ಪ್ರತಾಪ್ ಸಿಂಹಗೆ ಚೇಲಾಗಿರಿ ಮಾಡಿ ರೂಢಿ ಇರಬೇಕು: ಎಂಬಿ ಪಾಟೀಲ್​ ವಾಗ್ದಾಳಿ

|

Updated on: Jun 20, 2023 | 11:08 AM

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕಾರ ಬಿಟ್ಟು ಕೊಡುವ ಇರಾದೆ ಇಲ್ಲ. ಹೀಗಾಗಿ ಸಿದ್ದರಾಮಯ್ಯ ತಮ್ಮ ಚೇಲಾ ಪಡೆ ಮೂಲಕ ತಾವು ಪೂರ್ಣ ಅವಧಿಗೆ ಸಿಎಂ ಅಂತಾ ಹೇಳಿಸುತ್ತಿದ್ದಾರೆ ಎಂಬ ಸಂಸದ ಪ್ರತಾಪ್​ ಸಿಂಹ ಹೇಳಿಕೆಗೆ ಸಚಿವ ಎಂಬಿ ಪಾಟೀಲ್​ ತಿರುಗೇಟು ನೀಡಿದ್ದಾರೆ.

ಪ್ರತಾಪ್ ಸಿಂಹಗೆ ಚೇಲಾಗಿರಿ ಮಾಡಿ ರೂಢಿ ಇರಬೇಕು: ಎಂಬಿ ಪಾಟೀಲ್​ ವಾಗ್ದಾಳಿ
ಸಂಸದ ಪ್ರತಾಪ್​ ಸಿಂಹ (ಎಡಚಿತ್ರ) ಸಚಿವ ಎಂಬಿ ಪಾಟೀಲ್​ (ಬಲಚಿತ್ರ)
Follow us on

ಬೆಂಗಳೂರು: ನಾನು ಕಾಂಗ್ರೆಸ್ (Congress) ‌ಪಕ್ಷದ ಚೇಲಾ, ಯಾರಿಗೂ ಚೇಲಾ ಅಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯರಿಗಿಂತ (Siddaramaiah) ಮುಂಚೆ ನಾನು ಕಾಂಗ್ರೆಸ್​ಗೆ ಬಂದವನು. ಆರು ಬಾರಿ ಶಾಸಕ, ಒಂದು ಬಾರಿ ಸಂಸದನಾಗಿ ಕೆಲಸ ಮಾಡಿದ್ದೇನೆ. ಪ್ರತಾಪ್ ಸಿಂಹಗೆ (Pratap Simha) ಚೇಲಾ ಕೆಲಸ ಮಾಡಿದ ಅನುಭವ ಇರಬೇಕು. ಸಿದ್ದರಾಮಯ್ಯ ನಮ್ಮ ಹಿರಿಯ ನಾಯಕರು. ನಮ್ಮ ಜನಪ್ರಿಯ ನಾಯಕರು. ಇಡೀ ರಾಜ್ಯದಲ್ಲಿ ಪ್ರಮುಖ ನಾಯಕರು ಎಂದು ಸಿದ್ದರಾಮಯ್ಯ ಚೇಲಾ ಎಂ.ಬಿ.ಪಾಟೀಲ್ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಸಚಿವ ಎಂ.ಬಿ.ಪಾಟೀಲ್ (MB Patil)​ ತಿರುಗೇಟು ನೀಡಿದ್ದಾರೆ.

ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಪ್ರತಾಪ್ ಸಿಂಹ ಅವರಿಗೆ ಚೇಲಾಗಿರಿ ಮಾಡಿ ರೂಢಿ ಇರಬೇಕು. ಇವರು ಚೇಲಾ ಅಂತಾರೆ, ಬಿ ಎಲ್ ಸಂತೋಷ್ ಚೇಳು ಅಂತಾರೆ. ಬಹುಶಃ ಸಂತೋಷ್ ಬುಟ್ಟಿಯಲ್ಲಿ ಇಂಥ ಚೇಳುಗಳೇ ಬಹಳ ಇರಬೇಕು. ಇವತ್ತು ಅವರಿಗೆ ಕಡಿಯಿರಿ, ನಾಳೆ ಇವರಿಗೆ ಕಡಿಯಿರಿ ಅಂತ ಸಂತೋಷ್ ಚೇಳು ಬಿಡುತ್ತಾರೆ ಅನಿಸುತ್ತದೆ. ಪ್ರತಾಪ್ ಸಿಂಹ ಅವರಿಗೆ ಸದ್ಬುದ್ಧಿ ಕೊಡಲಿ. ಪ್ರತಾಪ್ ಸಿಂಹ ಇದನ್ನೆಲ್ಲ ನಿಲ್ಲಿಸಿ ಅಕ್ಕಿ ಕೊಡಿಸುವ ಕೆಲಸ ಮಾಡಲಿ. ಪ್ರತಾಪ್ ಸಿಂಹ ಇನಿಷಿಯೇಟಿವ್​ ತೆಗೆದುಕೊಂಡು ಅಕ್ಕಿ ಕೊಡಿಸುವ ಪ್ರಯತ್ನ ಮಾಡಲಿ ಎಂದರು.

ನನ್ನ ಹೆಗಲ ಮೇಲೆ ಯಾರೂ ಬಂದೂಕು ಇಟ್ಟು ಹೊಡೆಯಬೇಕಿಲ್ಲ. ಯಾರಿಗಾದರೂ ಹೊಡೆಯಬೇಕು ಅಂದರೇ ನಾನೇ ಹೊಡೆಯುತ್ತೇನೆ. ನಾನು ವಿಜಯಪುರದವನು, ಆ ಶಕ್ತಿ ನನಗೆ ಇದೆ ಎಂದು ಸಚಿವ ಎಂ.ಬಿ.ಪಾಟೀಲ್ ವಾಗ್ದಾಳಿ ಮಾಡಿದರು.

ಇದನ್ನೂ ಓದಿ: ಧೈರ್ಯವಿದ್ದರೆ ಸಿದ್ದರಾಮಯ್ಯ 5 ವರ್ಷ ಸಿಎಂ ನಾನೆ ಅಂತ ಹೇಳಲಿ: ಪ್ರತಾಪ್​ ಸಿಂಹ

ಬಿಎಲ್​ ಸಂತೋಷ್ ಅವರನ್ನು​​ ಟೀಕೆ ಮಾಡಿದರೆ ಬ್ರಾಹ್ಮಣರಿಗೆ ಟೀಕೆ ಮಾಡಿದಂತೆ ಅಲ್ಲ. ಡಿ.ಕೆ.ಶಿವಕುಮಾರ್ ಟೀಕೆ ಮಾಡಿದರೇ ಒಕ್ಕಲಿಗರಿಗೆ ಟೀಕೆ ಮಾಡಿದಂತಲ್ಲ. ಅಪ್ಪಿ ತಪ್ಪಿಯೂ ಬ್ರಾಹ್ಮಣ ಸಮುದಾಯಕ್ಕೆ ಬೈದಿಲ್ಲ. ಶೇ 90ರಷ್ಟು ಬ್ರಾಹ್ಮಣ ಸಮುದಾಯ ನನ್ನನ್ನು ಬೆಂಬಲಿಸಿ ವೋಟ್​​ ಹಾಕಿದ್ದರು. ಬಿಎಲ್​ಡಿ ಸಂಸ್ಥೆಯ ರಿಜಿಸ್ಟ್ರಾರ್ ರಾಘವೇಂದ್ರ ಕುಲಕರ್ಣಿ ಬ್ರಾಹ್ಮಣರು. ಸಂಸದ ಪ್ರತಾಪ್ ಸಿಂಹ ವಿಜಯಪುರಕ್ಕೆ ಭೇಟಿ ನೀಡಿ ತಿಳಿದುಕೊಳ್ಳಲಿ. ನಮ್ಮ ಸಂಸ್ಥೆಯ ಶಿಕ್ಷಕರೂ ಬ್ರಾಹ್ಮಣರೇ ಎಂದು ತಿಳಿಸಿದರು.

ಇಂತಹ ಮಾನಸಿಕ ಸ್ಥಿತಿಯನ್ನು ಪ್ರತಾಪ್ ಸಿಂಹ ಎಲ್ಲಿ ಕಲಿತರೋ. ಪ್ರತಾಪ್​​ ಸಿಂಹ ಸಂಸದ ಸ್ಥಾನ ಇನ್ನು 10 ತಿಂಗಳು ಅಷ್ಟೇ ಇದೆ. ದಿನವೆಲ್ಲ ಪ್ರತಾಪ್ ಸಿಂಹಗೆ ಉತ್ತರ ಕೊಡುತ್ತಾ ಇರಲು ಆಗಲ್ಲ. ಪ್ರತಾಪ್ ಸಿಂಹ ಮನಸ್ಥಿತಿ ಬಗ್ಗೆ ಪಾಪ ಅನಿಸುತ್ತೆ. ಎಲ್ಲ ಜಾತಿಯ ಜನರನ್ನು ಒಟ್ಟಾಗಿ ಕೊಂಡೊಯ್ಯುವ ಹಿನ್ನೆಲೆ ನಮ್ಮದು. ಎಂ.ಬಿ.ಪಾಟೀಲ್​ ಬಳಿ ಇರೋದು ಚಿಲ್ಲರೆ ಖಾತೆ ಎಂದು ಹೇಳಿದ್ದಾರೆ. ಬೃಹತ್ ಕೈಗಾರಿಕೆ ಚಿಲ್ಲರೆ ಖಾತೆ ಎಂಬುದನ್ನು ಪ್ರಧಾನಿ ಬಳಿ ಕೇಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ