ಬೆಂಗಳೂರು, ಜ.26: ಬಿಜೆಪಿಯಿಂದ ಯಾವುದೇ ಆಪರೇಷನ್ ಗುರಿ ಇಲ್ಲ. ಲೋಕಸಭೆ ಚುನಾವಣೆಯೊಂದೇ ನಮ್ಮ ಗುರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ಹೇಳಿದ್ದಾರೆ. ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ಎಂಎಲ್ಸಿ ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ಮರು ಸೇರ್ಪಡೆಯಾಗಿದ್ದಾರೆ. ನಂತರ ಪಕ್ಷ ತೊರೆದು ಕಾಂಗ್ರೆಸ್ ಸೇರಿದ ಲಕ್ಷ್ಮಣ ಸವದಿಯೇ ಬಿಜೆಪಿಯ ಟಾರ್ಗೆಟ್ ಎನ್ನಲಾಗುತ್ತಿದೆ. ಅಲ್ಲದೆ, ಆಪರೇಷನ್ ಕಮಲ ಆರಂಭವಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, 28 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಅಂದರೆ ತಮಾಷೆ ಅನ್ನಿಸಬಹುದು. ಆದರೆ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಪರ ಅಲೆ ಇದೆ. ಮೋದಿ ನಾಯಕತ್ವ, ಪಕ್ಷದ ಸಿದ್ಧಾಂತ ಒಪ್ಪಿ ಬರುವವರನ್ನು ನಾವು ಸ್ವಾಗತಿಸುತ್ತೇವೆ. ಯಾರು ಹೊರಗಿನವರು, ಯಾರು ಪಕ್ಷದ ಒಳಗಿನವರು ಎಂಬ ಪ್ರಶ್ನೆ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಯಾರಾಗಬೇಕೆಂದು ಕೇಂದ್ರದ ವರಿಷ್ಠರು ನಿರ್ಧಾರ ಮಾಡುತ್ತಾರೆ ಎಂದರು.
ಇದನ್ನೂ ಓದಿ: ಸೋಮಣ್ಣಗೆ ಮುಳುಗುನೀರು ತಂದಿಟ್ಟಿದ್ದ ರುದ್ರೇಶ್ ದಿಢೀರ್ ಪ್ರತ್ಯಕ್ಷ, ವಿಜಯೇಂದ್ರ ಆಪ್ತ ಮತ್ತೆ ಚಾಮರಾಜನಗರದಲ್ಲಿ ಆಕ್ಟೀವ್
ಮಂಡ್ಯ ಸಂಸದೆ ಸುಮಲತಾ ಅವರಿಗೆ ಬೇರೆ ಕ್ಷೇತ್ರ ಕೊಟ್ಟಿ ಜೆಡಿಎಸ್ಗೆ ಮಂಡ್ಯ ಕ್ಷೇತ್ರವನ್ನು ನೀಡುವ ಪ್ಲಾನ್ ಮಾಡಲಾಗುತ್ತಿದೆ. ಆದರೆ, ಸುಮಲತಾ ಅವರು ಬಿಜೆಪಿಯಿಂದ ಮಂಡ್ಯದಲ್ಲಷ್ಟೇ ಸ್ಪರ್ಧಿಸುತ್ತೇನೆ ಎಂದು ಕಡ್ಡಿಮುರಿದ ಹಾಗೆ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ಸುಮಲತಾ ಜೊತೆ ಫೋನ್ ಕರೆ ಮಾಡಿ ಮಾತನಾಡಿದ್ದೇನೆ. ಶೀಘ್ರದಲ್ಲೇ ಸಂಸದೆ ಸುಮಲತಾ ಭೇಟಿ ಮಾಡುತ್ತೇನೆ ಎಂದರು.
ಹೆಚ್ಡಿ ಕುಮಾರಸ್ವಾಮಿ ಜೊತೆ ಚರ್ಚಿಸಿ ಯಾವ ಕ್ಷೇತ್ರಕ್ಕೆ ಟಿಕೆಟ್ ನೀಡಿದರೆ ಒಳ್ಳೆಯದು, ಯಾವ ಕ್ಷೇತ್ರದಿಂದ ಟಿಕೆಟ್ ನೀಡಿದರೆ ಉತ್ತಮ ಅಂತಾ ಚರ್ಚೆ ಮಾಡುತ್ತೇನೆ ಎಂದರು. ಜಗದೀಶ್ ಶೆಟ್ಟರ್ ಬಿಜೆಪಿಗೆ ಮರು ಸೇರ್ಪಡೆಯಾದ ಬಗ್ಗೆ ಮಾತನಾಡಿದ ಅವರು, ಶೆಟ್ಟರ್ ಕಾಂಗ್ರೆಸ್ನಲ್ಲಿದ್ದರೂ ಮನಸ್ಸು ಬಿಜೆಪಿಯಲ್ಲೇ ಇತ್ತು. ಈಗ ಜಗದೀಶ್ ಶೆಟ್ಟರ್ ಮರಳಿ ಮನೆಗೆ ಬಂದಿದ್ದಾರೆ. ಗಂಗಾವತಿ ಕ್ಷೇತ್ರದ ಶಾಸಕ ಜನಾರ್ದನರೆಡ್ಡಿ ಜೊತೆ ನಾನು ಚರ್ಚೆ ನಡೆಸಿಲ್ಲ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ