ಕರಾವಳಿಗೆ ಬಜೆಟ್‌ನಲ್ಲಿ ಸೂಕ್ತ ಅನುದಾನ ನೀಡುತ್ತೇವೆ, ಕಾದು ನೋಡಿ ಎಂದ ಸಿಎಂ ಬಸವರಾಜ ಬೊಮ್ಮಾಯಿ
ಆರ್ಥಿಕ ವಲಯದಲ್ಲಿ ಕರಾವಳಿಗೆ ಪ್ರಮುಖ ಸ್ಥಾನವಿದೆ. ಕರಾವಳಿಯ ಆರ್ಥಿಕ ಚಟುವಟಿಕೆ ಅಭಿವೃದ್ಧಿಗೆ ಆದ್ಯತೆ ನೀಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. ಉಡುಪಿಯಲ್ಲಿ ಈ ಹೇಳಿಕೆ ನೀಡಿದ್ದಾರೆ.

ಉಡುಪಿ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದೇ ಹಿಡಿಯುತ್ತೇವೆ ಎಂಬ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್, ಮಂಗಳೂರಿನಲ್ಲಿ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಕರಾವಳಿ ಕರ್ನಾಟಕಕ್ಕೆ ಭರ್ಜರಿ ಆಫರ್ಗಳನ್ನು (Congress Manifesto For Coast Karnataka) ನೀಡಿ ಗಮನ ಸೆಳೆದಿತ್ತು. ಇದೀಗ ಬಿಜೆಪಿ ಕೂಡ ಕರಾವಳಿ ಭಾಗಕ್ಕೆ ಭರ್ಜರಿ ಗಿಫ್ಟ್ ನೀಡಲು ಮುಂದಾಗಿದೆ. ಈ ಬಗ್ಗೆ ಉಡುಪಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಆರ್ಥಿಕ ವಲಯದಲ್ಲಿ ಕರಾವಳಿಗೆ ಪ್ರಮುಖ ಸ್ಥಾನವಿದೆ. ಕರಾವಳಿಯ ಆರ್ಥಿಕ ಚಟುವಟಿಕೆ ಅಭಿವೃದ್ಧಿಗೆ ಆದ್ಯತೆ ನೀಡುತ್ತೇವೆ. ಮೂಲ ಉದ್ಯೋಗಕ್ಕೆ ಬೆಂಬಲ ಕೊಡುವ ಕೆಲಸ ಮಾಡುತ್ತೇವೆ. ಕರಾವಳಿಯಲ್ಲಿ ಪ್ರವಾಸೋದ್ಯಮ ಬೆಳೆಸಲು ಕಾರ್ಯಕ್ರಮ ರೂಪಿಸುತ್ತೇವೆ. ಕಾದು ನೋಡಿ, ಬಜೆಟ್‌ನಲ್ಲಿ (Karnataka Budget 2023) ಕರಾವಳಿಗೆ ಸೂಕ್ತ ಅನುದಾನ ನೀಡುತ್ತೇವೆ ಎಂದರು.
ಉಡುಪಿಯಲ್ಲಿ ಪರಶುರಾಮ ಥೀಂ ಪಾರ್ಕ್ ಲೋಕಾರ್ಪಣೆ
ಉಡುಪಿಯಲ್ಲಿ ಸುಮಾರು 14 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಪರಶುರಾಮ ಥೀಂ ಪಾರ್ಕ್ ಅನ್ನು ಮುಖ್ಯಮಂತ್ರಿ ಬೊಮ್ಮಾಯಿ ಅವರು ಲೋಕಾರ್ಪಣೆ ಮಾಡಿದರು. ಕಾರ್ಕಳದ ಬೈಲೂರಿನಲ್ಲಿರುವ ಉಮಿಕಲ್ ಕುಂಜ ಬೆಟ್ಟದಲ್ಲಿ ಈ ಪಾರ್ಕ್ ನಿರ್ಮಾಣ ಮಾಡಲಾಗಿದ್ದು, ಪರಶುರಾಮನ 33 ಅಡಿ ಎತ್ತರದ ಕಂಚಿನ ಪ್ರತಿಮೆ ಕಾಣಬಹುದು. ಸಚಿವ ಸುನೀಲ್ ಕುಮಾರ್ ನೇತೃತ್ವದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವ ಎಸ್. ಅಂಗಾರ, ನಟ ರಿಷಬ್ ಶೆಟ್ಟಿ, ಶಾಸಕ ರಘುಪತಿ ಭಟ್, ಲಾಲಾಜಿ ಮೆಂಡನ್ ಭಾಗಿಯಾದರು.
ಪರಶುರಾಮ ಥೀಂ ಪಾರ್ಕ್, ಪುತ್ಥಳಿ ಅನಾವರಣ ಮಾಡಿದ ನಾವು ಭಾಗ್ಯವಂತರು. ಇದೊಂದು ಇತಿಹಾಸ ಸೃಷ್ಟಿ ಮಾಡಿದ ದಿನ ಎಂದು ಹೇಳುತ್ತೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು. ಪರಶುರಾಮ ರೋಚಕ ಕಥೆ ಇರುವ ಅವತಾರ ಪುರುಷ. ಪರಶುರಾಮ ಮಹಾಭಾರತದಲ್ಲಿ ಕರ್ಣನ ವ್ಯಕ್ತಿತ್ವದಂತೆಯೇ. ಶಿವನಿಂದ ವರ ಪಡೆದ ವೀರ ಶೂರ ಅಗಾಧ ಶಕ್ತಿ ಹೊಂದಿದ್ದ ವ್ಯಕ್ತಿ ಪರಶುರಾಮ. ರೇಣುಕಾದೇವಿಯ ಪ್ರೀತಿಯ ಮಗ ಕೊನೆಗೆ ತಾಯಿಯ ಶಿರಚ್ಛೇದನ ಮಾಡುತ್ತಾನೆ. ವಿಶ್ವವನ್ನು 21 ಬಾರಿ ಸುತ್ತಿ ಗೆಲುವು ಸಾಧಿಸುತ್ತಾನೆ. ಸಮುದ್ರಕ್ಕೆ ಕೊಡಲಿ ಎಸೆದು ಭೂಭಾಗ ಸೃಷ್ಟಿಸಿದ ಸೃಷ್ಟಿಕರ್ತನ ಕಥೆ ಪುರಾಣದಲ್ಲಿದೆ. ಮುಂದಿನ ಪೀಳಿಗೆಗೆ ಈ ಕಥೆ ಬೇಕಾಗುತ್ತದೆ. ಅದಕ್ಕಾಗಿ ಈ ಥೀಂ ಪಾರ್ಕ್ ಸ್ಥಾಪನೆ ಆಗಿದೆ ಎಂದರು.
ಸಚಿವ ಸುನೀಲ್ ಕುಮಾರ್ ಹೊಸ ಇತಿಹಾಸ ಸೃಷ್ಟಿ ಮಾಡಿದ್ದಾರೆ. ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವುದು ಜನ ಸೇವಕನ ಗುಣವಾಗಿದೆ. ನಾನು ಪರಶುರಾಮನ ಭಕ್ತನಾಗಿ ಉದ್ಘಾಟನೆಗೆ ಬಂದಿದ್ದೇನೆ. ಥೀಂ ಪಾರ್ಕ್ ಟೂರಿಸಂ ಸೆಂಟರ್ ಜೊತೆ ಪುಣ್ಯಭೂಮಿ ಕೂಡಾ ಆಗಲಿದೆ. ಉಡುಪಿಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ ಇದೆ. ಕರಾವಳಿಗೆ ಟೂರಿಸಂನ ಮಾಸ್ಟರ್ ಪ್ಲ್ಯಾನ್ ಮಾಡಿದ್ದೇವೆ. ಈ ಭಾಗದ ಜನ ಪರಿಶ್ರಮ ಜೀವಿಗಳು. ಕರಾವಳಿ ಭಾಗಕ್ಕೆ ಒಂದೂವರೆ ಲಕ್ಷ ಕೋಟಿ ರುಪಾಯಿ ಹೂಡಿಕೆಗೆ ಮುಂದೆ ಬಂದಿದ್ದಾರೆ. ಕರಾವಳಿಗೆ ಪ್ಯಾಕೇಜ್ ಕೊಡಲ್ಲ, ಆದರೆ ಬದುಕು ಕಟ್ಟಿಕೊಡುತ್ತೇವೆ. ಪರಶುರಾಮನ ಸ್ಥಾಪನೆ ನಂತರ ತುಳುನಾಡು ಬಂಗಾರದ ನಾಡು ಆಗಲಿದೆ ಎಂದರು.
ಇದನ್ನೂ ಓದಿ: ಕಾಂಗ್ರೆಸ್ ಅವಧಿಯಲ್ಲಿ ದಾಖಲಾಗಿರುವ 59 ಕೇಸ್ ಲೋಕಾಯುಕ್ತಕ್ಕೆ ಹಸ್ತಾಂತರ: ಸಿಎಂ ಬೊಮ್ಮಾಯಿ
ಮೋದಿ ಬಂದಾಗ ಜನಸಾಗರ ನೋಡಿ ಸಿದ್ದರಾಮಯ್ಯ ಭಯಬಿದ್ದಿದ್ದಾರೆ: ಸಿಎಂ ಬೊಮ್ಮಾಯಿ
ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಕಾರ್ಯಕ್ರಮಗಳನ್ನು ಉದ್ಘಾಟಿಸುವ ನೆಪದಲ್ಲಿ ರಾಜ್ಯಕ್ಕೆ ಆಗ್ಗಾಗೆ ಭೇಟಿ ನೀಡುತ್ತಿದ್ದು, ಜನಸಾಗರವೇ ಹರಿದು ಬರುತ್ತಿದೆ. ಈ ಬಗ್ಗೆ ಟೀಕಿಸಿದ್ದ ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಸಿಎಂ ಬೊಮ್ಮಾಯಿ, ರಾಹುಲ್ ಗಾಂಧಿಯವರು ರಾಜ್ಯಕ್ಕೆ ಬಂದಾಗ ಜನ ಸೇರಲ್ಲ, ಮೋದಿಯವರು ಬಂದಾಗ ಜನಸಾಗರವೇ ಬರುತ್ತದೆ. ಇದನ್ನು ನೀಡಿ ಸಿದ್ದರಾಮಯ್ಯ ಭಯಪಟ್ಟಿದ್ದಾರೆ. ಗುಲ್ಬರ್ಗ ಬೆಂಗಳೂರು ಮೈಸೂರು ಮಂಗಳೂರು ಮೋದಿ ಸಭೆ ನೋಡಿ ಗಾಬರಿ ಪಟ್ಟಿದ್ದಾರೆ. ತಮ್ಮ ಭಯ ಅಡಗಿಸಲು ಹೇಳಿಕೆ ನೀಡುತ್ತಾರೆ ಎಂದರು.
ಕರಾವಳಿ ಹಿಂದುತ್ವ ಪ್ರಯೋಗ ಶಾಲೆ ಎಂದು ಹೇಳಿಕೆ ನೀಡಿದ್ದ ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಸಿಎಂ, ನಾವು ಕರಾವಳಿಯನ್ನು ಹಿಂದುತ್ವ ಪ್ರಯೋಗ ಶಾಲೆ ಮಾಡಲು ಹೊರಟಿಲ್ಲ. ಕಾಂಗ್ರೆಸ್ ತುಷ್ಟೀಕರಣದ ರಾಜಕೀಯ ಮಾಡುತ್ತಿದೆ. ಒಂದು ವರ್ಗವನ್ನು ತಲೆಯ ಮೇಲೆ ಕೂರಿಸಿಕೊಂಡು ಕುಣಿಸುತ್ತಾ ಇದ್ದಾರೆ. ಬಡವರು ದೀನ ದಲಿತರು ಹಿಂದುಳಿದ ವರ್ಗದವರು ಹಲವಾರು ವರ್ಷ ಇವರನ್ನು ಬೆಂಬಲಿಸಿದವರು ಕೈಬಿಟ್ಟಿದ್ದಾರೆ. ತುಷ್ಟೀಕರಣದ ರಾಜಕೀಯ ಮಾಡಲು ನಾವು ಬಿಡಲ್ಲ ಎಂದರು.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಏನಿದೆ?
ಟೆಕ್ಸ್ ಟೈಲ್ ಪಾರ್ಕ್ ಸ್ಥಾಪನೆ ಮೂಲಕ ತಾಯಂದಿರು ಮತ್ತು ಮಹಿಳೆಯರಿಗೆ ಉದ್ಯೋಗ, ಮೀನುಗಾರರಿಗೆ 10 ಲಕ್ಷದ ಇನ್ಯೂರೆನ್ಸ್ ಹಾಗೂ ಮೀನುಗಾರರ ಮನೆಯ ಯಜಮಾನಿ ಮಹಿಳೆಗೆ ಬಡ್ಡಿ ರಹಿತ ಒಂದು ಲಕ್ಷ ರೂ ಸಾಲ, ಬೋಟ್ ಖರೀದಿಗೆ 25% ಸಬ್ಸಿಡಿ, ಮೀನುಗಾರಿಕಾ ಬೋಟ್ ಗಳಿಗೆ ಹೆಚ್ಚುವರಿ ಡಿಸೇಲ್ ಪೂರೈಕೆ, ನಾರಾಯಣ ಅಭಿವೃದ್ಧಿ ನಿಗಮ ಸ್ಥಾಪನೆ ಮತ್ತು 250 ಕೋಟಿ ಅನುದಾನ ಮೀಸಲು, ಬಂಟ ಸಮುದಾಯದ ಅಭಿವೃದ್ಧಿಗೂ ವಾರ್ಷಿಕ 250 ಕೋಟಿ, ಅಡಿಕೆ ಬೆಳೆ ಮತ್ತು ಅದರ ರೋಗದ ಪರಿಹಾರಕ್ಕೆ 50 ಕೋಟಿ ಮೀಸಲು, ಕರಾವಳಿಯಲ್ಲಿ ಸ್ವಾಮೀ ವಿವೇಕಾನಂದರ ಹೆಸರಿನಲ್ಲಿ ಕೋಮು ಸಾಮಾಜಿಕ ಮತ್ತು ಸೌಹಾರ್ದತೆ ಸಮಿತಿ, ಪ್ರತೀ ಪಂಚಾಯತ್ ನಲ್ಲೂ ಈ ಸಮಿತಿಗೆ ಅನುದಾನ ನೀಡುವುದಾಗಿ ವಿಪಕ್ಷ ಕಾಂಗ್ರೆಸ್ ಘೋಷಣೆ ಮಾಡಿದೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಸರ್ಕಾರ ಕರಾವಳಿ ಕರ್ನಾಟಕಕ್ಕೆ ಏನು ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:44 pm, Fri, 27 January 23