ಬೆಂಗಳೂರು, ಅಕ್ಟೋಬರ್ 18: ರಾಜ್ಯದಲ್ಲಿ ಸಿದ್ದರಾಮಯ್ಯ (Siddaramaiah) ಸರ್ಕಾರ ಬಂದ ಮೇಲೆ ತಮಿಳುನಾಡಿಗೆ ನೀರಿನ ಭಾಗ್ಯ, ಪಂಚ ರಾಜ್ಯಗಳಿಗೆ ಹಣದ ಭಾಗ್ಯ, ಕರ್ನಾಟಕಕ್ಕೆ ಕತ್ತಲೆ ಭಾಗ್ಯ ಸಿಕ್ಕಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಬುಧವಾರ ವ್ಯಂಗ್ಯವಾಡಿದ್ದಾರೆ. ಸಿಎಂ, ಡಿಸಿಎಂ ಅಧಿಕಾರದ ಕಾದಾಟದ ಪರಿಣಾಮ ರಾಜ್ಯದ ಜನತೆ ತೊಂದರೆಗೆ ಸಿಲುಕಿದೆ. ಸಿದ್ದರಾಮಯ್ಯರನ್ನು ಮನೆಗೆ ಕಳಿಸಬೇಕು ಅಂತಾ ಡಿಕೆ ಶಿವಕುಮಾರ್, ಡಿಕೆ ಶಿವಕುಮಾರ್ ಅವರನ್ನು ಜೈಲಿಗೆ ಕಳಿಸಬೇಕು ಅಂತಾ ಸಿದ್ದರಾಮಣ್ಣ ಯತ್ನಿಸುತ್ತಿದ್ದಾರೆ. ಈ ಕಾದಾಟದಲ್ಲಿ ಕರ್ನಾಟಕ ರಾಜ್ಯ ಬಡವಾಗಿದೆ ಎಂದು ಕಟೀಲ್ ಟೀಕಿಸಿದ್ದಾರೆ.
ವರ್ಗಾವಣೆಯಲ್ಲಿ ರೇಟ್ ಫಿಕ್ಸ್ ಮಾಡುವ ಕೆಲಸ ಆಗಿದೆ. ಸಿಎಂ ಕಚೇರಿಯಲ್ಲೇ ಯಾರ್ಯಾರಿಗೆ ಎಷ್ಟೆಷ್ಟು ಅಂತಾ ಬೋರ್ಡ್ ಫಿಕ್ಸ್ ಆಗಿದೆ. ವರ್ಗಾವಣೆಯಿಂದ ಆರಂಭವಾದ ಭ್ರಷ್ಟಾಚಾರ, ಗುತ್ತಿಗೆದಾರರ ಕಮಿಷನ್, ದಸರಾ ಹಬ್ಬದಲ್ಲೂ ಲಜ್ಜೆಗೇಡಿತನದ ಸರ್ಕಾರ ಲಂಚ ಕೇಳಿದೆ. ನೈತಿಕ ಹೊಣೆ ಹೊತ್ತು ಸಿಎಂ, ಡಿಸಿಎಂ ರಾಜೀನಾಮೆ ಕೊಡಬೇಕು ಎಂದು ಕಟೀಲ್ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಜಗಳ ಹೊರಬರುತ್ತಿದೆ. ಶಾಸಕರು ಸಂತೃಪ್ತಿಯಿಂದ ಇಲ್ಲ. ಬೆಳಗಾವಿಯಲ್ಲಿ ಕೆಲವರು ಬಸ್ ಹತ್ತಿರುವುದಕ್ಕೆ ಇಂದು ಡಿಕೆ ಶಿವಕುಮಾರ್ ಬೆಳಗಾವಿಗೆ ಹೋಗಿದ್ದಾರೆ. ಬಸ್ ಹತ್ತಿದವರನ್ನು ಬಸ್ನಿಂದ ಇಳಿಸಲು ಹೋಗಿದ್ದಾರೆ. ಅವರು ಬೆಳಗಾವಿಗೆ ಹೋದಾಗ ಬಸ್ ಹತ್ತಿದವರು ಇಳಿಯಬಹುದು. ಆದರೆ ಬೇರೆ ಕಡೆ 20 ಜನ ಬಸ್ ಹತ್ತಲು ರೆಡಿಯಾಗಿದ್ದಾರೆ. ಸರ್ಕಾರ ಕಿತ್ತೊಗೆಯಲು ಜನ ಕಾಯುತ್ತಿದ್ದಾರೆ ಎಂದ ಕಟೀಲ್, ಐಟಿ ದಾಳಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ನಳಿನ್ ಕುಮಾರ್ ಕಟೀಲ್, ಹೆಚ್‌ಡಿ ಕುಮಾರಸ್ವಾಮಿ ಜಡ್ಜರಾ? ಡಿಕೆ ಶಿವಕುಮಾರ್ ತಿರುಗೇಟು
ತೆಲಂಗಾಣದಲ್ಲಿ ಸಚಿವ ಶಿವಾನಂದ ಪಾಟೀಲ್ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಹಣ ತೂರಾಟ ಮಾಡಿದ ಬಗ್ಗೆ ಪ್ರತಿಕ್ರಿಯಿಸಿ, ಬರ ಇರುವಾಗ ಸಚಿವರು ಹೈದರಾಬಾದ್ನಲ್ಲಿ ಹೋಗಿ ಹಣದಲ್ಲಿ ಚೆಲ್ಲಾಟ ಆಡುತ್ತಾರೆ. ರಾಜ್ಯದಿಂದ ಲೂಟಿ ಮಾಡಿದ, ಭ್ರಷ್ಟಾಚಾರ ಮಾಡಿದ ಹಣದಲ್ಲಿ ಅಲ್ಲಿ ಆಟ ಆಡುತ್ತಾರೆ. ರೈತರಿಗೆ ಸ್ಪಂದಿಸದೇ ಸಚಿವರು ಮಜಾ ಉಡಾಯಿಸುತ್ತಿದ್ದಾರೆ. ಎಂತಹ ಸರ್ಕಾರ ಇದು, ಎಂತಹ ಸಚಿವರು ಇವರು? ಸಿಎಂ ಏನು ಕಣ್ಣು ಮುಚ್ಚಿ ಕುಳಿತಿದ್ದಾರಾ ಎಂದು ಪ್ರಶ್ನಿಸಿದ್ದಾರೆ.
ಕಟೀಲ್ ಏನು ಜಡ್ಜ್ನಾ ಎಂದು ಡಿಸಿಎಂ ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಮುಂದೆ ಕಾದು ನೋಡೋಣ ಎಂದಿದ್ದಾರೆ. ಡಿಕೆ ಶಿವಕುಮಾರ್ ತಿಹಾರ್ ಜೈಲಿಗೆ ಹೋಗಲು ಸಿದ್ಧವಾಗಲಿ ಎಂದು ಮಂಗಳವಾರ ಕಟೀಲ್ ಹೇಳಿದ್ದರು. ಇದಕ್ಕೆ ಡಿಕೆ ಶಿವಕುಮಾರ್ ಬೆಳಗಾವಿಯಲ್ಲಿ ತಿರುಗೇಟು ನೀಡಿದ್ದರು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ