ಗೋವಾದ ಕಾಂಗ್ರೆಸ್ ಶಾಸಕಾಂಗ ಪಕ್ಷದಲ್ಲಿ ಭಿನ್ನಾಭಿಪ್ರಾಯ ಇರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ: ಸ್ಪೀಕರ್

| Updated By: ರಶ್ಮಿ ಕಲ್ಲಕಟ್ಟ

Updated on: Jul 11, 2022 | 2:36 PM

ಹೆಚ್ಚಿನ ಭಿನ್ನಾಭಿಪ್ರಾಯಗಳನ್ನು ತಡೆಯುವುದಕ್ಕಾಗಿ ನಾವು ನಮ್ಮ ಪಕ್ಷದಲ್ಲಿರುವ ಐವರು ಕಾಂಗ್ರೆಸ್ ಶಾಸಕರನ್ನು ಅಜ್ಞಾತ ಸ್ಥಳಕ್ಕೆ ಸ್ಥಳಾಂತರಿಸಿದ್ದೇವೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಹೇಳಿದ್ದಾರೆ

ಗೋವಾದ ಕಾಂಗ್ರೆಸ್ ಶಾಸಕಾಂಗ ಪಕ್ಷದಲ್ಲಿ ಭಿನ್ನಾಭಿಪ್ರಾಯ ಇರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ: ಸ್ಪೀಕರ್
ಗೋವಾದ ಸ್ಪೀಕರ್ ರಮೇಶ್ ತಾವಡ್ಕರ್
Follow us on

ಪಣಜಿ: ಗೋವಾದಲ್ಲಿನ (Goa) ಕಾಂಗ್ರೆಸ್ ಶಾಸಕಾಂಗ ಪಕ್ಷದಲ್ಲಿ (Congress Legislature Party) ಭಿನ್ನಾಭಿಪ್ರಾಯ ಇರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಗೋವಾದ ಸ್ಪೀಕರ್ ರಮೇಶ್ ತಾವಡ್ಕರ್ (Ramesh Tawadkar) ಸೋಮವಾರ ಹೇಳಿದ್ದಾರೆ. ಭಾನುವಾರ 11 ಕಾಂಗ್ರೆಸ್ ಶಾಸಕರ ಪೈಕಿ ಐವರು ಶಾಸಕರಾದ ಮೈಕಲ್ ಲೋಬೊ, ದಿಗಂಬರ್ ಕಾಮತ್, ಕೇದಾರ್ ನಾಯಕ್, ರಾಜೇಶ್ ಫಲ್ದೇಸಾಯಿ ಮತ್ತು ದೆಲಿಲಾಹ್ ಲೊಬೊ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಪಕ್ಷದ ಹಿರಿಯ ನಾಯಕರು ಹೇಳಿದ್ದರು. ಕಾಂಗ್ರೆಸ್ ಪಕ್ಷವು ಲೋಬೊರನ್ನು ವಿಪಕ್ಷ ನಾಯಕನ ಸ್ಥಾನದಿಂದ ತೆಗೆದುಹಾಕಿದ್ದು, ವಿಧಾನಸಭಾ ಅಧಿವೇಶನದಲ್ಲಿ ವಿಪಕ್ಷದ ನೂತನ ನಾಯಕನನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಿದೆ. ಸೋಮವಾರ ಬೆಳಗ್ಗೆ ಐವರು ಕಾಂಗ್ರೆಸ್ ಶಾಸಕರು ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಇನ್ನೊಬ್ಬ ಶಾಸಕ ಅಲೆಕ್ಸಿಯೊ ಸೆಕ್ವೇರಾ ಅವರು ತಾನು ಮನೆಯಲ್ಲೇ ಇದ್ದೇನೆ, ಪಕ್ಷಕ್ಕೆ ನನ್ನ ಬೆಂಬಲವಿದೆ ಎಂದು ಹೇಳಿದ್ದಾರೆ. ಹೆಚ್ಚಿನ ಭಿನ್ನಾಭಿಪ್ರಾಯಗಳನ್ನು ತಡೆಯುವುದಕ್ಕಾಗಿ ನಾವು ನಮ್ಮ ಪಕ್ಷದಲ್ಲಿರುವ ಐವರು ಕಾಂಗ್ರೆಸ್ ಶಾಸಕರನ್ನು ಅಜ್ಞಾತ ಸ್ಥಳಕ್ಕೆ ಸ್ಥಳಾಂತರಿಸಿದ್ದೇವೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಹೇಳಿದ್ದಾರೆ. ಸೋಮವಾರ ಮಾಧ್ಯಮದವರು ಕಾಂಗ್ರೆಸ್​​ನಲ್ಲಿ ಭಿನ್ನಾಭಿಪ್ರಾಯ ಇದೆಯೇ ಎಂದು ತಾವಡ್ಕರ್ ಅವರಲ್ಲಿ  ಕೇಳಿದಾಗ, ನನಗೆ ಈ ಬಗ್ಗೆ ಮಾಹಿತಿಯೇನೂ ಇಲ್ಲ. ವಿಧಾನಸಭೆಯ ಮುಂಗಾರು ಅಧಿವೇಶನಕ್ಕಾಗಿ ನಾನು ಭಾನುವಾರ ಕಚೇರಿಯಲ್ಲಿದ್ದೆ ಎಂದು ಹೇಳಿದ್ದಾರೆ.

ನಾವು ಕಾಂಗ್ರೆಸ್ ಜತೆಗಿದ್ದೇವೆ

ಪಕ್ಷದ ಸಭೆಗೆ ದಿಗಂಬರ್ ಕಾಮತ್ ಮತ್ತು ಮೈಕಲ್ ಲೋಬೊ ಗೈರುಹಾಜರಾಗಿದ್ದಕ್ಕೆ ಈ ನಾಯಕರು
ಬಿಜೆಪಿ ಜತೆ ಸೇರಿ ಕಾಂಗ್ರೆಸ್ ಪಕ್ಷವನ್ನು ಒಡೆಯಲು ಸಂಚು ರೂಪಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕತ್ವ ಆರೋಪಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಕಾಮತ್ ಮತ್ತು ಲೊಬೊ ನಮ್ಮ ಮೇಲಿನ ಆರೋಪದಿಂದ ತುಂಬಾ ನೋವಾಗಿದೆ. ನಾವು ಕಾಂಗ್ರೆಸ್ ಪಕ್ಷದೊಂದಿಗೆ ಇದ್ದೇವೆ ಎಂದು ಹೇಳಿದ್ದಾರೆ. ನಾನು ದಿನೇಶ್ ಗುಂಡೂರಾವ್ ಅವರ (ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ ಡೆಸ್ಕ್ ಇನ್ ಚಾರ್ಜ್ ಆಫ್ ಗೋವಾ) ಸುದ್ದಿಗೋಷ್ಠಿ ನೋಡಿ ಆಘಾತಕ್ಕೊಳಗಾದೆ. ನನಗೆ ಅತೀವ ನೋವಾಗಿದೆ ಎಂದು ಗೋವಾದ ಮಾಜಿ ಸಿಎಂ ಮತ್ತು ಹಿರಿಯ ಶಾಸಕ ದಿಗಂಬರ್ ಕಾಮತ್ ಹೇಳಿದ್ದಾರೆ.

ಭಾನುವಾರ ಪಣಜಿಯಲ್ಲಿರುವ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಗೆ ಗೈರುಹಾಜರಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪಕ್ಷವನ್ನು ಚುನಾವಣೆಯಲ್ಲಿ ಮುನ್ನಡೆಸಿದ ನಂತರವೂ ತನ್ನನ್ನು ವಿಪಕ್ಷದ ನಾಯಕನನ್ನಾಗಿ ಮಾಡದೇ ಅವಮಾನಿಸಿದ್ದರಿಂದ ನನಗೆ ನೋವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ
ಭಾರತದ ಚೊಚ್ಚಲ ಮಾನವ ಬಾಹ್ಯಾಕಾಶ ಮಿಷನ್ ‘ಗಗನ್ಯಾನ್’ ಪ್ರಯೋಗ ಸಿದ್ಧತೆಗಳು ಪೂರ್ಣಗೊಂಡಿದೆ: ಜಿತೇಂದ್ರ ಸಿಂಗ್
PM Modi Unveils National Emblem: ನೂತನ ಸಂಸತ್​ ಭವನದ ಮೇಲೆ ನರೇಂದ್ರ ಮೋದಿಯಿಂದ ಬೃಹತ್ ರಾಷ್ಟ್ರ ಲಾಂಛನ ಅನಾವರಣ
ಗೋವಾ: ಸಭೆಗೆ ಗೈರಾದ 7 ಕಾಂಗ್ರೆಸ್ ಶಾಸಕರು, ಬಿಜೆಪಿಯೊಂದಿಗೆ ಸಂಪರ್ಕ? ಗುಸು ಗುಸು ಶುರು

ಕಾಂಗ್ರೆಸ್ ಶಾಸಕ ಮೈಕಲ್ ಲೋಬೊ ಕೂಡಾ ಪಕ್ಷದ ಸಭೆಗೆ ಗೈರು ಹಾಜರಾಗಿದ್ದರು. ನಾನು ಕಾಂಗ್ರೆಸ್ ಟಿಕೆಟ್​​​ನಿಂದ ಗೆದ್ದುಕೊಂಡಿದ್ದು, ನಾನು ಪಕ್ಷದ ಜತೆಗೆ ಇದ್ದೇನೆ. ಹಲವಾರು ಸುದ್ದಿಗೋಷ್ಠಿ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ಹಲವಾರು ಸಭೆಗಳಿರುವಾಗ ಅಂಥಾ ಪ್ರಶ್ನೆ ಉದ್ಭವಿಸುವುದಿಲ್ಲ. ನಮ್ಮ ವಿರುದ್ಧ ಆರೋಪಗಳನ್ನು ಮಾಡಲಾಗಿದೆ. ನಾವು ಅಲ್ಲಿ ಇರಲಿಲ್ಲ ಎಂದು ಯಾಕೆ ಇಂಥಾ ಆರೋಪ? ನಾವು ನಿನ್ನೆ ಅದಕ್ಕಿಂತ ಮುಂಚೆಯೂ ಅಲ್ಲಿದ್ದೆವು. ನಾವು ಕಾಂಗ್ರೆಸ್ ಪಕ್ಷದೊಂದಿಗೆ ಇದ್ದೇವೆ ಎಂದಿದ್ದಾರೆ ಲೋಬೊ.