Anna Bhagya: ಕಾಂಗ್ರೆಸ್ ಕೈಯಲ್ಲಿ ಅಕ್ಕಿ ಕೊಡಲು ಆಗುತ್ತಿಲ್ಲ ಸುಳ್ಳು ಹೇಳುತ್ತಿದೆ: ಸಚಿವ ಪ್ರಹ್ಲಾದ್​ ಜೋಶಿ ವಾಗ್ದಾಳಿ

ಕರ್ನಾಟಕದಲ್ಲಿ ಅನ್ನ ಭಾಗ್ಯದ ಯೋಜನೆ ಅಡಿ 10 ಕೆಜಿ ಅಕ್ಕಿ ನೀಡುವ ವಿಚಾರವಾಗಿ ಆಢಳಿತಾರೂಢ ಕಾಂಗ್ರೆಸ್ ಹಾಗೂ ವಿಪಕ್ಷ ಬಿಜೆಪಿ ನಡುವೆ ವಾಗ್ಯುದ್ಧ ಶುರುವಾಗಿದೆ. ಕಾಂಗ್ರೆಸ್ ಪಕ್ಷದ ಕೈಯಲ್ಲಿ ಅಕ್ಕಿ ಕೊಡಲು ಆಗುತ್ತಿಲ್ಲ. ಹೀಗಾಗಿ ಸುಳ್ಳು ಹೇಳುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ.

Anna Bhagya: ಕಾಂಗ್ರೆಸ್ ಕೈಯಲ್ಲಿ ಅಕ್ಕಿ ಕೊಡಲು ಆಗುತ್ತಿಲ್ಲ ಸುಳ್ಳು ಹೇಳುತ್ತಿದೆ: ಸಚಿವ ಪ್ರಹ್ಲಾದ್​ ಜೋಶಿ ವಾಗ್ದಾಳಿ
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Follow us
ವಿವೇಕ ಬಿರಾದಾರ
|

Updated on: Jun 20, 2023 | 1:19 PM

ಧಾರವಾಡ: ಕರ್ನಾಟಕದಲ್ಲಿ ಅನ್ನ ಭಾಗ್ಯದ (Anna Bhagya) ಯೋಜನೆ ಅಡಿ 10 ಕೆಜಿ ಅಕ್ಕಿ ನೀಡುವ ವಿಚಾರವಾಗಿ ಆಢಳಿತಾರೂಢ ಕಾಂಗ್ರೆಸ್ (Congress)​ ಹಾಗೂ ವಿಪಕ್ಷ ಬಿಜೆಪಿ (BJP) ನಡುವೆ ವಾಗ್ಯುದ್ಧ ಶುರುವಾಗಿದೆ. ಕೇಂದ್ರ ಸರ್ಕಾರ (Central Government) ಹೆಚ್ಚುವರಿಯಾಗಿ ಅಕ್ಕಿ ನೀಡುತ್ತಿಲ್ಲವೆಂದು ಕಾಂಗ್ರೆಸ್​ ಆರೋಪಿಸುತ್ತಿದೆ. ಇತ್ತ ರಾಜ್ಯ ಬಿಜೆಪಿ ನಾಯಕರು ಕೇಂದ್ರ ಸರ್ಕಾರ ಈಗಾಗಲೆ 5 ಕೇಜಿ ಅಕ್ಕಿ ನೀಡುತ್ತಿದೆ ಎಂದು ಕಾಂಗ್ರೆಸ್​ ನಾಯಕರು ಒಪ್ಪಿಕೊಳ್ಳಲಿ ಎಂದು ವಾಗ್ದಾಳಿ ಮಾಡುತ್ತಿದ್ದಾರೆ. ಈ ಸಂಬಂಧ ಎರಡು ರಾಷ್ಟ್ರೀಯ ಪಕ್ಷಗಳು ಇಂದು (ಜೂ.20) ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತಿವೆ. ಕಾಂಗ್ರೆಸ್ ಪಕ್ಷದ ಕೈಯಲ್ಲಿ ಅಕ್ಕಿ ಕೊಡಲು ಆಗುತ್ತಿಲ್ಲ. ಹೀಗಾಗಿ ಸುಳ್ಳು ಹೇಳುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ(Pralhad Joshi) ಆರೋಪಿಸಿದ್ದಾರೆ.

ಧಾರವಾಡದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದು ತಿಂಗಳಾಯ್ತು. ಇನ್ನೂ ಒಂದು ಕೆಜಿ ಅಕ್ಕಿ ಸಹ ಕೊಟ್ಟಿಲ್ಲ. ಈಗ ಕೊಡುತ್ತಿರುವ 5 ಕೆಜಿ ಅಕ್ಕಿ ಕೇಂದ್ರ ಸರ್ಕಾರದ್ದು. ಅದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಿಂದ ಕೊಡುತ್ತಿರುವುದು ಎಂದರು.

ನ್ಯಾಷನಲ್ ಫುಡ್ ಸೆಕ್ಯೂರಿಟಿ ಆ್ಯಕ್ಟ್ ಅಡಿ ನಾವು ಕೊಡುತ್ತಿದ್ದೇವೆ. ಈ ಆ್ಯಕ್ಟ್ ಮಾಡಿದ್ದು ನಾವು ಅಂತ ಅವರು ಹೇಳುತ್ತಾರೆ. ಅವರು ಆ್ಯಕ್ಟ್ ಪಾಸ್ ಮಾಡಿದ್ದರೂ ಹಣ ಇಟ್ಟಿರಲಿಲ್ಲ. ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಇದನ್ನು ಶುರು ಮಾಡಿದ್ದಾರೆ. 80 ಕೋಟಿ ಜನರಿಗೆ ನಾವು ಉಚಿತವಾಗಿ ಅಕ್ಕಿ ಕೊಡುತ್ತಿದ್ದೇವೆ. ಉಳಿದ 60 ಕೋಟಿ ಜನಸಂಖ್ಯೆಗೆ ಕನಿಷ್ಠ ದರದಲ್ಲಿ ಅಕ್ಕಿ ಕೊಡಬೇಕಾಗುತ್ತದೆ. ಇದು ಕೇಂದ್ರ ಸರ್ಕಾರದ ಜವಾಬ್ದಾರಿ ಎಂದು ತಿಳಿಸಿದರು.

ಇದನ್ನೂ ಓದಿ: ತನ್ನ ವೈಫಲ್ಯ ಮುಚ್ಚಿಕೊಳ್ಳಲು ಪ್ರಧಾನಿಯನ್ನು ಎಳೆದು ತರುವ ಹರಸಾಹಸ: ಕಾಂಗ್ರೆಸ್ ವಿರುದ್ಧ ಸಿಟಿ ರವಿ ಕಿಡಿ

ರಾಜ್ಯ ಸರ್ಕಾರ ಎಫ್‌‌ಸಿಐದವರು ಕೊಟ್ಟರೇ ಕೊಡುತ್ತೇವೆ ಎಂದು ಹೇಳಿಲ್ಲ. ಹತ್ತು ಕೆಜಿ ಅಕ್ಕಿ ಕೊಡುತ್ತೇವೆ ಅಂತ ಅಷ್ಟೇ ಹೇಳಿದ್ದಾರೆ. ಪ್ರಧಾನಿ ಮೋದಿಯವರು ಕೊಡುತ್ತಿರುವ 5 ಕೆಜಿ ಬಿಟ್ಟು ಇವರು 10 ಕೆಜಿ ಕೊಡಬೇಕು. ಆದರೆ ಈಗ ಕೇಂದ್ರ ಸರ್ಕಾರದ ಮೇಲೆ ಕ್ಷುಲ್ಲಕ ಆರೋಪ ಮಾಡುತ್ತಿದ್ದಾರೆ. ಎಲ್ಲ ರಾಜ್ಯ ಸರ್ಕಾರಗಳು 10 ಕೆಜಿ ಕೊಡುತ್ತೇವೆ ಎಂದರೆ ಮುಂದೇನು? ಎಲ್ಲರಿಗೂ ಕೇಂದ್ರ ಸರ್ಕಾರ ಅಕ್ಕಿ ಕೊಡಲು ಆಗುತ್ತಾ? ಎಂದು ಪ್ರಶ್ನಿಸಿದರು.

ಕೆಲ ರಾಜ್ಯಗಳಲ್ಲಿ ಈಗ 10 ಕೆಜಿ ಕೊಡುತ್ತಿದ್ದಾರೆ. ಬಿಜೆಪಿ ಆಡಳಿತ ಇರುವ ರಾಜ್ಯಗಳಿಗೂ ಹೆಚ್ಚುವರಿ ಅಕ್ಕಿ ಕೊಟ್ಟಿಲ್ಲ. ಹೆಚ್ಚುವರಿ ಅಕ್ಕಿ ಆಯಾ ರಾಜ್ಯಗಳು ತಮ್ಮ ವ್ಯವಸ್ಥೆಯಲ್ಲಿ ಕೊಡುತ್ತಿವೆ. ಅದರ ಬಗ್ಗೆ ವಿಚಾರ ಮಾಡದೇ ಘೋಷಣೆ ಮಾಡಿದ್ದಾರೆ. ಈಗ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಕುಣಿಯಲು ಬರದವರು ನೆಲ ಡೊಂಕು ಅಂದಂತೆ ಸಿದ್ದರಾಮಯ್ಯ ನೀತಿಯಾಗಿದೆ. ತಮಗೆ ಹಣಕಾಸಿನ ಹೊಂದಾಣಿಕೆ ಮಾಡಲು ಆಗದೇ ಆರೋಪ ಮಾಡಿದ್ದಾರೆ ಎಂದು ವಾಗ್ದಾಳಿ ಮಾಡಿದರು.

ಸೌಜನ್ಯಕ್ಕಾದರು ಸಹ ರಾಜ್ಯ ಸರ್ಕಾರ 5 ಕೆಜಿ ಕೇಂದ್ರದ್ದು ಎಂದು ಹೇಳುತ್ತಿಲ್ಲ. ಇದು ಇವರ ದುರಂಹಕಾರ. ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿದ್ದಾರೆ. ಇವರು ಬಡವರನ್ನು ವೋಟ್ ಬ್ಯಾಂಕ್ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ