ಚಿಕ್ಕಬಳ್ಳಾಫುರ: ಮುಸ್ಲಿಂ ಸಮುದಾಯಕ್ಕೆ ನೀಡಿದ್ದ ಒಬಿಸಿ ಮೀಸಲಾತಿ (OBC Reservation) ರದ್ದುಗೊಳಿಸುವ ಮೂಲಕ ಅಲ್ಪಸಂಖ್ಯಾತರಿಗೆ ದೊಡ್ಡ ಅನ್ಯಾಯ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ಜಿಲ್ಲೆಯ ಗೌರಿಬಿದನೂರಿನಲ್ಲಿ ನಡೆದ ಕಾಂಗ್ರೇಸ್ನ ಮಹಿಳಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಸ್ಲಿಂ ಸಮುದಾಯಕ್ಕೆ ಒಬಿಸಿ ಮೀಸಲಾತಿ ಕಿತ್ತು ಹಾಕಲು ಯಾರಾದರು ವರದಿ ಕೊಟ್ಟಿದ್ದಾರಾ? ಇದು ಮುಸಲ್ಮಾನರಿಗೆ ಮಾಡಿದ ದ್ರೋಹ. ಮುಸ್ಲಿಮರಿಗೆ ತೊಂದರೆ ಕೊಡಲು ಒಬಿಸಿ ಮೀಸಲಾತಿ ಕಿತ್ತು ಹಾಕಿದ್ದಾರೆ. ಅಲ್ಪಸಂಖ್ಯಾತರು ನಮಗೆ ವೋಟು ಹಾಕುವುದು ಬೇರೆ ವಿಚಾರ. ಅದಾಗ್ಯೂ, ಅಲ್ಪಸಂಖ್ಯಾತರು ಕಾಂಗ್ರೇಸ್ಗೆ ವೋಟು ಹಾಕುತ್ತಾರೆ. ಅಲ್ಪಸಂಖ್ಯಾತರಿಗೆ ಕಾಂಗ್ರೇಸ್ ರಕ್ಷಣೆ ನೀಡುತ್ತದೆ ಎಂದರು.
ಒಕ್ಕಲಿಗರಿಗೆ ಮತ್ತು ಲಿಂಗಾಯತರಿಗೆ 2ಸಿ ಮತ್ತು 2ಡಿ ಅಡಿ ಮೀಸಲಾತಿ ಪ್ರಮಾಣವನ್ನು ಕ್ರಮವಾಗಿ ಶೇ 4ರಿಂದ 6 ಹಾಗೂ ಶೇ 5ರಿಂದ 7ಕ್ಕೆ ಹೆಚ್ಚಿಸಲಾಗಿದೆ. ಇದಕ್ಕಾಗಿ ಮುಸ್ಲಿಮರಿಗೆ 2ಬಿ ಅಡಿ ನೀಡಲಾಗುತ್ತಿದ್ದ ಮೀಸಲಾತಿಯನ್ನು ರದ್ದುಗೊಳಿಸಲಾಗಿದೆ. ಆದರೆ ಅವರಿಗೆ ಆರ್ಥಿಕವಾಗಿ ಹಿಂದುಳಿದವರ ವರ್ಗದಲ್ಲಿ (EWS) ಮೀಸಲಾತಿ ನೀಡಲು ನಿರ್ಧರಿಸಲಾಗಿದೆ.
ರಾಜ್ಯ ಸರ್ಕಾರ ಘೋಷಿಸಿರುವ ಪರಿಷ್ಕೃತ ಮೀಸಲಾತಿ ನೀತಿ ‘ಕನ್ನಡಿಯೊಳಗಿನ ಗಂಟು’ ಅಷ್ಟೆ. ಚುನಾವಣೆಯಲ್ಲಿ ರಾಜಕೀಯ ಲಾಭದ ದುರುದ್ದೇಶದ ಈ ಮೀಸಲಾತಿ ನೀತಿಯಿಂದ ಯಾವ ಸಮುದಾಯಕ್ಕೂ ಲಾಭ ಇಲ್ಲ. ಇಂತಹ ಗಿಮಿಕ್ಗಳಿಗೆ ಜನ ಬಲಿಯಾಗಬಾರದು ಎಂದು ಸಿದ್ದರಾಮಯ್ಯ ನಿನ್ನೆ ಟೀಕಿಸಿದ್ದರು. ಮುಸ್ಲಿಮರಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ನೀಡಲಾಗಿರುವ ಮೀಸಲಾತಿಯನ್ನು ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದ್ದರೂ ಇದು ಸುಲಭಸಾಧ್ಯ ಅಲ್ಲ. ಬೇರೆ ರಾಜ್ಯಗಳಲ್ಲಿಯೂ ಮುಸ್ಲಿಮರು ಇರುವ ಕಾರಣ ಒಂದು ರಾಜ್ಯದ ವ್ಯಾಪ್ತಿಯಲ್ಲಿ ಮೀಸಲಾತಿ ಮರುಹಂಚಿಕೆ ಮಾಡಲು ಸಾಧ್ಯ ಇಲ್ಲ ಎಂದಿದ್ದರು.
ಚುನಾವಣೆ ಸಮೀಪದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯ ಪ್ರವಾಸದ ಬಗ್ಗೆ ಟೀಕಿಸಿದ ಸಿದ್ದರಾಮಯ್ಯ, ಕೊರೋನಾ ಬಂದಾಗ ರಾಜ್ಯಕ್ಕೆ ಮೋದಿ ಬರಲಿಲ್ಲ. ನೆರೆ ಬಂದಾಗ ಮೋದಿ ಬರಲಿಲ್ಲ. ಈಗ ಚುನಾವಣೆ ಬಂದಿದೆ ಅಂತ ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದಾರೆ. ರಾಜ್ಯದ ಜನಕ್ಕೆ ಎಲ್ಲಾ ಗೊತ್ತಾಗುತ್ತದೆ. ಮೋದಿ ನೂರು ಬಾರಿ ರಾಜ್ಯಕ್ಕೆ ಬಂದರೂ ಈ ಸಲ ಏನು ಆಗಲ್ಲ ಎಂದರು.
ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಜ್ಯಕ್ಕೆ ಪದೇ ಪದೇ ಆಗಮಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಇಂದು 7ನೇ ಬಾರಿ ರಾಜ್ಯಕ್ಕೆ ಆಗಮಿಸಿ ಅಬ್ಬರಿಸಿದ್ದಾರೆ. ಏಪ್ರಿಲ್ 9ರಂದು ಮತ್ತೊಮ್ಮೆ ರಾಜ್ಯಕ್ಕೆ ಕಾಲಿಡಲಿರುವ ಮೋದಿ, ಪ್ರಾಜೆಕ್ಟ್ ಟೈಗರ್ (Project Tiger) 50ನೇ ವರ್ಷಾಚರಣೆ ಪ್ರಯುಕ್ತ ಮೂರು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ನಿರುದ್ಯೋಗಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಮೂರು ನಾಮ ಹಾಕಿದ್ದಾರೆ ಎಂದು ಹೇಳಿದ ಸಿದ್ದರಾಮಯ್ಯ, ಉದ್ಯೋಗ ಕೊಡದೆ ಮೂರು ನಾಮ ಹಾಕಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ನೀಡಿರುವ ಯೋಜನೆಗಳನ್ನು ಅನುಷ್ಠಾನ ಮಾಡದಿದ್ದರೆ 1 ಸೇಕೆಂಡ್ ಅಧಿಕಾರದಲ್ಲಿ ಇರಲ್ಲ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:50 pm, Sat, 25 March 23