ಮೋದಿ ಕರ್ನಾಟಕ ಭೇಟಿ: ಜೆಡಿಎಸ್ ಕೋಟೆ ಆಕ್ರಮಿಸಲು ಬಿಜೆಪಿ ಹಾಕಿದ ಪ್ಲ್ಯಾನ್ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ
ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಭೇಟಿ ನೀಡಿದರ ಹಿಂದೆ ರಾಜಕೀಯ ಲೆಕ್ಕಾಚಾರವೂ ಇದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಭೇಟಿ (Narendra Modi Karnataka Visit) ನೀಡಿದರ ಹಿಂದೆ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ, ಶಂಕುಸ್ಥಾನಪನೆ ಉದ್ದೇಶ ಮಾತ್ರವಲ್ಲ, ರಾಜಕೀಯ ಅಜೆಂಡಾ (political agenda) ಕೂಡ ಇದೆ ಎಂಬುದನ್ನು ಗಮನಿಸಬೇಕಾದ ಅಂಶ. ಬಿಜೆಪಿಗೆ ಇದುವರೆಗೂ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಸಿಗದಿರಲು ಕಾಣವಾಗಿದ್ದ ಹಳೇ ಮೈಸೂರು ಪ್ರಾಂತ್ಯದಲ್ಲಿ ಕಮಲ ಅರಳಿಸಲು ಬಿಜೆಪಿ ಪ್ಲ್ಯಾನ್ ಮಾಡಿಕೊಂಡಿದ್ದು, ಈ ಉದ್ದೇಶ ಈಡೇರುವ ಆಸೆಯಲ್ಲಿ ರಾಜ್ಯ ಬಿಜೆಪಿ ನಾಯಕರಿದ್ದಾರೆ.
ಹಳೇ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ ಕಳಪೆ ಮಟ್ಟದ ಸಾಧನೆ ಹಿನ್ನೆಲೆ ಈ ಭಾಗದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲುವು ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ಬಿಜೆಪಿ ರಾಜ್ಯದ ಅಧಿಕಾರ ಹಿಡಿಯಬೇಕೆಂದರೆ ಈ ಭಾಗದ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದು ಅವಶ್ಯಕವಾಗಿದೆ. ಮಾತ್ರವಲ್ಲದೆ ಜೆಡಿಎಸ್-ಕಾಂಗ್ರೆಸ್ ನಡುವಿನ ಪೈಪೋಟಿಯಿಂದ ಬಿಜೆಪಿ ಹಳೇ ಮೈಸೂರು ಪ್ರಾಂತ್ಯದಲ್ಲಿ ಭದ್ರವಾಗಿ ನೆಲೆಯೂರಲು ಸಾಧ್ಯವಾಗಿಲ್ಲ.
ಇದನ್ನೂ ಓದಿ: ಮಧ್ಯಪ್ರದೇಶ, ಕರ್ನಾಟಕದ ಬಳಿಕ ಮಹಾರಾಷ್ಟ್ರದಲ್ಲಿ ಅಪರೇಷನ್ ಕಮಲ; ಶಿವಸೇನಾ ವಿರುದ್ಧ ಬಂಡಾಯ ಎದ್ದ 22 ಶಾಸಕರು
ಮೋದಿ-ಬಿಎಸ್ವೈ ಜೋಡಿ ಇದ್ದರೂ ಸಿಗದ ಮ್ಯಾಜಿಕ್ ನಂಬರ್
2018ರಲ್ಲಿ ಹಳೇ ಮೈಸೂರು ಪ್ರಾಂತ್ಯ ಬಿಜೆಪಿಯ ಬಹುಮತದ ಸರ್ಕಾರದ ಕನಸಿಗೆ ಬ್ರೇಕ್ ಹಾಕಿತ್ತು. ಈ ಪ್ರಾಂತ್ಯದಲ್ಲಿ ಬಿಜೆಪಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಲು ಸಾಧ್ಯವಾಗದೆ ಬಹುಮತದ ಮ್ಯಾಜಿಕ್ ನಂಬರ್ 113 ತಲುಪಿಲ್ಲ. ಅದರಂತೆ 104 ಕ್ಷೇತ್ರಗಳನ್ನಷ್ಟೇ ಪಡೆಯುವಲ್ಲಿ ಬಿಜೆಪಿ ಯಶಸ್ವಿಯಾಯಿತು. ಪ್ರಬಲ ನಾಯಕರು ಹಾಗೂ ಅಭ್ಯರ್ಥಿಗಳು ಇಲ್ಲದಿರುವುದು ಹಳೇ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿಯ ಸಂಘಟನೆ ದುರ್ಬಲಕ್ಕೆ ಕಾರಣವಾಗಿದೆ.
11 ಜಿಲ್ಲೆಗಳಲ್ಲಿ ಬರೀ 33 ಬಿಜೆಪಿ ಶಾಸಕರು
ಹಳೇ ಮೈಸೂರು ಪ್ರಾಂತ್ಯದ 11 ಜಿಲ್ಲೆಗಳಲ್ಲಿ 94ವಿಧಾನಸಭಾ ಕ್ಷೇತ್ರಗಳಿವೆ. ಈ 11 ಜಿಲ್ಲೆಗಳಲ್ಲಿ 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 33 ವಿಧಾನಸಭಾ ಕ್ಷೇತ್ರಗಳನ್ನು ಮಾತ್ರ ಗೆದ್ದುಕೊಂಡಿತ್ತು. 33 ಶಾಸಕರ ಪೈಕಿ 26 ಶಾಸಕರು ಬೆಂಗಳೂರು ನಗರ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಗೆದ್ದು ಬಂದಿದ್ದಾರೆ. ಉಳಿದ 8 ಜಿಲ್ಲೆಗಳಲ್ಲಿ ಬಿಜೆಪಿ ದುರ್ಬಲವಾಗಿರುವುದು ಇಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಈ ಜಿಲ್ಲೆಗಳಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದರೆ ಮಾತ್ರವೇ 2023ರಲ್ಲಿ ಬಹುಮತ ಪಡೆಯುವ ಸಾಧ್ಯತೆ ಇದೆ.
ಹೀಗಾಗಿಯೇ ಹಳೇ ಮೈಸೂರು ಪ್ರಾಂತ್ಯದ ಈ ಲೆಕ್ಕಾಚಾರವನ್ನು ಇಟ್ಟುಕೊಂಡೇ ಮೋದಿ ಈ ಪ್ರಾಂತ್ಯದಿಂದಲೇ ಮುಂದಿನ ವರ್ಷದ ವಿಧಾನಸಭಾ ಚುನಾವಣೆಗೆ ಅಭಿವೃದ್ದಿ ಕಾರ್ಯಕ್ರಮದ ನೆಪದಲ್ಲೇ ಭೇಟಿ ನೀಡಿ ಚುನಾವಣೆಯ ರಣಕಹಳೆ ಮೊಳಗಿಸಿದ್ದಾರೆ. ಹಳೇ ಮೈಸೂರು ಪ್ರಾಂತ್ಯದಲ್ಲಿ ಮೊದಲ ಭೇಟಿಯಲ್ಲಿ ಅಭಿವೃದ್ದಿಯ ಅಸ್ತ್ರವನ್ನು ಪ್ರಧಾನಿ ಮೋದಿ ಪ್ರಯೋಗಿಸಿದ್ದಾರೆ. ಬಳಿಕ ಒಕ್ಕಲಿಗ ಜಾತಿ ನಾಯಕರನ್ನು ಬಿಜೆಪಿಯತ್ತ ಸೆಳೆಯುವ ಪ್ಲ್ಯಾನ್ ಕೂಡ ಇದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಕರ್ನಾಟಕಕ್ಕೆ ಸಾವಿರಾರು ಕೋಟಿ ನೀಡಿದ ಕೇಂದ್ರ: ಸಿದ್ದು ಹೇಳಿಕೆಗೆ ಸಿಎಂ ಬೊಮ್ಮಾಯಿ ತಿರುಗೇಟು
ಲಿಂಗಾಯತ ಪ್ರಾಬಲ್ಯದ ಕ್ಷೇತ್ರಗಳ ಮೇಲೆ ಬಿಜೆಪಿ ಕಣ್ಣು
ಹಳೇ ಮೈಸೂರು ಪ್ರಾಂತ್ಯ ಒಕ್ಕಲಿಗ ಪ್ರಾಬಲ್ಯದ ಪ್ರಾಂತ್ಯವಾಗಿದ್ದರೂ ಕೆಲವು ಕ್ಷೇತ್ರಗಳಲ್ಲಿ ಲಿಂಗಾಯತ ಸಮುದಾಯ ಕೂಡ ಪ್ರಬಲವಾಗಿದೆ. ಹಾಸನದ ಸಕಲೇಶಪುರ, ಅರಸೀಕೆರೆ, ಬೇಲೂರು, ತುಮಕೂರು ಜಿಲ್ಲೆಯ ಗುಬ್ಬಿ, ಮೈಸೂರಿನ ವರುಣಾ, ಚಾಮುಂಡೇಶ್ವರಿ ಸೇರಿದಂತೆ ಕೆಲ ಲಿಂಗಾಯತ ಸಮುದಾಯ ಪ್ರಾಬಲ್ಯದ ಕ್ಷೇತ್ರಗಳೂ ಇವೆ. ಇಂಥ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದರೆ ಬಹುಮತ ಪಡೆಯಲು ಸುಲಭ. ಹೀಗಾಗಿ ಈ ಕ್ಷೇತ್ರಗಳ ಮೇಲೂ ಬಿಜೆಪಿ ಕಣ್ಣಿಟ್ಟಿದೆ. ಬಿ.ವೈ.ವಿಜಯೇಂದ್ರ ತುಮಕೂರಿನ ಗುಬ್ಬಿ ಕ್ಷೇತ್ರದಲ್ಲೂ ಸ್ಪರ್ಧೆಗೆ ಆಸಕ್ತಿ ಹೊಂದಿದ್ದಾರೆ ಎಂದು ಇತ್ತೀಚೆಗೆ ಯಡಿಯೂರಪ್ಪ ಅವರು ಹೇಳಿದ್ದರು.
ನಾಯಕರ ಲೆಕ್ಕಾಚಾರವೇನು?
ಬಿ.ವೈ. ವಿಜಯೇಂದ್ರಗೆ ಹಳೆ ಮೈಸೂರು ಪ್ರಾಂತ್ಯದ ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ ಜಿಲ್ಲೆಗಳಲ್ಲಿ ಪಕ್ಷ ಸಂಘಟನೆಯ ಹೊಣೆ ನೀಡುವುದಾಗಿ ಮಾರ್ಚ್ ತಿಂಗಳಲ್ಲಿ ಯಡಿಯೂರಪ್ಪ ಹೇಳಿದ್ದರು. ಹಳೆ ಮೈಸೂರು ಪ್ರಾಂತ್ಯದಲ್ಲಿ ಅಭಿವೃದ್ದಿಯ ಅಜೆಂಡಾದೊಂದಿಗೆ ಜನರ ಬಳಿ ಹೋದರೆ ಖಂಡಿತ ಬಿಜೆಪಿ ಬೆಂಬಲಿಸುತ್ತಾರೆ ಎಂದು ವಿಜಯೇಂದ್ರ ಸಂದರ್ಶನವೊಂದರಲ್ಲಿ ಹೇಳಿದ್ದರು. ಹಳೆ ಮೈಸೂರು ಪ್ರಾಂತ್ಯದಲ್ಲಿ 15-20 ಕ್ಷೇತ್ರಗಳನ್ನು ಹೆಚ್ಚುವರಿಯಾಗಿ ಗೆದ್ದರೆ ಬಿಜೆಪಿಗೆ ಬಹುಮತಕ್ಕೆ ಕೊರತೆಯಾಗಲ್ಲ ಎಂಬುದು ಪಕ್ಷದ ನಾಯಕರ ಲೆಕ್ಕಾಚಾರವಾಗಿದೆ.
ಮೋದಿ ಪ್ರವಾಸದ ಮೂಲಕ ಮತ ಸೆಳೆಯಲು ತಂತ್ರ
ಮುಂದಿನ ವರ್ಷದ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡೇ ಮೋದಿಯವರು ಮೈಸೂರಿಗೆ ಯೋಗ ದಿನದ ನೆಪದಲ್ಲಿ ಭೇಟಿ ನೀಡಿದ್ದಾರೆ. ಅದರಂತೆ ಮೈಸೂರಿನಲ್ಲಿ ಅಭಿವೃದ್ದಿ ಕಾರ್ಯಗಳಿಗೆ ಮೋದಿ ಚಾಲನೆ ನೀಡುವ ಮೂಲಕ ಹಳೇ ಮೈಸೂರು ಪ್ರಾಂತ್ಯದ ಜನರನ್ನ ತಮ್ಮತ್ತ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಮೋದಿ ಮೈಸೂರು ಪ್ರವಾಸದಿಂದ ಹಳೇ ಮೈಸೂರು ಪ್ರಾಂತ್ಯದ ಜನರ ಮೇಲೆ ಪ್ರಭಾವ ಬೀರಬಹುದು, ಹೆಚ್ಚಿನ ವಿಧಾನಸಭಾ ಕ್ಷೇತ್ರ ಗೆಲ್ಲಬಹುದು ಎಂಬುದು ಬಿಜೆಪಿಯ ಲೆಕ್ಕಾಚಾರವಾಗಿದೆ.
ಇದನ್ನೂ ಓದಿ: Maharashtra Political Crisis ಏಕನಾಥ್ ಶಿಂಧೆಗೆ ಕೊಕ್ ನೀಡಿದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ
ಪ್ರಬಲ ನಾಯಕರ ಮೇಲೆ ಬಿಜೆಪಿ ಕಣ್ಣು
ಹಳೇ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿಗೆ ಪ್ರಬಲ ನಾಯಕರ ಕೊರತೆ ಇದೆ. ಹೀಗಾಗಿ ಬೇರೆ ಪಕ್ಷಗಳಿಂದ ಪ್ರಬಲ ನಾಯಕರನ್ನು ಸೆಳೆದು ಪಕ್ಷ ಸಂಘಟಿಸುವ, ಚುನಾವಣೆಯಲ್ಲಿ ಗೆಲುವು ಯೋಜನೆಯನ್ನ ಪಕ್ಷದ ನಾಯಕರು ಹಾಕಿಕೊಂಡಿದ್ದಾರೆ. ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ, ಮಂಡ್ಯದ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ, ತುಮಕೂರಿನ ಕಾಂಗ್ರೆಸ್ ಪಕ್ಷದ ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ, ಗುಬ್ಬಿ ಕ್ಷೇತ್ರದ ಎಸ್.ಆರ್. ಶ್ರೀನಿವಾಸ್ ಸೇರಿದಂತೆ ಅನೇಕ ಪ್ರಬಲ ನಾಯಕರಿಗೆ ಬಿಜೆಪಿ ತಮ್ಮತ್ತ ಸೆಳೆಯಲು ಗಾಳ ಹಾಕಿದೆ. ಮಂಡ್ಯ ಕ್ಷೇತ್ರದ ಹಾಲಿ ಸಂಸದೆ ಸುಮಲತಾ ಅಂಬರೀಷ್ ಅವರನ್ನು ಕೂಡ ಬಿಜೆಪಿಯತ್ತ ಸೆಳೆಯಲು ಪ್ರಯತ್ನಿಸಲಾಗುತ್ತಿದೆ.
ಜಗ್ಗೇಶ್ಗೆ ರಾಜ್ಯಸಭಾ ಸೀಟು, ಇದರ ಹಿಂದಿದೆ ಗುಟ್ಟು
ಹಳೇ ಮೈಸೂರು ಪ್ರಾಂತ್ಯದ ಒಕ್ಕಲಿಗರನ್ನು ಬಿಜೆಪಿಯತ್ತ ಸೆಳೆಯುವ ತಂತ್ರದ ಭಾಗವಾಗಿಯೇ ಒಕ್ಕಲಿಗ ಸಮುದಾಯದ ನಟ ಜಗ್ಗೇಶ್ ಅವರಿಗೆ ರಾಜ್ಯಸಭಾ ಸದಸ್ಯ ಸ್ಥಾನ ನೀಡಲಾಗಿದೆ. ಮುಂದಿನ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಜಗ್ಗೇಶ್ಗೆ ಹಳೇ ಮೈಸೂರು ಪ್ರಾಂತ್ಯದಲ್ಲಿ ಜನರನ್ನು ಬಿಜೆಪಿಯತ್ತ ಸೆಳೆಯುವ ಜವಾಬ್ದಾರಿ ನೀಡುವ ಸಾಧ್ಯತೆ ಇದೆ.
ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:07 pm, Tue, 21 June 22