ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಕೆಲ ಮಹತ್ವದ ಬದಲಾವಣೆಗೆ ಮುಮದಾಗಿದೆ. ಹಿಂದಿನ ಸರ್ಕಾರದ ಯೋಜನೆ, ಆದೇಶಗಳನ್ನೇ ಕಾಂಗ್ರೆಸ್ ಟಾರ್ಗೆಟ್ ಮಾಡುತ್ತಿರುವ ಲಕ್ಷಣಗಳು ಗೋಚರವಾಗುತ್ತಿದೆ. ಪ್ರಮುಖ ಆದೇಶಗಳಿಗೆ ಕಾಂಗ್ರೆಸ್ ಕತ್ತರಿ ಹಾಕೋ ಪ್ಲ್ಯಾನ್ ಮಾಡಿದಂತಿದೆ. ಅದರಲ್ಲೂ ಮುಖ್ಯವಾಗಿ ಈ ಹಿಂದೆ ಬಿಜೆಪಿ ಸರ್ಕಾರದ ಪಠ್ಯ ಪರಿಷ್ಕರಣೆ ಹಾಗೂ ಗೋ ಹತ್ಯೆ ನಿಷೇಧ ಕಾಯ್ದೆ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಈ ಪೈಕಿ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಗೋ ಹತ್ಯೆ ನಿಷೇಧ ಕಾಯ್ದೆ (Anti-Cow Slaughter Act) ರದ್ದು ಬಗ್ಗೆ ಕಾಂಗ್ರೆಸ್ ಪಾಳಯದಲ್ಲಿ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಇದರ ವಿರುದ್ಧ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ದ ಮುಗಿಬಿದ್ದಿದ್ದಾರೆ. ಕಾಂಗ್ರೆಸ್ ಸಚಿವರು ಆಡಿದ ಒಂದೇ ಒಂದು ಮಾತು ಕಾಂಗ್ರೆಸ್, ಬಿಜೆಪಿ ಮಧ್ಯೆ ಕಿಚ್ಚು ಹತ್ತುವಂತೆ ಮಾಡಿದೆ.
ಇದನ್ನೂ ಓದಿ: ಎಮ್ಮೆ, ಕೋಣ ಕಡಿದು ಹಾಕುವುದಾದ್ರೆ ಹಸು ಏಕೆ ಕಡಿಯಬಾರದು? ಸಚಿವ ಕೆ.ವೆಂಕಟೇಶ್ ಪ್ರಶ್ನೆ
ಬಜರಂಗದಳ ಬ್ಯಾನ್ ಬಗ್ಗೆಯೂ ಚರ್ಚೆ ಜೋರಾಗಿತ್ತು. ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದ್ದ ಗೋಹತ್ಯೆ ನಿಷೇಧ ಕಾಯ್ದೆ ರದ್ದು ಬಗ್ಗೆ ಬಿಜೆಪಿ, ಕಾಂಗ್ರೆಸ್ ಮಧ್ಯೆ ಮಹಾ ಸಮರವೇ ಏರ್ಪಟ್ಟಿದೆ. ಸಚಿವರು ಆಡಿದ ಇದೇ ಮಾತು ಮಾತಿನ ಸಂಘರ್ಷಕ್ಕೆ ಕಾರಣವಾಗಿದೆ. ಬಿಜೆಪಿ- ಕಾಂಗ್ರೆಸ್ ನಡುವೆ ಮತ್ತೆ ಗೋವಿನ ಕಿಚ್ಚು ಹಚ್ಚಿದೆ. ಗೋಹತ್ಯೆ ನಿಷೇಧ ಕಾಯ್ದೆ ರದ್ದು ಬಗ್ಗೆ ಚರ್ಚಿಸುತ್ತೇವೆ ಎಂದು ಪಶುಸಂಗೋಪನಾ ಸಚಿವ ವೆಂಕಟೇಶ್ ಹೇಳಿದ್ದರು. ಅಷ್ಟೇ ಅಲ್ಲ ಕೋಣ, ಎಮ್ಮೆ ಕಡಿದ್ರೆ, ಆಕಳವನ್ನ ಯಾಕೆ ಕಡಿಯಬಾರದು ಎಂದು ಪ್ರಶ್ನಿಸಿದ್ದರು. ಸಚಿವರ ಇದೇ ಮಾತು ಕೇಸರಿ ಪಡೆ ಕೆಂಡವಾಗುವಂತೆ ಮಾಡಿದೆ. ಮಾಜಿ ಸಿಎಂ ಬೊಮ್ಮಾಯಿ ಟ್ವೀಟ್‌ನಲ್ಲೇ ಅಟ್ಯಾಕ್ ಮಾಡಿದ್ರೆ ಶಾಸಕರು ಮಾತಿನಲ್ಲೇ ಸಿಡಿದೆದ್ದಿದ್ದಾರೆ. ಅಲ್ಲದೇ ಈ ಸಂಬಂಧ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆಗೆ ಕರೆ ಕೊಟ್ಟಿದೆ.
ಇನ್ನು ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಕೂಡಾ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದು, ಕಾಯ್ದೆ ರದ್ದು ಮಾಡಿದ್ರೆ ಕಾಂಗ್ರೆಸ್‌ಗೆ ಗೋವಿನ ಶಾಪ ತಟ್ಟುತ್ತೆ ಎಂದಿದ್ದಾರೆ. ಇನ್ನು ಕೇಸರಿ ಪಡೆ ವಾಗ್ದಾಳಿ ನಡೆಸುತ್ತಿದ್ದರೆ ಅದಕ್ಕೆ ಕಾಂಗ್ರೆಸ್ ನಾಯಕರು ಕೂಡಾ ಟಕ್ಕರ್ ಕೊಟ್ಟಿದ್ದಾರೆ. ಅದರಲ್ಲೂ ಶಾಸಕ ವಿನಯ್ ಕುಲಕರ್ಣಿ, ಬಿಜೆಪಿಯವರು ಆಕಳು ಕಟ್ಟಲ್ಲ. ನಾನು ಡೈರಿ ಹೊಂದಿದ್ದು ಹೋರಿಗಳನ್ನ ಏನ್ ಮಾಡ್ಲಿ ಅಂತಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಕೋಮುದ್ವೇಷ ಹರಡೋದೆ ಬಿಜೆಪಿ ಕೆಲಸ ಎಂದು ತಿರುಗೇಟುಕೊಟ್ಟಿದ್ದಾರೆ .
ಒಟ್ಟಾರೆಯಾಗಿ ಸಚಿವ ವೆಂಕಟೇಶ್ ಹೇಳಿಕೆಯೇ ಬಿಜೆಪಿಗೆ ಅಸ್ತ್ರವಾಗಿದ್ದು, ರಾಜ್ಯದಲ್ಲಿ ಮತ್ತೆ ಧರ್ಮದಂಗಲ್ ಶುರುವಾಗುವಂತೆ ಮಾಡಿದೆ.