ಮಹಿಳೆಯರ ಮನ ಗೆಲ್ಲಲು ಸಿಎಂ ಬೊಮ್ಮಾಯಿ ಹೊಸ ಅಸ್ತ್ರ, ಗೃಹಿಣಿ ಶಕ್ತಿ ಯೋಜನೆಗೆ ಚಿಂತನೆ
ಮಹಿಳೆಯರ ಮನ ಗೆಲ್ಲಲು ಇದೀಗ ಸಿಎಂ ಬೊಮ್ಮಾಯಿ ಗೃಹಿಣಿ ಶಕ್ತಿ ಎಂಬ ಯೋಜನೆಗೆ ಚಿಂತನೆ ನಡೆಸಿದ್ದಾರೆ. ಕಾಂಗ್ರೆಸ್ನ ಗೃಹಲಕ್ಷ್ಮಿ ಯೋಜನೆಗೆ ಸೆಡ್ಡುಹೊಡೆಯೋಕೆ ಈ ಯೋಜನೆ ಜಾರಿ ತರಲು ಬಿಜೆಪಿ ಮುಂದಾಗಿದೆ.
ಬೆಂಗಳೂರು: ಕಾಂಗ್ರೆಸ್ನ ಗೃಹಲಕ್ಷ್ಮೀ ಯೋಜನೆಗೆ ಸೆಡ್ಡುಹೊಡೆಯಲು ಸಿಎಂ ಬೊಮ್ಮಾಯಿ ಹೊಸ ಯೋಜನೆ ರೂಪಿಸಿದ್ದಾರೆ. ಮಹಿಳೆಯರ ಮನ ಗೆಲ್ಲಲು ಈ ಬಾರಿ ಬಜೆಟ್ನಲ್ಲಿ ಮಹಿಳೆಯರಿಗಾಗಿ ಹೊಸ ಯೋಜನೆ ತರಲು ಸಿಎಂ ಚಿಂತನೆ ನಡೆಸಿದ್ದು, ಈ ಸಂಬಂಧ ಇಂದು(ಜ.21) ಸಂಜೆ ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳ ಜೊತೆ ಸಿಎಂ ಬೊಮ್ಮಾಯಿ ಸಭೆ ನಡೆಸಲಿದ್ದಾರೆ. ಹಣದ ಲಭ್ಯತೆ ಆಧಾರದ ಮೇಲೆ ಗೌರವ ಧನ ಫಿಕ್ಸ್ ಮಾಡುವ ಮೂಲಕ ಈ ಬಜೆಟ್ನಲ್ಲಿಯೇ ಯೋಜನೆ ಘೋಷಣೆ ಮಾಡಿ ತಮ್ಮ ಸರ್ಕಾರವಧಿಯಲ್ಲೇ ಅನುಷ್ಠಾನಕ್ಕೆ ತರಲು ಸಿಎಂ ಪ್ಲ್ಯಾನ್ ಮಾಡಿದ್ದಾರೆ.
ಇನ್ನು ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿಯಿದ್ದು, ಈಗಾಗಲೇ ಪ್ರಚಾರ ಕಾರ್ಯ ಶುರುವಾಗಿದೆ. ಜನರನ್ನ ಸೆಳೆಯಲು ವಿವಿಧ ಯೋಜನೆಗಳನ್ನ ಪ್ರಕಟಿಸಲಾಗುತ್ತಿದೆ. ನಗರದ ಅರಮನೆ ಆವರಣದಲ್ಲಿ ಆಯೋಜಿಸಿದ್ದ ‘ನಾ ನಾಯಕಿ’ ಸಮಾವೇಶದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪ್ರತಿ ಕುಟುಂಬದ ಓರ್ವ ಗೃಹಿಣಿಗೆ ಪ್ರತಿ ತಿಂಗಳು 2,000 ರೂ. ಸಹಾಯಧನ ನೀಡುವ ‘ಗೃಹಲಕ್ಷ್ಮಿ’ ಯೋಜನೆಗೆ ಸಂಬಂಧಿಸಿದ ಭಿತ್ತ ಪತ್ರ ಅನಾವರಣ ಮಾಡುವ ಮೂಲಕ ಅಧಿಕೃತವಾಗಿ ಯೋಜನೆಯನ್ನು ಘೋಷಿಸಿದ್ದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆದು ಅಧಿಕಾರಕ್ಕೇರಿದರೆ ರಾಜ್ಯದ ಪ್ರತಿ ಕುಟುಂಬದ ಯಜಮಾನಿಗೆ ತಿಂಗಳಿಗೆ 2,000 ರೂಪಾಯಿ ನೀಡಲಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು. ರಾಜ್ಯದ ಮಹಿಳೆಯರೇ ನಿಮ್ಮ ಮನೆಯ ಗ್ಯಾಸ್ ಸಿಲಿಂಡರ್ ಖಾಲಿಯಾಗಿದೆ ಎಂಬ ಚಿಂತೆ ಬಿಡಿ. ನಿಮ್ಮ ಮನೆಯ ಸಿಲಿಂಡರ್ ತುಂಬಿಸುವುದು ಇನ್ಮುಂದೆ ಕಾಂಗ್ರೆಸ್ ಹೊಣೆ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿತ್ತು ಆದರೀಗ ಅದಕ್ಕೆ ವಿರುದ್ದವಾಗಿ ಬಿಜೆಪಿ ಗೃಹಿಣಿ ಶಕ್ತಿ ಯೋಜನೆಯನ್ನ ಜಾರಿಗೆ ತರಲು ಪ್ಲ್ಯಾನ್ ಮಾಡಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ