ಕಾಂಗ್ರೆಸ್ ಅವಧಿಯಲ್ಲಿ ದಾಖಲಾಗಿರುವ 59 ಕೇಸ್ ಲೋಕಾಯುಕ್ತಕ್ಕೆ ಹಸ್ತಾಂತರ: ಸಿಎಂ ಬೊಮ್ಮಾಯಿ
ಕಾಂಗ್ರೆಸ್ ಅವಧಿಯಲ್ಲಿ ದಾಖಲಾಗಿರುವ 59 ಕೇಸ್ಗಳನ್ನು ಲೋಕಾಯುಕ್ತ ಸಂಸ್ಥೆಗೆ ಹಸ್ತಾಂತರ ಮಾಡುತ್ತಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಹಾವೇರಿ: ಕಾಂಗ್ರೆಸ್ (Congress) ಅವಧಿಯಲ್ಲಿ ದಾಖಲಾಗಿರುವ 59 ಕೇಸ್ಗಳನ್ನು ಲೋಕಾಯುಕ್ತ ಸಂಸ್ಥೆಗೆ ಹಸ್ತಾಂತರ ಮಾಡುತ್ತಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಜಿಲ್ಲೆಯ ಹಿರೆಕೇರೂರು ಪಟ್ಟಣದಲ್ಲಿ ಜನಸಂಕಲ್ಪ ಸಮಾವೇಶದಲ್ಲಿ ಅವರು ಮಾತನಾಡಿ, ಭ್ರಷ್ಟಾಚಾರದ ವಿರುದ್ಧ ಸಮರ ಸಾರುತ್ತಿದ್ದ ಲೋಕಾಯುಕ್ತ ಮುಚ್ಚಿದರು. ಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಸೋಲು ಗ್ಯಾರಂಟಿ. ಸ್ವಜನ ಪಕ್ಷ ಪಾತ, ಭ್ರಷ್ಟಾಚಾರದಿಂದ ಕೂಡಿ ಎಲ್ಲಾ ಭಾಗ್ಯ ದೌರ್ಬಾಗ್ಯದಿಂದ ಮನೆಗೆ ಕಳಿಸಿದರು. ಅನ್ನ ಭಾಗ್ಯ – 30 ರೂಪಾಯಿ ಮೋದಿಯವರು ಕೊಟ್ಟಿದ್ದು, 3 ರೂಪಾಯಿ ಸಿದ್ದರಾಮಯ್ಯ ಚೀಲ ಅಷ್ಟೇ. ಮೂರು ವರ್ಷ 4 ಕೆ.ಜಿ ಅಕ್ಕಿ ಕೊಟ್ಟಿದಾರೆ ನಾಚಿಕೆ ಆಗಲ್ವಾ ಎಂದರು.
ಈಗ 10 ಕೆ.ಜಿ ಕೊಡ್ತಿವಿ ಅಂತಿದಾರೆ. 7 ಕೆ.ಜಿ ಮದ್ಯ 3 ಕೆ.ಜಿ ಯಾಕೆ ಮಾಡಿದ್ರಿ. ಅನ್ನದಲ್ಲಿ ಕನ್ನ, ಅಕ್ಕಿ ಮಿಲ್ಗೆ ಹೋಯ್ತು. ಅದನ್ನು ತನಿಖೆ ಮಾಡ್ತಿದ್ದ ಅಧಿಕಾರಿ ನಿಗೂಢವಾಗಿ ಉತ್ತರ ಪ್ರದೇಶದಲ್ಲಿ ಸಾವನ್ನಪ್ಪಿದರು. ಈ ಬಗ್ಗೆ ಏನು ಹೇಳ್ತೀರಿ ಎಂದು ಸಿಎಂ ಬೊಮ್ಮಾಯಿ ಪ್ರಶ್ನಿಸಿದರು.
ಇದನ್ನೂ ಓದಿ: ಕೋಲಾರದಲ್ಲಿ ರಾಜಕೀಯ ಮೇಲಾಟ, ಟಗರು ಲೆಕ್ಕಾಚಾರ ಉಲ್ಟಾಪಲ್ಟಾ: ಸಿದ್ದರಾಮಯ್ಯಗೆ ಶುರುವಾಯ್ತು ಮತ್ತೊಂದು ಆತಂಕ
ಸಿದ್ಧರಾಮಯ್ಯಗೆ ತಿರುಗೇಟು ನೀಡಿದ ಸಿಎಂ ಬೊಮ್ಮಾಯಿ
ನಮ್ಮ ಪಕ್ಷದಲ್ಲಿ ಇದ್ದವರು ಬಿಜೆಪಿಗೆ ಹೋಗಿ ಮಾತಾಡುತ್ತಿದ್ದಾರೆ ಅಂತಿರಾ. ನೀವೂ ಏನು ಮೊದಲಿನಿಂದಲೂ ಕಾಂಗ್ರೆಸ್ನಲ್ಲೆ ಇದ್ರಾ. ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಬಗ್ಗೆ ಬಾಯಿಗೆ ಬಂದಂಗೆ ಮಾತಾಡಿ, ಇಂದು ಅದೇ ಪಕ್ಷಕ್ಕೆ ಹೋಗಿ ಸಿಎಂ ಆದ್ರಿ. ಇಂದು ವಿಪಕ್ಷ ನಾಯಕ ಆಗಿಲ್ವಾ ಎಂದು ಸುಧಾಕರ ಬಗ್ಗೆ ಟಿಕೆ ಮಾಡಿದ್ದ ಸಿದ್ಧರಾಮಯ್ಯಗೆ ಸಿಎಂ ಬೊಮ್ಮಾಯಿ ತಿರುಗೇಟು ನೀಡಿದರು.
ನಿಮ್ಮ ಕೊಡುಗೆ ಚಿಮಣಿ ಹಚ್ಚಿ ನೋಡಿದ್ರೂ ಸಿಗಲ್ಲ
2013ರಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ಹಾವೇರಿಗೆ ಮೆಡಿಕಲ್ ಕಾಲೇಜ್ ಮಂಜೂರು ಮಾಡಿದ್ರು. ಅದರ ಬಳಿಕ ಸಿದ್ದರಾಮಯ್ಯ ಮುಖ್ಯಮಂತ್ರಿ ಆದ್ರು. ಆಗ ಹಾವೇರಿಗೆ ಇದ್ದ ಮೇಡಿಕಲ್ ಕಾಲೇಜ್ ಗದಗಗೆ ಶಿಫ್ಟ್ ಮಾಡಿದ್ರು. ಯಡಿಯೂರಪ್ಪನವರ ಕಾಲದಲ್ಲಿ 1 ಲಕ್ಷ ಎಕರೆ ಜಮೀನು ನೀರಾವರಿ ಮಾಡಿದ್ದೆವು. ಬನ್ನಿ ನೋಡ್ರಿ ಸಿದ್ದರಾಮಯ್ಯನವರೆ ನಮ್ಮ ಕೊಡುಗೆ. ನಿಮ್ಮ ಕೊಡುಗೆ ಚಿಮಣಿ ಹಚ್ಚಿ ನೋಡಿದ್ರೂ ಹಾವೇರಿ ಜಿಲ್ಲೆಯಲ್ಲಿ ಸಿಗಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್ ನಾಯಕರಿಗೆ ಸಿಎಂ ಬೊಮ್ಮಾಯಿ ಸವಾಲು
ಹಾನಗಲ್ನಲ್ಲಿ ಬಂದು ಚುನಾವಣೆ ಮಾಡಿ ಹೋಗಿದಿಯಾ ಅಲ್ಲ. ಬಾರಣ್ಣಾ ಸಿದ್ಧರಾಮಣ್ಣಾ ಹಾನಗಲ್ ಕ್ಷೇತ್ರದಲ್ಲಿ ನಮ್ಮ ನೀರಾವರಿ ಕೋಡುಗೆ ನೊಡುವಂತೆ. ಜಿಲ್ಲೆಯ ಪ್ರತಿ ಕ್ಷೇತ್ರದಲ್ಲಿ ನೀರಾವರಿ ಯೋಜನೆ ನೀಡಿದ್ದೇವೆ. ಬನ್ರಿ ಕಾಂಗ್ರೆಸ್ನವರೆ ಬಂದು ನೊಡ್ಕೊಂಡ್ ಹೋಗಿ. ನಿಮ್ಮ ಅವಧಿಯ ಸಾಧನೆ ಅಭಿವೃದ್ಧಿ ಹೇಳಿ ಎಂದು ಕಾಂಗ್ರೆಸ್ ನಾಯಕರಿಗೆ ಸಿಎಂ ಬೊಮ್ಮಾಯಿ ಸವಾಲು ಹಾಕಿದರು. ಮತ್ತು ಹಾವೇರಿ ಜಿಲ್ಲೆಯಲ್ಲಿ ಬಿಜೆಪಿ ಸರ್ಕಾರ ಮಾಡಿದ ಅಭಿವೃದ್ದಿ ಕಾರ್ಯಗಳ ಬಗ್ಗೆ ಎಳೆಎಳೆಯಾಗಿ ಸಮಾವೇಶದಲ್ಲಿ ಬಿಚ್ಚಿಟ್ಟರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:49 pm, Wed, 25 January 23