Mukhtar Abbas Naqvi ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ರಾಜೀನಾಮೆ

| Updated By: ರಶ್ಮಿ ಕಲ್ಲಕಟ್ಟ

Updated on: Jul 06, 2022 | 5:30 PM

ನಖ್ವಿ ಅವರ ರಾಜ್ಯಸಭಾ  ಅವಧಿಯು ಗುರುವಾರಕ್ಕೆ ಮುಕ್ತಾಯವಾಗಲಿದೆ. ಸಚಿವ ಸಂಪುಟ ಸಭೆಯಲ್ಲಿ  ನಖ್ವಿ ಅವರ ಕೆಲಸವನ್ನು ಮೋದಿ ಶ್ಲಾಘಿಸಿದ್ದು ಸಚಿವರು ರಾಜೀನಾಮೆ ನೀಡುತ್ತಿದ್ದಾರೆ ಎಂಬುದರ ಸೂಚನೆಯಾಗಿತ್ತು.

Mukhtar Abbas Naqvi ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ರಾಜೀನಾಮೆ
ಮುಖ್ತಾರ್ ಅಬ್ಬಾಸ್ ನಖ್ವಿ
Follow us on

ದೆಹಲಿ: ಬಿಜೆಪಿಯ (BJP) ಹಿರಿಯ  ನಾಯಕ, ಮುಖ್ತಾರ್ ಅಬ್ಬಾಸ್ ನಖ್ವಿ(Mukhtar Abbas Naqvi) ಬುಧವಾರ ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಸ್ಥಾನಕ್ಕೆ ಬುಧವಾರ ರಾಜೀನಾಮೆ ನೀಡಿದ್ದಾರೆ. ಮೂಲಗಳ ಪ್ರಕಾರ ದೇಶದ ಅಭಿವೃದ್ಧಿಗಾಗಿ ನಖ್ವಿ ನೀಡಿದ ಕೊಡುಗೆಯನ್ನು  ಪ್ರಧಾನಿ ಮೋದಿ (PM Modi) ಶ್ಲಾಘಿಸಿದ್ದಾರೆ. ನಖ್ವಿ ಅವರ ರಾಜ್ಯಸಭಾ  ಅವಧಿಯು ಗುರುವಾರಕ್ಕೆ ಮುಕ್ತಾಯವಾಗಲಿದೆ. ಸಚಿವ ಸಂಪುಟ ಸಭೆಯಲ್ಲಿ ನಖ್ವಿ ಅವರ ಕೆಲಸವನ್ನು ಮೋದಿ ಶ್ಲಾಘಿಸಿದ್ದು ಸಚಿವರು ರಾಜೀನಾಮೆ ನೀಡುತ್ತಿದ್ದಾರೆ ಎಂಬುದರ ಸೂಚನೆಯಾಗಿತ್ತು ಎಂದು ಹೇಳಲಾಗುತ್ತಿದೆ. ಸಚಿವ ಸಂಪುಟ  ಸಭೆ ಬಳಿಕ ನಖ್ವಿ  ಬಿಜೆಪಿ ಅಧ್ಯಕ್ಷರನ್ನು ಬಿಜೆಪಿ ಕಚೇರಿಯಲ್ಲಿ ಭೇಟಿ ಮಾಡಿದ್ದಾರೆ. ಸಭೆ ನಂತರ ನಖ್ವಿ ಅವರು  ಪ್ರಧಾನಿ ಮೋದಿಯವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.  ಗುರುವಾರ ರಾಜ್ಯಸಭಾ ಅವಧಿ ಪೂರ್ಣಗೊಳ್ಳುವುದರಿಂದ ಅವರು  ನಾಳೆ ರಾಜೀನಾಮೆ ನೀಡಬೇಕಿತ್ತು. ಆದರೆ ನಖ್ವಿ ಒಂದು ದಿನ ಮುಂಚೆಯೇ ರಾಜೀನಾಮೆ ನೀಡಿದ್ದಾರೆ.

ಅಂದಹಾಗೆ ಬಿಜೆಪಿ ನೇತೃತ್ವದ ಮೋದಿ ಸರ್ಕಾರದಲ್ಲಿ ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿದ್ದ ಇಬ್ಬರೇ ಇಬ್ಬರು ಸಚಿವರೆಂದರೆ ನಖ್ವಿ ಮತ್ತು  ರಾಜನಾಥ್ ಸಿಂಗ್.

ನಖ್ವಿ ಅವರು  ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಬಿಜೆಪಿ  ಉಪರಾಷ್ಟ್ರಪತಿ ಸ್ಥಾನಕ್ಕೆ  ಅವರನ್ನು ಪರಿಗಣಿಸುವ ಸಾಧ್ಯತೆ ಬಗ್ಗೆ ರಾಜಕೀಯವಲಯದಲ್ಲಿ ಚರ್ಚೆ ನಡೆಯುತ್ತಿದೆ. ಬಿಜೆಪಿ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ವಿವಾದವು  ದೇಶದಲ್ಲಿ ಆಕ್ರೋಶಕ್ಕೆ ಕಾರಣವಾಗಿರುವಾಗ ಮುಸ್ಲಿಂ ನಾಯಕರೊಬ್ಬರನ್ನು ಉಪರಾಷ್ಟ್ರಪತಿ  ಹುದ್ದೆಗೆ ಪರಿಗಣಿಸಲು ಬಿಜೆಪಿ ಲೆಕ್ಕಾಚಾರ ನಡೆಸುತ್ತಿದೆ ಎಂದು ಹೇಳಲಾಗಿದೆ.

ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ಅಧಿಕಾರವಧಿ ಆಗಸ್ಟ್ 10ಕ್ಕೆ ಕೊನೆಗೊಳ್ಳಲಿದೆ. ಪ್ರಸ್ತುತ ಈ ಹುದ್ದೆಗೆ ನಾಮಪತ್ರ ಸಲ್ಲಿಸಲು ಜುಲೈ 19ರವರೆಗೆ ಕಾಲಾವಕಾಶವಿದೆ. ಆಗಸ್ಟ್ 6ರಂದು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದೆ.

ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಮಾಜಿ ಕೇಂದ್ರ ಸಚಿವೆ ನಜ್ಮಾ ಹೆಪ್ತುಲ್ಲಾ ಮತ್ತು  ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಹೆಸರು ಕೂಡಾ ಉಪರಾಷ್ಟ್ರಪತಿ ಹುದ್ದೆಗೆ ಕೇಳಿಬರುತ್ತಿದೆ.

 

Published On - 5:02 pm, Wed, 6 July 22