Basavaraj Bommai Birthday: ಕರ್ನಾಟಕದ ಮುಖ್ಯಮಂತ್ರಿಗೆ ಜನ್ಮದಿನದ ಶುಭಾಶಯಗಳು, ಬಸವರಾಜ ಬೊಮ್ಮಾಯಿ ರಾಜಕೀಯ ಜೀವನ ಇಲ್ಲಿದೆ

ಇಂದು ಬಸವರಾಜ ಬೊಮ್ಮಾಯಿ ಅವರ 63ನೇ ಜನ್ಮದಿನ. 2008 ರಿಂದ ಮೂರು ಬಾರಿ ಚುನಾಯಿತರಾದ ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾದ ಇವರು ಇಂದು ಮುಖ್ಯಮಂತ್ರಿಯಾಗಿ ರಾಜ್ಯವನ್ನು ಮುನ್ನಡೆಸುತ್ತಿದ್ದಾರೆ.

Basavaraj Bommai Birthday: ಕರ್ನಾಟಕದ ಮುಖ್ಯಮಂತ್ರಿಗೆ ಜನ್ಮದಿನದ ಶುಭಾಶಯಗಳು, ಬಸವರಾಜ ಬೊಮ್ಮಾಯಿ ರಾಜಕೀಯ ಜೀವನ ಇಲ್ಲಿದೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Follow us
TV9 Web
| Updated By: ವಿವೇಕ ಬಿರಾದಾರ

Updated on:Jan 28, 2023 | 8:40 AM

ಬಸವರಾಜ ಬೊಮ್ಮಾಯಿ (Basavaraj Bommai) ಎಂದೇ ಚಿರಪರಿಚಿತರಾಗಿರುವ ಬಸವರಾಜ ಸೋಮಪ್ಪ ಬೊಮ್ಮಾಯಿ ಅವರು ಇಂದು 63ನೇ ಜನ್ಮ ದಿನವನ್ನು (Basavaraj Bommi Birthday) ಆಚರಿಸಿಕೊಳ್ಳುತ್ತಿದ್ದಾರೆ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರಾಗಿರುವ ಇವರು ಜನತಾ ದಳ (ಯು)ದೊಂದಿಗೆ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. 2008ರಲ್ಲಿ ಪಕ್ಷ ತೊರೆದು ಕೇಸರಿ ಪಡೆ ಸೇರಿಕೊಂಡರು. ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಸಹಾಯಕನಾಗಿಯೂ ಗುರುತಿಸಿಕೊಂಡಿದ್ದರು. ಬಳಿಕ ವಿವಿಧ ಇಲಾಖೆಗಳ ಖಾತೆಯನ್ನು ನಿಭಾಯಿಸಿದ ಇವರು ಯಡಿಯೂರಪ್ಪ ಅವರ ಉತ್ತರಾಧಿಕಾರಿಯಾಗಿ ನೇಮಕಗೊಂಡರು. ಅದರಂತೆ ಕರ್ನಾಟಕ 23ನೇ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದರು. ಇವರ ರಾಜಕೀಯ ಜೀವನ ಇಲ್ಲಿದೆ.

ಹುಟ್ಟು: 1960 ಜನವರಿ 28

ಜನ್ಮ ಸ್ಥಳ: ಹುಬ್ಬಳ್ಳಿ

ವಿದ್ಯಾಭ್ಯಾಸ: ಮೆಕ್ಯಾನಿಕಲ್ ಇಂಜಿನಿಯರಿಂಗ್

ವೃತ್ತಿ: ಕೃಷಿಕ ಮತ್ತು ಕೈಗಾರಿಕೋದ್ಯಮಿ

ಜೀವನ ಸಂಗಾತಿ: ಚೆನ್ನಮ್ಮ

ಮಕ್ಕಳು: ಭರತ್ ಮತ್ತು ಅದಿತಿ

ರಾಜಕೀಯ ಪಕ್ಷ: ಬಿಜೆಪಿ

ಕ್ಷೇತ್ರ: ಶಿಗ್ಗಾಂವ್

ಬೊಮ್ಮಾಯಿ ಅವರು ಜನತಾ ದಳದೊಂದಿಗೆ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿ 1998 ಮತ್ತು 2008ರ ನಡುವೆ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. 2008 ಮತ್ತು 2013 ರ ನಡುವೆ ಜಲಸಂಪನ್ಮೂಲ ಮತ್ತು ಸಹಕಾರ ಸಚಿವರಾಗಿ ಸೇವೆ ಸಲ್ಲಿಸಿದರು. ಬೊಮ್ಮಾಯಿ ಅವರು ನಾಲ್ಕನೇ ಯಡಿಯೂರಪ್ಪ ಮಂತ್ರಿಮಂಡಲದಲ್ಲಿ ಕರ್ನಾಟಕದ ಗೃಹ ವ್ಯವಹಾರಗಳು, ಸಹಕಾರ, ಕಾನೂನು ಮತ್ತು ನ್ಯಾಯ, ಸಂಸದೀಯ ವ್ಯವಹಾರಗಳು ಮತ್ತು ಶಾಸಕಾಂಗ ಸಚಿವರಾಗಿ ಸೇವೆ ಸಲ್ಲಿಸಿದರು.

ಹಾವೇರಿ ಮತ್ತು ಉಡುಪಿ ಜಿಲ್ಲೆಗಳ ಉಸ್ತುವಾರಿ ಸಚಿವರಾಗಿಯೂ ಸೇವೆ ಸಲ್ಲಿಸಿದ ಬೊಮ್ಮಾಯಿ, 2021ರ ಜುಲೈ 28 ರಂದು ಬಿ.ಎಸ್.ಯಡಿಯೂರಪ್ಪನವರ ಉತ್ತರಾಧಿಕಾರಿಯಾಗಿ ಕರ್ನಾಟಕದ ಮುಖ್ಯಮಂತ್ರಿಯಾದರು. ಮಾಧ್ಯಮಗಳು ಮತ್ತು ಅವರ ಅನುಯಾಯಿಗಳು “ಕಾಮನ್ ಮ್ಯಾನ್ ಸಿಎಂ” ಎಂದು ಕರೆಯುತ್ತಾರೆ.

ಬಸವರಾಜ ಬೊಮ್ಮಾಯಿ ರಾಜಕೀಯ ಜೀವನ

ಬೊಮ್ಮಾಯಿ ಅವರು ಧಾರವಾಡ ಸ್ಥಳೀಯ ಅಧಿಕಾರಿಗಳ ಕ್ಷೇತ್ರದಿಂದ ಎರಡು ಬಾರಿ (1998 ಮತ್ತು 2004 ರಲ್ಲಿ) ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾದರು. ಅಂದಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರ ರಾಜಕೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. 2008ರ ಫೆಬ್ರವರಿ ತಿಂಗಳಲ್ಲಿ ಜನತಾ ದಳ (ಯುನೈಟೆಡ್) ತೊರೆದು ಭಾರತೀಯ ಜನತಾ ಪಕ್ಷ ಸೇರಿದರು.

ಅದೇ ವರ್ಷ ನಡೆದ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಅವರು ಹಾವೇರಿ ಜಿಲ್ಲೆಯ ಶಿಗ್ಗಾಂವ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಸಹಾಯಕರಾಗಿ ಗುರುತಿಸಿಕೊಂಡಿದ್ದರು. 2008 ಮತ್ತು 2013ರ ನಡುವೆ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಸದಾನಂದ ಗೌಡ ಮತ್ತು ಜಗದೀಶ್ ಶೆಟ್ಟರ್ ಅವರ ಸಂಪುಟದಲ್ಲಿ ಜಲಸಂಪನ್ಮೂಲ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿ: ಕರಾವಳಿಗೆ ಬಜೆಟ್​ನಲ್ಲಿ ಸೂಕ್ತ ಅನುದಾನ ನೀಡುತ್ತೇವೆ, ಕಾದು ನೋಡಿ ಎಂದ ಸಿಎಂ ಬಸವರಾಜ ಬೊಮ್ಮಾಯಿ

ಬೊಮ್ಮಾಯಿ ಅವರು ನೀರಾವರಿ ಯೋಜನೆಗಳಿಗೆ ನೀಡಿದ ಕೊಡುಗೆಗಳು ಮತ್ತು ಕರ್ನಾಟಕದ ನೀರಾವರಿ ವಿಷಯಗಳ ಬಗ್ಗೆ ಆಳವಾದ ಜ್ಞಾನಕ್ಕಾಗಿ ವ್ಯಾಪಕವಾಗಿ ಮೆಚ್ಚುಗೆ ಪಡೆದಿದ್ದರು. ಕರ್ನಾಟಕದ ಹಾವೇರಿ ಜಿಲ್ಲೆಯ ಶಿಗ್ಗಾಂವ್‌ನಲ್ಲಿ ಭಾರತದ ಮೊದಲ ಶೇ 100ರಷ್ಟು ಕೊಳವೆ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ. ಯಡಿಯೂರಪ್ಪ ಸಚಿವಾಲಯದಲ್ಲಿ ಅವರು ಪ್ರಮುಖ ಮಂತ್ರಿ ಖಾತೆಗಳನ್ನು ಹೊಂದಿದ್ದರು. ಗೃಹ ವ್ಯವಹಾರಗಳು, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾಗಿ ಮತ್ತು ಸಹಕಾರ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಹಾವೇರಿ ಮತ್ತು ಉಡುಪಿ ಜಿಲ್ಲೆಗಳ ಉಸ್ತುವಾರಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಡಿಸೆಂಬರ್ 2019 ರಲ್ಲಿ, ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ, ಹಿಂಸಾಚಾರ ಮತ್ತು ಗಲಭೆ ನಡೆದಿತ್ತು. ಈ ವೇಳೆ ಗೃಹಸಚಿವರಾಗಿದ್ದ ಬೊಮ್ಮಾಯಿ ಅವರು ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸಿದರು. ಕರ್ನಾಟಕದಲ್ಲಿ ಕೊರೋನಾ ಸಾಂಕ್ರಾಮಿಕದ ಎರಡನೇ ಅಲೆಯ ಸಮಯದಲ್ಲಿ ಬೊಮ್ಮಾಯಿ ಅವರು ಗೃಹ ಸಚಿವರಾಗಿ ಕಟ್ಟುನಿಟ್ಟಾದ ಲಾಕ್‌ಡೌನ್ ನಿಯಮಗಳನ್ನು ವಿಧಿಸಿದ್ದರು. ಹಾವೇರಿ ಜಿಲ್ಲೆಯ ಶಿಗ್ಗಾಂವ್‌ನಲ್ಲಿರುವ ತಮ್ಮ ನಿವಾಸವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿದ್ದರು. ಇದು ಶಿಗ್ಗಾಂವ್ ತಾಲೂಕು ಆಸ್ಪತ್ರೆಯ ಹೊರೆಯನ್ನು ಕಡಿಮೆ ಮಾಡಲು 50 ರೋಗಿಗಳಿಗೆ ಅವಕಾಶ ಕಲ್ಪಿಸಿತ್ತು.

ಬಿಎಸ್ ಯಡಿಯೂರಪ್ಪ ಅವರು ತಮ್ಮ ಅವಧಿಯ ಎರಡನೇ ವಾರ್ಷಿಕೋತ್ಸವದಂದು (26 ಜುಲೈ 2021) ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅದರ ಮರುದಿನ ಬೊಮ್ಮಾಯಿ ಅವರನ್ನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದರಲ್ಲದೆ ರಾಜ್ಯದ 23ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅಲ್ಲದೆ, ಬಿಜೆಪಿಯಿಂದ ಮುಖ್ಯಮಂತ್ರಿಯಾದ ನಾಲ್ಕನೇ ವ್ಯಕ್ತಿ ಇವರಾಗಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿದ ಮೊದಲ ದಿನವೇ ಕ್ಯಾಬಿನೆಟ್ ಸಭೆಯ ನಂತರ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನವನ್ನು ಘೋಷಿಸಿದರು. ರೈತರ ಮಕ್ಕಳಿಗೆ, ರಾಜ್ಯದ ವಿಧವೆಯರು, ದೈಹಿಕ ವಿಕಲಚೇತನರು ಮತ್ತು ಹಿರಿಯ ನಾಗರಿಕರ ಪಿಂಚಣಿಯನ್ನೂ ಹೆಚ್ಚಿಸಿದರು. 2021ರ ಆಗಸ್ಟ್ ತಿಂಗಳಲ್ಲಿ ಬೊಮ್ಮಾಯಿ ಅವರ ಆಡಳಿತದಲ್ಲಿ ಕರ್ನಾಟಕವು ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಜಾರಿಗೆ ತರಲಾಯಿತು. ಈ ನೀತಿಯನ್ನು ಜಾರಿಗೆ ತಂದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಬೊಮ್ಮಾಯಿ ಅವರ ಸರ್ಕಾರವು 2021ರ ಡಿಸೆಂಬರ್​ನಲ್ಲಿ ಮತಾಂತರ ನಿಷೇಧ ಕಾಯ್ದೆ (ಕರ್ನಾಟಕ ಧರ್ಮ ಸ್ವಾತಂತ್ರ್ಯದ ಹಕ್ಕು ಮಸೂದೆ) ಅಂಗೀಕರಿಸಿತು. ಬೊಮ್ಮಾಯಿ ಅವರು ತಮ್ಮ ಚೊಚ್ಚಲ ಕರ್ನಾಟಕ ಬಜೆಟ್ (2.6 ಲಕ್ಷ ಕೋಟಿಗಳ ವೆಚ್ಚ) ಅನ್ನು ಮಾರ್ಚ್ 2022 ರಲ್ಲಿ ಮಂಡಿಸಿದರು. ಫ್ಲೈ-ಓವರ್‌ಗಳು, ಅಂಡರ್-ಪಾಸ್, ಹೆದ್ದಾರಿಗಳು, ನಮ್ಮ ಮೆಟ್ರೋ ಮತ್ತು ಆಸ್ಪತ್ರೆಗಳ ನಿರ್ಮಾಣಕ್ಕಾಗಿ ಸುಮಾರು 30,000 ಕೋಟಿಗಳ ಅನುದಾನ ನೀಡಿದ್ದರು. ಬೆಂಗಳೂರು, ಒಳನಾಡು ಸಾರಿಗೆಗೆ 11,500 ಕೋಟಿ, ಮೇಕೆದಾಟು ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆ, ಮೇಲ್ಮಟ್ಟದ ಭದ್ರಾ ನದಿ ಮತ್ತು ಅರ್ಕಾವತಿ ನದಿ ಯೋಜನೆಗಳ ಅಭಿವೃದ್ಧಿಗೆ 9,500 ಕೋಟಿ ಅನುದಾನ ನೀಡಿದರು.

ಇದನ್ನೂ ಓದಿ: ಮಹಿಳೆಯರ ಮನ ಗೆಲ್ಲಲು ಸಿಎಂ ಬೊಮ್ಮಾಯಿ ಹೊಸ ಅಸ್ತ್ರ, ಗೃಹಿಣಿ ಶಕ್ತಿ ಯೋಜನೆಗೆ ಚಿಂತನೆ

ಮೇ 2022 ರಲ್ಲಿ, ಬೊಮ್ಮಾಯಿ ಅವರು ರಾಜ್ಯಕ್ಕೆ ಹೂಡಿಕೆಗಳನ್ನು ತರಲು ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ವಿಶ್ವ ಆರ್ಥಿಕ ವೇದಿಕೆಗೆ ಭೇಟಿ ನೀಡಿದರು. ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಹೂಡಿಕೆದಾರರನ್ನು ಆಕರ್ಷಿಸುವುದು ಅವರ ಮುಖ್ಯ ಕಾಳಜಿಯಾಗಿತ್ತು. ಬೊಮ್ಮಾಯಿ ಅವರು ಲುಲು ಗ್ರೂಪ್ ಇಂಟರ್‌ನ್ಯಾಶನಲ್ ಮತ್ತು ರಿನ್ಯೂ ಪವರ್ ಕಂಪನಿಗಳೊಂದಿಗೆ ಮುಂದಿನ ಏಳು ವರ್ಷಗಳಲ್ಲಿ 52,000 ಕೋಟಿ ರೂಪಾಯಿಗಳ ಹೂಡಿಕೆಗೆ MOUಗಳಿಗೆ ಸಹಿ ಹಾಕಿದರು.

ಅಕ್ಟೋಬರ್ 2022 ರಲ್ಲಿ, ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ರಾಯಚೂರು ಜಿಲ್ಲೆಯಿಂದ ಪ್ರಾರಂಭವಾಗುವ ‘ಜನಸಂಕಲ್ಪ ಯಾತ್ರೆ’ಯನ್ನು ರಾಜ್ಯಾದ್ಯಂತ ಪ್ರಾರಂಭಿಸಿದರು. ರಾಜ್ಯದಲ್ಲಿ ಪ್ರತಿಪಕ್ಷಗಳ ಭಾರತ್ ಜೋಡೋ ಯಾತ್ರೆಯನ್ನು ಎದುರಿಸಲು ಇದನ್ನು ಪ್ರಾರಂಭಿಸಲಾಗಿದೆ ಎಂದು ಹೇಳಲಾಗಿದೆ.

ನವೆಂಬರ್ 2022 ರಲ್ಲಿ, ಬೊಮ್ಮಾಯಿ ಅವರ ಸರ್ಕಾರವು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಿಸಿದ್ದ 108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಕೈಯಿಂದ ಉದ್ಘಾಟಿಸಿದರು. ಈ ಪ್ರತಿಮೆಯು ನಗರದ ಸಂಸ್ಥಾಪಕರ ವಿಶ್ವದ ಅತಿ ಎತ್ತರದ ಕಂಚಿನ ಪ್ರತಿಮೆಯಾಗಿ ವಿಶ್ವ ದಾಖಲೆ ಬರೆಯಿತು.

ಸದ್ಯ ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ವಿಪಕ್ಷಗಳ ಯಾತ್ರೆಗೆ ಸರಿಯಾಗಿ ಬಿಜೆಪಿ ಜನಸಂಕಲ್ಪ ಯಾತ್ರೆ ನಡೆಸುತ್ತಿದೆ. ಪ್ರತಿಯೊಂದು ಜಿಲ್ಲೆಗೆ ಭೇಟಿ ನೀಡುತ್ತಿರುವ ಬೊಮ್ಮಾಯಿ ಅವರು ಸರ್ಕಾರದ ಸಾಧನೆಗಳನ್ನು ಜನರ ಮುಂದಿಡುತ್ತಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:00 am, Sat, 28 January 23