ಬೆಂಗಳೂರು: ಅಭಿವೃದ್ಧಿ ವಿಚಾರದಲ್ಲಿ ಹೊಸಕೋಟೆ ಕ್ಷೇತ್ರದಲ್ಲಿ ತಾರತಮ್ಯವಾಗುತ್ತಿದೆ. ಸಿಎಂ ಅವರೇ ಖುದ್ದು ಅನುದಾನ ನೀಡುವುದಾಗಿ ಸಹಿ ಹಾಕಿದ್ದರು. ಆದ್ರೆ ತಾಲೂಕಿಗೆ ಬಂದಿದ್ದ ಅನುದಾನವನ್ನ ಎಂಟಿಬಿ ನಾಗರಾಜ್ ತಡೆ ಹಿಡಿದಿದ್ದಾರೆ ಎಂದು ಬೆಂಗಳೂರು ಗ್ರಾ. ಜಿಲ್ಲೆಯ ಹೊಸಕೋಟೆ ಕ್ಷೇತ್ರದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ (Sharath BacheGowda) ಆರೋಪಿಸಿದರು. ಅನುದಾನಕ್ಕೆ ತಡೆ ನೀಡಿದ ಆರೋಪ ಹಿನ್ನೆಲೆ ವಿಧಾನಸೌಧದ ಆವರಣದಲ್ಲಿ ಅಹೋರಾತ್ರಿ ಏಕಾಂಗಿ ಪ್ರತಿಭಟನೆ ಮಾಡುತ್ತಿದ್ದಾರೆ. ನಾನು ಅಭಿವೃದ್ಧಿ ಮಾಡಿದರೆ ಸಮಸ್ಯೆ ಆಗುತ್ತದೆಂದು ತಡೆ ಹಿಡಿದಿದ್ದಾರೆ. 10 ಕೋಟಿ ರೂಪಾಯಿ ಅನುದಾನದಲ್ಲಿ ಭಾರಿ ಅಭಿವೃದ್ಧಿ ಆಗುವುದಿಲ್ಲ. ನಾವು, ಸಚಿವ ಎಂಟಿಬಿ ಇಬ್ಬರೂ ಸೇರಿ ಕ್ಷೇತ್ರ ಅಭಿವೃದ್ಧಿ ಮಾಡೋಣ. ಯಾರಿಗೆ ಮತಹಾಕಬೇಕೆಂದು ಕ್ಷೇತ್ರದ ಜನ ತೀರ್ಮಾನ ಮಾಡುತ್ತಾರೆ. ಹೊಸಕೋಟೆ ಜನರು ಸ್ವತಂತ್ರ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸಿದ್ದಾರೆ. ಇದೇ ಕಾರಣಕ್ಕೆ ಅನುದಾನ ವಿಚಾರದಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಿಎಂ ಕೊಟ್ಟ ಮಾತಿನ ಮೇಲೆ ನಂಬಿಕೆ ಇಲ್ಲದಂತಾಗಿದೆ. ನಮ್ಮ ಮನೆಗೆ ಸ್ವಿಮ್ಮಿಂಗ್ ಪೂಲ್ ಕಟ್ಟಿಕೊಳ್ಳುತ್ತಿಲ್ಲ. ಬಿಜೆಪಿ ಅನುದಾನ ಆಗಿದ್ರೆ ಕೇಳ್ತಿರಲಿಲ್ಲ, ಜನರ ತೆರಿಗೆ ಹಣ ಕೇಳ್ತಿದ್ದೇನೆ. ಎಂಟಿಬಿ ರಾತ್ರೋರಾತ್ರಿ ಹಾರ್ಟ್ ಆಪರೇಷನ್ ಮಾಡಿಸಿಕೊಂಡಿದ್ದಾರೆ. ಆಪರೇಷನ್ ಮಾಡಿಸಿ ಎದೆಯಲ್ಲಿದ್ದ ಸಿದ್ದರಾಮಣ್ಣರನ್ನ ಹೊರಹಾಕಿದ್ದಾರೆ.
ಇದನ್ನೂ ಓದಿ: ಪರಮೇಶ್ವರ್ ಸೋಲಿಸಿಲ್ಲ ಎಂದು ಸಿದ್ದರಾಮಯ್ಯ ಆಣೆ ಮಾಡಲಿ: ಕೆ ಎಸ್ ಈಶ್ವರಪ್ಪ ಸವಾಲು
ಅನುದಾನ ಬಿಡುಗಡೆ ಮಾಡುವಂತೆ ಸಿಎಸ್‌ಗೆ ಮನವಿ ಮಾಡಿದ್ದೇನೆ. ಸಿಎಂ ಹೊರಗಿದ್ದಾರೆ ಬಂದ ಬಳಿಕ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ. ಜವಾಬ್ದಾರಿಯುತ ವ್ಯಕ್ತಿಗಳು ಅನುದಾನ ಬಿಡುಗಡೆ ಬಗ್ಗೆ ಭರವಸೆ ನೀಡಲಿ. ಅಲ್ಲಿಯವರೆಗೂ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಮಾಡುತ್ತೇನೆ ಎಂದು ಶರತ್ ಬಚ್ಚೇಗೌಡ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:37 pm, Thu, 2 March 23