ನವದೆಹಲಿ: ಪ್ರತಿಪಕ್ಷಗಳ ಮುಂದಿನ ಸಮಾವೇಶ ಕರ್ನಾಟಕದ (Karnataka) ರಾಜಧಾನಿ ಬೆಂಗಳೂರಿನಲ್ಲಿ (Bengaluru) ಜುಲೈ 13 ರಂದು ನಡೆಯಲಿದೆ ಎಂದು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ (Sharad Pawar) ಗುರುವಾರ ಘೋಷಿಸಿದ್ದಾರೆ. ಈ ಹಿಂದಿನ ಪ್ರತಿಪಕ್ಷಗಳ ಸಮಾವೇಶ ಬಿಹಾರದ ಪಟ್ನಾದಲ್ಲಿ ಜೂನ್ 23ರಂದು ನಡೆದಿತ್ತು. 16 ರಾಜಕೀಯ ಪಕ್ಷಗಳು ಭಾಗವಹಿಸಿದ್ದವು. ಪಾಟ್ನಾದಲ್ಲಿ ನಡೆದಿದ್ದ ವಿರೋಧ ಪಕ್ಷಗಳ ಮೊದಲ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬಿಜೆಪಿ ವಿರುದ್ಧ ಒಗ್ಗಟ್ಟಿನ ಕಾರ್ಯತಂತ್ರ ರೂಪಿಸಲು ಮುಂದಿನ ಸಭೆಯನ್ನು ಶಿಮ್ಲಾದಲ್ಲಿ ನಡೆಸಲಾಗುವುದು ಎಂದು ಘೋಷಿಸಿದ್ದರು.
2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಮಾರ್ಗಸೂಚಿಯನ್ನು ರೂಪಿಸಲು 16 ವಿರೋಧ ಪಕ್ಷಗಳು ಪಾಟ್ನಾದಲ್ಲಿ ಸಭೆ ಸೇರಿದ್ದವು.
ನಾಲ್ಕು ಗಂಟೆಗಳ ಕಾಲ ನಡೆದಿದ್ದ ಸಭೆಯಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿ (ಎಎಪಿ) ನಡುವೆ ಮಾತಿನ ಚಕಮಕಿ ನಡೆದಿತ್ತು. ದೆಹಲಿಯಲ್ಲಿ ಆಡಳಿತಾತ್ಮಕ ಸೇವೆಗಳ ನಿಯಂತ್ರಣದ ಕುರಿತು ಕೇಂದ್ರ ಸರ್ಕಾರದ ವಿವಾದಾತ್ಮಕ ಸುಗ್ರೀವಾಜ್ಞೆಯನ್ನು ಸಾರ್ವಜನಿಕವಾಗಿ ಖಂಡಿಸದೇ ಇದ್ದರೆ ಕಾಂಗ್ರೆಸ್ ಒಳಗೊಂಡಿರುವ ಭವಿಷ್ಯದ ಪ್ರತಿಪಕ್ಷಗಳ ಸಭೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಎಎಪಿ ಹೇಳಿತ್ತು.
ಇದನ್ನೂ ಓದಿ: ಪಾಟ್ನಾದಲ್ಲಿ ವಿಪಕ್ಷಗಳ ಸಭೆ ಅಂತ್ಯ; 2024ರ ಲೋಕಸಭಾ ಚುನಾವಣೆಯನ್ನು ಒಗ್ಗಟ್ಟಾಗಿ ಎದುರಿಸುತ್ತೇವೆ ಎಂದ ನಾಯಕರು
ಪಾಟ್ನಾದಲ್ಲಿ ನಡೆದಿದ್ದ ಸಭೆಯಲ್ಲಿ ಪ್ರಧಾನಿ ಹುದ್ದೆಯ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದು ಪವಾರ್ ಇತ್ತೀಚೆಗೆ ಹೇಳಿದ್ದರು. ಸಭೆಯು ಹಣದುಬ್ಬರ, ನಿರುದ್ಯೋಗ ಮತ್ತು ದೇಶದ ಕೆಲವು ಭಾಗಗಳಲ್ಲಿ ಕೋಮು ಹಿಂಸಾಚಾರವನ್ನು ಉತ್ತೇಜಿಸುವ ಉದ್ದೇಶಪೂರ್ವಕ ಸಂಚುಗಳು ಹಾಗೂ ಇತ್ಯಾದಿ ವಿಷಯಗಳ ಮೇಲೆ ಕೇಂದ್ರೀಕರಿಸಿತ್ತು ಎಂದು ಎನ್‌ಸಿಪಿ ಮುಖ್ಯಸ್ಥರು ಹೇಳಿದ್ದಾರೆ.
ಪಾಟ್ನಾದಲ್ಲಿ ನಡೆದಿದ್ದ ವಿರೋಧ ಪಕ್ಷದ ಸಮಾವೇಶವನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಆಯೋಜಿಸಿದ್ದರು. ನಂತರ ಬಿಡುಗಡೆ ಮಾಡಲಾದ ಜಂಟಿ ಪತ್ರಿಕಾ ಹೇಳಿಕೆಯಲ್ಲಿ, ಪಕ್ಷಗಳು ಸಾಮಾನ್ಯ ಕಾರ್ಯಸೂಚಿಯಲ್ಲಿ ಮತ್ತು ರಾಜ್ಯವಾರು ಕಾರ್ಯತಂತ್ರದೊಂದಿಗೆ ಚುನಾವಣೆಯನ್ನು ಎದುರಿಸುವುದಾಗಿ ಹೇಳಿದ್ದವು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:08 pm, Thu, 29 June 23