪಕ್ಷವಾಗಿದೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ನರ ನಡುವೆ ಎತ್ತುಕಟ್ಟಿದ್ದಾರೆ. ಯುವಕರ ಮನಸ್ಸುಗಳನ್ನ ಒಡೆದುಹಾಕಿದ್ದಾರೆ. ಯುವಕರ ಮನಸ್ಸುಗಳನ್ನ ಜೋಡಿಸಲು 3570 ಕಿ.ಮೀ ಭಾರತ್ ಜೋಡೋ ಯಾತ್ರೆ ಮಾಡಲಾಗುತ್ತಿದೆ ಎಂದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ಮಂಡ್ಯ ಸಕ್ಕರೆ ಕಾರ್ಖಾನೆಗೆ ಹಣ ಕೊಟ್ಟು ಫ್ಯಾಕ್ಟರಿ ನಡೆಸುತ್ತಿದ್ದೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆದ ಮೇಲೆ ಅದು ನಿಂತುಹೋಯ್ತು. ಬಿಜೆಪಿ ಸರ್ಕಾರ ಬಂದ ಮೇಲೂ ನಿಂತುಹೋಯ್ತು. ಆದರೆ ಸಾಕಷ್ಟು ಹೋರಾಟಗಳ ನಂತ್ರ ಈಗ ಶುರುವಾಗಿದೆ. ಅದಾಗ್ಯೂ ಖಾಸಾಗಿ ಸಕ್ಕರೆ ಕಾರ್ಖಾನೆಗೆ ಕಬ್ಬು ಹಾಕುವ ಪರಿಸ್ಥಿತಿ ಬಂದಿದೆ. ಇಲ್ಲಿ ತೂಕದಲ್ಲಿ ವ್ಯತ್ಯಾಸ ಮಾಡುತ್ತಾರೆ ಎಂದು ಆರೋಪಿಸಿದರು.
ಮಂಡ್ಯದ ರೈತರಿಗಾಗಿ ಸಕ್ಕರೆ ಕಾರ್ಖಾನೆಯನ್ನು ಆಧುನೀಕರಣ ಮಾಡುವಂತೆ ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಹೇಳಿದ್ದೆ. ಕಾರ್ಖಾನೆಯನ್ನು ನಿರಾಣಿ ತೆಗೆದುಕೊಳ್ಳಲು ಸಿದ್ದವಾಗಿದ್ದರು. ಈ ವೇಳೆ ರೈತರು ಕೂಡ ಹೋರಾಟ ಮಾಡಿದ್ದರು. ಆಗ ನಾವೂ ಕಾರ್ಖಾನೆಯನ್ನು ಮಾರಲ್ಲ ಅಂತಾ ಬೊಮ್ಮಾಯಿ ಹೇಳಿದ್ದರು ಎಂದರು. ಮುಂದುವರಿದು ಮಾತನಾಡಿದ ಅವರು, ನಾವು ಸಕ್ಕರೆ ಕಾರ್ಖಾನೆಯನ್ನು ಹಾಗೇ ಉಳಿಸಿಕೊಳ್ಳಬೇಕು. ಉತ್ತರ ಕರ್ನಾಟಕದ ಕಡೆ ಒಂದು ಶುಗರ್ ಫ್ಯಾಕ್ಟರಿ ಮಾಡಿದವರು ಇನ್ನೊಂದು ಮಾಡುತ್ತಾರೆ. ಲಾಭ ಇಲ್ಲದೇ ಅರು ಮಾಡ್ತಾರಾ ಎಂದು ಪ್ರಶ್ನಿಸಿದರು.
ಸರ್ಕಾರಿ ಸಕ್ಕರೆ ಕಾರ್ಖಾನೆಯಲ್ಲೂ ಎಥಿನಾಲ್ ತಯಾರು ಮಾಡಬೇಕು. ಬಸವರಾಜ ಬೊಮ್ಮಾಯಿ ಅವರು 30 ಕೋಟಿ ಕೊಟ್ಟು ಉಳಿದ 20 ಕೋಟಿ ಸಾಲ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ. ಹಾಗಾದರೆ ನೀನ್ಯಾಕಪ್ಪ ಇದ್ದೀಯಾ ಬಸವರಾಜ? ನಾವೂ ಅಧಿಕಾರಕ್ಕೆ ಬಂದರೆ ಎಷ್ಟೇ ಕಷ್ಟ ಬಂದರೂ ಮಂಡ್ಯ ಶುಗರ್ ಫ್ಯಾಕ್ಟರಿ ನಡೆಸುತ್ತೇವೆ.
ರಾಜಕೀಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:00 pm, Fri, 27 January 23