ಕಾಂಗ್ರೆಸ್​ನಲ್ಲಿ ಮತ್ತೆ ಮುಂದಿನ ಸಿಎಂ ಜಟಾಪಟಿ: ಇತ್ತ CM ಮನದಾಸೆ ಬಿಚ್ಚಿಟ್ಟ ಡಿಕೆಶಿ, ಅತ್ತ ಸಿದ್ದು ಮುಂದಿನ ಸಿಎಂ ಘೋಷಣೆ

ಕರ್ನಾಟಕದಲ್ಲಿ ಅಸೆಂಬ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಕಾಂಗ್ರೆಸ್​ನಲ್ಲಿ ಮತ್ತೊಮ್ಮೆ ಮುಂದಿನ ಸಿಎಂ ಜಟಾಪಟಿ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಸಿದ್ದು ಡಿಕೆಶಿ ಮತ್ತೆ ಸಿಎಂ ಗಾದಿಗಾಗಿ ಪೈಪೋಟಿಗಿಳಿದಂತಿದೆ.

ಕಾಂಗ್ರೆಸ್​ನಲ್ಲಿ ಮತ್ತೆ ಮುಂದಿನ ಸಿಎಂ ಜಟಾಪಟಿ: ಇತ್ತ CM ಮನದಾಸೆ ಬಿಚ್ಚಿಟ್ಟ ಡಿಕೆಶಿ, ಅತ್ತ ಸಿದ್ದು ಮುಂದಿನ ಸಿಎಂ ಘೋಷಣೆ
DK Shivakumar And Siddarmaiah
Edited By:

Updated on: Nov 27, 2022 | 6:02 PM

ಬೆಂಗಳೂರು: ವಿಧಾನಸಭೆ ಚುನಾವಣೆ (Karnataka Assembly Election 2023) ಸಮೀಪಿಸುತ್ತಿದ್ದಂತೆಯೇ ಕಾಂಗ್ರೆಸ್​ನಲ್ಲಿ ಮತ್ತೆ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (Siddaramaiah And DK Shivakumar) ಮಧ್ಯೆ ಮತ್ತೆ ಸಿಎಂ ರೇಸ್ ಶುರುವಾದಂತೆ ಕಾಣುತ್ತಿದೆ. ಒಂದು ಕಡೆ ಕಾಂಗ್ರೆಸ್ ಹೈಕಮಾಂಡ್ ಇಬ್ಬರನ್ನೂ ಹೇಗಾದ್ರೂ ಮಾಡಿ ಒಂದು ಮಾಡಲು ಇನ್ನಿಲ್ಲದ ಕಸರತ್ತು ಮಾಡಿದೆ. ರಾಹುಲ್ ಗಾಂಧಿ ಅವರು ಸಿದ್ದರಾಮೋತ್ಸವದಲ್ಲಿ ಉಭಯ ನಾಯಕ ಕೈ ಹಿಡಿದು ಒಗ್ಗಟ್ಟು ಪ್ರದರ್ಶಿಸಿದ್ದರು. ಅಲ್ಲದೇ ಭಾರತ್ ಜೋಡೋ ಯಾತ್ರೆಯಲ್ಲೂ ಸಹ ಈ ಇಬ್ಬರ ನಾಯರ ಕೈ ಹಿಡಿದು ಮೇಲೆತ್ತಿದ್ದರು. ಇನ್ನು ಸುರ್ಜೇವಾಲ ಸಹ ಸಿದ್ದು ಡಿಕೆ ಮಧ್ಯೆ ದೋಸ್ತಿ ಮಾಡಿಸಬೇಕೆಂದು ಇನ್ನಿಲ್ಲದ ತಂತ್ರ ಮಾಡಿದ್ದಾರೆ. ಆದ್ರೆ, ಇತ್ತ ಸಿದ್ದು ಡಿಕೆ ಮತ್ತೆ ಸಿಎಂ ವಿಚಾರವನ್ನ ಮುನ್ನೆಲೆಗೆ ತಂದಿದ್ದಾರೆ.

ಹೌದು… ವಿಧಾನಸಭೆ ಚುನಾವಣೆ ಹೊತ್ತಿಗೆ ಇಬ್ಬರ ನಾಯಕರನ್ನು ಒಂದುಗೂಡಿಸಿ ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಹೈಕಮಾಂಡ್ ಚಿಂತನೆ ನಡೆಸಿದೆ. ಆದ್ರೆ, ಇಂದು(ನವೆಂಬರ್ 27) ಬೆಂಗಳೂರಿನಲ್ಲಿ ನಡೆದ ತಮ್ಮ ತಮ್ಮ ಸಮುದಾಯಗಳ ಸಭೆ-ಸಮಾರಂಣಗಳಲ್ಲಿ ಜನರ ಮುಂದೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ತಮ್ಮನ್ನು ತಾವು ಸಿಎಂ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುವ ಪ್ರಯತ್ನಿಸಿದ್ದಾರೆ.

ಒಕ್ಕಲಿಗರ ಸಭೆಯಲ್ಲಿ ಮನದಾಸೆ ಬಿಚ್ಚಿಟ್ಟ ಡಿಕೆಶಿ

ಬೆಂಗಳೂರಿನ ಕುವೆಂಪು ಕಲಾಕ್ಷೇತ್ರದಲ್ಲಿ ನಡೆದ ಒಕ್ಕಲಿಗರ ಸಂಘದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಿಎಂ ಆಗುವ ಮನದಾಸೆಯನ್ನು ಬಿಚ್ಚಿಟ್ಟರು. ವ್ಯಕ್ತಪಡಿಸಿದರು. ಅದಕ್ಕಾಗಿ ತಮ್ಮ ಒಕ್ಕಲಿಗ ಸಮುದಾಯದ ಆಶೀರ್ವಾದ ಕೇಳಿದ್ದಾರೆ. ‘ವಿಧಾನಸೌಧಕ್ಕೆ ತೆಗೆದುಕೊಂಡು ಹೋಗಿ ಕೂರಿಸುವ ತಾಕತ್ತಿದೆ’ ನಿಮ್ಮ ಶಕ್ತಿ ಉತ್ಸಾಹ ನೋಡಿದರೆ ಹಾಗೆ ಅನಿಸುತ್ತೆ ಎಂದ ಡಿಕೆಶಿ, ನಿಮ್ಮ ಮನೆಯ ಬಾಗಿಲಿಗೆ ಅವಕಾಶ ಬಂದಿದೆ ಕಳೆದುಕೊಳ್ಳಬೇಡಿ. ಸಮುದಾಯದ ಆಶೀರ್ವಾದ ನನ್ನ ಮೇಲಿರಲಿ ಎಂದು ಪರೋಕ್ಷವಾಗಿ ಸಿಎಂ ಆಗುವ ಆಸೆಯನ್ನು ವ್ಯಕ್ತಪಡಿಸಿದರು.

ಕನಕ ಜಯಂತಿಯಲ್ಲಿ ಸಿದ್ದರಾಮಯ್ಯ ಸಿಎಂ ಕೂಗು

ಅತ್ತ ಡಿಕೆ ಶಿವಕುಮಾರ್ ತಮ್ಮ ಒಕ್ಕಲಿಗ ಸಮುದಾಯದ ಸಭೆಯಲ್ಲಿ ಸಿಎಂ ಆಗುವ ಆಸೆ ಬಿಚ್ಚಿಟ್ಟಿದ್ದರೆ, ಇತ್ತ ಹೆಬ್ಬಾಳ್ ಕ್ಷೇತ್ರದ ನಾಗೇನಹಳ್ಳಿಯಲ್ಲಿ ನಡೆದ ಕನಕ ಜಯಂತಿ ಆಚರಣೆಯಲ್ಲಿ ಸಿದ್ದರಾಮಯ್ಯ ಮುಂದಿನ ಸಿಎಂ ಘೋಷಣೆ ಕೇಳಿಬಂದಿದೆ. ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಹೇಳಿದ್ದು ಬೇರೆ ಯಾರು ಅಲ್ಲ ಅವರ ಆಪ್ತ ಶಾಸಕ ಬೈರತಿ ಸುರೇಶ್. ಸಿದ್ದರಾಮಯ್ಯ ಉಪಸ್ಥಿತಿಯಲ್ಲಿ ಬೈರತಿ ಸುರೇಶ್ ಘೋಷಣೆ ಕೂಗಿದ್ದು, ರಾಜ್ಯ ಕಾಂಗ್ರೆಸ್​ನಲ್ಲಿ ಮತ್ತೆ ಸಂಚಲನಕ್ಕೆ ಕಾರಣವಾಗಿದೆ. ಈ ಮೂಲಕ ಕಾಂಗ್ರೆಸ್​ನಲ್ಲಿ ಮತ್ತೆ ಮತ್ತೆ ಸಿಎಂ ಕುರ್ಚಿ ಜಟಾಪಟಿ ಶುರುವಾದಂತೆ ಕಾಣುತ್ತಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ