ಬೆಳಗಾವಿ, ಅ.08: ಲೋಕಸಭೆ ಚುನಾವಣೆ(Loka Sabha Elections)ಗೆ ಕೆಲವೇ ತಿಂಗಳುಗಳು ಬಾಕಿ ಇದ್ದು, ಚಿಕ್ಕೋಡಿ (Chikkodi) ಬಿಜೆಪಿ ಪಾಳಯದಲ್ಲಿ ಟಿಕೆಟ್ ಪಡೆಯಲು ಈಗಿನಿಂದಲೇ ತೆರೆಮರೆಯ ಕಸರತ್ತು ಜೋರಾಗಿದೆ. ಮಾಜಿ ಸಂಸದ ಹಾಗೂ ದಿವಂಗತ ಉಮೇಶ ಕತ್ತಿ ಸಹೋದರ ರಮೇಶ್ ಕತ್ತಿ(Ramesh katti) ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ (Mahantesh kavatagimath)ಈಗಾಗಲೇ ಬಹಿರಂಗವಾಗಿ ಟಿಕೆಟ್ಗೆ ಬೇಡಿಕೆ ಇಟ್ಟಿದ್ದಾರೆ. ಈ ಬಾರಿ ಟಿಕೆಟ್ ನನಗೆ ಸಿಗುತ್ತೆ ಎನ್ನುವ ಲೆಕ್ಕಾಚಾರದಲ್ಲಿ ಇರುವ ಹಾಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ(Annasaheb Jolle)ಚುನಾವಣೆಗೆ ತಯಾರಿ ಆರಂಭಿಸಿದ್ದಾರೆ.
ಚಿಕ್ಕೋಡಿ ಪಟ್ಟಣದಲ್ಲಿ ತಮ್ಮ 61ನೇ ಜನ್ಮದಿನ ಅದ್ಧೂರಿಯಾಗಿ ಆಚರಿಸಿಕೊಳ್ಳುವ ಮೂಲಕ ಚುನಾವಣಾ ಪ್ರಚಾರಕ್ಕೆ ಧುಮುಕಿದ್ದಾರೆ. ಚಿಕ್ಕೋಡಿ ಲೋಕಸಭೆಯನ್ನೇ ಟಾರ್ಗೇಟ್ ಮಾಡಿ ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಟ್ಯಾಲೆಂಟ್ ಸ್ಪರ್ಧೆ ಆಯೋಜಿಸಿ, ನಿನ್ನೆ(ಅ.07) ಚಿಕ್ಕೋಡಿಯಲ್ಲಿ ಗ್ರ್ಯಾಂಡ್ ಫೈನಲ್ ಸಮಾರಂಭ ಮಾಡಿದರು. ಇಂದು ಚಿಕ್ಕೋಡಿಯ ಆರ್.ಡಿ.ಹೈಸ್ಕೂಲ್ ಮೈದಾನದಲ್ಲಿ ಅದ್ಧೂರಿ ಸಮಾರಂಭ ಮಾಡುವ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಇನ್ನು ಈ ಜನ್ಮದಿನ ಆಚರಣೆಯನ್ನು ಚುನಾವಣೆ ಪ್ರಚಾರ ಎಂದು ತಿಳಿದುಕೊಳ್ಳಬಹುದು ಎಂದು ಸಂಸದ ಅಣ್ಣಾಸಾಹೇಬ್ ಜೊಲ್ಲೆ ಪತ್ನಿ ಶಾಸಕಿ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ಇನ್ನು ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಈಗಿನಿಂದಲೇ ಹಾಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಅವರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಸಂಸದ ಅಣ್ಣಾಸಾಹೇಬ್ ಜೊಲ್ಲೆ ಅವರ ಜನ್ಮದಿನ ಸಮಾರಂಭಕ್ಕೆ ಆಹ್ವಾನ ಇದ್ದರೂ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ಚಿಕ್ಕೋಡಿ ಲೋಕಸಭಾ ಟಿಕೆಟ್ಗಾಗಿ ಬೇಡಿಕೆ ಇಟ್ಟಿದ್ದ ಮಾಜಿ ಸಂಸದ ರಮೇಶ್ ಕತ್ತಿ ಹಾಗೂ ಮಾಜಿ ಎಂಎಲ್ಸಿ ಮಹಾಂತೇಶ್ ಕವಟಗಿಮಠ ಕಾರ್ಯಕ್ರಮಕ್ಕೆ ಗೈರಾಗಿದ್ದು, ಈ ಕುರಿತು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ರಾಜಕೀಯ ವಲಯದಲ್ಲಿ ತರಹೇವಾರು ಚರ್ಚೆ ಶುರುವಾಗಿದೆ.
ಆಹ್ವಾನ ಪತ್ರಿಕೆಯಲ್ಲಿ ಪ್ರಮುಖ ಉಪಸ್ಥಿತಿ ಎಂದು ಹುಕ್ಕೇರಿ ಬಿಜೆಪಿ ಶಾಸಕ ನಿಖಿಲ್ ಕತ್ತಿ, ಮಾಜಿ ಸಂಸದ ರಮೇಶ್ ಕತ್ತಿ, ಮಾಜಿ ಎಂಎಲ್ಸಿ ಮಹಾಂತೇಶ್ ಕವಟಗಿಮಠ ಹೆಸರಿದ್ದರೂ ಮೂವರು ನಾಯಕರು ಗೈರಾಗಿದ್ದಾರೆ. ಇನ್ನೂ ಕಾರ್ಯಕ್ರಮದಲ್ಲಿ ರಾಯಬಾಗ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಹಾಗೂ ಮಾಜಿ ಶಾಸಕ ಪಿ.ರಾಜೀವ್ ಭಾಗಿಯಾಗಿದ್ದರು. ಸಂಸದ ಅಣ್ಣಾಸಾಹೇಬ್ ಜೊಲ್ಲೆ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಮಾಜಿ ಶಾಸಕ ಪಿ ರಾಜೀವ್ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಅಣ್ಣಾಸಾಹೇಬ್ ಜೊಲ್ಲೆ ಅವರನ್ನ ಗೆಲ್ಲಿಸುವಂತೆ ಮನವಿ ಮಾಡುವ ಮೂಲಕ ಅಣ್ಣಾಸಾಹೇಬ್ ಜೊಲ್ಲೆ ಪರ ಬ್ಯಾಟ್ ಬೀಸಿದ್ದಾರೆ. ಒಟ್ಟಿನಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಪಾಳಯದಲ್ಲಿ ಈಗಿನಿಂದಲೇ ಅಸಮಾಧಾನದ ಹೊಗೆಯಾಡುತ್ತಿದ್ದು, ಬಿಜೆಪಿ ನಾಯಕರು ಇದನ್ನ ಹೇಗೆ ನಿಭಾಯಿಸುತ್ತಾರೆ, ಚಿಕ್ಕೋಡಿ ಲೋಕಸಭಾ ಬಿಜೆಪಿ ಟಿಕೆಟ್ ಯಾರ ಪಾಲಾಗುತ್ತೆ ಎಂಬುದಕ್ಕೆ ಕಾಲವೇ ಉತ್ತರಿಸಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ