ಬಿಬಿಎಂಪಿ ಅಧಿಕಾರಿಗಳ ಜೊತೆ ಸುರ್ಜೇವಾಲ ಮೀಟಿಂಗ್: ಸ್ಪಷ್ಟನೆ ನೀಡಿದ ಸಚಿವ ರಾಮಲಿಂಗಾ ರೆಡ್ಡಿ
ಬಿಬಿಎಂಪಿ ಚುನಾವಣೆ ತಯಾರಿ ಸಂಬಂಧ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ನೇತೃತ್ವದಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಿನ್ನೆ (ಜೂ.13) ರಂದು ನಡೆದ ಸಭೆಗೆ ಬಿಜೆಪಿ ಟೀಕೆ ಮಾಡಿದೆ. ಇದಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಇಂದು ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು: ಬಿಬಿಎಂಪಿ (BBMP) ಚುನಾವಣೆ (Election) ತಯಾರಿ ಸಂಬಂಧ ಕರ್ನಾಟಕ ಕಾಂಗ್ರೆಸ್ (Congress) ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ (Randeep Singh Surjewala) ನೇತೃತ್ವದಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಿನ್ನೆ (ಜೂ.13) ರಂದು ನಡೆದ ಸಭೆಗೆ ಬಿಜೆಪಿ (BJP) ಟೀಕೆ ಮಾಡಿದೆ. ಇದಕ್ಕೆ ಸ್ಪಷ್ಟನೆ ನೀಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ನಿನ್ನೆ ಕಾಫಿ ಕುಡಿದು ಹೋದೆವು ಅಷ್ಟೇ, ಯಾವುದೇ ಚರ್ಚೆ ಆಗಿಲ್ಲ. ಸಭೆ ಬಗ್ಗೆ ಯಾವುದೇ ಪೂರ್ವ ನಿಯೋಜನೆ ಆಗಿಲ್ಲ ಎಂದರು
ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಕಾಂಗ್ರೆಸ್ ವಿರುದ್ಧ ರಾಜ್ಯಪಾಲರಿಗೆ ರಾಜ್ಯ ಬಿಜೆಪಿ ಘಟಕ ದೂರು ನೀಡಲು ಮುಂದಾಗಿರುವ ವಿಚಾರವಾಗಿ ಮಾತನಾಡಿದ ಅವರು ದೂರು ಕೊಡಲಿ ಬಿಡಿ, ಈಗ ಅವರು ವಿರೋಧ ಪಕ್ಷದಲ್ಲಿದ್ದಾರೆ. ಬಿಜೆಪಿ ನಾಯಕರು ಹಿಂದೆ ಮಾಡಿದ್ದನ್ನು ಮರೆತು ಹೋಗಿದ್ದಾರೆ. ನಾವು ಅಧಿಕಾರಕ್ಕೆ ಬಂದು ಇನ್ನೂ 20 ದಿನ ಆಗಿಲ್ಲ. ಬಿಜೆಪಿಯವರನ್ನು ಜನ ಎಲ್ಲಿ ಕೂರಿಸಬೇಕೋ ಅಲ್ಲಿ ಕೂರಿಸಿದ್ದಾರೆ. ಸರ್ಕಾರದ ತಪ್ಪುಗಳಿದ್ದರೆ ಬಿಜೆಪಿಯವರು ತಿದ್ದುವ ಕೆಲಸ ಮಾಡಲಿ ಎಂದರು.
ಇದನ್ನೂ ಓದಿ: ರಣದೀಪ್ ಸಿಂಗ್ ಸುರ್ಜೇವಾಲ ನೇತೃತ್ವದಲ್ಲಿ ಅಧಿಕಾರಿಗಳ ಸಭೆ: ಗವರ್ನರ್ಗೆ ದೂರು ನೀಡಲು ಮುಂದಾದ ಬಿಜೆಪಿ
ಕಾಂಗ್ರೆಸ್, ಬಿಜೆಪಿಯಿಂದ ಹೊಂದಾಣಿಕೆ ರಾಜಕಾರಣ ಆರೋಪ ವಿಚಾರವಾಗಿ ಮಾತನಾಡಿದ ಅವರು ಕಾಂಗ್ರೆಸ್, ಬಿಜೆಪಿ ಎಣ್ಣೆ ಸೀಗೆಕಾಯಿ ಇದ್ದಂತೆ. ಸಿ.ಟಿ ರವಿ ಸೋತಿದ್ದಾರೆ, ಹೊಟ್ಟೆ ಹುರಿಗೆ ಏನೋನೋ ಮಾತಾಡ್ತಾರೆ. ಬಿಜೆಪಿಯವರ ಬಳಿ ನಾವು ಯಾಕೆ ಒಪ್ಪಂದ ಮಾಡಿಕೊಳ್ಳೋಣ? ನಾವು ಜನರ ಜತೆ ಒಪ್ಪಂದ ಮಾಡಿಕೊಂಡಿದ್ದೇವೆ. ಬಿಜೆಪಿ ಮತ್ತು ಇತರೆ ಪಕ್ಷದ ಜತೆ ಯಾವ ಒಳ ಒಪ್ಪಂದ ಮಾಡಿಕೊಂಡಿಲ್ಲ ಎಂದು ಬಿಜೆಪಿ ನಾಯಕರ ಆರೋಪಕ್ಕೆ ಸಚಿವ ರಾಮಲಿಂಗಾರೆಡ್ಡಿ ಟಾಂಗ್ ಕೊಟ್ಟಿದ್ದಾರೆ.
ರಣದೀಪ್ ಸುರ್ಜೇವಾಲ ನೇರವಾಗಿ ಕರ್ನಾಟಕ ಸರ್ಕಾರ ನಡೆಸ್ತಿದ್ದಾರೆ: ಮಹೇಶ್ ಟೆಂಗಿನಕಾಯಿ
ರಣದೀಪ್ ಸುರ್ಜೇವಾಲ ನೇರವಾಗಿ ಕರ್ನಾಟಕ ಸರ್ಕಾರ ನಡೆಸ್ತಿದ್ದಾರೆ ಅನ್ನಿಸುತ್ತೆ. ಕರ್ನಾಟಕದ ಮುಖ್ಯಮಂತ್ರಿ ಆಗಲಿ, ಉಪಮುಖ್ಯಮಂತ್ರಿ ಆಗಲಿ ಸರ್ಕಾರ ನಡೆಸುತ್ತಿಲ್ಲ. ನೇರವಾಗಿ ಕಾಂಗ್ರೆಸ್ ಹೈಕಮಾಂಡ್ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ನಿನ್ನೆ ನಡೆದ ಶಾಂಗ್ರೀಲಾ ಹೊಟೆಲ್ ಘಟನೆ ನೋಡಿದರೇ, ಕಾಂಗ್ರೆಸ್ ಮುಖ್ಯಮಂತ್ರಿಗಳಿಗೆ ಫ್ರೀ ಹ್ಯಾಂಡ್ ಕೊಡುತ್ತಿಲ್ಲ. ಲೆಕ್ಕ ಸರಿ ಮುಟ್ಟಿಸುತ್ತಾರೋ ಇಲ್ವೋ ಅನ್ನೋದು ಕಾಂಗ್ರೆಸ್ ಹೈಕಮಾಂಡ್ಗೆ ಡೌಟ್ ಇರಬಹುದು. ಹಾಗಾಗಿ ಸುರ್ಜೇವಾಲಾ ಸಭೆ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ವಾಗ್ದಾಳಿ ಮಾಡಿದ್ದಾರೆ.
ಮುಖ್ಯಮಂತ್ರಿ,ಉಪಮುಖ್ಯಮಂತ್ರಿ ಸಭೆ ಮಾಡಿದ್ರೆ ನಮಗೆ ಅಭ್ಯಂತರ ಇರಲಿಲ್ಲ. ಯಾವುದೇ ಅಧಿಕಾರ ಇಲ್ಲದ ಸುರ್ಜೇವಾಲಾ ಮೀಟಿಂಗ್ ಮಾಡಿದ್ದು ನೋಡಿದರೇ ಕರ್ನಾಟಕದ ಕಾಂಗ್ರೆಸ್ ಮೇಲೆ ಅವರಿಗೆ ವಿಶ್ವಾಸ ಇಲ್ಲ. ಕಾಂಗ್ರೆಸ್ ಮುಖ್ಯಮಂತ್ರಿಯಾಗಲಿ, ಉಪಮುಖ್ಯಮಂತ್ರಿಗಳಿಗಾಗಲಿ ಸ್ಥಾನ ಮಾನ ಕೊಡುತ್ತಿಲ್ಲ. ಸುರ್ಜೇವಾಲಾ ನೇರವಾಗಿ ಕರ್ನಾಟಕ ಸರ್ಕಾರ ನಡೆಸುತ್ತಿದ್ದಾರೆ ಅನಸತ್ತೆ ಎಂದು ಹೇಳಿದ್ದಾರೆ.
ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ