ಮೈಸೂರು: ಜೆಡಿಎಸ್ನಿಂದ ಒಂದು ಕಾಲು ಆಚೆ ಇಟ್ಟಿದ್ದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿಟಿ ದೇವೇಗೌಡ ಬಿಜೆಪಿ ಹಾಗೂ ಕಾಂಗ್ರೆಸ್ ಮನೆ ಬಾಗಿಲು ತಟ್ಟಿದ್ದು, ಮುಂದಿನ ಚುನಾವಣೆ ಸಂದರ್ಭದಲ್ಲಿ ಅಂತಿಮವಾಗಿ ಕಾಂಗ್ರೆಸ್ ಇಲ್ಲ ಬಿಜೆಪಿ ಸೇರ್ಪಡೆ ಬಗ್ಗೆ ಚರ್ಚೆಗಳು ನಡೆದಿದ್ದವು. ಆದ್ರೆ, ಇದೀಗ ಜಿಟಿಡಿ ಜೆಡಿಎಸ್ನಲ್ಲೇ ಉಳಿದುಕೊಂಡಿದ್ದಾರೆ. ಜಿ. ಟಿ. ದೇವೇಗೌಡ ಅವರ ರಾಜಕೀಯ ನಡೆಯಿಂದ ಕಾಂಗ್ರೆಸ್ ಹಾಗೂ ಬಿಜೆಪಿಯ ರಾಜಕೀಯ ಲೆಕ್ಕಾಚಾರಗಳು ತಲೆಕೆಳಗಾಗಿವೆ.
ಜಿಟಿಡಿ ಜೆಡಿಎಸ್ನಲ್ಲೇ ಉಳಿದಿದ್ದಕ್ಕೆ ಮಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಎಸ್ ಟಿ ಸೋಮಶೇಖರ್, ಜಿ ಟಿ ದೇವೇಗೌಡರ ನಡೆ, ಮೀನಿನ ಹೆಜ್ಜೆ, ಎರಡನ್ನೂ ಕಂಡು ಹಿಡಿಯಲು ಆಗವುದಿಲ್ಲ ಎಂದು ನಾನು ಮೊದಲೇ ಹೇಳಿದ್ದೆ. ಜಿಟಿಡಿ ಜೆಡಿಎಸ್ ನಲ್ಲೇ ಉಳಿದಿರುವುದರಲ್ಲಿ ವಿಶೇಷತೆ ಏನೂ ಇಲ್ಲ ಎಂದರು.
ದೊಡ್ಡಗೌಡ್ರ ಪ್ಲಾನ್ ಸಕ್ಸಸ್: ಭಾರೀ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್-ಬಿಜೆಪಿಗೆ ಜಿಟಿಡಿ ಶಾಕ್!
ಬಿಜೆಪಿಯವರು ಜಿಟಿಡಿ ಅವರನ್ನು ಪಕ್ಷಕ್ಕೆ ಬರುವಂತೆ ಕರೆದಿರಲಿಲ್ಲ.ಕಾಂಗ್ರೆಸ್ ನವರ ಬಗ್ಗೆ ನನಗೆ ಗೊತ್ತಿಲ್ಲ.ಆದರೆ ನಾನಂತೂ ಅವರನ್ನು ಬಿಜೆಪಿಗೆ ಬರುವಂತೆ ಕೋರಿ ಸಂಪರ್ಕ ಮಾಡಿಲ್ಲ.ಜಿಲ್ಲಾ ಉಸ್ತುವಾರಿ ಸಚಿವನಾಗಿ ಎಲ್ಲಾ ಶಾಸಕರ ಜೊತೆ ನಾನು ಆತ್ಮೀಯವಾಗಿ ಇದ್ದೇನೆ ಅಷ್ಟೇ ಎಂದು ಹೇಳಿದರು.
ಜೆಡಿಎಸ್ ಶಾಸಕನಾಗಿ ಅವರು ಜೆಡಿಎಸ್ ನಲ್ಲೇ ಉಳಿದಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾತ್ರವಲ್ಲ ರಾಜ್ಯದ ಎಲ್ಲಾ 224 ಕ್ಷೇತ್ರದಲ್ಲೂ ಬಿಜೆಪಿಗೆ ನಮಗೆ ಸಮರ್ಥ ಅಭ್ಯರ್ಥಿಗಳು ಇದ್ದಾರೆ. ಮುಂದಿನ ಬಾರಿಯೂ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Published On - 8:07 pm, Sat, 22 October 22