ಗೋವಾ: ಸಭೆಗೆ ಗೈರಾದ 7 ಕಾಂಗ್ರೆಸ್ ಶಾಸಕರು, ಬಿಜೆಪಿಯೊಂದಿಗೆ ಸಂಪರ್ಕ? ಗುಸು ಗುಸು ಶುರು
ಅಧಿವೇಶನ ಮುಂಚಿತವಾಗಿ ಗೋವಾ ಕಾಂಗ್ರೆಸ್ ಕರೆದಿದ್ದ ಸಭೆಗೆ 7 ಮಂದಿ ಶಾಸಕರು ಗೈರಾಗಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈಗಾಗಲೇ ಈ ಎಲ್ಲಾ ಶಾಸಕರು ಆಡಳಿತಾರೂಢ ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎನ್ನುವ ವಿಷಯ ಕೇಳಿಬರುತ್ತಿದೆ.
ಪಣಜಿ: ಅಧಿವೇಶನ ಮುಂಚಿತವಾಗಿ ಗೋವಾ ಕಾಂಗ್ರೆಸ್ ಕರೆದಿದ್ದ ಸಭೆಗೆ 7 ಮಂದಿ ಶಾಸಕರು ಗೈರಾಗಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈಗಾಗಲೇ ಈ ಎಲ್ಲಾ ಶಾಸಕರು ಆಡಳಿತಾರೂಢ ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎನ್ನುವ ವಿಷಯ ಕೇಳಿಬರುತ್ತಿದೆ.
ಪಕ್ಷದೊಳಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಕಾಂಗ್ರೆಸ್ ಹೇಳಿದೆ, ಆಡಳಿತಾರೂಢ ಬಿಜೆಪಿಯು ಇಂತಹ ವದಂತಿಗಳನ್ನು ಹಬ್ಬಿಸುತ್ತಿದೆ ಎಂದು ಗೋವಾ ಕಾಂಗ್ರೆಸ್ ಮುಖ್ಯಸ್ಥ ಅಮಿತ್ ಪಾಟ್ಕರ್ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಮೂಲಗಳ ಪ್ರಕಾರ, ಈ ವರ್ಷದ ಆರಂಭದಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ದಿಗಂಬರ್ ಕಾಮತ್ ಶಾಸಕರ ಸಭೆಗೆ ಗೈರಾಗಿದ್ದರು.
ಮೈಕೆಲ್ ಲೋಬೋ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿದ್ದಕ್ಕೆ ಕಾಮತ್ ಅಸಮಾಧಾನಗೊಂಡಿದ್ದಾರೆ ಎಂದು ವರದಿಯಾಗಿದ್ದು ಪಕ್ಷವು ಇದನ್ನು ನಿರಾಕರಿಸಿದೆ.
ಏತನ್ಮಧ್ಯೆ, ಗೋವಾ ವಿಧಾನಸಭಾ ಸ್ಪೀಕರ್ ರಮೇಶ್ ತಾವಾಡಕರ್ ಅವರು ಮಂಗಳವಾರ ನಡೆಯಬೇಕಿದ್ದ ಡೆಪ್ಯುಟಿ ಸ್ಪೀಕರ್ ಹುದ್ದೆಯ ಚುನಾವಣೆಯ ಅಧಿಸೂಚನೆಯನ್ನು ಭಾನುವಾರ ರದ್ದುಗೊಳಿಸಿದ್ದಾರೆ.
ಗೋವಾದ 40 ಸದಸ್ಯ ಬಲದ ವಿಧಾನಸಭೆಯಲ್ಲಿ ಆಡಳಿತಾರೂಢ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) 25 ಮತ್ತು ಪ್ರತಿಪಕ್ಷ ಕಾಂಗ್ರೆಸ್‌ನಿಂದ 11 ಸದಸ್ಯರಿದ್ದಾರೆ.