ಪಿವಿ ನರಸಿಂಹರಾವ್ (PV Narasimha Rao) ಭಾರತದ ಪ್ರಧಾನಿಯಾಗಿದ್ದಾಗ ತಮಗೆ ರಾಜಕೀಯವಾಗಿ ಸಮಸ್ಯೆ ಸೃಷ್ಟಿಸುವ ಸಂಪುಟ ಸಚಿವರು ಹಾಗೂ ಪ್ರಭಾವಿ ರಾಜಕಾರಣಿಗಳ ಬಗ್ಗೆ ಸೀಕ್ರೆಟ್ ಫೈಲ್‌ಗಳನ್ನು ಸಿದ್ಧಪಡಿಸಿ ಇಟ್ಟುಕೊಂಡಿದ್ದರು. ಈ ರಹಸ್ಯ ಕಡತಗಳನ್ನು ತಮ್ಮ ನಂತರ ಪ್ರಧಾನಿ ಹುದ್ದೆಗೇರಿದ ಎಚ್.ಡಿ.ದೇವೇಗೌಡರಿಗೆ (HD Deve Gowda) ಹಸ್ತಾಂತರ ಮಾಡಿದ್ದರು ಎಂಬ ಅಂಶ ಈಗ ಬಹಿರಂಗವಾಗಿದೆ. ದೇವೇಗೌಡರು ಕೂಡ ತಾವು ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ಬಳಿಕ ಈ ರಹಸ್ಯ ಕಡತಗಳನ್ನು ತಮ್ಮ ಉತ್ತರಾಧಿಕಾರಿ ಐ.ಕೆ.ಗುಜ್ರಾಲ್ಗೆ (IK Gujral) ಹಸ್ತಾಂತರಿಸಿದ್ದರು ಎಂದು ಆಗ ಪ್ರಧಾನಿ ಕಚೇರಿಯಲ್ಲಿ ಜಂಟಿ ಕಾರ್ಯದರ್ಶಿ ಆಗಿದ್ದ ಎಸ್.ಎಸ್.ಮೀನಾಕ್ಷಿ ಸುಂದರಂ (SS Minakshi Sundaram) ಈಗ ಪುಸ್ತಕವೊಂದರ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.
ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರು ‘ಸಮಸ್ಯೆ ಸೃಷ್ಟಿಸುವ’ ಹತ್ತಕ್ಕೂ ಹೆಚ್ಚು ರಾಜಕಾರಣಿಗಳ ಬಗ್ಗೆ ‘ರಹಸ್ಯ ಫೈಲ್‌ಗಳನ್ನು’ ಇಟ್ಟುಕೊಂಡಿದ್ದರು ಎಂದು ಮಾಜಿ ಪ್ರಧಾನಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಯೊಬ್ಬರು ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಎಚ್.ಡಿ.ದೇವೇಗೌಡ ಅವರ ಜೀವನ ಚರಿತ್ರೆಯಲ್ಲಿ ಬಹಿರಂಗಪಡಿಸಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಅವರ 13 ದಿನಗಳ ಸರ್ಕಾರದ ಪತನ ನಂತರ 1996ರಲ್ಲಿ ಕರ್ನಾಟಕದ ಎಚ್.ಡಿ. ದೇವೇಗೌಡ ಅವರು ಪ್ರಧಾನಿ ಹುದ್ದೆಗೇರಿದ್ದರು. ನರಸಿಂಹ ರಾವ್ ಅವರು ಆ ಕಡತಗಳನ್ನು ದೇವೇಗೌಡರಿಗೆ ರವಾನಿಸಿದರು. ಅವರು ತಮ್ಮ ಆಪ್ತ ಸಹಾಯಕ ಮತ್ತು ಆಗಿನ ಪಿಎಂಒದಲ್ಲಿ ಜಂಟಿ ಕಾರ್ಯದರ್ಶಿ ಆಗಿದ್ದ ಎಸ್.ಎಸ್.ಮೀನಾಕ್ಷಿ ಸುಂದರಂ ಅವರಿಗೆ ಆ ರಹಸ್ಯ ಫೈಲ್‌ಗಳನ್ನು ಇಟ್ಟುಕೊಳ್ಳುವಂತೆ ಸೂಚಿಸಿದ್ದರು. ಗೌಡರ ಇಬ್ಬರು ಉತ್ತರಾಧಿಕಾರಿಗಳ ಅಧಿಕಾರಾವಧಿಯಲ್ಲಿ ಈ ಕಡತಗಳನ್ನು ಪಿಎಂಒದಲ್ಲಿ ಇರಿಸಲಾಗಿತ್ತು. ಐ.ಕೆ.ಗುಜ್ರಾಲ್ ಮತ್ತು ವಾಜಪೇಯಿ ಪ್ರಧಾನಿಯಾಗಿದ್ದ ಕಾಲದಲ್ಲೂ ಈ ಕಡತಗಳನ್ನು ಇರಿಸಿಕೊಳ್ಳಲಾಗಿತ್ತು. ಈಗ ಆ ರಹಸ್ಯ ಫೈಲ್ ಗಳು ಪಿಎಂಒ ಬಳಿಯೇ ಇದ್ದಾವೆಯೇ ಅಥವಾ ವಾಜಪೇಯಿ ಅವರು ಅಧಿಕಾರ ತೊರೆದ ನಂತರ ವಿಲೇವಾರಿ ಮಾಡಲಾಗಿದೆಯೇ ಎಂಬುದು ತಿಳಿದಿಲ್ಲ.
‘ಈ ಫೈಲ್ಗಳು ಅಟಂ ಬಾಂಬ್ ಇದ್ದಂತೆ. ನರಸಿಂಹರಾವ್ ತಮ್ಮ ಸಂಪುಟದ ಒಳಗೆ ಮತ್ತು ಹೊರಗೆ ಇದ್ದ ಪ್ರಮುಖ ವ್ಯಕ್ತಿಗಳ ಹತ್ತಕ್ಕೂ ಹೆಚ್ಚು ಫೈಲ್‌ಗಳನ್ನು ನನಗೆ ನೀಡಿದರು. ನನಗೆ ಸರಿಯಾಗಿ ನೆನಪಿದ್ದರೆ ಮುಲಾಯಂ ಸಿಂಗ್ ಯಾದವ್, ಜೆ.ಜಯಲಲಿತಾ, ಎಸ್.ಬಂಗಾರಪ್ಪ, ಶರದ್ ಪವಾರ್ ಮತ್ತಿತರರ ವಿವರಗಳು ಈ ಕಡತಗಳಲ್ಲಿದ್ದವು’ ಎಂದು ಮೀನಾಕ್ಷಿಸುಂದರಂ ಅವರು ಸುಗತ ಶ್ರೀನಿವಾಸರಾಜು ಬರೆದಿರುವ ದೇವೇಗೌಡರ ಜೀವನಚರಿತ್ರೆ ಫರ್ರೋಸ್ ಇನ್ ಎ ಫೀಲ್ಡ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಇದನ್ನು ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಪ್ರಕಟಿಸಿದೆ. ಈ ತಿಂಗಳ ಕೊನೆಯಲ್ಲಿ ಈ ಪುಸ್ತಕ ಬಿಡುಗಡೆಯಾಗುವ ಸಾಧ್ಯತೆಯಿದೆ.
‘ನರಸಿಂಹ ರಾವ್ ಅವರು ರಾಜಕೀಯ ವ್ಯಕ್ತಿಗಳ ಮೇಲೆ ಕೆಲವು ರಹಸ್ಯ ಕಡತಗಳನ್ನು ಇಟ್ಟುಕೊಂಡಿದ್ದರು, ಅವರು ತೊಂದರೆಗಳನ್ನು ಉಂಟುಮಾಡಬಹುದು. ಅನುಚಿತವಾಗಿ ವರ್ತಿಸಿದರೆ ಅಥವಾ ಡಬಲ್ ಕ್ರಾಸ್ ಮಾಡಿದ ಸಂದರ್ಭದಲ್ಲಿ ಬಳಸಬಹುದಾದ ಫೈಲ್ಗಳಾಗಿದ್ದವು ಅವು’ ಎಂದು ಮೀನಾಕ್ಷಿಸುಂದರಂ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ಕಡತಗಳು ಅಣುಬಾಂಬಿನಂತಿದ್ದವು
ಶರದ್ ಪವಾರ್ ಅವರು ಮಾರ್ಚ್ 1993ರಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ದೆಹಲಿ ರಾಜಕಾರಣದಿಂದ ಮುಂಬೈಗೆ ಸ್ಥಳಾಂತರಗೊಂಡರು. ಅದಕ್ಕೂ ಮೊದಲು ನರಸಿಂಹರಾವ್ ಸರ್ಕಾರದಲ್ಲಿ ಸುಮಾರು 20 ತಿಂಗಳುಗಳ ಕಾಲ ರಕ್ಷಣಾ ಸಚಿವರಾಗಿದ್ದರು. ದೇವೇಗೌಡ ಸರ್ಕಾರದಲ್ಲಿ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ರಕ್ಷಣಾ ಸಚಿವರಾಗಿದ್ದರು. 1990ರಲ್ಲಿ ಆಗಿನ ಕಾಂಗ್ರೆಸ್ ಅಧ್ಯಕ್ಷ ರಾಜೀವ್ ಗಾಂಧಿಯವರ ಆಶೀರ್ವಾದದೊಂದಿಗೆ ಕರ್ನಾಟಕದ ಮುಖ್ಯಮಂತ್ರಿಯಾದ ಬಂಗಾರಪ್ಪ ಅವರು ನವೆಂಬರ್ 1992ರವರೆಗೆ (ರಾವ್ ಅವರ ಪ್ರಧಾನ ಮಂತ್ರಿಯಾಗಿ ಅಧಿಕಾರದಲ್ಲಿದ್ದ ಆರಂಭದಲ್ಲಿ) ಅಧಿಕಾರದಲ್ಲಿದ್ದರು. ರಾವ್ ಪ್ರಧಾನಿಯಾಗಿದ್ದಾಗ ಜಯಲಲಿತಾ ತಮಿಳುನಾಡು ಮುಖ್ಯಮಂತ್ರಿಯಾಗಿದ್ದರು.
ಒಂದು ದಿನ ನರಸಿಂಹರಾವ್ ಅವರು ದೇವೇಗೌಡರಿಗೆ ‘ತಾವು ಪ್ರಧಾನಿಯಾಗಿ ಹಿಂತಿರುಗುತ್ತಿಲ್ಲವಾದ್ದರಿಂದ ಆ ರಹಸ್ಯ ಕಡತಗಳನ್ನು ಅವರಿಂದ ತೆಗೆದುಕೊಳ್ಳಬೇಕೆಂದು ಹೇಳಿದರು. ಆಗ ನರಸಿಂಹರಾವ್ ಅವರು ಆ ಕಡತಗಳನ್ನು ಹಸ್ತಾಂತರಿಸಲು ಅವರು ನಂಬುವ ಅಧಿಕಾರಿಯನ್ನು ನಾಮನಿರ್ದೇಶನ ಮಾಡಲು ದೇವೇಗೌಡರನ್ನು ಕೇಳಿದರು. ಗೌಡರು ನನ್ನನ್ನು ರಾವ್ ಅವರ ಬಳಿಗೆ ಕಳುಹಿಸಿದರು ಮತ್ತು ನಾನು ಅವರಿಗೆ ಫೈಲ್‌ಗಳನ್ನು ತೋರಿಸಬೇಕಾಗಿಲ್ಲ. ಆದರೆ ಅದರ ವಿಷಯಗಳನ್ನು ಮಾತ್ರ ತಿಳಿಸಲು ಬಯಸುತ್ತೇನೆ ಎಂದು ಹೇಳಿದರು. ಕಡತಗಳು ಅಣುಬಾಂಬಿನಂತಿದ್ದವು’ ಎನ್ನುತ್ತಾರೆ ಮೀನಾಕ್ಷಿಸುಂದರಂ.
ಆಗಿನ ಪಿಎಂಒ ಅಧಿಕಾರಿ ಮೀನಾಕ್ಷಿ ಸುಂದರಂ ಅವರು ತಾವು ಪಿಎಂಒನಲ್ಲಿ ಇರುವವರೆಗೂ ಆ ಕಡತಗಳು ತಮ್ಮ ಬಳಿ ಇದ್ದವು ಎಂದು ಹೇಳಿದ್ದಾರೆ. ‘ವಾಜಪೇಯಿ ಅಧಿಕಾರ ವಹಿಸಿಕೊಂಡಾಗ ನಾನು ಅವುಗಳನ್ನು ಅಶೋಕ್ ಸೈಕಿಯಾ ಅವರಿಗೆ (ವಾಜಪೇಯಿ ಅವರ ಪಿಎಂಒ ಜಂಟಿ ಕಾರ್ಯದರ್ಶಿ) ಹಸ್ತಾಂತರಿಸಿದೆ. ನಾನು ಗೌಡರ ವಿಶ್ವಾಸಕ್ಕೆ ಪಾತ್ರವಾಗಿದ್ದಂತೆ ಅಶೋಕ್ ಸೈಕಿಯಾ ವಾಜಪೇಯಿ ಅವರಿಗೆ ಆಪ್ತರಾಗಿದ್ದರು. ಈ ಮಧ್ಯೆ ಗುಜ್ರಾಲ್ ಪ್ರಧಾನಿಯಾದಾಗ, ಅವರಿಗೆ ಕಡತಗಳ ಬಗ್ಗೆ ತಿಳಿಸಿದೆ. ಅವರು (ಗುಜ್ರಾಲ್) ನಂಬಬಹುದಾದ ಯಾರನ್ನೂ ಹೊಂದಿಲ್ಲದ ಕಾರಣ ಅವುಗಳನ್ನು ಇಟ್ಟುಕೊಳ್ಳಲು ನನ್ನನ್ನು ಕೇಳಿದರು. ವಾಜಪೇಯಿ ಬಂದಾಗ ಬ್ರಿಜೇಶ್ ಮಿಶ್ರಾ ಅವರಿಗೆ ಕಡತಗಳ ಬಗ್ಗೆ ಹೇಳಿದ್ದೆ. ಅವರು ಆ ರಹಸ್ಯ ಕಡತಗಳನ್ನು ಇರಿಸಿಕೊಳ್ಳಲು ನನ್ನನ್ನು ಕೇಳಿದರು. ಪಿಎಂಒದಲ್ಲಿ ನನ್ನ ಅವಧಿ ಮುಗಿಯುವ ಸಂದರ್ಭದಲ್ಲಿ ಈ ರಹಸ್ಯ ಕಡತಗಳನ್ನು ಹಸ್ತಾಂತರಿಸಲು ಬಯಸುತ್ತೇನೆ ಎಂದು ಹೇಳಿದೆ. ಆಗ ಅಶೋಕ್ ಬಂದರು. ವಾಜಪೇಯಿ ಅಧಿಕಾರದಿಂದ ಕೆಳಗಿಳಿದ ನಂತರ ಅಶೋಕ್ ಅವರು ಬೇರೆಯವರಿಗೆ ಕೊಟ್ಟಿದ್ದಾರೋ ಇಲ್ಲವೋ, ನನಗೆ ಯಾವುದೇ ಮಾಹಿತಿ ಇಲ್ಲ’ ಎಂದು ಮೀನಾಕ್ಷಿ ಸುಂದರಂ ತಿಳಿಸಿದ್ದಾರೆ.
2004ರಲ್ಲಿ ಡಾ.ಮನಮೋಹನ್ ಸಿಂಗ್ ಪ್ರಧಾನಿಯಾದ ನಂತರ ಆ ಕಡತಗಳಿಗೆ ಏನಾಯಿತು ಎಂಬುದು ಊಹಾಪೋಹದ ವಿಷಯವಾಗಿಯೇ ಉಳಿದಿದೆ. ಅಶೋಕ್ ಸೈಕಿಯಾ 2007ರಲ್ಲಿ ನಿಧನರಾದರು. ಈ ಕಡತಗಳ ಬಗ್ಗೆ ಇದೀಗ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ 2014ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪ್ರಧಾನ ಕಾರ್ಯದರ್ಶಿಯಾದ ನೃಪೇಂದ್ರ ಮಿಶ್ರಾ ‘ನಾನು ಅಂತಹ ಯಾವುದೇ ಫೈಲ್‌ಗಳ ಬಗ್ಗೆ ಕೇಳಿಲ್ಲ ಅಥವಾ ಯಾರೂ ಅವುಗಳ ಬಗ್ಗೆ ಮಾತನಾಡಿಲ್ಲ’ ಎಂದಿದ್ದಾರೆ.
Delighted to announce the forthcoming release of my @PenguinIndia book ‘Furrows in a Field: The Unexplored Life of H.D. Deve Gowda’. It will be available in the book stores from November 29. PRE-ORDER: https://t.co/9iuY0YtH4X #DeveGowda #biography #FurrowsInAField @mileeashwarya pic.twitter.com/dqC2yHRO7E
— Sugata Srinivasaraju (@sugataraju) November 10, 2021
ಇದನ್ನೂ ಓದಿ: ಕೇದಾರನಾಥದ ಶಂಕರಾಚಾರ್ಯರ ಮೂರ್ತಿ ನೋಡಬೇಕು; ಪ್ರಧಾನಿ ಮೋದಿಗೆ ಹೆಚ್ಡಿ ದೇವೇಗೌಡರಿಂದ ಪತ್ರ
ಇದನ್ನೂ ಓದಿ: General Elections 2023: ಮುಂದಿನ ಸಾರ್ವತ್ರಿಕ ಚುನಾವಣೆಗೆ ಆಕ್ಟೀವ್ ಆಗಿ ಕೆಲಸ ಮಾಡಬೇಕು ಅಂತ ತೀರ್ಮಾನ ಮಾಡಿದ್ದೇನೆ: ಹೆಚ್ಡಿ ದೇವೇಗೌಡ
Published On - 12:02 pm, Fri, 12 November 21